ಆಟೋ ಡ್ರೈವರ್ ಅಭಿಮಾನಕ್ಕೆ ರಚಿತಾ ಭಾವುಕ: ಹೆಸರನ್ನು ಇನ್ಸ್ಟಾಗ್ರಾಮ್ ನಲ್ಲಿ ಟ್ಯಾಗ್ ಮಾಡಿ ಎಂದ ಡಿಂಪಲ್ ಕ್ವೀನ್
ಸಿನಿಮಾ ತಾರೆಯರನ್ನು ನೋಡುವುದೆ ಅವರ ಅಭಿಮಾನಿಗಳಿಗೆ ಒಂದು ಸಂಭ್ರಮ. ಯಾವುದೆ ಕಾರ್ಯಕ್ರಮವಾಗಲಿ, ಅವರ ಹುಟ್ಟುಹಬ್ಬವಾಗಲಿ, ಅವರು ಎಲ್ಲೇ ಹೋಗಲಿ ನೆಚ್ಚಿನ ನಟ-ನಟಿಯರನ್ನು ನೋಡಲು ಅಭಿಮಾನಿಗಳು ಮುಗಿಬೀಳುತ್ತಾರೆ. ನೆಚ್ಚಿನ ಸ್ಟಾರ್ ದರ್ಶನಕ್ಕೆ ಮನೆ ಮುಂದೆ ಗಂಟೆ ಗಟ್ಟಲೆ ಕಾದು ನಿಂತಿರುತ್ತಾರೆ.
Recommended Video
ಸ್ಯಾಂಡಲ್ ವುಡ್ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅಪಾರ ಸಂಖ್ಯೆ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನ ವ್ಯಕ್ತಪಡಿಸುತ್ತಿರುತ್ತಾರೆ. ಆದರೆ ಇತ್ತೀಚಿಗೆ ರಚಿತಾ ಅವರ ಅಪ್ಪಟ ಅಭಿಮಾನಿ ಆಟೋ ಡ್ರೈವರ್ ರಚಿತಾ ಅವರ ಮನೆ ಮುಂದೆ ಬೆಳ್ಳಂಬೆಳಗ್ಗೆ ಡಿಂಪಲ್ ಕ್ವೀನ್ ಗಾಗಿ ಕಾಯುತ್ತ ನಿಂತಿದ್ದರು. ಅಭಿಮಾನಿಯ ಅಭಿಮಾನ ಕಂಡು ಭಾವುಕರಾದ ಕ್ಷಣವನ್ನು ರಚಿತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿ ಜೊತೆ ನಡೆದಕೊಂಡ ರಚ್ಚು ರೀತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮುಂದೆ ಓದಿ...

ಆಟೋ ಡ್ರೈವರ್ ಪ್ರೀತಿಗೆ ರಚಿತಾ ಭಾವುಕ
ಮೂರು ಜನ ಆಟೋ ಡ್ರೈವರ್ ಆಟೋ ಮೇಲೆ ರಚಿತಾ ಅವರ ಫೋಟೋ ಅಂಟಿಸಿ, ಡಿಂಪಲ್ ಎಂದು ದೊಡ್ಡದಾಗಿ ಬರೆದುಕೊಂಡು ರಚಿತಾ ಮನೆ ಮುಂದೆ ಆಟೋಗ್ರಾಫ್ ಗಾಗಿ ಕಾಯುತ್ತ ನಿಂತಿದ್ದರು. ವಿಷಯ ಗೊತ್ತಾಗುತ್ತಿದ್ದಂತೆ ರಚ್ಚು ಮನೆಯಿಂದ ಹೊರಬಂದು ಆಟೋಡ್ರೈವರ್ ಗೆ ಆಟೋಗ್ರಾಫ್ ನೀಡಿ, ಅವರ ಜೊತೆ ಸೆಲ್ಫಿಗೆ ಪೋಸ್ ನೀಡಿ, ಆಟೋ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಅಣ್ಣಾವ್ರ ನೆನೆದ ರಚಿತಾ
"ಅಭಿಮಾನಿಗಳೇ ದೇವ್ರು ಎಂದ ಅಣ್ಣಾವ್ರ ಮಾತು ಅಕ್ಷರಶಃ ಸತ್ಯ, ಪ್ರತಿದಿನ ಎಷ್ಟೋ ಅಭಿಮಾನಿಗಳು ಸೋಷಿಯಲ್ ಮೀಡಿಯಾದ ಮುಖಾಂತರ ಅಭಿಮಾನವನ್ನ ವ್ಯಕ್ತ ಪಡಿಸ್ತಾರೆ ತುಂಬಾ ಸಂತೋಷ ಆಗುತ್ತೆ. ಆದ್ರೇ ಇವತ್ ಬೆಳಿಗ್ಗೆ ಅಮ್ಮ ಬಂದು "ರಚ್ಚು ಬೆಳಿಗ್ಬೆಳಿಗ್ಗೆನೇ ಯಾರೋ ಮನೆ ಮುಂದೆ ಕಾಯ್ತಿದಾರೆ ನೋಡು ಅಂದ್ರು", ನಾನು ಹೊರಗಡೆ ಬಂದು ನೋಡ್ದೇ ಒಂದು ಆಟೋ ಪಕ್ಕ ಮೂರು ಜನ ನಮ್ಮ ಮನೆಯ ಕಡೆ ಮುಖ ಮಾಡಿ ನಿಂತಿದ್ರು."

'ಆಟೋ ಮೇಲೆ ಫಸ್ಟ್ ಫೋಟೋ ನಿಮ್ದೇ ಇರಬೇಕು..'
"ನನ್ನ ನೋಡ್ತಿದ್ದ ಹಾಗೆ ತುಂಬಾ ಎಕ್ಸೈಟ್ ಆದ್ರು, ಅವರ ಬಳಿ ಹೋಗ್ತಿದ್ದ ಹಾಗೆ ನನ್ನ ಒಂದು ಮಾತು ಆಡಕ್ಕೂ ಬಿಡ್ದೇ "ಮೇಡಂ ನಾವ್ ನಿಮ್ ದೊಡ್ ಅಭಿಮಾನಿ ಮೇಡಂ ನನ್ ಆಟೋ ಮೇಲ್ 1st ಫೋಟೋ ನಿಮ್ದೇ ಇರ್ಬೇಕು ಮೇಡಂ" ಎಂದು ಗಿಫ್ಟ್ ವ್ರಾಪರ್ ಓಪನ್ ಮಾಡ್ಸಿ ನನ್ನ ಫೋಟೋನ ಆಟೋ ಮೇಲೆ ಅಂಟಿಸಿ ನನ್ನ ಆಟೋಗ್ರಾಫ್ ತೆಗೆದುಕೊಂಡು, ಅವರ ನೆಚ್ಚಿನ ಆಟೋ ಜೊತೆ ನನ್ನ ಫೋಟೋ ಕ್ಲಿಕ್ಕಿಸಿ ತಾವೂ ಸೆಲ್ಫಿ ತೆಗೆದುಕೊಂಡು ಹೊರಡಲು ಮುಂದಾದರು, ನಿಜಕ್ಕೂ ಭಾವುಕನಾದೆ."

'ಆಟೋ ನಿಮ್ಮ ಜೀವನದ ಪಯಣವನ್ನ ಸುಖಕರವಾಗಿರಿಸಲಿ..'
"ಹೆಸರು ಕೇಳಬೇಕು ಎನ್ನುವಷ್ಟರಲ್ಲಿ ತುಂಬಾ ಉತ್ಸಾಹಿಕರಾಗಿ ನಗುತ್ತಲೇ ಹೊರಟೇ ಬಿಟ್ಟರು. ತಮ್ಮ ಹೆಸರು, ಊರು ಯಾವುದೂ ಹೇಳದೆ ಕೇವಲ ತಮ್ಮ ಕಾರ್ಯ ವೈಖರಿ, ನನ್ನ ಮೇಲಿನ ಅಭಿಮಾನವನ್ನ ವ್ಯಕ್ತಪಡಿಸಿದ ಅಭಿಮಾನಿಗಳಿಗೆ ಸದಾ ಚಿರಋಣಿ. ನಿಮ್ಮ ಪ್ರೀತಿಯ ಆಟೋ ನಿಮ್ಮ ಜೀವನದ ಪಯಣವನ್ನ ಸುಖಕರವಾಗಿರಿಸಲಿ ಅಂತ ದೇವರಲ್ಲಿ ಬೇಡ್ಕೋತೀನಿ."

ಹೆಸರನ್ನು ಇನ್ಸ್ಟಾಗ್ರಾಮ್ ನಲ್ಲಿ ಟ್ಯಾಗ್ ಮಾಡಿ
"ನನ್ನ ಕಲಾಬದುಕಿಗೆ ಜೀವ ಕೊಟ್ಟವರು ಅಭಿಮಾನಿಗಳು. ಅಭಿಮಾನಿಗಳ ಹೃದಯ ಶ್ರೀಮಂತಿಕೆಯ ಮುಂದೆ ಬೇರೆಲ್ಲ ಶೂನ್ಯ ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ. ಭಾವುಕಳಾದ ಕ್ಷಣದಲ್ಲಿ ಅವರ ಹೆಸರು ವಿವರ ತೆಗೆದುಕೊಳ್ಳಲಾಗಲಿಲ್ಲ, ದಯವಿಟ್ಟು ಈ ಪೋಸ್ಟ್ ನೋಡಿದ ಕೂಡಲೇ ನೀವು ಈ ಫೋಟೋವನ್ನ ನಿಮ್ಮ instagram account ನಲ್ಲಿ ಹಾಕಿ ನನ್ನನ್ನ tag ಮಾಡಿ. ನಾನು repost ಮಾಡುತ್ತೆನೆ ಜೊತೆಗೆ ನಿಮ್ಮ ಹೆಸರು ತಿಳಿದುಕೊಳ್ಳಬೇಕೆಂಬ ಆಸಕ್ತಿ ನನಗಿದೆ."


Click it and Unblock the Notifications











