ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಂದು ರಾತ್ರಿ ಕಳೆದ ದರ್ಶನ್; ಚಪಾತಿ, ಅನ್ನ-ಸಾಂಬಾರ್ ಸವಿದು ಮೌನಕ್ಕೆ ಶರಣು
ನಟ ದರ್ಶನ್ 13 ವರ್ಷಗಳ ಬಳಿಕ ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಗೃಹ ಸೇರಿದ್ದಾರೆ. ಈ ಹಿಂದೆ ಕೌಟುಂಬಿಕ ಕಲಹ ಪ್ರಕರಣದಲ್ಲಿ ದರ್ಶನ್ ಜೈಲು ಸೇರುವಂತಾಗಿತ್ತು. ಬಳಿಕ ಜಾಮೀನು ಪಡೆದು ಹೊರಬಂದಿದ್ದರು. ಸದ್ಯ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. 13 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ವಿಧಿಸಿ ಬೆಂಗಳೂರಿನ 24 ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ವಿಚಾರಧೀನ ಕೈದಿ ಸಂಖ್ಯೆ 6109 ನೀಡಲಾಗಿದೆ. ಭದ್ರತೆ ಹಿನ್ನೆಲೆಯಲ್ಲಿ ವಿಶೇಷ ಬ್ಯಾರಕ್ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಅಲ್ಲಿ ಒಂದು ರಾತ್ರಿ ಕಳೆದಿದ್ದಾರೆ. ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದ ದರ್ಶನ್ ಈಗ ಸಂಪೂರ್ಣ ಕುಸಿದು ಹೋಗಿದ್ದಾರೆ. ಮೌನಕ್ಕೆ ಜಾರಿದ್ದಾರೆ ಎಂದು ವರದಿಯಾಗಿದೆ. 13 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇದ್ದರು. ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜೈಲುಹಕ್ಕಿಯಾಗಿ ಹತಾಶರಾಗಿದ್ದಾರೆ.

ನಿನ್ನೆ(ಜೂನ್ 22) 24 ನೇ ಎಸಿಎಂಎಂ ಕೋರ್ಟ್‌ಗೆ 4 ಜನ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು. ಈ ವೇಳೆ ಸಾಕಷ್ಟು ಅಭಿಮಾನಿಗಳು ಕೋರ್ಟ್ ಮುಂದೆ ಜಮಾಯಿಸಿದ್ದರು. ದರ್ಶನ್ ಪೊಲೀಸ್ ವ್ಯಾನ್ ಏರುವಾಗಲೂ ಅಭಿಮಾನಿಗಳು ಜೈಕಾರ ಹಾಕಿದ್ದರು. ಪೊಲೀಸ್ ವ್ಯಾನ್ ಒಳಗಿನಿಂದಲೇ ಅಭಿಮಾನಿಗಳ ಕೈಬೀಸಿದ್ದರು. ಮುಖದಲ್ಲಿ ನಗುಕಂಡರೂ ಒಳಗಿನ ನೋವು ಗೊತ್ತಾಗುತ್ತಿತ್ತು. ಇನ್ನು ಜೈಲಿನ ಬ್ಯಾರಕ್ ಪ್ರವೇಶಿಸುತ್ತಿದ್ದಂತೆ ದರ್ಶನ್ ತಣ್ಣಗಾಗಿದ್ದಾರೆ.
ಜೈಲು ಸಿಬ್ಬಂದಿ ನಟ ರಾತ್ರಿ ಊಟಕ್ಕೆ ಚಪಾತಿ, ಅನ್ನ, ಸಾಂಬಾರ್, ಮಜ್ಜಿಗೆ ನೀಡಿದ್ದಾರೆ. ಚಪಾತಿ ತಿಂದು ಮಜ್ಜಿಗೆ ಕುಡಿದಿರುವ ದರ್ಶನ್ ಅನ್ನ ತಿನ್ನಲಿಲ್ಲ ಎನ್ನಲಾಗ್ತಿದೆ. ಊಟದ ಬಳಿಕ ಕೂಡ ಯಾರೊಟ್ಟಿಗೂ ಮಾತನಾಡದೇ ಮವಣಕ್ಕೆ ಜಾರಿದ್ದಾರೆ. ದಿಕ್ಕು ತೋಚದೇ ಕುಳಿತಿದ್ದಾರೆ ಎಂದು ವರದಿಯಾಗಿದೆ. ಮಾನಸಿಕವಾಗಿ ಅಷ್ಟೇ ಅಲ್ಲ, ದೈಹಿಕವಾಗಿಯೂ ಬಹಳ ಕುಗ್ಗಿ ಹೋಗಿದ್ದಾರೆ. ಪ್ರತಿದಿನ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ದರ್ಶನ್ 14 ದಿನಗಳಿಂದ ವ್ಯಾಯಾಮ ಇಲ್ಲದೇ ದೇಹ ಕಳೆ ಕಳೆದುಕೊಂಡಿದೆ. ಕೋರ್ಟ್ ಬಳಿಕ ನೋಡಿದ ಅಭಿಮಾನಿಗಳು ಇದೇ ಕಾಮೆಂಟ್ ಮಾಡುತ್ತಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೂನ್ 12ರಂದು ಮೈಸೂರಿನಲ್ಲಿ ದರ್ಶನ್‌ನ ಪೊಲೀಸರು ವಶಕ್ಕೆ ಪಡೆದಿದ್ದರು. ಜುಲೈ 4ರವರೆಗೆ ಆರೋಪಿಗಳನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇತರೆ ಕೈದಿಗಳ ರೀತಿಯಲ್ಲೇ ಈ ಪ್ರಕರಣದ ಕೈದಿಗಳನ್ನು ನೋಡಿಕೊಳ್ಳುತ್ತೇವೆ. ಯಾವುದೇ ವಿಶೇಷ ಸೌಲಭ್ಯ ನೀಡಲ್ಲ ಎಂದು ಕಾರಾಗೃಹ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಇನ್ನು ಕೊಲೆ ಆರೋಪಿಗಳು ಪರಸ್ಪರ ಹೇಳಿಕೆ ನೀಡಿದ್ದಾರೆ. ಇದು ಗೊತ್ತಾಗಿ ಜೊತೆಗಿರುವವರೇ ಹಲ್ಲೆಗೆ ಮುಂದಾಗುವ ಸಾಧ್ಯತೆಯಿದೆ. ಒಳಸಂಚು ರೂಪಿಸುವ ಸಾಧ್ಯತೆಯಿದೆ ಹಾಗಾಗಿ ಆರೋಪಿಗಳನ್ನು ಪ್ರತ್ಯೇಕವಾಗಿ ಇಡಲು ಪಬ್ಲಿಕ್ ಪ್ರಾಸಿಕ್ಯೂಟರ್ ಮನವಿ ಮಾಡಿದ್ದರು.
"ಮನೆಯಲ್ಲಿ ಪೂಜೆ ಮಾಡ್ಕೊಂಡು, ಶೂಟಿಂಗ್ ಇದ್ದಾಗ ವ್ಯಾಯಾಮ ಮಾಡ್ಕೊಂಡು ಇದ್ಬಿಡಿ"
ಸೋಮವಾರ ಮತ್ತೊಮ್ಮೆ ವಿಚಾರಣೆ ನಡೆಸಿ ಆರೋಪಿಗಳನ್ನು ರಾಜ್ಯದ ಬೇರೆ ಭಾಗಗಳ ಜೈಲುಗಳಿಗೆ ಆರೋಪಿಗಳನ್ನು ಸ್ಥಳಾಂತರಿಸುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಈ ಪ್ರಕರಣದ ಬಗ್ಗೆ ಚಿತ್ರರಂಗದ ಹಲವರು ಮುಖ್ಯವಾಗಿ ದರ್ಶನ್ ಆಪ್ತರು ಇನ್ನು ಯಾಕೆ ಮಾತನಾಡುತ್ತಿಲ್ಲ ಎಂದು ಸಾಕಷ್ಟು ಜನ ಪ್ರಶ್ನಿಸುತ್ತಿದ್ದಾರೆ. ಕೆಲವರು ಮಾಧ್ಯಮಗಳ ಮುಂದೆ ಬಂದಾಗಲೂ ಪ್ರಕರಣದ ಬಗ್ಗೆ ಮಾತನಾಡದೇ ನುಣುಚಿಕೊಂಡಿರುವ ವೀಡಿಯೋಗಳು ವೈರಲ್ ಆಗುತ್ತಿದೆ.
ನಟ ದರ್ಶನ್ ನಂಬಿ ಬಂಡವಾಳ ಹೂಡಿದ ನಿರ್ಮಾಪಕರು ಹತಾಶರಾಗಿದ್ದಾರೆ. ಶೀಘ್ರದಲ್ಲೇ ದರ್ಶನ್ ಜಾಮೀನು ಪಡೆದು ಹೊರಬರುತ್ತಾರೆ ಎನ್ನುವುದು ಕೆಲವರ ಲೆಕ್ಕಾಚಾರ.


Click it and Unblock the Notifications










