ದರ್ಶನ್ ಜೊತೆ 'ಒಂದೇ ಒಂದು ಸಲ' ಸಾಂಗ್ ಶೂಟ್ ಅನುಭವ ಬಿಚ್ಚಿಟ್ಟ ರಚನಾ ರೈ
ದರ್ಶನ್ ಹಾಗೂ ರಚನಾ ರೈ ನಟನೆಯ 'ಡೆವಿಲ್' ಚಿತ್ರದ 2ನೇ ಹಾಡು ಬಂದು ಸಖತ್ ಸದ್ದು ಮಾಡ್ತಿದೆ. 'ಒಂದೇ ಒಂದು ಸಲ' ಎಂದು ಶುರುವಾಗುವ ರೊಮ್ಯಾಂಟಿಕ್ ಸಾಂಗ್ ಅಭಿಮಾನಿಗಳ ಮನಗೆದ್ದಿದೆ. ವಿದೇಶದ ಸುಂದರ ಲೊಕೇಶನ್‌ಗಳಲ್ಲಿ ಸಾಂಗ್ ಶೂಟ್ ಮಾಡಿದ್ದಾರೆ. ದರ್ಶನ್ ಜೊತೆ ನಾಯಕಿ ರಚನಾ ರೈ ಸಿಕ್ಕಾಪಟ್ಟೆ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದಾರೆ.
ಪ್ರಕಾಶ್ ನಿರ್ದೇಶನದ 'ಡೆವಿಲ್' ಸಿನಿಮಾ ಡಿಸೆಂಬರ್ 12ಕ್ಕ ತೆರೆಗೆ ಬರಲಿದೆ. ಸದ್ಯ ಸಾಂಗ್ ಹಿಟ್ ಆಗಿರುವ ಬಗ್ಗೆ ನಟಿ ರಚನಾ ರೈ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ಮುಖ್ಯವಾಗಿ ದರ್ಶನ್ ಅವರೊಟ್ಟಿಗೆ ನಟಿಸಿದ, ಹಾಡಿನಲ್ಲಿ ಕಾಣಿಸಿಕೊಂಡ ಬಗ್ಗೆ ನೆನಪಿಸಿಕೊಂಡಿದ್ದಾರೆ. "ದರ್ಶನ್ ಸರ್, ನಿಮ್ಮಂತಹ ಸೂಪರ್‌ಸ್ಟಾರ್ ಜೊತೆ ಕೆಲಸ ಮಾಡುವುದು ಸಂಪೂರ್ಣ ಆಶೀರ್ವಾದ. ಸೆಟ್‌ನಲ್ಲಿ ಪ್ರತಿ ದಿನವೂ ನಿಮ್ಮ ಗಮನ, ನಿಮ್ಮ ತಾಳ್ಮೆ ಮತ್ತು ನಿಮ್ಮ ಅಚಲ ಸಮರ್ಪಣೆಯನ್ನು ನೋಡುವುದು ಒಂದು ಪಾಠವಾಗಿತ್ತು. ಕ್ಯಾಮೆರಾ ಹಿಂದೆ ನಿಮ್ಮ ಕಾಳಜಿ, ಪ್ರೀತಿ ಮರೆಯೋಕೆ ಸಾಧ್ಯವಿಲ್ಲ. ನಾನು ಕಂಡ ಅದ್ಭುತ ವ್ಯಕ್ತಿಗಳಲ್ಲಿ ನೀವು ಒಬ್ಬರು. ನನ್ನ ಅದ್ಭುತ ಸಹನಟರಾಗಿದ್ದಕ್ಕೆ ಧನ್ಯವಾದಗಳು" ಎಂದು ರಚನಾ ರೈ ಬರೆದುಕೊಂಡಿದ್ದಾರೆ.

ಥಾಯ್ಲೆಂಡ್‌ನ ಫುಕೆಟ್‌ನಲ್ಲಿರುವ ಜೇಮ್ಸ್ ಬಾಂಡ್ ಐಲ್ಯಾಂಡ್‌ನಲ್ಲಿ 'ಒಂದೇ ಒಂದು ಸಲ' ಸಾಂಗ್ ಶೂಟ್ ಮಾಡಲಾಗಿದೆ. ಸಖತ್ ಬಿಂದಾಸ್ ಆಗಿ ನಾಯಕಿ ರಚತಾ ಮಿಂಚಿದ್ದಾರೆ. ಈ ಬಗ್ಗೆ "ಬೀಚ್ ಶೂಟಿಂಗ್ ತಮಾಷೆಯಾಗಿರಲಿಲ್ಲ, ಸುಡುವ ಸೂರ್ಯ, ಬಿಸಿಲಿನ ಬೇಗೆಯ, ಸನ್ ಬರ್ನ್, ಕಠಿಣ ಹವಾಮಾನ ಸತತ ಚಿತ್ರೀಕರಣ. ನಿಜಕ್ಕೂ ನೀವು ಅದ್ಭುತ. ಹಹಹ.. ಆದರೆ ಸೂರ್ಯ, ಮರಳು, ಆ ಹವಾಮಾನದಲ್ಲಿ ಚಿತ್ರೀಕರಿಸಿದ ಹಾಡು ಇಷ್ಟು ಅದ್ಭುತವಾಗಿರುತ್ತದೆ ಎಂದುಕೊಂಡಿರಲಿಲ್ಲ, ನಿಜಕ್ಕೂ ನನ್ನ ಮನಸ್ಸಿಗೆ ಹತ್ತಿರವಾಗಿದೆ. ಅದ್ಭುತ ತಂಡಕ್ಕೆ, ನಿಮ್ಮ ಕಠಿಣ ಪರಿಶ್ರಮ ಸಮರ್ಪಣೆ ಮತ್ತು ಕ್ಯಾಮೆರಾದ ಹಿಂದಿನ ಉತ್ಸಾಹ ಈ ಹಾಡನ್ನು ಮಾಂತ್ರಿಕಗೊಳಿಸಿದೆ. 'ಡೆವಿಲ್' ಚಿತ್ರದ ನಮ್ಮ ಹಾಡನ್ನು ಮೆಚ್ಚಿಕೊಂಡ ಎಲ್ಲರಿಗೂ ಕೃತಜ್ಞರಾಗಿರುತ್ತೇವೆ" ಎಂದು ರಚನಾ ವಿವರಿಸಿದ್ದಾರೆ.
ಅಜನೀಶ್ ಲೋಕನಾಥ್ ಸಂಗೀತದ 'ಒಂದೇ ಒಂದು ಸಲ' ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಕಪಿಲ್ ಕಪಿಲನ್ ಹಾಗೂ ಚಿನ್ಮಯಿ ಶ್ರೀಪಾದ ಹಾಡಿಗೆ ದನಿಯಾಗಿದ್ದಾರೆ. ಬಹಳ ಅದ್ಧೂರಿಯಾಗಿ ಸಾಂಗ್ ಶೂಟ್ ಮಾಡಿದ್ದಾರೆ. ಚೇತನ್ ಎಂಬುವವರು ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು ಸ್ಟೈಲಿಶ್ ಅವತಾರದಲ್ಲಿ ದರ್ಶನ್ ಹಾಗೂ ರಚನಾ ರೈ ಮಿಂಚಿದ್ದಾರೆ. ಸಂತು ಮಾಸ್ಟರ್ ಸಾಂಗ್ ಕೊರಿಯೋಗ್ರಫಿ ಮಾಡಿದ್ದು ಸುಧಾಕರ್ ರಾಜ್ ತಮ್ಮ ಕ್ಯಾಮರಾ ಕಣ್ಣಲ್ಲಿ ಸೊಗಸಾಗಿ ಸೆರೆ ಹಿಡಿದಿದ್ದಾರೆ.
ಮೂಲತಃ ಮಂಗಳೂರಿನ ಪುತ್ತೂರಿನರಾದ ರಚನಾ ರೈ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ. ಈಕೆ ಮಾಡೆಲ್ ಹಾಗೂ ಉತ್ತಮ ಭರತನಾಟ್ಯ ಕಲಾವಿದೆ ಕೂಡ ಹೌದು. ರೂಪೇಶ್ ಶೆಟ್ಟಿ ಜೊತೆ 'ಸರ್ಕಸ್' ಎಂಬ ತುಳು ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. 'ಶ್ರೀರಂಗ' ಹಾಗೂ 'ಹ್ಯಾಪಿ ಬರ್ತ್‌ಡೇ ಟು ಮಿ' ಆಕೆ ನಟಿಸಿರು ಮತ್ತೆರಡು ಚಿತ್ರಗಳು. ಆಡಿಷನ್ ಕೊಟ್ಟು 'ಡೆವಿಲ್' ಚಿತ್ರಕ್ಕೆ ನಾಯಕಿಯಾಗಿ ರಚನಾ ಆಯ್ಕೆ ಆಗಿದ್ದರು.
'ಡೆವಿಲ್' ಚಿತ್ರದಲ್ಲಿ ಒಟ್ಟು 4 ಹಾಡುಗಳಿವೆ ಎನ್ನಲಾಗ್ತಿದೆ. ಒಂದು ಐಟಂ ಸಾಂಗ್ ಕೂಡ ಇದೆ ಎನ್ನುವ ಊಹಾಪೋಹ ಶುರುವಾಗಿದೆ. 'ಇದ್ರೇ ನೆಮ್ದಿಯಾಗಿರ್ಬೇಕ್' ಬಳಿಕ ಈ ರೊಮ್ಯಾಂಟಿಕ್ ಸಾಂಗ್ ಸದ್ದು ಮಾಡ್ತಿದೆ. 24 ಗಂಟೆಗಳಲ್ಲಿ 50 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿತ್ತು. ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ಸದ್ದು ಮಾಡಿತ್ತು.


Click it and Unblock the Notifications











