'ಫಾದರ್' ಚಿತ್ರದ ಕಲಾವಿದರು, ತಂತ್ರಜ್ಞರ ಮಾಹಿತಿ ಕೊಟ್ಟ ಆರ್. ಚಂದ್ರು
'ಕಬ್ಜ' ಬಳಿಕ ಇತ್ತೀಚೆಗೆ ತಮ್ಮದೇ ಆರ್.ಸಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ 5 ಸಿನಿಮಾಗಳನ್ನು ಆರ್. ಚಂದ್ರು ಘೋಷಿಸಿದ್ದರು. ಒಂದಕ್ಕಿಂತ ಒಂದು ವಿಭಿನ್ನ ಟೈಟಲ್ ಸಿನಿಮಾಗಳು ಅದರಲ್ಲಿವೆ. ಲಿಸ್ಟ್‌ನಲ್ಲಿ 'ಕಬ್ಜ'-2 ಕೂಡ ಇದೆ. ಆದರೆ ಯಾವ ಚಿತ್ರದಲ್ಲಿ ಯಾರು ನಟಿಸುತ್ತಾರೆ, ಯಾರು ನಿರ್ದೇಶನ ಮಾಡುತ್ತಾರೆ ಎನ್ನುವುದನ್ನು ಹೇಳಿರಲಿಲ್ಲ.
ಇತ್ತೀಚೆಗೆ ಅಭಿಮಾನಿಗಳ ಜೊತೆ ನಿರ್ದೇಶಕ, ನಿರ್ಮಾಪಕ ಆರ್. ಚಂದ್ರು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇದೇ ವೇಳೆ ತಮ್ಮ ಬ್ಯಾನರ್‌ನಲ್ಲಿ 'ಫಾದರ್' ಸಿನಿಮಾ ಮೊದಲಿಗೆ ಸೆಟ್ಟೇರುವ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರು ಬಹುತೇಕ ಫೈನಲ್ ಆಗಿದ್ದು ಈ ತಿಂಗಳೇ ಸಿನಿಮಾ ಶುರುವಾಗಲಿದೆ.

ಚಂದ್ರು ಮಾತನಾಡುತ್ತಾ ಇನ್ನು ಮುಂದೆ ನಾನು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾತ್ರ ಮಾಡುತ್ತೀನಿ ಎಂದಿದ್ದಾರೆ. ಸಿನಿಮಾ ಚಿಕ್ಕದು ದೊಡ್ಡದು ಅಂತ ಅಲ್ಲ ಕಂಟೆಂಟ್ ದೊಡ್ಡದಾಗಿರಬೇಕು ಎಂದಿರುವ ನಿರ್ದೇಶಕರು, ಪ್ರಕಾಶ್ ರಾಜ್ ಜೊತೆ ಸಿನಿಮಾ ಮಾತುಕತೆ ನಡೆಸಿರುವುದಾಗಿ ವಿವರಿಸಿದ್ದಾರೆ. 5 ಸಿನಿಮಾಗಳು ಬೇರೆ ಬೇರೆ ಜಾನರ್‌ನಲ್ಲಿರುತ್ತದೆ ಎಂದಿದ್ದಾರೆ.
"10 ತಿಂಗಳ ಕಾಲ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಜೊತೆ ಕೂತು ಕಥೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ನಾವು ತಪ್ಪು ಮಾಡುತ್ತೇವೆ. ಗೊತ್ತಿಲ್ಲದೇ, ಅದನ್ನೆಲ್ಲಾ ತಿದ್ದಿಕೊಳ್ಳಬೇಕಲ್ಲ, ಹಾಗಾಗಿ ಒಂದು ತಂಡವನ್ನೇ ಕಟ್ಟಿಕೊಂಡಿದ್ದೇನೆ. ಬರಹಗಾರರ ತಂಡವೂ ಚೆನ್ನಾಗಿದೆ. 10 ತಿಂಗಳಲ್ಲಿ 5 ಸಿನಿಮಾ ಸಬ್ಜೆಕ್ಟ್ ಸಿದ್ಧವಾಗಿದೆ" ಎಂದು ಹೇಳಿದ್ದಾರೆ.
"5 ಸಿನಿಮಾಗಳಲ್ಲಿ ಯಾವುದು ಮೊದಲು ಶುರುವಾಗುತ್ತದೆ ಎನ್ನುವ ಕುತೂಹಲ ಎಲ್ಲರಿಗೂ ಇದೆ. ಅದರಲ್ಲಿ ಒಂದು ಇದೇ ತಿಂಗಳು ಶುರುವಾಗುತ್ತದೆ. 'ಫಾದರ್' ಅಂತ. ಇದೇ 27ರಿಂದ ಒಂದೇ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಡಾರ್ಲಿಂಗ್ ಕೃಷ್ಣ ಹೀರೊ, ಬೇರೆ ಭಾಷೆಯ ಕಲಾವಿದರು ಇರುತ್ತಾರೆ. ಕೃಷ್ಣ ಮತ್ತು ಪ್ರಕಾಶ್ ರಾಜ್ ಸರ್ ತಂದೆ, ಮಗನಾಗಿ ಈ ಚಿತ್ರದಲ್ಲಿ ನಟಿಸುತ್ತಾರೆ. ತಂದೆ ಮಗನ ಕಥೆಯಿದು. ರಾಜ್ ಮೋಹನ್ ಚಿತ್ರ ನಿರ್ದೇಶನ ಮಾಡಲಿದ್ದಾರೆ. ಬಳಿಕ 'ಡಾಗ್' ಸಿನಿಮಾ ಮಾಡ್ತೀನಿ. ಆ ಬಗ್ಗೆ ಮುಂದೆ ಹೇಳುತ್ತೇನೆ" ಎಂದು ಆರ್. ಚಂದ್ರು ಮಾಹಿತಿ ನೀಡಿದ್ದಾರೆ.

'ಫಾದರ್' ಜೊತೆಗೆ 'ಶ್ರೀರಾಮ ಬಾಣ ಚರಿತ', 'DOG', 'POK', 'ಕಬ್ಜ'-2 ಸಿನಿಮಾಗಳನ್ನು ಆರ್. ಚಂದ್ರು ಘೋಷಣೆ ಮಾಡಿದ್ದಾರೆ. 400 ಕೋಟಿ ಬಜೆಟ್‌ನಲ್ಲಿ ಚಂದ್ರು ದೊಡ್ಡಮಟ್ಟದಲ್ಲಿ ಸಿನಿಮಾಗಳನ್ನು ಕಟ್ಟಿಕೊಡುವ ಸಾಹಸಕ್ಕೆ ಕೈ ಹಾಕಿದ್ದಾರೆ. ಆನಂದ್ ಪಂಡಿತ್, ಅಲಂಕಾರ್ ಪಾಂಡಿಯನ್ ಕೂಡ ಚಂದ್ರು ಜೊತೆಗೆ ಕೈಜೋಡಿಸಿದ್ದಾರೆ.
15 ದಿನಗಳ ಹಿಂದೆ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಆರ್. ಸಿ ಸ್ಟುಡಿಯೋಸ್ ಸಂಸ್ಥೆ ಲೋಕಾರ್ಪಣೆ ಮಾಡಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಸಹ ಕಾರ್ಯಕ್ರಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದರು. ಡಾರ್ಲಿಂಗ್ ಕೃಷ್ಣ ಸಹ ಭಾಗಿ ಆಗಿದ್ದರು.


Click it and Unblock the Notifications











