ನನ್ನ ಗುರು ದರ್ಶನ್ ಇಂತಹ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನುವುದು ನಂಬಲು ಸಾಧ್ಯವಾಗುತ್ತಿಲ್ಲ": ರಚಿತಾ
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಕನ್ನಡ ಸಿನಿಮಾ ತಾರೆಯರು ಒಬ್ಬೊಬ್ಬರಾಗಿ ಮೌನ ಮುರಿಯುತ್ತಿದ್ದಾರೆ. ರಮ್ಯಾ, ಉಪೇಂದ್ರ, ಸುದೀಪ್ ಬಳಿಕ ಇದೀಗ ನಟಿ ರಚಿತಾ ರಾಮ್ ಪ್ರತಿಕ್ರಿಯಿಸಿದ್ದಾರೆ. ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ ಮೂಲಕವೇ ರಚಿತಾ ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಿತರಾಗಿದ್ದರು.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹೆಸರು ಕೇಳಿಬಂದಿದೆ. 8 ದಿನಗಳಿಂದ ನಟ ದರ್ಶನ್ ಸೇರಿದಂತೆ 13 ಮಂದಿ ಆರೋಪಿಗಳನ್ನು ಕಸ್ಟಡಿಗೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ದರ್ಶನ್ ಆಪ್ತರು ಈ ಬಗ್ಗೆ ಮಾತನಾಡುವ ಗೋಜಿಗೆ ಹೋಗುತ್ತಿಲ್ಲ. ಇದೀಗ ರಚಿತಾ ರಾಮ್ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

"ನಮಸ್ಕಾರ..ಈ ನೋಟ್‌ನ ನಾನು ನಟಿಯಾಗಿ ಅಲ್ಲ ಸಾಮಾನ್ಯ ಪ್ರಜೆಯಾಗಿ ಬರೆಯುತ್ತಿದ್ದೇನೆ.ಇತ್ತಿಚೆಗೆ ನಡೆದ ಪ್ರಕರಣದ ಬಗ್ಗೆ ನನ್ನ ಮಾತು.. ಮೊದಲನೇಯದಾಗಿ ರೇಣುಕಾಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂಬ ಪ್ರಾರ್ಥನೆ ಮಾಡುತ್ತೇನೆ. ಈ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆಂಬ ಭರವಸೆ ನನಗಿದೆ"
"ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಟ ದರ್ಶನ್ ಸರ್ ನನಗೆ ಗುರು ಸಮಾನರು, ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದಂತಹ ವ್ಯಕ್ತಿ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ನಂಬಲು ಸ್ವಲ್ಪ ಕಷ್ಟವಾಗುತ್ತಿದೆ. ಏನಿದ್ದರೂ ಸತ್ಯ ಪೊಲೀಸ್ ತನಿಖೆಯಿಂದ ನಮ್ಮ ಮುಂದೆ ಬರಲಿದೆ ಎನ್ನುವುದೆ ನನ್ನ ನಂಬಿಕೆ. ನನ್ನ ಮಾಧ್ಯಮ ಮಿತ್ರರು ಈ ಕೇಸ್‌ನ ವರದಿಯಲ್ಲಿ ಪಾರದರ್ಶಕವಾಗಿರುತ್ತಿರಿ ಮತ್ತು ನಿಷ್ಪಕ್ಷವಾಗಿ ಕೆಲಸ ಮಾಡುತ್ತಿರಿ ಎಂದು ಆಶಿಸುತ್ತೇನೆ" ಎಂದು ರಚಿತಾ ಪೋಸ್ಟ್ ಮಾಡಿದ್ದಾರೆ.
ಪರೋಕ್ಷವಾಗಿ ನಟ ದರ್ಶನ್‌ಗೆ ರಚಿತಾ ರಾಮ್ ಬೆಂಬಲವಾಗಿ ನಿಂತಿದ್ದಾರೆ. ಇನ್ನು ತೂಗುದೀಪ ಪ್ರೊಡಕ್ಷನ್ಸ್ ನಿರ್ಮಾಣದ 'ಬುಲ್ ಬುಲ್' ಸಿನಿಮಾ 2013ರಲ್ಲಿ ತೆರೆಕಂಡಿತ್ತು. ಎಂ. ಡಿ ಶ್ರೀಧರ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ರಚಿತಾ ಮಿಂಚಿದ್ದರು. ಬಳಿಕ 'ಅಂಬರೀಶ' ಹಾಗೂ 'ಕ್ರಾಂತಿ' ಸಿನಿಮಾಗಳಲ್ಲಿ ಈ ಜೋಡಿ ಜೊತೆಯಾಗಿತ್ತು. 'ಜಗ್ಗುದಾದ' ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು.
ರಚಿತಾ ಪೋಸ್ಟ್‌ಗೆ ದರ್ಶನ್ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ. ನಮ್ಮ ಬಾಸ್ ಬೆಂಬಲಕ್ಕೆ ನಿಂತ ನಿಮಗೆ ಧನ್ಯವಾದಗಳು ಎಂದಿದ್ದಾರೆ. "ಕಾನೂನು ಎಲ್ಲರಿಗೂ ಒಂದೇ, ತಪ್ಪಿದರೆ ಕಂಡಿತ ಶಿಕ್ಷೆ ಆಗಲಿ", ನಮ್ಮ ಬಾಸ್ ಯಾವ ತಪ್ಪು ಮಾಡಿಲ್ಲ, ಡಿ ಬಾಸ್‌ಗೆ ಜೈ" ಎಂದು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications










