R Vs R: IAS ಹಾಗೂ IPS ಅಧಿಕಾರಿಗಳ ಕಿತ್ತಾಟದ ಕಥೆಗೆ ಸಿನಿಮಾ ರೂಪ: ಟೈಟಲ್‌ಗಾಗಿ ಅರ್ಜಿ
ಪ್ರಸಕ್ತ ವಿದ್ಯಮಾನ, ವಿವಾದಗಳನ್ನು ಆಧರಿಸಿ ಸಿನಿಮಾ ಮಾಡಲು ಚಿತ್ರರಂಗದ ಮಂದಿ ತುದಿಗಾಲಲ್ಲಿ ನಿಂತಿರುತ್ತಾರೆ. ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ IAS ಹಾಗೂ IPS ಅಧಿಕಾರಿಗಳ ನಡುವಿನ ಕಿರಿಕ್ ತಾರಕಕ್ಕೇರಿದೆ. ಇದನ್ನೇ ಸಿನಿಮಾ ಮಾಡಿದರೆ ಹೇಗೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಈಗಾಗಲೇ ಸಿನಿಮಾ ಟೈಟಲ್‌ಗಾಗಿ ಫಿಲ್ಮ್ ಚೇಂಬರ್ ಮೆಟ್ಟಿಲನ್ನು ಏರಿದ್ದಾರೆ. ಟೈಟಲ್ ಸಿಕ್ಕರೆ ಕೂಡಲೇ ಸಿನಿಮಾ ಮಾಡುವ ಪ್ರಯತ್ನ ನಡೀತಿದೆ.
ಉನ್ನತ ಹುದ್ದೆಯಲ್ಲಿರುವ ಇಬ್ಬರು ಮಹಿಳಾ ಅಧಿಕಾರಿಗಳು ಪರಸ್ಪರ ಕೆಸರೆರಚಾಟ ಶುರು ಮಾಡಿದ್ದಾರೆ. ಕಳೆದೊಂದು ವಾರದಿಂದ ಇದೇ ವಿಚಾರ ಕರ್ನಾಟಕದಲ್ಲಿ ಭಾರೀ ಚರ್ಚೆ ಹುಟ್ಟಾಕಿದೆ. ಇವರಿಬ್ಬರ ಕಿತ್ತಾಟ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿರುವುದು ಸುಳ್ಳಲ್ಲ. ವೈಯಕ್ತಿಯ ವಿಚಾರಗಳನ್ನು ಇಟ್ಟುಕೊಂಡು ಹೀಗೆ IAS ಹಾಗೂ IPS ಅಧಿಕಾರಿಗಳಿಬ್ಬರ ಕಿರಿಕ್ ಸರ್ಕಾರಕ್ಕೆ ಮುಜುಗರ ತಂದಿದೆ. ರಾಜ್ಯದಲ್ಲಿ ಸರ್ಕಾರ ಇದ್ಯಾ ಇಲ್ವಾ ಎನ್ನುವ ಆರೋಪ, ಚರ್ಚೆ ಸಾರ್ವಜನಿಕ ವಲಯದಲ್ಲಿದೆ.

IAS ಮತ್ತು IPS ಅಧಿಕಾರಿಗಳ ಬೀದಿ ಜಗಳದ ವಿಷಯವನ್ನಿಟ್ಟುಕೊಂಡು ಬಿಯಾಂಡ್ ಡ್ರೀಮ್ಸ್ ಸಂಸ್ಥೆ ಹಾಗೂ ನಿರ್ಮಾಪಕ ಪ್ರವೀಣ್ ಶೆಟ್ಟಿ ಎಂಬುವವರು ಎರಡು ಬೇರೆ ಬೇರೆ ಸಿನಿಮಾಗಳನ್ನು ಮಾಡಲು ಮುಂದಾಗಿದ್ದಾರೆ. ಒಬ್ಬರು ಅಧಿಕಾರಿಗಳ ಹೆಸರಿನ ಟೈಟಲ್ ಕೇಳುತ್ತಿದ್ದರೆ ಮತ್ತೊಬ್ಬರು ಆರ್ ವರ್ಸಸ್ ಆರ್ (R Vs R) ಎನ್ನುವ ಟೈಟಲ್‌ಗಾಗಿ ಅರ್ಜಿ ಹಾಕಿದ್ದಾರೆ. ಫಿಲ್ಮಿ ಛೇಂಬರ್ ಅಧ್ಯಕ್ಷ ಭಾ ಮಾ ಹರೀಶ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ರೀತಿ ಸಿನಿಮಾ ಟೈಟಲ್‌ಗಾಗಿ ಅರ್ಜಿ ಬಂದಿರುವುದು ನಿಜ ಎಂದಿದ್ದಾರೆ.

"ಎರಡು ಸಿನಿಮಾ ಟೈಟಲ್‌ಗಳ ಅರ್ಜಿಯನ್ನು ಸೋಮವಾರ ಟೈಟಲ್ ಕಮಿಟಿ ಮುಂದೆ ಬರಲಿದೆ. ಕಮಿಟಿ ಒಪ್ಪಿದರೆ ಟೈಟಲ್ ಕೊಡುತ್ತೇವೆ. ಇನ್ನು ಯಾವುದೇ ವ್ಯಕ್ತಿಗಳ ಕುರಿತು ಸಿನಿಮಾ ಮಾಡಲು ಅವರ ನಿರಪೇಕ್ಷಣಾ ಪತ್ರ(NOC) ಪಡೆದುಕೊಳ್ಳಬೇಕು" ಎಂದಿದ್ದಾರೆ. ಒಟ್ನಲ್ಲಿ ಈ ಸಿನಿಮಾ ವಿಚಾರ ಮುಂದೆ ಏನೆಲ್ಲಾ ತಿರುವು ಪಡೆದುಕೊಳ್ಳುತ್ತೋ ಕಾದು ನೋಡಬೇಕು.


Click it and Unblock the Notifications











