ಇನ್ಮುಂದೆ ಚಿತ್ರಮಂದಿರಗಳಲ್ಲಿ ಸಿಗಲಿದೆ ಮದ್ಯ.. ಪ್ರೇಕ್ಷಕರು ಎಣ್ಣೆ ಹೊಡೆಯುತ್ತಾ ಸಿನಿಮಾ ನೋಡ್ಬೋದು!
ಸಾರ್ವಜನಿಕ ಸ್ಥಳಗಳು, ಉದ್ಯಾನವನಗಳು ಹಾಗೂ ನಗರದ ಹೊರವಲಯದಲ್ಲಿ ಮದ್ಯ ಸೇವನೆಗೆ ಅವಕಾಶವಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ. ಬಾರ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಮಾತ್ರ ಮದ್ಯ ಸೇವನೆಗೆ ಅವಕಾಶವಿದೆ. ಆದರೆ ಇನ್ನು ಮುಂದೆ ಸಿನಿಮಾ ಹಾಲ್‌ಗಳಲ್ಲಿ ಮದ್ಯ ಸೇವನೆಗೆ ಅವಕಾಶ ಸಿಗುವ ಸಾಧ್ಯತೆಯಿದೆ.
ಚಿತ್ರಮಂದಿಗಳ ಪ್ರೇಕ್ಷಕರ ಬರ ಎದುರಿಸುತ್ತಿವೆ. ಮೊಬೈಲ್, ಓಟಿಟಿ ಹೆಚ್ಚಾಗಿ ಜನ ಚಿತ್ರಮಂದಿರಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ದೊಡ್ಡ ಸಿನಿಮಾಗಳನ್ನು ಮಾತ್ರ ನೋಡಲು ಮನಸ್ಸು ಮಾಡುತ್ತಾರೆ. ಇನ್ನುಳಿದಂತೆ ಸಾಕಷ್ಟು ಸಮಯದಲ್ಲಿ ಚಿತ್ರಮಂದಿರಗಳು ಖಾಲಿ ಹೊಡೆಯುತ್ತವೆ. ಚಿತ್ರಮಂದಿರಗಳನ್ನೇ ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ.

ನಗರದ ಹಲವು ಚಿತ್ರಮಂದಿರಗಳನ್ನು ನೆಲಸಮ ಮಾಡಿ ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟಲಾಗಿದೆ. ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳ ಸಂಸ್ಕೃತಿ ಕಮ್ಮಿ ಆಗುತ್ತಿದೆ. ಪಿವಿಆರ್ ಹಾಗೂ ಐನಾಕ್ಸ್ ಚೈನ್ ದೇಶಾದ್ಯಂತ ಸಿನಿಮಾ ಪ್ರದರ್ಶನದಲ್ಲಿ ಮುಂದಿದೆ. ಆದರೆ ಅಲ್ಲಿ ಟಿಕೆಟ್ ದರ, ಸ್ನ್ಯಾಕ್ಸ್, ಪಾರ್ಕಿಂಗ್ ದರ ಎಲ್ಲವೂ ಪ್ರೇಕ್ಷಕರು ಹೆದರುವಂತಾಗಿದೆ. ಈಗ ಒಂದು ಕುಟುಂಬ ಸಿನಿಮಾ ನೋಡಿ ಬರಲು ಸಾವಿರಾರು ರೂಪಾಯಿ ಖರ್ಚು ಮಾಡುವಂತಾಗಿದೆ.
ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಲು ಪಿವಿಆರ್ ಹಾಗೂ ಐನಾಕ್ಸ್ ನಾನಾ ಕರಸತ್ತು ಮಾಡುತ್ತಿದೆ. ರಿಯಾಯಿತಿ ದರದಲ್ಲಿ ಪಾಸ್‌ಗಳನ್ನು ನೀಡಿ ಪ್ರೇಕ್ಷಕರನ್ನು ಸೆಳೆಯುವ ತಂತ್ರವೂ ಮಾಡಲಾಯಿತು. ಆದರೆ ಅದು ದೊಡ್ಡದಾಗಿ ಯಶಸ್ವಿ ಆಗಲಿಲ್ಲ. ಇದೀಗ ಮಲ್ಟಿಪ್ಲೆಕ್ಸ್‌ಗಳಲ್ಲಿ ಮದ್ಯ ಮಾರಾಟ ಮಾಡುವ ಪ್ರಯತ್ನಕ್ಕೆ ಕೈ ಹಾಕಲಾಗುತ್ತಿದೆ.
ಪಿವಿಆರ್ ಹಾಗೂ ಐನಾಕ್ಸ್ ಬೆಂಗಳೂರು ಹಾಗೂ ಗುರಗಾಂವ್‌ನಲ್ಲಿ ಸಿನಿಮಾ ಹಾಲ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೋರಿ ಮನವಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ಈ ಎರಡು ನಗರಗಳ ಮಲ್ಟಿಪ್ಲೆಕ್ಸ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕಿ ಯಶಸ್ವಿಯಾದರೆ ಮುಂದೆ ಬೇರೆ ಬೇರೆ ನಗರಗಳಲ್ಲಿ ಕೂಡ ಮದ್ಯ ಮಾರಾಟಕ್ಕೆ ತೀರ್ಮಾನಿಸಿದ್ದಾರೆ ಎನ್ನಲಾಗ್ತಿದೆ. ಇದು ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರದೇ ಥಿಯೇಟರ್ ಹಾಗೂ ಮಲ್ಟಿಪ್ಲೆಕ್‌ಗಳು ದಯನೀಯ ಸ್ಥಿತಿ ತಲುಪಿವೆ. ಐದು ಜನ, ಹತ್ತು ಜನ ಶೋ ನೋಡಲು ಬಂದರೆ ಸಿನಿಮಾ ಪ್ರದರ್ಶಿಸಬೇಕಾ? ಕ್ಯಾನ್ಸಲ್ ಮಾಡಬೇಕಾ? ಎನ್ನುವ ಗೊಂದಲ ಮೂಡುತ್ತಿದೆ. ಇತ್ತೀಚೆಗೆ ಸಲ್ಮಾನ್ ಖಾನ್ ನಟನೆಯ 'ಸಿಕಂದರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಕೆಲವೆಡೆ ಪ್ರೇಕ್ಷಕರಿಲ್ಲದೇ ಶೋಗಳನ್ನು ರದ್ದು ಪಡಿಸುವಂತಾಗಿತ್ತು.
ಉತ್ತಮ ರೀತಿಯಲ್ಲಿ ಸಿನಿಮಾ ಪ್ರದರ್ಶನ ಇಲ್ಲದೇ ಮಲ್ಟಿಪ್ಲೆಕ್ಸ್‌ಗಳ ನಿರ್ವಹಣೆ ಕೂಡ ಕಷ್ಟವಾಗುತ್ತಿದೆ. ಇದು ಹೀಗೆ ಮುಂದುವರೆದರೆ ಮಲ್ಟಿಪ್ಲೆಕ್ಸ್ ಸಂಸ್ಕೃತಿಯೇ ಅಳಿಯುವ ಸಾಧ್ಯತೆಯಿದೆ. ನೂರಾರು ಕೋಟಿ ಸುರಿದು ಮಲ್ಟಿಪ್ಲೆಕ್ಸ್ ತೆರೆದು ನಷ್ಟ ಅನುಭವಿಸಲು ಯಾರೂ ಸಿದ್ಧರಿಲ್ಲ. ಇದೇ ಕಾರಣಕ್ಕೆ ಹೇಗಾದರೂ ಮಾಡಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವ ಪ್ರಯತ್ನ ನಡೀತಿದೆ.
ಮಲ್ಟಿಪ್ಲೆಕ್ಸ್‌ಗಳಲ್ಲಿ ಸ್ನ್ಯಾಕ್ಸ್ ದರವೇ ಗಗನಕ್ಕೇರಿದೆ. ಇನ್ನು ಮದ್ಯ ಮಾರಾಟ ಮಾಡಿದರೂ ಕಡಿಮೆ ದರಕ್ಕೆ ಸಿಗುವುದಿಲ್ಲ. ಸಾಮಾನ್ಯ ಪ್ರೇಕ್ಷಕರು ಹೆಚ್ಚು ಹಣ ತೆತ್ತು ಟಿಕೆಟ್ ಖರೀದಿಸಿ ಸಿನಿಮಾ ನೋಡುವುದೇ ಕಷ್ಟ ಎನ್ನುವಂತಾಗಿದೆ. ಇನ್ನು ಮದ್ಯ ಮಾರಾಟ ಮಾಡಿದರೂ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಚಿತ್ರಮಂದಿರಕ್ಕೆ ಬರ್ತಾರಾ? ಎನ್ನುವ ಗ್ಯಾರೆಂಟಿ ಇಲ್ಲ. ಮುಂದಿನ ದಿನಗಳಲ್ಲಿ ಈ ಲೆಕ್ಕಾಚಾರ ಏನಾಗುತ್ತದೆ ಕಾದು ನೋಡಬೇಕಿದೆ.


Click it and Unblock the Notifications











