"ಲವ್ ಅಲ್ಲ.. ಅರೇಂಜ್ಡ್ ಮ್ಯಾರೇಜ್"; ಮದುವೆ ಬಗ್ಗೆ ಮೌನ ಮುರಿದ ರಚಿತಾ ರಾಮ್
ಡಿಂಪಲ್ ಕ್ವೀನ್ ರಚಿತಾ ರಾಮ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡು ಸಂಭ್ರಮಿಸಿದ್ದಾರೆ. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಹೇಳಿದ್ದಾರೆ. ಮದುವೆ ಬಗ್ಗೆಯೂ ಅಪ್‌ಡೇಟ್ ಕೊಟ್ಟಿದ್ದಾರೆ.
'ಬುಲ್ ಬುಲ್' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ರಚಿತಾ ರಾಮ್ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಯಶ್ ಬಿಟ್ಟು ಕನ್ನಡದ ಸ್ಟಾರ್ ನಟರ ಜೊತೆಗೆಲ್ಲಾ ಸ್ಕ್ರೀನ್ ಶೇರ್ ಮಾಡಿಕೊಂಡು ಕಮಾಲ್ ಮಾಡಿದ್ದಾರೆ. ಇತ್ತೀಚೆಗೆ 'ಕೂಲಿ' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಚಿತ್ರದಲ್ಲಿ ಪವರ್‌ಫುಲ್ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

'ಲ್ಯಾಂಡ್‌ಲಾರ್ಡ್' ಹಾಗೂ 'ಅಯೋಗ್ಯ'- 2 ಸೇರಿ ಇಂಟ್ರೆಸ್ಟಿಂಗ್ ಸಿನಿಮಾಗಳಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಇದೆಲ್ಲದರ ನಡುವೆ ಶೀಘ್ರದಲ್ಲೇ ಮದುವೆ ಆಗುತ್ತೇನೆ ಎಂದು ಹೇಳಿದ್ದಾರೆ. ಬಹಳ ದಿನಗಳಿಂದ ಅಭಿಮಾನಿಗಳು ಡಿಂಪಲ್ ಕ್ವೀನ್ ಮದುವೆ ಯಾವಾಗ ಎಂದು ಕೇಳುತ್ತಾ ಬರ್ತಿದ್ದಾರೆ. ಈಗ ಆಕೆ ಪ್ರತಿಕ್ರಿಯಿಸಿರುವುದು ನೋಡಿದರೆ ಆದಷ್ಟು ಬೇಗ ಹಸೆಮಣೆ ಏರುವುದು ಖಚಿತ ಎನ್ನುವಂತಾಗಿದೆ. ಪೋಷಕರು ಹುಡುಗನನ್ನು ಹುಡುಕುತ್ತಿದ್ದಾರೆ ಎಂದು ರಚ್ಚು ಹೇಳಿದ್ದಾರೆ.
"ಮದುವೆ ಆಗಬೇಕು ಎಂದು ಡಿಸೈಡ್ ಆಗಿದ್ದೀನಿ ನಾನು. ಆದಷ್ಟು ಬೇಗ ಮದುವೆ ನ್ಯೂಸ್ ಕೊಡ್ತೀನಿ. ಮದುವೆಗೆ ಹುಡುಗನನ್ನು ಹುಡುಕುತ್ತಿದ್ದಾರೆ. 100% ಅರೇಂಜ್ಡ್ ಮ್ಯಾರೇಜ್. ರಾಜಕೀಯಕ್ಕೆ ನಾನು ಬರುವ ಯೋಜನೆ ಇಲ್ಲ. ಅದು ನನ್ನಿಂದ ಸಾಧ್ಯವಿಲ್ಲ" ಎಂದು ರಚಿತಾ ರಾಮ್ ಹೇಳಿದ್ದಾರೆ.
'ಲ್ಯಾಂಡ್‌ಲಾರ್ಡ್' ಚಿತ್ರದಲ್ಲಿ ದುನಿಯಾ ವಿಜಯ್ ಜೊತೆ ರಚಿತಾ ರಾಮ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನಾನು ಒಪ್ಪಿಕೊಳ್ಳಲು ದರ್ಶನ್ ಸರ್ ಹಾಗೂ ಲೋಕೇಶ್ ಕನಕರಾಜ್ ಕಾರಣ ಎಂದು ಹೇಳಿದ್ದಾರೆ. "ಲ್ಯಾಂಡ್‌ಲಾರ್ಡ್' ಕಥೆ ಕೇಳಿದ ಮೇಲೆ ದರ್ಶನ್ ಸರ್ ಜತೆ ಮಾತನಾಡುತ್ತಾ ಹೀಗೆ 'ಕಾಟೇರ' ನೆನಪಿಸುವ ಸಿನಿಮಾ, ಪಾತ್ರ ಬಂದಿದೆ ಎದು ಹೇಳಿದ್ದೆ. ಕೂಡಲೇ ಹಿಂದೂ ಮುಂದು ನೋಡದೇ ಮಾಡು ಅಂದ್ರು. ಲೋಕೇಶ್ ಬಳಿ ಕೂಡ ಇದೇ ರೀತಿ ಚರ್ಚಿಸುವಾಗ ಅವ್ರು ನಟಿಸುವಂತೆ ಹೇಳಿದ್ರು" ಎಂದು ರಚಿತಾ ರಾಮ್ ನೆನಪಿಸಿಕೊಂಡಿದ್ದಾರೆ.
ರಚಿತಾ ರಾಮ್‌ಗೆ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಲ್ಯಾಂಡ್‌ಲಾರ್ಡ್' ಚಿತ್ರತಂಡ ಸಣ್ಣ ಟೀಸರ್ ರಿಲೀಸ್ ಮಾಡಿ ಶುಭಾಶಯ ಕೋರಿದೆ. ಹಳ್ಳಿ ಹುಡುಗಿಯಾಗಿ ಖಡಕ್ ಪಾತ್ರದಲ್ಲಿ ಆಕೆ ನಟಿಸಿರುವುದು ಗೊತ್ತಾಗುತ್ತಿದೆ. 'ಕೂಲಿ' ಚಿತ್ರದ ಪಾತ್ರದ ಬಗ್ಗೆ ಮಾತನಾಡಿ "ನನಗೆ ನೆಗೆಟಿವ್ ಶೇಡ್ ಪಾತ್ರ ಮಾಡುವ ಆಸೆ ಇತ್ತು. 'ಪಡೆಯಪ್ಪ' ಚಿತ್ರದಲ್ಲಿ ನೀಲಾಂಬರಿ ಪಾತ್ರ ನನಗೆ ಬಹಳ ಇಷ್ಟ. ಅಂತಾದೊಂದು ಪಾತ್ರ ಮಾಡಬೇಕು ಅಂದುಕೊಂಡಿದ್ದೆ. ದೇವರ ದಯೆಯಿಂದ ಸಿಕ್ತು. ಅದಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ" ಎಂದು ರಚಿತಾ ರಾಮ್ ಹೇಳಿದ್ದಾರೆ.
'ಶಬರಿ', 'ಲವ್ ಮಿ ಆರ್ ಹೇಟ್ ಮಿ', 'ಕಲ್ಟ್' ಸೇರಿ ಒಂದಷ್ಟು ಸಿನಿಮಾಗಳು ರಚಿತಾ ರಾಮ್ ಕೈಯಲ್ಲಿದೆ. ಜಡೇಶ್ ಹಂಪಿ ನಿರ್ದೇಶನದ 'ಲ್ಯಾಂಡ್‌ಲಾರ್ಡ್' ಸಿನಿಮಾ ಮುಂದಿನ ವರ್ಷ ಬರಲಿದೆ. ಚಿತ್ರದಲ್ಲಿ ದುನಿಯಾ ವಿಜಯ್ ಮಗಳು ರಿತನ್ಯಾ ಕೂಡ ನಟಿಸುತ್ತಿದ್ದಾರೆ. ಆಕೆಗೆ ತಾಯಿ ಪಾತ್ರದಲ್ಲಿ ರಚಿತಾ ರಾಮ್ ನಟಿಸುತ್ತಿರುವುದಾಗಿ ಹೇಳಿದ್ದಾರೆ.


Click it and Unblock the Notifications











