ಅಡ್ವಾನ್ಸ್ ಪಡೆದು ವಾಪಸ್ ಕೊಡದ ಆರೋಪ; ರಚಿತಾ ವಿರುದ್ಧ ಮತ್ತೊಂದು ದೂರು
ನಟಿ ರಚಿತಾ ರಾಮ್ ವಿರುದ್ಧ 'ಸಂಜು ವೆಡ್ಸ್ ಗೀತಾ-2' ಚಿತ್ರತಂಡ ತಿರುಗಿ ಬಿದ್ದಿರುವುದು ಗೊತ್ತೇಯಿದೆ. ಇದೀಗ ಆಕೆಯ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಸಿನಿಮಾ ಮಾಡುವುದಾಗಿ ಹೇಳಿ ಅಡ್ವಾನ್ಸ್ ಪಡೆದು ರಚಿತಾ ವಾಪಸ್ ಕೊಡುತ್ತಿಲ್ಲ ಎಂದು ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್ ಆರೋಪಿಸಿದ್ದಾರೆ.
'ಸಂಜು ವೆಡ್ಸ್ ಗೀತಾ-2' ಸಿನಿಮಾ ಪ್ರಚಾರಕ್ಕೆ ರಚಿತಾ ರಾಮ್ ಬರುತ್ತಿಲ್ಲ ಎಂದು ಚಿತ್ರತಂಡ ಆರೋಪಿಸಿದೆ. ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದೆ. ನಾಗಶೇಖರ್ ನಿರ್ದೇಶನದ ಈ ಸಿನಿಮಾ 6 ತಿಂಗಳ ಹಿಂದೆ ತೆರೆಗೆ ಬಂದಿತ್ತು. ಆದರೆ ಗೆಲ್ಲಲಿಲ್ಲ. ಅದೇ ಚಿತ್ರವನ್ನು ಒಂದಷ್ಟು ಬದಲಾವಣೆ ಮಾಡಿ ಕಳೆದ ವಾರ ಬಿಡುಗಡೆ ಮಾಡಿದ್ದಾರೆ.

ಸಿನಿಮಾ ಮೊದಲ ಬಾರಿ ಬಿಡುಗಡೆ ಆಗಿದ್ದಾಗಲೂ ರಚಿತಾ ಪ್ರಚಾರಕ್ಕೆ ಬರಲಿಲ್ಲ. ಈಗ ಮರು ಬಿಡುಗಡೆ ಸಮಯದಲ್ಲಿ ಕೂಡ ಬರ್ತಿಲ್ಲ. ಒಂದು ಚಿತ್ರದಲ್ಲಿ ನಟಿಸುವ ನಟ, ನಟಿಯರು ಪ್ರಚಾರಕ್ಕೆ ಕೂಡ ಹಾಜರಾಗಬೇಕು. ಆದರೆ ರಚಿತಾ ರಾಮ್ ಉದ್ದೇಶಪೂರ್ವಕವಾಗಿಯೇ ಈ ರೀತಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಚಿತ್ರತಂಡ ಆರೋಪಿಸಿದೆ. 'ಉಪ್ಪಿ ರುಪ್ಪಿ' ಚಿತ್ರದಲ್ಲಿ ನಟಿಸಲು 13 ಲಕ್ಷ ರೂ. ಅಡ್ವಾನ್ಸ್ ಪಡೆದಿದ್ದರು. ಸಿನಿಮಾ ನಿಂತು ಹೋಯಿತು, ಆದರೆ ಹಣ ವಾಪಸ್ ಕೊಡುತ್ತಿಲ್ಲ ಎಂದು ನಿರ್ಮಾಪಕಿ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದಾರೆ.
ಕೆ. ಮಾದೇಶ್ ನಿರ್ದೇಶನದಲ್ಲಿ 8 ವರ್ಷಗಳ ಹಿಂದೆ 'ಉಪ್ಪಿ ರುಪ್ಪಿ' ಸಿನಿಮಾ ಶುರುವಾಗಿತ್ತು. 35% ಭಾಗ ಚಿತ್ರೀಕರಣ ಆಗಿ ನಿಂತು ಹೋಯಿತು. ಚಿತ್ರೀಕರಣಕ್ಕೆ ಬ್ಯಾಂಕಾಕ್‌ಗೆ ಬರುವುದಾಗಿ ಹೇಳಿ ರಚಿತಾ ಕೈಕೊಟ್ಟರು. ಆಕೆಗಾಗಿ ಕಾದು ಕಾದು ನಾವು ಸುಸ್ತಾದೆವು. ಸಿನಿಮಾ ಮುಗಿಸಲಿಲ್ಲ. ಅಡ್ವಾನ್ಸ್ ಹಣ ಕೂಡ ವಾಪಸ್ ಕೊಟ್ಟಿಲ್ಲ ಎಂದು ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್ ಆರೋಪಿಸಿದ್ದಾರೆ. ಚಿತ್ರದಲ್ಲಿ ನಟಿಸಲು ರಚಿತಾಗೆ 23 ಲಕ್ಷ ರೂ. ಸಂಭಾವನೆ ಕೊಡಲು ಮಾತುಕತೆ ಆಗಿತ್ತು. ಅದರಲ್ಲಿ 13 ಲಕ್ಷ ರೂ. ಅಡ್ವಾನ್ಸ್ ಕೊಟ್ಟಿದ್ದೆವು ಎಂದು ನಿರ್ಮಾಪಕಿ ಹೇಳಿದ್ದಾರೆ.
ಹಣ ಕೊಡುವುದಾಗಿ ಹೇಳಿ ರಚಿತಾ ರಾಮ್ ಸತಾಯಿಸುತ್ತಿದ್ದಾರೆ ಎಂದು ವಿಜಯಲಕ್ಷ್ಮಿ ಅರಸ್ ಆರೋಪಿಸಿದ್ದಾರೆ. 2017ರಲ್ಲಿ 'ಉಪ್ಪಿ ರುಪ್ಪಿ' ಸಿನಿಮಾ ಶುರುವಾಗಿತ್ತು. ಬ್ಯಾಂಕಾಕ್ ಶೆಡ್ಯೂಲ್‌ನಲ್ಲಿ ಆಕೆ ಚಿತ್ರೀಕರಣದಲ್ಲಿ ಭಾಗಿ ಆಗಬೇಕಿತ್ತು. ಬರುವುದಾಗಿ ಹೇಳಿದ್ದರು. ಅದಕ್ಕಾಗಿ 2 ವಾರ ಪ್ರತಿದಿನ ಫ್ಲೈಟ್ ಟಿಕೆಟ್ ಬುಕ್ ಮಾಡಿ ಆಕೆಗಾಗಿ ಕಾದಿದ್ದೆವು. ಆದರೆ ಚಿತ್ರೀಕರಣಕ್ಕೆ ಬರದೇ ಸತಾಯಿಸಿದ್ದರು. ಕೊನೆಗೆ ರಚಿತಾ ರಾಮ್ ಹೋಗದೇ ಹೀರೊ ನಟಿಸುವ ದೃಶ್ಯಗಳನ್ನು ಚಿತ್ರತಂಡ ಶೂಟ್ ಮಾಡಿಕೊಂಡು ಬಂದಿತ್ತು.
ಸಂಭಾವನೆಯಾಗಿ 13 ಲಕ್ಷ ಅಡ್ವಾನ್ಸ್ ಕೊಟ್ಟಿದ್ದು ಮಾತ್ರವಲ್ಲದೇ ರಚಿತಾ ಕಾರಣದಿಂದ ಒಂದೂವರೆ ಕೋಟಿ ರೂ. ನಷ್ಟವಾಗಿದೆ ಎಂದು ನಿರ್ಮಾಪಕಿ ಹೇಳಿದ್ದಾರೆ. ಒಟ್ಟಾರೆ ಒಂದು ದಿನ ಮಾತ್ರ ರಚಿತಾ ನಮ್ಮ ಸಿನಿಮಾ ಚಿತ್ರೀಕರಣಕ್ಕೆ ಹಾಜರಾಗಿದ್ದರು ಎಂದು ನಿರ್ಮಾಪಕಿ ತಿಳಿಸಿದ್ದಾರೆ. ಕಾರಣಾಂತರಗಳಿಂದ 'ಉಪ್ಪಿ ರುಪ್ಪಿ' ಸಿನಿಮಾ ಅರ್ಧಕ್ಕೆ ನಿಂತು ಹೋಗುವಂತಾಯಿತು. 2 ತಿಂಗಳ ಹಿಂದೆಯೇ ಆಕೆಯ ವಿರುದ್ಧ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ರಚಿತಾ ರಾಮ್ ಏನು ಹೇಳುತ್ತಾರೋ ಕಾದು ನೋಡಬೇಕಿದೆ.
ಮತ್ತೊಂದು ಕಡೆ ರಚಿತಾ ರಾಮ್ ನಮ್ಮ ಸಿನಿಮಾ ಪ್ರಚಾರಕ್ಕೆ ಬರುತ್ತಿಲ್ಲ. ಕಲಾವಿದರ ಸಂಘದ ಕಾರ್ಯದರ್ಶಿ ರಾಕ್‌ಲೈನ್ ವೆಂಕಟೇಶ್ ಅವರಿಂದ ಮನವೊಲಿಸುವ ಪ್ರಯತ್ನವೂ ಸಫಲವಾಗಲಿಲ್ಲ. ಆಕೆ ಸಂಪರ್ಕಕ್ಕೂ ಸಿಗುತ್ತಿಲ್ಲ, ಪ್ರತಿಕ್ರಿಯೆ ಸಹ ನೀಡುತ್ತಿಲ್ಲ, ಕ್ರಮ ಕೈಗೊಳ್ಳಿ ಎಂದು 'ಸಂಜು ವೆಡ್ಸ್ ಗೀತಾ-2' ಚಿತ್ರ ನಿರ್ಮಾಪಕರು ಆಗ್ರಹಿಸಿದ್ದಾರೆ.


Click it and Unblock the Notifications











