'ಕಬ್ಜ' ನಿರ್ಮಾಣ ಸಂಸ್ಥೆಗೆ ಕೇಂದ್ರದಿಂದ ಪ್ರಶಂಸಾ ಪತ್ರ; ಆರ್. ಚಂದ್ರು ಖುಷ್
ಆರ್. ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾ ಕಳೆದ ವರ್ಷ ತೆರೆಗಪ್ಪಳಿಸಿತ್ತು. ಉಪೇಂದ್ರ ಹೀರೊ ಆಗಿ ನಟಿಸಿದ್ದ ಚಿತ್ರದಲ್ಲಿ ಸುದೀಪ್ ಹಾಗೂ ಶಿವಣ್ಣ ಅತಿಥಿ ಪಾತ್ರಗಳಲ್ಲಿ ಮಿಂಚಿದ್ದರು. 'ಕೆಜಿಎಫ್' ಸಿನಿಮಾ ರೀತಿಯಲ್ಲೇ ಈ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ನಡೆದಿತ್ತು. ಆದರೆ ಚಿತ್ರಕ್ಕೆ ಭಾರೀ ಹಿನ್ನೆಡೆಯಾಗಿತ್ತು.
ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿತ್ತು. ಮೇಕಿಂಗ್ ವಿಚಾರದಲ್ಲಿ ಗಮನ ಹರಿಸಿದ್ದ ಆರ್. ಚಂದ್ರು ಕಥೆ, ಚಿತ್ರಕಥೆ, ಗ್ರಾಫಿಕ್ಸ್ ವಿಚಾರದಲ್ಲಿ ನಿರಾಸೆ ಮೂಡಿಸಿದ್ದರು. ಆನಂದ್ ಪಂಡಿತ್ ಹಾಗೂ ಅಲಂಕಾರ್ ಪಾಂಡಿಯನ್ ಜೊತೆ ಸೇರಿ ಶ್ರೀ ಸಿದ್ದೇಶ್ವರ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಖುದ್ದು ಚಂದ್ರು ಚಿತ್ರ ನಿರ್ಮಿಸಿದ್ದರು.

'ಕಬ್ಜ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದರೂ ಆರ್. ಚಂದ್ರು ಸೇಫ್ ಆಗಿದ್ದರು. ಸ್ಯಾಟಲೈಟ್ ರೈಟ್ಸ್, ಡಿಜಿಟಲ್, ಡಿಸ್ಟ್ರಿಬ್ಯೂಷನ್ ರೈಟ್ಸ್ ಒಳ್ಳೆ ಬೆಲೆಗೆ ಮಾರಾಟ ಮಾಡಿ ಸಿನಿಮಾ ಬಿಡುಗಡೆಗೂ ಮುನ್ನವೇ ಲಾಭದಲ್ಲಿದ್ದರು. ಆದರೆ ಸಿನಿಮಾ ನಂಬಿ ಹಣ ಹಾಕಿದವರು ನಷ್ಟ ಅನುಭವಿಸಿದರು ಎನ್ನುವ ಗುಸುಗುಸು ಕೇಳಿಬಂದಿತ್ತು. 'ಕಬ್ಜ' ಸೋಲಿನ ಬಳಿಕವೂ ತಮ್ಮದೇ ಬ್ಯಾನರ್‌ನಲ್ಲಿ 5 ಸಿನಿಮಾಗಳನ್ನು ಘೋಷಿಸಿದ್ದಾರೆ.
ಆರ್. ಸಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಚಂದ್ರು ನಿರ್ಮಾಣದ ಚೊಚ್ಚಲ ಸಿನಿಮಾ 'ಫಾದರ್' ಚಿತ್ರೀಕರಣ ಆರಂಭವಾಗಿದೆ. ಇದೇ ಹೊತ್ತಲ್ಲಿ 'ಕಬ್ಜ' ಚಿತ್ರಕ್ಕಾಗಿ ಕೇಂದ್ರ ಹಣಕಾಸು ಸಚಿವಾಲಯ ಪ್ರಶಂಶಾ ಪತ್ರ ನೀಡಿದೆ. ಈ ವಿಚಾರವನ್ನು ನಿರ್ದೇಶಕರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
"ಶ್ರೀ ಸಿದ್ದೇಶ್ವರ ಎಂಟರ್‌ಪ್ರೈಸಸ್ ಭಾರತ ಸರ್ಕಾರದಿಂದ ಅತ್ಯುನ್ನತ ತೆರಿಗೆ ಪಾವತಿದಾರರೆಂದು ಪ್ರಶಂಸಾ ಪತ್ರವನ್ನು ಪಡೆದ ಹೆಮ್ಮೆಯಿದೆ. ಕನ್ನಡ ಚಿತ್ರರಂಗದ ಬೆಳವಣಿಗೆ ಎಲ್ಲರಿಗೂ ತಿಳಿದಿರುವಂತಿದ್ದು, ಈ ಮೆಚ್ಚುಗೆ ಪತ್ರ ನಮ್ಮ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ" ಎಂದು ಪ್ರಶಂಸಾ ಪತ್ರದ ಸಮೇತ ಆರ್. ಚಂದ್ರು ಪೋಸ್ಟ್ ಮಾಡಿದ್ದಾರೆ.
ಆರ್. ಸಿ ಸ್ಟುಡಿಯೋಸ್ ಸಂಸ್ಥೆ ಲಾಂಚ್ ವೇಳೆ ಆರ್. ಚಂದ್ರು ಮಾತನಾಡಿದ್ದರು. ತಮ್ಮ ಮೇಲಿನ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿ ಭಾವೋದ್ವೇಗದಿಂದ ಪ್ರತಿಕ್ರಿಯಿಸಿದ್ದರು. 'ಕಬ್ಜ' ಚಿತ್ರದಿಂದ 20 ಕೋಟಿ ರೂ. ತೆರಿಗೆ ಪಾವತಿ ಮಾಡಿದ್ದೀನಿ. ಯಾರಾದರೂ ಹೇಳುತ್ತಾರಾ? ನಾನು ಹೇಳುತ್ತೇನೆ. ಒಂದು ಸಿನಿಮಾ ಗೆಲ್ಲುತ್ತದೆ, ಒಂದು ಸಿನಿಮಾ ಸೋಲುತ್ತದೆ ಇನ್ನೊಬ್ಬರನ್ನು ಹಿಯಾಳಿಸಲು ಹೋಗಬಾರದು" ಎಂದಿದ್ದರು.
ಘಟಾನುಘಟಿ ಕಲಾವಿದರು 'ಕಬ್ಜ' ಚಿತ್ರದಲ್ಲಿ ನಟಿಸಿದ್ದರು. ನಾಯಕಿಯಾಗಿ ಬಹುಭಾಷಾ ಬೆಡಗಿ ಶ್ರಿಯಾ ಶರಣ್ ಕಾಣಿಸಿಕೊಂಡಿದ್ದರು. ರವಿ ಬಸ್ರೂರು ಸಂಗೀತ ಚಿತ್ರಕ್ಕಿತ್ತು. ಅದ್ಧೂರಿ ಸೆಟ್‌ಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿತ್ತು. ಎ. ಜೆ ಶೆಟ್ಟಿ ಛಾಯಾಗ್ರಹಣ ಹಾಗೂ ರವಿಬಸ್ರೂರು ಸಂಗೀತ ಚಿತ್ರಕ್ಕಿತ್ತು. ಚಿತ್ರದಲ್ಲಿ ಡಾನ್ ಅರ್ಕೇಶ್ವರ್ ಆಗಿ ರಿಯಲ್ ಸ್ಟಾರ್ ಅಬ್ಬರಿಸಿದ್ದರು. ಪೊಲೀಸ್ ಆಫೀಸರ್ ಭಾರ್ಗವ್ ಭಕ್ಷಿ ಆಗಿ ಸುದೀಪ್ ದರ್ಬಾರ್ ನಡೆಸಿದ್ದರು.
ಸೆಟ್ಟೇರಿದ ದಿನದಿಂದಲೂ ಭಾರೀ ಹೈಪ್ ಕ್ರಿಯೇಟ್ ಮಾಡಿದ್ದ ಸಿನಿಮಾ ಬಿಡುಗಡೆ ಬಳಿಕ ನಿರಾಸೆ ಮೂಡಿಸಿತ್ತು. ಸಿನಿಮಾ ಉದ್ದಕ್ಕೂ 'ಕೆಜಿಎಫ್' ಛಾಯೆ ಎದ್ದು ಕಾಣುತ್ತಿತ್ತು. ಆದರೆ ಆ ಮ್ಯಾಜಿಕ್ ಮಾತ್ರ ಕಾಣಲಿಲ್ಲ. ಸದ್ಯ ಚಂದ್ರು 'ಫಾದರ್', 'ಪಿಓಕೆ', 'ಡಾಗ್', 'ಶ್ರೀರಾಮಬಾಣಂ ಚರಿತ' ಮತ್ತು 'ಕಬ್ಜ 2' ಎಂದು ಹೆಸರಿಟ್ಟಿದ್ದಾರೆ.


Click it and Unblock the Notifications











