'ಸೈಮಾ' ಪ್ರಶಸ್ತಿಯಲ್ಲಿ 'ರಾಜಕುಮಾರ' ಒನ್ ಮ್ಯಾನ್ ಶೋ: 9 ವಿಭಾಗದಲ್ಲಿ ನಾಮಿನೇಟ್
Recommended Video

ಕಳೆದ ವರ್ಷದ ಸೂಪರ್ ಹಿಟ್ ಸಿನಿಮಾ 'ರಾಜಕುಮಾರ' 2018ನೇ ಸಾಲಿನ ಸೈಮಾ ಪ್ರಶಸ್ತಿಯಲ್ಲಿ ಬರೋಬ್ಬರಿ 9 ವಿಭಾಗದಲ್ಲಿ ನಾಮಿನೇಟ್ ಆಗಿದೆ. ಈ ಮೂಲಕ ಈ ವರ್ಷದ ಸೈಮಾ ರೇಸ್ ನಲ್ಲಿ ರಾಜಕುಮಾರ ಒನ್ ಮ್ಯಾನ್ ಶೋ ಆದ್ರು ಅಚ್ಚರಿಯಿಲ್ಲ.
ಪುನೀತ್ ರಾಜ್ ಕುಮಾರ್ ಅಭಿನಯಿಸಿ, ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದ 'ರಾಜಕುಮಾರ' ಸ್ಯಾಂಡಲ್ ವುಡ್ ಬಾಕ್ಸ್ ಅಫೀಸ್ ನಲ್ಲಿ ಅತಿ ಹೆಚ್ಚು ಗಳಿಕೆ ಕಂಡಿರುವ ಸಿನಿಮಾ ಎನಿಸಿಕೊಂಡಿದೆ.
ಮಾರ್ಚ್ 24, 2017 ರಂದು ತೆರೆಕಂಡಿದ್ದ ರಾಜಕುಮಾರ, ಬರಿ ಕಥೆಯಿಂದ ಮಾತ್ರವಲ್ಲ, ಎಲ್ಲ ವಿಭಾಗದಲ್ಲೂ ಮೋಡಿ ಮಾಡಿತ್ತು. ಹಾಡು, ಅಭಿನಯ, ತಾಂತ್ರಿಕವಾಗಿ ಜನರ ಮೆಚ್ಚುಗೆ ಗಳಿಸಿತ್ತು. ಹಾಗಿದ್ರೆ, ಈ ವರ್ಷದ ಸೈಮಾ ಪ್ರಶಸ್ತಿಯಲ್ಲಿ ರಾಜಕುಮಾರ ನಾಮನಿರ್ದೇಶನವಾಗಿರುವ ವಿಭಾಗಗಳು ಯಾವುದು.? ಯಾವ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ಫೇವರೆಟ್ ಆಗಿದೆ.? ಎಂಬುದನ್ನ ತಿಳಿಯಲು ಮುಂದೆ ಓದಿ......

ಅತ್ಯುತ್ತಮ ಚಿತ್ರ ರಾಜಕುಮಾರ.?
ಕಳೆದ ವರ್ಷ ಕನ್ನಡದ ಗಲ್ಲಾ ಪೆಟ್ಟಿಗೆಯಲ್ಲಿ ಅತಿ ಹೆಚ್ಚು ಗಳಿಕೆ ಕಂಡು, ಸಾರ್ವಕಾಲಿಕವಾಗಿ ದಾಖಲೆ ಬರದಿರುವ 'ರಾಜಕುಮಾರ' ಅತ್ಯುತ್ತಮ ಚಿತ್ರ ವಿಭಾದಲ್ಲಿ ನಾಮನಿರ್ದೇಶನವಾಗಿದೆ. ಉಳಿದ ಚಿತ್ರಗಳಿಗೆ ಹೋಲಿಸಿಕೊಂಡ್ರೆ 'ರಾಜಕುಮಾರ' ಚಿತ್ರಕ್ಕೆ ಮೊದಲ ಸ್ಥಾನ ಸಿಗಬಹುದು ಎಂದು ಅಂದಾಜಿಸಲಾಗಿದೆ. ರಾಜಕುಮಾರನ ಜೊತೆ ಚಮಕ್, ಭರ್ಜರಿ, ಒಂದುಮೊಟ್ಟೆಯ ಕಥೆ ಹಾಗೂ ಚೌಕ ಚಿತ್ರಗಳು ನಾಮಿನೇಟ್ ಆಗಿದೆ.

ಅತ್ಯುತ್ತಮ ನಟ ಪುನೀತ್.?
ರಾಜಕುಮಾರ ಚಿತ್ರದ ಅಭಿನಯಕ್ಕಾಗಿ 65ನೇ ಜಿಯೋ ಫಿಲ್ಮ್ ಫೇರ್ ಪ್ರಶಸ್ತಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜಯಶಾಲಿ ಆಗಿದ್ದರು. ಹೀಗಾಗಿ, ಸೈಮಾ ಪ್ರಶಸ್ತಿಯಲ್ಲಿ ಬಹುತೇಕ ಪುನೀತ್ ಅವರಿಗೆ ವಿಜಯಲಕ್ಷ್ಮಿ ಒಲಿಯಬಹುದು ಎಂಬ ನಿರೀಕ್ಷೆ ಇದೆ. ಪುನೀತ್ ಅವರ ಜೊತೆಯಲ್ಲಿ ಶಿವರಾಜ್ ಕುಮಾರ್, ಶ್ರೀಮುರಳಿ, ಗಣೇಶ್, ಧ್ರುವ ಸರ್ಜಾ ನಾಮಿನೇಟ್ ಆಗಿದ್ದಾರೆ.

ಅತ್ಯುತ್ತಮ ನಿರ್ದೇಶಕ ಸಂತೋಷ್.?
ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದ ನಂತರ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ ಚಿತ್ರ ರಾಜಕುಮಾರ. ಮೊದಲ ಚಿತ್ರದಂತೆ ಎರಡನೇ ಚಿತ್ರವೂ ಸೂಪರ್ ಡೂಪರ್ ಹಿಟ್ ಆಗಿತ್ತು. ಹೀಗಾಗಿ, ರಾಜಕುಮಾರ ಚಿತ್ರದ ನಿರ್ದೇಶನಕ್ಕಾಗಿ ಸಂತೋಷ್ ಆನಂದ್ ರಾಮ್ ಸೈಮಾ ಪ್ರಶಸ್ತಿಯಲ್ಲಿ ನಾಮಿನೇಟ್ ಆಗಿದ್ದಾರೆ. ಸಂತೋಷ್ ಜೊತೆ ಚೇತನ್ ಕುಮಾರ್, ಸುನಿ, ಪ್ರಕಾಶ್ ಜಯರಾಂ, ಪಿಸಿ ಶೇಖರ್ ನಾಮಿನಿರ್ದೇಶನವಾಗಿದ್ದಾರೆ.

ಅತ್ಯುತ್ತಮ ಹಾಸ್ಯ ಕಲಾವಿದ ಚಿಕ್ಕಣ್ಣ.?
ರಾಜಕುಮಾರ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಹಾಸ್ಯ ನಟನಾಗಿ ಅಭಿನಯಿಸಿದ್ದ ಚಿಕ್ಕಣ್ಣ ಹಾಸ್ಯ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ. ಇವರ ಜೊತೆ ಸಾಧುಕೋಕಿಲಾ, ಸಾಯಿಕುಮಾರ್, ವಿಜಯ್ ಚೆಂಡೂರ್, ಕುರಿಪ್ರತಾಪ್ ಕೂಡ ರೇಸ್ ನಲ್ಲಿದ್ದಾರೆ. ಈ ವಿಭಾಗದಲ್ಲಿ ಫಲಿತಾಂಶ ಲೆಕ್ಕಾಚಾರ ಕಷ್ಟವಾಗಿದ್ದು, ಕಾದುನೋಡಬೇಕಿದೆ.

ಅತ್ಯುತ್ತಮ ಖಳನಟ ಪ್ರಕಾಶ್ ರೈ.?
ರಾಜಕುಮಾರ ಚಿತ್ರದಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದ ನಟ ಪ್ರಕಾಶ್ ರೈ ಅತ್ಯುತ್ತಮ ಖಳನಟ ವಿಭಾಗದಲ್ಲಿ ನಾಮನಿರ್ದೇಶನವಾಗಿದ್ದಾರೆ. ಇವರ ಜೊತೆ ರವಿಶಂಕರ್, ಅಪೇಕ್ಷ ಪುರೋಹಿತ್, ಶಹವಾರ್ ಅಲಿ ರೇಸ್ ನಲ್ಲಿದ್ದಾರೆ. ಈ ವಿಭಾದಲ್ಲಿ ದೊಡ್ಡ ಪೈಪೋಟಿ ಇದ್ದು ಯಾರ ಪರವಾಗಿ ಜನಮತವಿದೆ ಎಂಬುದು ಕುತೂಹಲ ಮೂಡಿಸಿದೆ.

ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್
ರಾಜಕುಮಾರ ಚಿತ್ರದ ಹಾಡುಗಳು ಚಿತ್ರಕ್ಕಿಂತ ಹೆಚ್ಚು ಸೂಪರ್ ಹಿಟ್ ಅಂದ್ರೆ ತಪ್ಪಾಗಲಾರದು. ವಿ ಹರಿಕೃಷ್ಣ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ. ಇವರ ಜೊತೆಯಲ್ಲಿ ಚರಣ್ ರಾಜ್, ರಘುದೀಕ್ಷಿತ್, ಅರ್ಜುನ್ ಜನ್ಯ, ಜುಡಾ ಸ್ಯಾಂಡಿ ರೇಸ್ ನಲ್ಲಿದ್ದಾರೆ.

ಸಾಹಿತ್ಯ-ಗಾಯಕ-ಛಾಯಾಗ್ರಾಹಕರು
ಇನ್ನು ತಾಂತ್ರಿಕವಾಗಿಯೂ ರಾಜಕುಮಾರ ಚಿತ್ರದ ತಂತ್ರಜ್ಞರು ಸೈಮಾ ಪ್ರಶಸ್ತಿಯಲ್ಲಿ ನಾಮಿನೇಟ್ ಆಗಿದ್ದಾರೆ. ಅತ್ಯುತ್ತಮ ಛಾಯಾಗ್ರಹಣ ವಿಭಾಗದಲ್ಲಿ ವೆಂಕಟೇಶ್ ಅಂಗುರಾಜ್ ಅವರು ನಾಮಿನಿರ್ದೇಶನವಾಗಿದ್ದಾರೆ. ಅತ್ಯುತ್ತಮ ಹಿನ್ನೆಲೆ ಗಾಯಕ ವಿಭಾಗದಲ್ಲಿ ಬೊಂಬೆ ಹೇಳುತೈತೆ ಹಾಡಿಗಾಗಿ ವಿಜಯ ಪ್ರಕಾಶ್ ಹಾಗೂ ಇದೇ ಹಾಡಿನ ಸಾಹಿತ್ಯಕ್ಕಾಗಿ ಸಂತೋಷ್ ಆನಂದ್ ರಾಮ್ ಅತ್ಯುತ್ತಮ ಚಿತ್ರ ಸಾಹಿತಿ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ.

ರಾಜಕುಮಾರ ಒನ್ ಮ್ಯಾನ್ ಶೋ
2018ನೇ ಸೈಮಾ ಪ್ರಶಸ್ತಿಯಲ್ಲಿ ರಾಜಕುಮಾರ ಸಿನಿಮಾ ಇಷ್ಟೊಂದು ವಿಭಾಗದಲ್ಲಿ ನಾಮಿನೇಟ್ ಆಗಿರುವುದು ನಿಜಕ್ಕೂ ವಿಶೇಷವೇ ಸರಿ. ಹಾಗೂ ಬಹುತೇಕ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ಫೇವರೆಟ್ ಕೂಡ ಆಗಿದೆ. ಸೋ ಕಾದುನೋಡೋಣ, ಯಾವೆಲ್ಲ ವಿಭಾಗದಲ್ಲಿ ರಾಜಕುಮಾರ ವಿನ್ ಆಗಲಿದೆ ಎಂದು.


Click it and Unblock the Notifications











