ಮೈಸೂರು ಪಬ್‌ನಲ್ಲಿ ಅಂದು ನಡೆದಿದ್ದೇನು? ದರ್ಶನ್‌ರ ವೈರಲ್ ವಿಡಿಯೋ ಹಿಂದಿನ ಅಸಲಿ ಕತೆ ಬಿಚ್ಚಿಟ್ಟ ರಚಿತಾ ರಾಮ್
ನಟ ದರ್ಶನ್‌ಗೆ ವಿವಾದಗಳು ಹೊಸದಲ್ಲ. ಆಗಾಗ್ಗೆ ಬೇರೆ-ಬೇರೆ ಕಾರಣಗಳಿಗೆ ದರ್ಶನ್ ಸುತ್ತ ವಿವಾದಗಳು ಸುತ್ತಿಕೊಳ್ಳುತ್ತಲೇ ಇರುತ್ತವೆ. ಇದೇ ರೀತಿ ಇತ್ತೀಚೆಗೆ ದರ್ಶನ್ ಅವರದ್ದು ಎನ್ನಲಾದ ವಿಡಿಯೋ ಒಂದು ವೈರಲ್ ಆಗಿತ್ತು.
ಮೈಸೂರಿನ ಸೋಷಿಯಲ್ಸ್‌ನ ಪಬ್‌ನಲ್ಲಿ ದರ್ಶನ್ ಮೈಕ್‌ನಲ್ಲಿ ಯಾರಿಗೋ ಅವಾಚ್ಯವಾಗಿ ಬೈಯ್ಯುತ್ತಿರುವ ವಿಡಿಯೋ ಅದು. ಅದನ್ನು ಯಾರೋ ಕೆಳಗೆ ನಿಂತುಕೊಂಡು ದೂರದಿಂದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಆ ವಿಡಿಯೋ ಇಟ್ಟುಕೊಂಡು ಹಲವರು ದರ್ಶನ್ ಬಗ್ಗೆ ಋಣಾತ್ಮಕವಾಗಿ ಮಾತನಾಡಿದ್ದರು. ವಿಡಿಯೋದಲ್ಲಿ ಸಹ ದರ್ಶನ್ ಅವಾಚ್ಯವಾಗಿ ಯಾರನ್ನೋ ಬೈಯ್ಯುತ್ತಿದ್ದಿದ್ದು ಸ್ಪಷ್ಟವಾಗಿತ್ತು. ಆದರೆ ಆ ವಿಡಿಯೋದ ಅಸಲಿಯತ್ತೇನು? ದರ್ಶನ್ ಆ ದಿನ ಹಾಗೆ ಯಾರನ್ನೋ ಬೈಯ್ಯಲು ಕಾರಣವೇನು? ಎಂದು ಪ್ರತ್ಯಕ್ಷದರ್ಶಿ ನಟಿ ರಚಿತಾ ರಾಮ್ ಇದೀಗ ವಿವರಿಸಿದ್ದಾರೆ.

ಆ ದಿನ ಮೈಸೂರಿನ ಪಬ್‌ನಲ್ಲಿ ನಡೆದಿದ್ದೇನು?
ಸಂದರ್ಶನವೊಂದರಲ್ಲಿ ಮಾತನಾಡರುವ ನಟಿ ರಚಿತಾ ರಾಮ್, ''ನಮ್ಮ 'ಕ್ರಾಂತಿ' ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಿ ಚೆನ್ನಾಗಿ ಹೋಗುತ್ತಿತ್ತು. ಹಾಗಾಗಿ ನಾವೆಲ್ಲರೂ ಸೇರಿ ಪಾರ್ಟಿ ಮಾಡೋಣವೆಂದು ದರ್ಶನ್‌ರ ಆಪ್ತರದ್ದೇ ಆಗಿರುವ ಮೈಸೂರಿನ ಸೋಷಿಯಲ್ಸ್‌ಗೆ ಹೋಗಿದ್ದೆವು. ದರ್ಶನ್‌ರ ಆಪ್ತರು, ಇಡೀ ಸೋಷಿಯಲ್ಸ್ ಅನ್ನು ನಮಗೆ ಮಾತ್ರ ನೀಡಲು ಮುಂದಾದರು, ಆದರೆ ದರ್ಶನ್ ಒಪ್ಪದೆ, ಹಾಗೆ ಮಾಡಿದರೆ ನಿಮ್ಮ ವ್ಯಾಪಾರಕ್ಕೆ ತೊಂದರೆ ಆಗುತ್ತದೆ. ಸಾರ್ವಜನಿಕರಿಗೂ ಅವಕಾಶ ಕೊಡಿ, ನಾವು ಚಿತ್ರತಂಡದವರು ಪ್ರತ್ಯೇಕವಾಗಿ ಇರ್ತೀವಿ, ಅವರು ಪ್ರತ್ಯೇಕವಾಗಿ ಇರಲಿ ಎಂದರು'' ಎಂದು ಅಂದು ನಡೆದ ಘಟನೆ ವಿವರಿಸಿದ್ದಾರೆ.

ಮೈಸೂರಿನ ಸೋಷಿಯಲ್ಸ್ ಪಬ್‌ನಲ್ಲಿ ನಡೆದ ಘಟನೆ
''ಸೆಲೆಬ್ರೇಷನ್ ನಡೆಯುತ್ತಿತ್ತು. ನಾವು, ದರ್ಶನ್‌ರ ಗೆಳೆಯರು, ಚಿತ್ರತಂಡ ಎಲ್ಲರೂ ಇದ್ವಿ, ಪಾರ್ಟಿ ರಾತ್ರಿ ಒಂದು ಗಂಟೆವರೆಗೆ ನಡೆಯುತ್ತಲೇ ಇತ್ತು. ಅಂದು ಶನಿವಾರ ಸಹ ಆಗಿದ್ದರಿಂದ ಸೋಷಿಯಲ್ಸ್‌ನಲ್ಲಿ ಬೇರೆಯವರು ಸಹ ಹೆಚ್ಚಾಗಿಯೇ ಇದ್ದರು. ಎಲ್ಲರಿಗೂ ಒಂದೇ ಫ್ಲೋರ್ ಇತ್ತು. ನಾವೆಲ್ಲ ಡ್ಯಾನ್ಸ್ ಮಾಡ್ತಾ ಇದ್ವಿ. ಆಗ ಯಾರೋ ಒಬ್ಬ ಹುಡುಗ ಒಬ್ಬ ಹುಡುಗಿಯ ಫೋಟೊ ತೆಗೆದಿದ್ದಾನೆ. ನಮ್ಮ ಫೋಟೊ, ವಿಡಿಯೋ ಸಹ ಮಾಡಿದ. ಅದನ್ನ ಬೌನ್ಸರ್‌ಗಳು ನೋಡಿ ದರ್ಶನ್ ಅವರಿಗೆ ವಿಷಯ ಮುಟ್ಟಿಸಿದರು'' ಎಂದು ದರ್ಶನ್ ಮಾತನಾಡುವ ಮುಂಚೆ ಏನು ನಡೆಯಿತು ಎಂದು ವಿವರಿಸಿದ್ದಾರೆ ರಚಿತಾ ರಾಮ್.

ಹೆಣ್ಣು ಮಕ್ಕಳ ವಿಡಿಯೋ ಮಾಡಬೇಡಿ ಎಂದು ಮನವಿ ಮಾಡಿದ ದರ್ಶನ್
''ದರ್ಶನ್ ಅವರು ಬಂದು ಡಿಜೆ ಬಳಿ ಹೋಗಿ ಮೈಕ್ ಪಡೆದುಕೊಂಡು ಎಲ್ಲರ ಬಳಿಯೂ ಒಟ್ಟಿಗೆ ರಿಕ್ವೆಸ್ಟ್ ಮಾಡಿಕೊಂಡು, ಹೀಗೆಲ್ಲ ವಿಡಿಯೋ ಮಾಡುವುದು, ಫೋಟೊ ತೆಗೆಯುವುದು ಮಾಡಬೇಡಿ ಎಂದು ರಿಕ್ವೆಸ್ಟ್ ಮಾಡಿಕೊಂಡರು. ನಿಮಗೆ ಸಮಸ್ಯೆ ಆಗದಿರಲಿ ಅಂತ ನಾವು ಆ ಸೈಡ್‌ನಲ್ಲಿದ್ದೀವಿ. ಎಲ್ಲರೂ ಒಟ್ಟಿಗೆ ಸೆಲೆಬ್ರೇಟ್ ಮಾಡೋಣ ಆದರೆ ಯಾವುದೇ ಕಾರಣಕ್ಕೂ ಯಾರ ವಿಡಿಯೋ, ಫೋಟೊ ತೆಗೆಯುವುದು ಬೇಡ, ಯಾವುದೇ ಹೆಣ್ಣು ಮಕ್ಕಳಿಗೆ ಏನಾದರೂ ಆದರೆ ಅದು ನನ್ನದೇ ಜವಾಬ್ದಾರಿ ಆಗಿರುತ್ತದೆ. ದಯವಿಟ್ಟು ಹೀಗೆ ಮಾಡಬೇಡಿ'' ಎಂದು ದರ್ಶನ್ ಮನವಿ ಮಾಡಿದ್ದಾರೆ.

ದರ್ಶನ್ ಬಳಿ ಕೆಟ್ಟದಾಗಿ ನಡೆದುಕೊಂಡ ವ್ಯಕ್ತಿ
''ದರ್ಶನ್ ಮನವಿ ಮಾಡಿದ ಮೇಲೆ ಆ ವಿಡಿಯೋ ತೆಗೆದ ವ್ಯಕ್ತಿ ಬೇರೆಯ ರೀತಿಯೇ ವರ್ತನೆ ತೋರಿಸಿದ ಆಗ ದರ್ಶನ್ ಅವರಿಗೆ ಸಿಟ್ಟು ಬಂತು. ನಾನು ಮನವಿ ಮಾಡಿದರೂ ಹೀಗೆ ಕೆಟ್ಟದಾಗಿ ವರ್ತಿಸಿದನಲ್ಲ ಎಂದು ದರ್ಶನ್ ಅವರು ಸಿಟ್ಟು ಬಂದು ಬೈದಿದ್ದಾರೆ. ನೀವೇ ಯೋಚಿಸಿ ಅವರಿಗೆ ಜಗಳ ಮಾಡಬೇಕು, ಬೈಯ್ಯಬೇಕು ಎಂದಿದ್ದರೆ ಮೈಕ್‌ನಲ್ಲಿ ಯಾಕೆ ಬೈಯ್ಯುತ್ತಿದ್ದರು. ಆದರೆ ವಿಡಿಯೋದಲ್ಲಿ ದರ್ಶನ್ ಅವರು ಬೈದಿದ್ದು ಮಾತ್ರವೇ ಇದೆಯೇ ಹೊರತು, ದರ್ಶನ್ ಮನವಿ ಮಾಡಿದ್ದು ಇಲ್ಲ'' ಎಂದು ಅಂದು ನಡೆದ ಘಟನೆ ವಿವರಿಸಿದರು ನಟಿ ರಚಿತಾ ರಾಮ್.

ಸ್ವಿಮ್ಮಿಂಗ್ ಪೂಲ್‌ನಲ್ಲಿ ನಿಂತ ವ್ಯಕ್ತಿ ವಿಡಿಯೋ ಮಾಡಿದ್ದಾನೆ
ಯಾರೋ ಕೆಳಗಿನ ಫ್ಲೋರ್‌ನಲ್ಲಿ ಸ್ವಿಮ್ಮಿಂಗ್ ಪೂಲ್ ಬಳಿ ನಿಂತ ವ್ಯಕ್ತಿ ಆ ವಿಡಿಯೋವನ್ನು ಚಿತ್ರೀಕರಣ ಮಾಡಿದ್ದಾನೆ. ಘಟನೆಯ ಹಿಂದೆ ಮುಂದೆ ತಿಳಿದುಕೊಳ್ಳದೆ ವಿಡಿಯೋ ನೋಡಿ ದರ್ಶನ್ ಬಹಳ ಅಬ್ಯೂಸಿವ್ ಮನಸ್ಥಿತಿಯವರು, ಕೆಟ್ಟ ವ್ಯಕ್ತಿ ಎಂದೆಲ್ಲ ಪ್ರಚಾರ ಮಾಡುವುದು ತಪ್ಪು. ಆಡಿಯೋ ವಿಷಯದಲ್ಲಿ ಸಹ ಹೀಗೆಯೇ ಆಗಿದೆ. ದರ್ಶನ್ ಮಾತನಾಡಿರುವ ಪಾರ್ಟ್ ಅನ್ನು ಮಾತ್ರವೇ ವೈರಲ್ ಮಾಡಿ ದರ್ಶನ್ ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಆದರೆ ದರ್ಶನ್ ಹಾಗೆ ಮಾತನಾಡುವುದಕ್ಕೆ ಕಾರಣವೇನು? ಎಂಬುದನ್ನು ಯೋಚಿಸಿ, ದರ್ಶನ್ ಅವರು ಹಾಗೆ ಮಾತನಾಡಿದ್ದಾರೆಂದರೆ ಎದುರಿಗಿದ್ದ ವ್ಯಕ್ತಿ ಏನು ಮಾತನಾಡಿರಬಹುದು, ಏನು ಪ್ರವೋಕ್ ಮಾಡಿರಬಹುದು ಎಂದು ನಟಿ ರಚಿತಾ ರಾಮ್, ದರ್ಶನ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.


Click it and Unblock the Notifications











