ಸದ್ದಿಲ್ಲದೇ ಮದುವೆಯಾದ ಲವ್ ಮಾಕ್ಟೇಲ್ ಚಿತ್ರದ ಸಿಹಿ, ರಚೆಲ್ ಕೈ ಹಿಡಿದ ಹುಡುಗ ಯಾರು...?
ರಚೆಲ್ ಡೇವಿಡ್ ಗೊತ್ತಲ್ವಾ ..? ಲವ್ ಮಾಕ್ಟೇಲ್ ಚಿತ್ರದ ಸಿಹಿ. ಕನ್ನಡ ನೆಲದಲ್ಲಿ ಹುಟ್ಟಿ ಬೆಳೆದ ರಚೆಲ್ ಕೇರಳದಲ್ಲಿ ತುಂಬಾ ಚಿರಪರಿಚಿತ. ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ಪುತ್ರ ಪ್ರಣವ್ ಮೋಹನ್ ಲಾಲ್ ಜೊತೆ ಇರುಪತಿಯೊನ್ನಮ್ ನೂಟ್ರಾಂಡು ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ರಚೆಲ್ ಆ ನಂತರ ಒರೊನ್ನನರ ಪ್ರಣಯಕದಾ ಮತ್ತು ಕಾವಲ್ ಚಿತ್ರದ ಮೂಲಕ ಕೇರಳದ ಮನ ಗೆದ್ದರು. ಮನೆ ಮಾತಾದರು.ಆ ನಂತರ ಕನ್ನಡಕ್ಕೆ ಬಂದ ರಚೆಲ್ ಲವ್ ಮಾಕ್ಟೇಲ್ 2 ಸೇರಿ ಚೆಫ್ ಚಿದಂಬರ ಮತ್ತು ಭುವನಂ ಗಗನಂ ಚಿತ್ರದಲ್ಲಿ ಕೂಡ ಆಕ್ಟ್ ಮಾಡಿದರು.
ಇಂಥಾ ರಚೆಲ್ ಸದ್ಯಕ್ಕೆ ಸದ್ದು ಗದ್ದಲ ಇಲ್ಲದೇ ಮದುವೆಯಾಗಿದ್ದಾರೆ. ಈ ಮೂಲಕ ಅನೇಕರನ್ನು ಅಚ್ಚರಿಗೆ ದೂಡಿದ್ದಾರೆ. ಯಾಕೆಂದರೆ ರಚೆಲ್ ಚಿತ್ರರಂಗಕ್ಕೆ ಬಂದ ಈಗಿನ್ನೂ ಐದು ವರ್ಷಗಳಾಗಿವೆ. ಈ ಐದು ವರ್ಷಗಳಲ್ಲಿ ರಚೆಲ್ ಒಂದೊಂದೆ ಮೆಟ್ಟಿಲನ್ನೇರುತ್ತಿದ್ದರು. ಅವಕಾಶಗಳನ್ನು ಪಡೆಯುತ್ತಿದ್ದರು. ಇನ್ನೂ ಸಾಮಾನ್ಯವಾಗಿ ಅವಕಾಶಗಳ ಹೆಬ್ಬಾಗಿಲು ತೆರೆದಾಗ ಮದುವೆಯ ಆಲೋಚನೆಯನ್ನು ಮಾಡುವವರ ಸಂಖ್ಯೆ ಇಲ್ಲಿ ತೀರಾ ಕಡಿಮೆ. ಯಾಕೆಂದರೆ ಮದ್ವೆಯಾದರೆ ಅವಕಾಶ ಸಿಗಲ್ಲ ಅನ್ನುವ ಮಾತು ಕೇವಲ ಕನ್ನಡದಲ್ಲಿ ಮಾತ್ರ ಅಲ್ಲ ಎಲ್ಲ ಭಾಷೆಯಲ್ಲಿ ಕೂಡ ಚಾಲ್ತಿಯಲ್ಲಿದೆ.

ಹೀಗಿರುವಾಗ ಅಂಟೋ ಫಿಲಿಪ್ ಜೊತೆ ರಚೆಲ್ ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ. ಮೇಲ್ನೋಟಕ್ಕೆ ಕೇರಳದ ಚರ್ಚನಲ್ಲಿ ನಡೆದಂತೆ ಕಾಣಿಸುವ ಮದುವೆ ಸಮಾರಂಭದಲ್ಲಿ ರಚೆಲ್ ವೈಟ್ ಗೌನ್ ಜೊತೆಗೆ ವೈಟ್ ಸ್ನೀಕರ್ ಧರಿಸಿಕೊಂಡಿದ್ದಾರೆ. ಪತಿ ಅಂಟೋ ಫಿಲಿಪ್ ಬ್ಲ್ಯಾಕ್ ಆಂಡ್ ವೈಟ್ ಸೂಟ್ನಲ್ಲಿ ಮಿಂಚಿದ್ದಾರೆ.
ಇನ್ನೂ ಹೊಸ ಬದುಕಿಗೆ ಕಾಲಿಟ್ಟ ರಚೆಲ್ ಡೇವಿಡ್ ಮತ್ತು ಅಂಟೋ ಫಿಲಿಪ್ ಅವರಿಗೆ ಮಿಲನಾ ನಾಗರಾಜ್, ಅಮೃತಾ ಐಯ್ಯಂಗಾರ್, ರೆಬಾ ಜಾನ್, ಡಾರ್ಲಿಂಗ್ ಕೃಷ್ಣ ಸೇರಿ ಹಲವಾರು ತಾರೆಯರು ಶುಭ ಕೋರಿದ್ದಾರೆ. ಇನ್ನುಳಿದಂತೆ ರಚೆಲ್ ಅವರ ತಂದೆ ಡೇವಿಡ್ ಮೂಲತಃ ಕೇರಳದವರು. ಬಹುಕಾಲದಿಂದ ಕರ್ನಾಟಕದಲ್ಲಿಯೇ ನೆಲೆಸಿರುವ ಡೇವಿಡ್ ಮೈಸೂರಿನಲ್ಲಿ ಗಾರ್ಮೆಂಟ್ಸ್ ಉದ್ಯಮ ನಡೆಸುತ್ತಿದ್ದಾರೆ. ಇನ್ನೂ ರಚೆಲ್ ತಾಯಿ ಕೂಡ ಖಾಸಗಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಗೆ ಓರ್ವ ಸಹೋದರಿ ಕೂಡ ಇದ್ದು ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ.
ಶಾಲಾ ವಿದ್ಯಾಭ್ಯಾಸ ಮುಗಿಸಿ ಕಾಲೇಜು ಮೆಟ್ಟಿಲೇರುತ್ತಿದ್ದಂತೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟವರು ರಚೆಲ್. ಬಿಷಪ್ ಕಾಟನ್ ಶಾಲೆಯಲ್ಲಿ ಓದು ಮುಗಿಸಿದ ರಚೆಲ್ ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮುಂದುವರೆಸಿದರು. ನಂತರ ಸಂತ ಜೋಸೆಫರ ಕಾಲೇಜಿನಲ್ಲಿ ಬಿಬಿಎಂ ಪದವಿ ಪಡೆದರು. ಅಷ್ಟೊತ್ತಿಗಾಗಲೇ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ರಚೆಲ್ ಸಾಕಷ್ಟು ಟೀವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ಈ ಕಾರಣದಿಂದಾಗಿ ಚಿತ್ರರಂಗದಿಂದಲೂ ಅವಕಾಶಗಳು ಅರಸಿಬಂದವು.
ಅವಕಾಶ ಸಿಕ್ಕ ತಕ್ಷಣ ಹೋಗಿ ನಟಿಸಿದರೆ ಪಾತ್ರಗಳಿಗೆ ನ್ಯಾಯ ಸಲ್ಲಿಸಲು ಆಗುತ್ತದೋ ಇಲ್ಲವೋ ಎನ್ನುವ ಕಾರಣಕ್ಕೆ ತಕ್ಷಣಕ್ಕೆ ಬಂದ ಅವಕಾಶಗಳನ್ನು ಒಪ್ಪಿಕೊಳ್ಳದ ರಚೆಲ್ ಮುಂಬೈನಲ್ಲಿರುವ ಅನುಪಮ್ ಕೇರ್ ಅವರ ಇನ್ಸ್ಟಿಟ್ಯೂಟಿಗೆ ಸೇರಿದರು. ಅಲ್ಲಿ ಕಲಿತು ಬಂದ ನಂತರ ಸಿನಿಮಾ ಅವಕಾಶಗಳನ್ನು ಒಪ್ಪಿಕೊಂಡರು. ಆ ಮೂಲಕ ಶುರುವಾದ ಇವರ ಸಿನಿಮಾ ಪ್ರಯಾಣ ಭುವನಂ ಗಗನಂವರೆಗೆ ಬಂದಿದೆ. ಪೃಥ್ವಿ ಅಂಬರ್ ಮತ್ತು ಪ್ರಮೋದ್ ಶೆಟ್ಟಿ ನಾಯಕರಾಗಿರುವ ಈ ಚಿತ್ರ ಇನ್ನಷ್ಟೇ ತೆರೆಗೆ ಬರಬೇಕಿದೆ. ಇನ್ನೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಸ್ವಸ್ತಿಕ್ ಪುಳಿಯೋಗರೆಯ ಜಾಹೀರಾತಿನಲ್ಲಿ ರಚೆಲ್ ಕಾಣಿಸಿಕೊಂಡಿದ್ದಾರೆ.


Click it and Unblock the Notifications











