ಕನ್ನಡ ಸಿನಿಮಾ ನಿರ್ದೇಶಕ, ನಿರ್ಮಾಪಕ ಆರ್. ಚಂದ್ರು ಇನ್ಮುಂದೆ ಡಾ. ಆರ್. ಚಂದ್ರು
ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ನಿರ್ದೇಶಕ, ನಿರ್ಮಾಪಕ ಆರ್. ಚಂದ್ರು ಅವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ. ಆರ್. ಚಂದ್ರು ಇನ್ಮುಂದೆ ಡಾ. ಆರ್. ಚಂದ್ರು ಎನಿಸಿಕೊಳ್ಳುತ್ತಿದ್ದಾರೆ. ಚಲನಚಿತ್ರ ಕಲೆ, ಸಾಂಸ್ಕೃತಿಕ ಶ್ರೇಷ್ಠತೆ ಹಾಗೂ ಸಮಾಜ ಸೇವೆಯನ್ನ ಪರಿಗಣಿಸಿ ಮಣಿಪುರ್ ಇಂಟರ್‌ನ್ಯಾಷನಲ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ನೀಡುತ್ತಿದೆ.
ಚಿಕ್ಕಬಳ್ಳಾಪುರ ಮೂಲದ ಆರ್. ಚಂದ್ರು ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಬಂದು ಬಣ್ಣದ ಲೋಕದಲ್ಲಿ ಸಾಧಿಸಿ ತೋರಿಸಿದ್ದಾರೆ. ನಿರ್ದೇಶಕರಾಗಿ ಹಿಟ್ ಸಿನಿಮಾಗಳನ್ನು ಕೊಟ್ಟು ಬಳಿಕ ನಿರ್ಮಾಪಕರಾಗಿ ಗೆದ್ದಿದ್ದಾರೆ. ಈ ಸಿನಿ ಬದುಕಿನಲ್ಲಿ ಏಳುಬೀಳು ಕಂಡಿದ್ದಾರೆ. ಅದನ್ನೆಲ್ಲಾ ಮೀರಿ ಆರ್‌ಸಿ ಸ್ಟುಡಿಯೋಸ್ ಸಂಸ್ಥೆ ಹುಟ್ಟುಹಾಕಿ ಸಿನಿಮಾಗಳ ನಿರ್ಮಾಣಕ್ಕೆ ಕೈಹಾಕಿದ್ದಾರೆ.

ಕೇವಲ ನೂರು ರೂಪಾಯಿ ಇಟ್ಕೊಂಡು ಬೆಂಗಳೂರಿಗೆ ಬಂದು ಕೇಶವವರದ ರೈತನ ಮಗ, ಇಂದು ಕೋಟಿಗಟ್ಟಲೆ ಮೌಲ್ಯದ ವ್ಯವಹಾರವನ್ನು ನಡೆಸುತ್ತಿದ್ದಾರೆ. "ಆರ್. ಚಂದ್ರು" ಎಂಬ ಬ್ರ್ಯಾಂಡ್ ಆಗಿ ಹೇಗೆ ಬೆಳೆದಿದ್ದಾರೆ. ಇದು ಬರೀ ಅದೃಷ್ಟವಲ್ಲ; ಅವರ ಧೈರ್ಯ ಮತ್ತು ಅಗಾಧ ಪ್ರತಿಭೆಗೆ ಸಾಕ್ಷಿ. 'ತಾಜ್‌ಮಹಲ್', 'ಚಾರ್‌ಮಿನಾರ್' ಸೇರಿದಂತೆ 'ಕಬ್ಜ'ವರೆಗೆ ಅದ್ಭುತ ಪ್ರಯತ್ನ ಮಾಡಿದ್ದಾರೆ. ಸಿನಿಮಾ ಮೀರಿ, ಆರ್‌ಸಿ ಸ್ಟುಡಿಯೋಸ್ ಮೂಲಕ ನೂರಾರು ಕಾರ್ಮಿಕರು ಮತ್ತು ಹೊಸ ಪ್ರತಿಭೆಗಳಿಗೆ ಅನ್ನದಾತರಾಗಿದ್ದಾರೆ. ಸಿನಿಮಾ ಮಾತ್ರವಲ್ಲ ಮಳೆನೀರು ಕೊಯ್ಲು ಮತ್ತು ಆಧುನಿಕ ಕೃಷಿಯ ಮೂಲಕ ಮಣ್ಣಿನ ಮಗ ಎಂದು ನಿರೂಪಿಸಿದ್ದಾರೆ. COVID ಬಿಕ್ಕಟ್ಟಿನ ಸಮಯದಲ್ಲಿ ಒಂದು ಲಕ್ಷ ಮರಗಳನ್ನು ನೆಡುವ ಪ್ರಯತ್ನ ಮಾಡಿದ್ದರು. ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಈ ಪಯಣ ಗುರ್ತಿಸಿ ಡಾಕ್ಟರೇಟ್ ಕೊಡುತ್ತಿರುವುದಾಗಿ ಮಣಿಪುರ್ ಇಂಟರ್‌ನ್ಯಾಷನಲ್ ಯೂನಿವರ್ಸಿಟಿ ತಿಳಿಸಿದೆ.
ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಾ. ಹರಿಕುಮಾರ್ ಪಲ್ಲತಡ್ಕ ಅವರು, "ದಕ್ಷಿಣ ಭಾರತದ ಹೆಮ್ಮೆ ಮತ್ತು ಈಶಾನ್ಯ ಭಾರತದ ಚೈತನ್ಯವನ್ನು ಒಂದುಗೂಡಿಸುವ ಉದ್ದೇಶದಿಂದ ಈ ಗೌರವವನ್ನು ನೀಡಲಾಗುತ್ತಿದೆ" ಎಂದು ತಿಳಿಸಿದ್ದಾರೆ. ವಿಶ್ವವಿದ್ಯಾಲಯದ ಮುಂದಿನ ಘಟಿಕೋತ್ಸವ ಅಥವಾ ವಿಶೇಷ ಸಮಾರಂಭದಲ್ಲಿ ಆರ್. ಚಂದ್ರು ಅವರಿಗೆ ಈ ಪದವಿಯನ್ನು ಅಧಿಕೃತವಾಗಿ ಪ್ರದಾನ ಮಾಡಲಾಗುವುದು. ಮಣಿಪುರ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಸ್ವಾಯತ್ತ ಶಾಸನಬದ್ಧ ಅಂತರಾಷ್ಟ್ರೀಯ ವಿಶ್ವವಿದ್ಯಾಲಯವಾಗಿದ್ದು, ಯುಜಿಸಿ (UGC) ಮಾನ್ಯತೆ ಪಡೆದಿದೆ. ಈ ಸಂಸ್ಥೆಯು ಈಶಾನ್ಯ ಭಾರತದ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಪ್ರಮುಖ ಸ್ಥಾನದಲ್ಲಿದೆ.
ಎಸ್. ನಾರಾಯಣ್ ನಿರ್ದೇಶನದ 'ಭಾಗೀರಥಿ' ಧಾರಾವಾಹಿಗೆ ಆರ್. ಚಂದ್ರು ಸಹ ನಿರ್ದೇಶಕರಾಗಿದ್ದರು. ಬಳಿಕ ಕೆಲ ಸಿನಿಮಾಗಳಿಗೆ ಸಹಾಯಕರಾಗಿ ಕೆಲಸ ಮಾಡಿ 'ತಾಜ್‌ಮಹಲ್' ಚಿತ್ರದಿಂದ ಸ್ವತಂತ್ರ ನಿರ್ದೇಶಕರಾಗಿದ್ದರು. ನಂತರ 'ಪ್ರೇಮ್ ಕಹಾನಿ' ಸಿನಿಮಾ ಕಟ್ಟಿಕೊಟ್ಟಿದ್ದರು. ಅದರ ಬೆನ್ನಲ್ಲೇ ಶಿವಣ್ಣ ಹೀರೊ ಆಗಿ 'ಮೈಲಾರಿ' ಸಿನಿಮಾ ಮಾಡಿ ಗೆದ್ದಿದ್ದರು. ಮುಂದೆ 'ಕೊ ಕೊ', 'ಚಾರ್‌ಮಿನಾರ್', 'ಬ್ರಹ್ಮ', 'ಲಕ್ಷ್ಮಣ', 'ಕನಕ', 'ಐ ಲವ್ ಯು', 'ಕಬ್ಜ' ಹೀಗೆ ನಿರ್ದೇಶಕರಾಗಿ 10 ಸಿನಿಮಾ ಕಟ್ಟಿಕೊಟ್ಟಿದ್ದಾರೆ.
ಆರ್‌ಸಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾಗಿ ಒಮ್ಮೆಲೆ 5 ಸಿನಿಮಾಗಳನ್ನು ಆರ್. ಚಂದ್ರು ಘೋಷಿಸಿದ್ದರು. ಪ್ರಕಾಶ್ ರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ನಟನೆಯ 'ಫಾದರ್' ಸಿನಿಮಾ ಬಿಡುಗಡೆಗೆ ಸಜ್ಜಾಗ್ತಿದೆ. 'ಡಾಗ್', 'ಶ್ರೀ ರಾಮ ಬಾಣಾ ಚರಿತ', 'POK', 'ಕಬ್ಜ- 2' ಹೀಗೆ ಒಟ್ಟು 5 ಸಿನಿಮಾಗಳನ್ನು ತೆರೆಗೆ ತರಲು ಮುಂದಾಗಿದ್ದಾರೆ. ಕಿಚ್ಚ ಸುದೀಪ್ ಜೊತೆಗೂ ಒಂದು ಸಿನಿಮಾ ಮಾಡಲು ಆರ್. ಚಂದ್ರು ಪ್ರಯತ್ನಿಸುತ್ತಿದ್ದಾರೆ. ಎಲ್ಲದಕ್ಕಿಂತ ಮುನ್ನ 'ಫಾದರ್' ಸಿನಿಮಾ ಬಿಡುಗಡೆ ಆಗಲಿದೆ.


Click it and Unblock the Notifications











