ಡಿಕೆ ಅವರಿಗೆ ಹೇಳಿ ಫಸ್ಟ್ ರಸ್ತೆ ಸರಿಮಾಡ್ಸಿ, ಆಮೇಲೆ ಯಶ್ ಮನೆ ಸರಿ ಮಾಡಿ"; ಪುಷ್ಪಾ
ರಾಕಿಂಗ್ ಸ್ಟಾರ್ ಯಶ್ ತಾಯಿ ನಿರ್ಮಾಪಕಿ ಪುಷ್ಪಾ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಆದರೆ ಅದಕ್ಕೆಲ್ಲಾ ಅವರು ಹೆದರುತ್ತಿಲ್ಲ. ತಮ್ಮ ನೇರಾನೇರ ಮಾತುಗಳಿಂದ ಎಲ್ಲದಕ್ಕೂ ಉತ್ತರ ಕೊಡುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಟ್ರೋಲ್ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ಎನ್ನುತ್ತಿದ್ದಾರೆ.
'ಕೊತ್ತಲವಾಡಿ' ಸಿನಿಮಾ ನಿರ್ಮಿಸಿ ಪುಷ್ಪಾ ಅರುಣ್‌ಕುಮಾರ್ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಮೊದಲ ಸಿನಿಮಾ ಸೋತರೂ ಜಗ್ಗದೇ ಮತ್ತಷ್ಟು ಸಿನಿಮಾಗಳನ್ನು ಮಾಡುವುದಾಗಿ ಘೋಷಿಸಿದ್ದಾರೆ. ನಾನು ಒಂದು ಸಿನಿಮಾ ಮಾಡಿ ವಾಪಸ್ ಹೋಗುವುದಕ್ಕೆ ಬಂದಿಲ್ಲ. ಸಿನಿಮಾ ಸೋಲಿಗೆ ಹೆದರುವುದಿಲ್ಲ ಎಂದಿದ್ದಾರೆ. ತೆಲುಗಿನ 'ಘಾಟಿ' ಚಿತ್ರವನ್ನು ಕರ್ನಾಟಕದಲ್ಲಿ ವಿತರಣೆ ಮಾಡುತ್ತಿದ್ದಾರೆ. ಆದರೆ ಕನ್ನಡಕ್ಕೆ ಡಬ್ ಮಾಡಿ ರಿಲೀಸ್ ಮಾಡ್ತಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

'ಘಾಟಿ' ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡದ ಬಗ್ಗೆಯೂ ಪುಷ್ಪಾ ಅರುಣ್ ಕುಮಾರ್ ಟ್ರೋಲ್ ಎದುರಿಸುವಂತಾಗಿದೆ. ಇದೆಲ್ಲದರ ನಡುವೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಅಂತೆಕಂತೆ ಪುರಾಣಕ್ಕೂ ಸ್ಪಷ್ಟನೆ ಕೊಟ್ಟಿದ್ದಾರೆ. ಮಗ ಯಶ್ ಜೊತೆ ಭಿನ್ನಾಭಿಪ್ರಾಯ ಇದ್ಯಾ? ಸೊಸೆ ರಾಧಿಕಾ ಪಂಡಿತ್ ಜೊತೆ ಜಗಳ ಆಗಿದ್ಯಾ? ಎನ್ನುವ ಊಹಾಪೋಹಗಳಿಗೆ ಪಬ್ಲಿಕ್ ನೆಕ್ಸ್ಟ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಪುಷ್ಪಾ ಅವರು ಏನೇನೋ ಮಾತನಾಡಿ ಯಶ್ ಅವರ ಹೆಸರು ಹಾಳು ಮಾಡುತ್ತಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಪುಷ್ಪಾ ತಿರುಗೇಟು ನೀಡಿದ್ದಾರೆ. "ನನ್ನ ಮಗ ಅವ್ನು. ಅವ್ರು ಯಾರು ಕೇಳೋಕೆ. ನನ್ನ ಮಗನ ಹೆಸರನ್ನು ಹೆಂಗಾದ್ರು ಹೇಳ್ಕೊತ್ತೀನಿ. ಅವ್ರು ಯಾರು ಹೇಳೋಕೆ, ಅವ್ರ ಮಗನ ಹೆಸ್ರು ಹೆಸರು ಹಾಳು ಮಾಡ್ತಿಲ್ಲ. ನನಗೆ ಬುದ್ಧಿ ಇಲ್ಲ ಎಂದು ಹೇಳುವಷ್ಟು ಜ್ಞಾನ ಅವರಿಗಿಲ್ಲ. ನನ್ನ ಮಗನನ್ನು ಎಲ್ಲಿಗೆ ಕಳಿಸಬೇಕೋ ಕಳ್ಸಿದ್ದೀನಿ. ಮಾತನಾಡುವವರಿಗೆ ಬೇರೆ ಕೆಲಸ ಇರಲ್ಲ ಮಾತಾಡ್ತಾರೆ" ಎಂದು ತಿರುಗೇಟು ನೀಡಿದ್ದಾರೆ.
ಇನ್ನು ಮಗನ ಜೊತೆ ಭಿನ್ನಾಭಿಪ್ರಾಯ ಇದೆ, ಸೊಸೆ ಜೊತೆ ಜಗಳ ಅಂತೆಲ್ಲಾ ಟ್ರೋಲ್ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗೂ ಪುಷ್ಪಾ ಉತ್ತರಿಸಿದ್ದಾರೆ. "ಸೋಶಿಯಲ್ ಮೀಡಿಯಾದಲ್ಲಿ ಹೀಗೆ ಕಾಮೆಂಟ್ ಮಾಡುವವರನ್ನೇ ಕೇಳಿ. ನಾನ್ಯಾಕೆ ಅದಕ್ಕೆ ಸ್ಪಷ್ಟನೆ ಕೊಡಬೇಕು ಎಂದು ನಿರೂಪಕಿಗೆ ಮರುಪ್ರಶ್ನೆ" ಹಾಕಿದ್ದಾರೆ. "ನಾವು ಜಗಳ ಆಡಿದ್ದೀವಿ ಅಂದ್ರೆ ಬಂದು ಸರಿ ಮಾಡ್ತೀರಾ? ರಸ್ತೆ ಹಳ್ಳ ಬಿದ್ದಿದೆ ಸರಿ ಮಾಡಿಸ್ತೀರಾ, ಡಿಕೆ ಅವರಿಗೆ ಹೇಳಿ ರಸ್ತೆ ಸರಿಮಾಡ್ಸಿ, ಆಮೇಲೆ ಯಶ್ ಮನೆ ಸರಿ ಮಾಡಿ" ಎಂದು ಪುಷ್ಪಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
'ಕೊತ್ತಲವಾಡಿ' ಸಿನಿಮಾ ಕಲೆಕ್ಷನ್ ಬಗ್ಗೆ ಕೇಳಿದ ಪ್ರಶ್ನೆಗೂ ಪುಷ್ಪಾ ಅರುಣ್ ಕುಮಾರ್ ಬೇಸರ ಹೊರ ಹಾಕಿದ್ದಾರೆ. ಹುಡುಗಿ ವಯಸ್ಸು, ನಿರ್ಮಾಪಕರ ಬಳಿ ಸಿನಿಮಾ ಕಲೆಕ್ಷನ್ ಲೆಕ್ಕ ಕೇಳಬಾರದು ಎಂದು ಹೇಳಿದ್ದಾರೆ. 'ಕೊತ್ತಲವಾಡಿ' ಚಿತ್ರಕ್ಕಿಂತ ಪುಷ್ಪಾ ಅವರು ನೀಡಿದ ಸಂದರ್ಶನದ ವೀಡಿಯೋಗಳು ಭಾರೀ ಸದ್ದು ಮಾಡಿದ್ದವು. ಇನ್ನು ತಂಗಿ ಮಗಳು ನಟಿ ದೀಪಿಕಾ ದಾಸ್ ಬಗ್ಗೆ ಸಂದರ್ಶನವೊಂದರಲ್ಲಿ ಪುಷ್ಪಾ ಅವರು ಆಡಿದ ಮಾತುಗಳು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಈ ಬಗ್ಗೆ ದೀಪಿಕಾ ದಾಸ್ ಕೂಡ ಪೋಸ್ಟ್ ಮಾಡಿ ಅಸಮಾಧಾನ ಹೊರ ಹಾಕಿದ್ದರು.


Click it and Unblock the Notifications











