699 ರೂ.ಗೆ ಸಕತ್ ಆಫರ್ ಘೋಷಿಸಿದ ಪಿವಿಆರ್ ಐನಾಕ್ಸ್: ಏನಿದು ಪಿವಿಆರ್ ಪಾಸ್‌ಪೋರ್ಟ್, ಖರೀದಿಸುವುದು ಹೇಗೆ?
ಕೆಲವು ಸಿನಿಮಾ ಪ್ರೇಮಿಗಳಿಗೆ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿಯೇ ನೋಡುವ ಆಸೆ. ಒಟಿಟಿ ವೇದಿಕೆಗಳಿಗಿಂತ ಚಿತ್ರಮಂದಿರಗಳ ಅನುಭವ ಬೇರೆ ಎಂದು ಹೇಳುತ್ತಾರೆ. ಆದರೆ ಪಿವಿಆರ್‌ನಂತಹ ಸ್ಕ್ರೀನ್‌ಗಳಲ್ಲಿ ದಿನ ಸಿನಿಮಾ ನೊಡಲು ಹೋದರೇ ಜೇಬು ಖಾಲಿಯಾಗುತ್ತದೆ. ಇದೇ ಕಾರಣಕ್ಕೆ ಭಾರತದ ಅತಿದೊಡ್ಡ ಸಿನಿಮಾ ಪ್ರದರ್ಶಕ ಸಂಸ್ಥೆಯಾದ ಪಿವಿಆರ್ ಐನಾಕ್ಸ್ ಹೊಸ ಆಫರ್ ಘೋಷಿಸಿದೆ.
ಹೌದು.. 14 ಅಕ್ಟೋಬರ್ 2023 ರಂದು ಸಿನಿಮಾ ಪ್ರದರ್ಶಕ ಸಂಸ್ಥೆಯು "ಪಿವಿಆರ್ ಐನಾಕ್ಸ್ ಪಾಸ್‌ಪೋರ್ಟ್" ಎಂಬ ಹೊಸ ಯೋಜನೆಯ ಕುರಿತು ಅಧಿಕೃತ ಘೋಷಣೆ ಮಾಡಿದೆ. ಇದರ ಮೂಲಕ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಳವಾಗಲು ಮತ್ತು ಚಲನಚಿತ್ರೋದ್ಯಮಕ್ಕೆ ಸಹಾಯ ಉಂಟಾಗಲಿದೆ ಎಂಬ ನಿರೀಕ್ಷಿಯೆಲ್ಲಿದೆ.

"ಪಿವಿಆರ್ ಐನಾಕ್ಸ್ ಪಾಸ್‌ಪೋರ್ಟ್"
ಪಿವಿಆರ್ ಘೋಷಿಸಿರುವ ಹೊಚ್ಚಹೊಸ ಪಿವಿಆರ್ ಐನಾಕ್ಸ್ ಪಾಸ್‌ಪೋರ್ಟ್ ಆಫರ್‌ನಿಂದ ವಾರದ ದಿನಗಳಲ್ಲಿಯೂ ಚಿತ್ರಮಂದಿರಗಳಿಗೆ ಜನರನ್ನು ಸೆಳೆಯುವ ಪ್ಲ್ಯಾನ್ ಮಾಡಿಕೊಂಡಿದೆ. ವಾರಾಂತ್ಯದಲ್ಲಿ ಮಾತ್ರ ಕಾಣಿಸಿಕೊಳ್ಳುವ ಪ್ರೇಕ್ಷಕರ ವರ್ಗ ಹೆಚ್ಚಾಗಲಿ ಎಂಬುದು ಇದರ ಒಂದು ಉದ್ದೇಶ ಕೂಡ ಆಗಿದೆ.
ಇತ್ತೀಚಿನ ಅಧಿಕೃತ ವಿವರಗಳ ಪ್ರಕಾರ, ಪಿವಿಆರ್ ಐನಾಕ್ಸ್ ಪಾಸ್‌ಪೋರ್ಟ್ ಚಂದಾದಾರಿಕೆ ಸೋಮವಾರ, 16 ಅಕ್ಟೋಬರ್‌ನಿಂದ ಲಭ್ಯವಿರುತ್ತದೆ. ಈ ಪಾಸ್ ಸಹಾಯದಿಂದ, ತಿಂಗಳಿಗೆ ಕೇವಲ 699 ರೂಪಾಯಿಗಳಲ್ಲಿ 10 ಚಲನಚಿತ್ರಗಳನ್ನು ನೋಡಬಹುದು. ಅಧಿಕೃತ ಪ್ರಕಟಣೆಗಳ ಪ್ರಕಾರ ಈ ಕೊಡುಗೆ ವಾರದ ದಿನಗಳಲ್ಲಿ ಅಂದರೆ ಸೋಮವಾರದಿಂದ ಗುರುವಾರದವರೆಗೆ ಲಭ್ಯವಿರುತ್ತದೆ. ಪಿವಿಆರ್ ಐನಾಕ್ಸ್ ಪಾಸ್‌ಪೋರ್ಟ್ IMAX, Gold, LUXE ಮತ್ತು ಡೈರೆಕ್ಟರ್ಸ್ ಕಟ್‌ನಂತಹ ಪ್ರೀಮಿಯಂ ಕೊಡುಗೆಗಳನ್ನು ಒಳಗೊಂಡಿರುವುದಿಲ್ಲ.
ಪಿವಿಆರ್ ಐನಾಕ್ಸ್ ಪಾಸ್‌ಪೋರ್ಟ್: ತಿಳಿದುಕೊಳ್ಳಬೇಕಾದ ಪ್ರಮುಖ ವಿವರಗಳು
ಇತ್ತೀಚಿನ ವಿವರಗಳ ಪ್ರಕಾರ, ಪಿವಿಆರ್ ಐನಾಕ್ಸ್ ಪಾಸ್‌ಪೋರ್ಟ್ ಅನ್ನು ಕನಿಷ್ಠ ಮೂರು ತಿಂಗಳ ಚಂದಾದಾರಿಕೆ ಅವಧಿಗೆ ಖರೀದಿಸಬಹುದು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಒಂದು ಪಾಸ್‌ಪೋರ್ಟ್‌ನ ಪ್ರಯೋಜನವನ್ನು ಒಬ್ಬರು ಮಾತ್ರ ಪಡೆಯಬಹುದು. ಇದನ್ನು ವರ್ಗಾವಣೆ ಮಾಡಲಾಗದು!.

ಪಾಸ್‌ಪೋರ್ಟ್ ಖರೀದಿಸಿದ ನಂತರ, ನೀವು 699 ರೂಪಾಯಿಗೆ ತಿಂಗಳಿಗೆ 10 ಸಿನಿಮಾಗಳನ್ನು ಪಿವಿಆರ್ ಐನಾಕ್ಸ್‌ನಲ್ಲಿ ನೋಡಬಹುದು. ಇದರ ಜೊತೆಗೆ ಸೋಮವಾರದಿಂದ ಗುರುವಾರದವರೆಗೆ ಆಹಾರಗಳ ಬೆಲೆಯನ್ನು ಕಡಿಮೆ ಮಾಡಿದೆ. ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ 99 ರೂಪಾಯಿಗೆ ಫಿಡ್ ಕಾಂಬೋಗಳನ್ನು ಖರೀದಿಸಬಹುದು.
ಪಿವಿಆರ್ ಐನಾಕ್ಸ್ ಪಾಸ್‌ಪೋರ್ಟ್ ಖರೀದಿಸಿವುದು ಹೇಗೆ?
* ಪಿವಿಆರ್ ಅಥವಾ ಐನಾಕ್ಸ್ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
* ವೆಬ್‌ಸೈಟ್ ಓಪನ್ ಆದ ನಂತರ, "Privilege" ಬಟನ್ ಕ್ಲಿಕ್ ಮಾಡಿ. ಬಳಿಕ "Join Now" ಅನ್ನು ಟ್ಯಾಪ್ ಮಾಡಬೇಕು.
* ಅಗತ್ಯವಿರುವ ವಿವರಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ ಮತ್ತು ಆನ್‌ಲೈನ್‌ನಲ್ಲಿ ಪಾವತಿ ಮಾಡಿ.
* ಪಾವತಿ ಮಾಡಿದ ನಂತರ ನೀವು ಚಂದಾದಾರಿಕೆಯ ಬಗ್ಗೆ ದೃಢೀಕರಣ ಮೆಸೇಜ್ ಬರಲಿದೆ.
* ಸಿನೆಮಾಕ್ಕೆ ನೋಡಲು ಹೋಗುವ ಸಮಯದಲ್ಲಿ ನಿಮ್ಮ ಸರ್ಕಾರಿ ಗುರುತಿನ ಪುರಾವೆ ಮತ್ತು ಪಾಸ್‌ಪೋರ್ಟ್ ತೆಗೆದುಕೊಂಡು ಹೋಗಬೇಕು. ಇಲ್ಲದಿದ್ದರೇ ಸಿನಿಮಾ ನೊಡಲು ಬಿಡುವುದಿಲ್ಲ. ಒಟ್ಟಾರೆ ಸಿನಿಮಾ ಪ್ರೇಮಿಗಳನ್ನು ಸೆಳೆಯಲು ಇಷ್ಟು ದಿನ ಒಟಿಟಿ ವೇದಿಕೆಗಳು ಚಂದಾದಾರಿಕೆ ಮಾಡಿಸುತ್ತಿದ್ದವು. ಈಗ ಪಿವಿಆರ್ ಐನಾಕ್ಸ್ ಈ ಸಾಲಿಗೆ ಸೇರುತ್ತಿದೆ.


Click it and Unblock the Notifications











