ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ 'ಬುಲ್ ಬುಲ್': ಒಬ್ಬರನ್ನು ಬಿಟ್ಟು ಎಲ್ಲಾ ಸ್ಟಾರ್‌ಗಳ ಜೊತೆ ರಚ್ಚು ನಟನೆ
ಅಭಿಮಾನಿಗಳ ಪ್ರೀತಿಯ ಡಿಂಪಲ್ ಕ್ವೀನ್ ರಚಿತಾ ರಾಮ್ ಕನ್ನಡ ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ್ದಾರೆ. ಅಂದರೆ ರಚಿತಾ ನಟಿಸಿದ ಮೊದಲ ಸಿನಿಮಾ 'ಬುಲ್ ಬುಲ್'ಗೆ ದಶಕದ ಸಂಭ್ರಮ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೋಡಿಯಾಗಿ ಚಿತ್ರರಂಗಕ್ಕೆ ಬಂದ ರಚ್ಚು ಕನ್ನಡದ ಬಹುತೇಕ ಎಲ್ಲಾ ಸೂಪರ್ ಸ್ಟಾರ್‌ಗಳ ಜೊತೆ ನಟಿಸಿ ಗೆದ್ದಿದ್ದಾರೆ. ಇವತ್ತಿಗೂ ಬಹುಬೇಡಿಕೆಯ ನಟಿಯಾಗಿ ಉಳಿದುಕೊಂಡಿದ್ದಾರೆ.
ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದು ಗೆದ್ದವರು ಸಾಕಷ್ಟು ಜನ ಇದ್ದಾರೆ. ಆ ಲಿಸ್ಟ್‌ನಲ್ಲಿ ರಚಿತಾ ರಾಮ್ ಕೂಡ ಇದ್ದಾರೆ. ಎಂ. ಡಿ ಶ್ರೀಧರ್ ನಿರ್ದೇಶನದ 'ಬುಲ್ ಬುಲ್' ಸಿನಿಮಾ 2013 ಮೇ 10ರಂದು ರಿಲೀಸ್ ಆಗಿತ್ತು. ಆ ಚಿತ್ರದಲ್ಲಿ ಕಾವೇರಿ ಪಾತ್ರದಲ್ಲಿ ನಟಿಸಿ ಮೋಡಿ ಮಾಡಿದರು. ಅಲ್ಲಿಂದ ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಬಹುಬೇಡಿಕೆಯ ನಟಿಯಾಗಿ ಗುರ್ತಿಸಿಕೊಂಡರು. ಒಂದು ತೆಲುಗು ಚಿತ್ರದಲ್ಲೂ ಡಿಂಪಲ್ ಕ್ವೀನ್ ನಟಿಸಿ ಬಂದರು. ಖ್ಯಾತ ನಟ, ನಟಿಯರಿಂದ ಬೇಷ್ ಎನಿಸಿಕೊಂಡರು.

ರಮ್ಯಾ ನಂತರ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಡಿಮ್ಯಾಂಡ್ ಗಿಟ್ಟಿಸಿಕೊಂಡ ನಟಿ ರಚಿತಾ ರಾಮ್. ಶಿವರಾಜ್‌ಕುಮಾರ್, ಉಪೇಂದ್ರ, ಸುದೀಪ್, ಪುನೀತ್ ರಾಜ್‌ಕುಮಾರ್, ಶ್ರೀಮುರಳಿ, ಧನಂಜಯ್ ಸೇರಿದಂತೆ ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆಗೂ ರಚಿತಾ ತೆರೆ ಹಂಚಿಕೊಂಡಿದ್ದಾರೆ. ಆದರೆ ಯಶ್ ಜೊತೆ ಮಾತ್ರ ಇನ್ನು ನಟಿಸುವ ಅವಕಾಶ ಸಿಕ್ಕಿಲ್ಲ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಡಿಂಪಲ್ ಕ್ವೀನ್ ಮಿಂಚಿದ್ದಾರೆ. ಐಟಂ ಸಾಂಗ್‌ಗಳಲ್ಲೂ ಕುಣಿದು ರಂಗೇರಿಸಿದ್ದಾರೆ. ಸಾಕಷ್ಟು ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.

'ಬೆಂಕಿಯಲ್ಲಿ ಅರಳಿದ ಹೂವು' ಹಾಗೂ 'ಅರಸಿ' ಧಾರಾವಾಹಿಗಳಲ್ಲಿ ನಟಿಸಿದ್ದ ರಚಿತಾ ರಾಮ್ 'ಬುಲ್ ಬುಲ್' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದರು. ಬಿಂದ್ಯಾ ರಾಮ್ ಅನ್ನೋದು ರಚಿತಾ ರಾಮ್ ಮೂಲ ಹೆಸರು. ಸಹೋದರಿ ನಿತ್ಯಾ ರಾಮ್ ಜೊತೆಗೆ ಧಾರಾವಾಹಿಗಳಲ್ಲಿ ನಟಿಸಲು ಆರಂಭಿಸಿದ ರಚ್ಚು ನಂತರ ಚಿತ್ರರಂಗಕ್ಕೆ ಬಂದರು. ತಮ್ಮ ಹೆಸರನ್ನು ರಚಿತಾ ರಾಮ್ ಎಂದು ಬದಲಿಸಿಕೊಂಡು ಸ್ಯಾಂಡಲ್‌ವುಡ್‌ಗೆ ಅಡಿ ಇಟ್ಟರು. ಮೊದಲ ಪ್ರಯತ್ನದಲ್ಲೇ ಸೂಪರ್ ಸಕ್ಸಸ್ ಕಂಡರು.
ಗವಿಪುರಂನಲ್ಲಿ ಓದಿ ಬೆಳೆದ ರಚಿತಾ ರಾಮ್ ಭರತನಾಟ್ಯ ಕಲಿತಿದ್ದರು. ಅದು ಅವರ ಅಭಿನಯಕ್ಕೆ ಸಹಕಾರಿ ಆಯಿತು. ತೂಗುದೀಪ ಪ್ರೊಡಕ್ಷನ್ ಬ್ಯಾನರ್‌ನಲ್ಲಿ 'ಬುಲ್ ಬುಲ್' ಸಿನಿಮಾ ಶುರುವಾದಾಗ ನಾಯಕಿ ಪಾತ್ರಕ್ಕೆ ರಚಿತಾ ಆಡಿಷನ್ ಕೊಟ್ಟಿದ್ದರು. ದಿನಕರ್ ತೂಗುದೀಪ್, ಎಂ. ಡಿ ಶ್ರೀಧರ್ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರು. ರನ್ನ, ದಿಲ್ ರಂಗೀಲಾ, ಅಯೋಗ್ಯ, ಐ ಲವ್ ಯು, ಏಕ್ ಲವ್ ಯಾ ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವತ್ತಿಗೂ ಐದಾರು ಸಿನಿಮಾಗಳು ರಚ್ಚು ಕೈಯಲ್ಲಿವೆ.
ನೀನಾಸಂ ಸತೀಶ್ ಜೊತೆ 'ಮ್ಯಾಟ್ನಿ', ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್', 'ಶಬರಿ ಸರ್ವಚಿಂಗ್ ಫಾರ್ ರಾವಣ' ಹಾಗೂ 'ಲವ್ ಮಿ ಆರ್ ಹೇಟ್ ಮಿ' ಸಿನಿಮಾಗಳಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 3 ಸಿನಿಮಾಗಳಲ್ಲಿ ಡಿಂಪಲ್ ಕ್ವೀನ್ ನಟಿಸಿದ್ದಾರೆ. ತೆಲುಗಿನ 'ಸೂಪರ್ ಮಚ್ಚಿ' ಚಿತ್ರದಲ್ಲಿ ನಟಿಸಿ ಬಂದಿದ್ದಾರೆ.
ಕಿರುತೆರೆಯಲ್ಲಿ ಕಿಕ್, ಮಜಭಾರತ, ಡ್ರಾಮಾ ಜ್ಯೂನಿಯರ್ಸ್, ಸೂಪರ್ ಕ್ವೀನ್ ಕಾರ್ಯಕ್ರಮಗಳಲ್ಲಿ ತೀರ್ಪುಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರರಂಗಕ್ಕೆ ಬಂದು 10 ವರ್ಷ ಕಳೆದರೂ ಇನ್ನು ಬೇಡಿಕೆ ಉಳಿಸಿಕೊಂಡಿದ್ದಾರೆ. ಮತ್ತಷ್ಟು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನದಲ್ಲಿದ್ದಾರೆ.


Click it and Unblock the Notifications











