ರಚಿತಾ ರಾಮ್ ಗೂಡಾರ್ಥದ ಪೋಸ್ಟ್; ದರ್ಶನ್ ಅಭಿಮಾನಿಗಳಿಗೆ ಕೊಟ್ರಾ ಕೌಂಟರ್!
ಡಿಂಪಲ್ ಕ್ವೀನ್ ರಚಿತಾ ರಾಮ್ ನಟನೆಯ ಚಿತ್ರಗಳು ಇತ್ತೀಚೆಗೆ ಅಷ್ಟಾಗಿ ಸದ್ದು ಮಾಡ್ತಿಲ್ಲ. ಆದರೂ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ ಈಕೆ. ಸದ್ಯ 3 ಚಿತ್ರಗಳು ರಚ್ಚು ಕೈಯಲ್ಲಿವೆ. 2 ಚಿತ್ರಗಳ ಚಿತ್ರೀಕರಣ ಮುಗಿದಿದ್ದು ಮತ್ತೊಂದು ಚಿತ್ರದಲ್ಲಿ ಸದ್ಯ ನಟಿಸುತ್ತಿದ್ದಾರೆ.
ಇತ್ತೀಚೆಗೆ 'ಕಲ್ಟ್' ಎನ್ನುವ ಹೊಸ ಚಿತ್ರಕ್ಕೆ ರಚಿತಾ ರಾಮ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಜೊತೆ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಡಿಂಪಲ್ ಕ್ವೀನ್ ಇತ್ತೀಚೆಗೆ ಸೈಲೆಂಟ್ ಆಗಿದ್ದರು. ಕೆಲ ದಿನಗಳ ಹಿಂದೆ ದರ್ಶನ್ ಬಂಧನದ ಬಗ್ಗೆ ಪ್ರತಿಕ್ರಿಯಿಸಿ ಪೋಸ್ಟ್ ಮಾಡಿದ್ದಾರೆ. ಇದೀಗ ಹೊಸ ಪೋಸ್ಟ್‌ನಿಂದ ಮತ್ತೆ ಸುದ್ದಿಯಲ್ಲಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ದಿಢೀರನೆ ರಚಿತಾ ರಾಮ್ ಮಾಡಿರುವ ಪೋಸ್ಟ್ ಭಾರೀ ಚರ್ಚೆ ಹುಟ್ಟಾಕ್ಕಿದೆ. ಗೂಡಾರ್ಥದ ಪೋಸ್ಟ್ ಮಾಡಿ ರಚ್ಚು ಸೈಲೆಂಟ್ ಆಗಿದ್ದಾರೆ. ಅದಕ್ಕೆ ಪೀಸ್(ಶಾಂತಿ) ಎಮೋಜಿ ಹಾಕಿದ್ದಾರೆ. ಆದರೆ ಈ ಸಾಲಿನ ಅರ್ಥ ಏನು? ಆಕೆ ಈ ರೀತಿ ಹೇಳಿದ್ದು ಯಾರಿಗೆ? ಎನ್ನುವ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಕಾಮೆಂಟ್ ಬಾಕ್ಸ್‌ನಲ್ಲೇ ಬಗೆ ಬಗೆ ಅಭಿಪ್ರಾಯ ವ್ಯಕ್ತವಾಗುತ್ತಿದೆ.
"ನಕಲಿ ಜನರು ಮುಖವಾಡ ಹಾಕೊಂಡು ಬದುಕ್ತಾರೆ. ಅದನ್ನು ಅವರು ಮೆಂಟೇನ್ ಮಾಡಬೇಕಾಗುತ್ತದೆ. ಆದರೆ ಅಸಲಿ ಜನ ಯಾವುದಕ್ಕೂ ಕೇರ್ ಮಾಡಲ್ಲ" ಎನ್ನುವ ಕೋಟ್ ಅನ್ನು ರಚಿತಾ ರಾಮ್ ಪೋಸ್ಟ್ ಮಾಡಿದ್ದಾರೆ. ಯಾರಿಗೋ ಟಾಂಗ್ ಕೊಡುವ ರೀತಿಯಲ್ಲಿ ಈ ಪೋಸ್ಟ್ ಇರುವುದು ಸುಳ್ಳಲ್ಲ. ಇದ್ದಕ್ಕಿದಂತೆ ರಚಿತಾ ರಾಮ್ ಯಾಕೆ ಈ ರೀತಿ ಪೋಸ್ಟ್ ಮಾಡಿದರು ಎನ್ನುವ ಬಗ್ಗೆ ಅಭಿಮಾನಿಗಳಲ್ಲಿ ಗೊಂದಲ ಶುರುವಾಗಿದೆ.
ದರ್ಶನ್ ಫ್ಯಾನ್ಸ್‌ಗೆ ರಚಿತಾ ರಾಮ್ ಟಾಂಗ್ ಕೊಟ್ಟಿದ್ದಾರೆ ಎಂದು ಕೆಲವರು ಭಾವಿಸುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಇಂತಹ ಸಮಯದಲ್ಲೇ ರಚಿತಾ ರಾಮ್ 'ಕಲ್ಟ್' ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭದಲ್ಲಿ ಭಾಗಿ ಆಗಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ವೈರಲ್ ಆಗಿತ್ತು. ದರ್ಶನ್ ಜೈಲಿನಲ್ಲಿರುವಾಗ ಇದೆಲ್ಲಾ ಬೇಕಾ? ಎಂದು ಕೆಲ ದರ್ಶನ್ ಅಭಿಮಾನಿಗಳು ಟ್ರೋಲ್ ಮಾಡಿದ್ದರು. ಅಂತಹವರಿಗೆ ರಚಿತಾ ರಾಮ್ ತಿರುಗೇಟು ಕೊಟ್ಟಿದ್ದಾರೆ ಎನ್ನುವುದು ಕೆಲವರ ವಾದ.
ಕೆಲ ದಿನಗಳ ಹಿಂದೆ ರಚಿತಾ ರಾಮ್ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ ನೀಡಿದ್ದರು. ದರ್ಶನ್ ಜೊತೆ ಮಾತನಾಡಿ ಬಂದಿದ್ದರು. "ದರ್ಶನ್ ಸರ್‌ನ ಜೈಲಿನಲ್ಲಿ ಆ ರೀತಿ ನೋಡುವುದಕ್ಕೆ ಕಷ್ಟವಾಗುತ್ತದೆ. ಎಲ್ಲರೂ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಾವೆಲ್ಲಾ ಕಾಯುತ್ತಿದ್ದೆವೆ ಬೇಗ ಬನ್ನಿ ಸರ್ ಎಂದು ಹೇಳಿ ಬಂದಿದ್ದೇನೆ" ಎಂದಿದ್ದರು.
ನನಗೆ ಕಾನೂನಿನ ಮೇಲೆ ನಂಬಿಕೆ ಇದೆ. ಆದಷ್ಟು ಬೇಗ ಹೊರ ಬರ್ತೀನಿ ಎಂದು ದರ್ಶನ್ ಹೇಳಿದ್ದಾಗಿ ರಚಿತಾ ರಾಮ್ ತಿಳಿಸಿದ್ದರು. ರಾಜನನ್ನು ರಾಜನಂತೆಯೇ ನೋಡಲು ಇಷ್ಟ ನನಗೆ. ಆದರೆ ಇಂತಹ ಸಮಯದಲ್ಲಿ ನೋಡಬೇಕು ಎಂದು ಬಂದೆ. ಅವರು ಬಹಳ ಆರೋಗ್ಯವಾಗಿದ್ದಾರೆ. ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು ದರ್ಶನ್ ಸರ್. ಅವತ್ತು ಅವರು ನೋ ಎಂದಿದ್ದರೆ ನಾನು ರಚಿತಾ ರಾಮ್ ಆಗಿ ನಿಮ್ಮ ಮುಂದೆ ಇರುತ್ತಿರಲಿಲ್ಲ ಎಂದು ರಚಿತಾ ಹೇಳಿದ್ದರು.
ರಚಿತಾ ರಾಮ್ ನಟನೆಯ 'ಶಬರಿ ಸರ್ಚಿಂಗ್ ಫಾರ್ ರಾವಣ', 'ಲವ್ ಮಿ ಆರ್ ಹೇಟ್ ಮಿ' ಹಾಗೂ 'ಸಂಜು ವೆಡ್ಸ್ ಗೀತಾ-2' ಸಿನಿಮಾಗಳು ತೆರೆಗೆ ಬರಬೇಕಿದೆ. ಇನ್ನು ಅನಿಲ್ ಕುಮಾರ್ ನಿರ್ದೇಶನದ 'ಕಲ್ಟ್' ಚಿತ್ರದಲ್ಲಿ ರಚಿತಾ ನಾಯಕಿಯಾಗಿ ನಟಿಸುತ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











