ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾಕ್ಕೆ ಕನ್ನಡ ನಟಿಯೇ ನಾಯಕಿ
ದರ್ಶನ್ ನಟನೆಯ ಮುಂದಿನ ಸಿನಿಮಾ 'ಕ್ರಾಂತಿ'ಯ ಚಿತ್ರೀಕರಣ ಆರಂಭವಾಗಿದೆ. ಕೆಲವು ದಿನಗಳ ಹಿಂದಷ್ಟೆ ಸಿನಿಮಾದ ಹೆಸರು ಘೋಷಣೆ ಆಗಿತ್ತು.
Recommended Video
'ಕ್ರಾಂತಿ' ಸಿನಿಮಾ ಘೋಷಣೆ ಆದಾಗಿನಿಂದ ಸಿನಿಮಾಕ್ಕೆ ನಾಯಕಿ ಯಾರಾಗುತ್ತಾರೆ ಎಂದು ಕುತೂಹಲ ದರ್ಶನ್ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಆದರೆ ಆ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ.
'ಕ್ರಾಂತಿ' ಸಿನಿಮಾಕ್ಕೆ ದರ್ಶನ್ ಜೊತೆ ಈ ಹಿಂದೆ ನಟಿಸಿದ್ದ, ಕನ್ನಡದ್ದೇ ನಟಿ ರಚಿತಾ ರಾಮ್ ಅನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ.

ರಚಿತಾ ರಾಮ್ ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾಕ್ಕೆ ದರ್ಶನ್ ಅವರೇ ನಾಯಕರಾಗಿದ್ದರು. 'ಬುಲ್-ಬುಲ್' ಸಿನಿಮಾದ ಮೂಲಕ ಸಿನಿಮಾ ನಟನೆ ಆರಂಭಿಸಿದ ರಚಿತಾ ರಾಮ್ ಇದೀಗ ಎಂಟು ವರ್ಷಗಳ ಬಳಿಕ ಮತ್ತೆ ದರ್ಶನ್ ಜೊತೆ ನಟಿಸುತ್ತಿದ್ದಾರೆ.
ಸಿನಿಮಾದ ಮುಹೂರ್ತ ಗಣೇಶ ದೇವಾಲಯದಲ್ಲಿ ಇಂದು ನಡೆದಿದ್ದು, ಸಿನಿಮಾಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಸಂಸದೆ, ನಟಿ ಸುಮಲತಾ ಶುಭ ಹಾರೈಸಿದ್ದಾರೆ.
'ಕ್ರಾಂತಿ' ಸಿನಿಮಾವನ್ನು ದರ್ಶನ್‌ರ ಆಪ್ತ ಗೆಳೆಯರಲ್ಲೊಬ್ಬರಾದ ವಿ.ಹರಿಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾವನ್ನು ಶೈಲಜಾ ನಾಗ್ ಹಾಗೂ ಬಿ ಸುರೇಶ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ದರ್ಶನ್ ನಟನೆಯ 'ಯಜಮಾನ' ಸಿನಿಮಾವನ್ನು ಹರಿಕೃಷ್ಣ ನಿರ್ದೇಶನ ಮಾಡಿದ್ದರು. 'ಯಜಮಾನ'ದ ತಂಡವೇ ಈಗ 'ಕ್ರಾಂತಿ' ಸಿನಿಮಾ ನಿರ್ಮಾಣ ಮಾಡುತ್ತಿದೆ.

ದರ್ಶನ್ ನಟನೆಯ ಈ ಹಿಂದಿನ ಸಿನಿಮಾ 'ರಾಬರ್ಟ್' ದೊಡ್ಡ ಯಶಸ್ಸು ಗಳಿಸಿದೆ. ಅದಾದ ಬಳಿಕ 'ರಾಜವೀರ ಮದಕರಿ ನಾಯಕ' ಸಿನಿಮಾದ ಚಿತ್ರೀಕರಣ ಆರಂಭಿಸಿದ್ದರು ದರ್ಶನ್, ಆದರೆ ಆ ಸಿನಿಮಾದ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ. 'ರಾಜವೀರ ಮದಕರಿ ನಾಯಕ' ಸಿನಿಮಾವನ್ನು ಹಿರಿಯ ನಿರ್ದೇಶಕ ರಾಜೇಂದ್ರ ಬಾಬು ನಿರ್ದೇಶನ ಮಾಡುತ್ತಿದ್ದು, ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ.
ಇನ್ನು ನಟಿ ರಚಿತಾ ರಾಮ್ ಕೈಯಲ್ಲಿ ಹಲವು ಸಿನಿಮಾಗಳಿವೆ. 'ಲವ್ ಯು ರಚ್ಚು' ಸಿನಿಮಾದ ಚಿತ್ರೀಕರಣ ಪೂರ್ಣವಾಗುವುದರಲ್ಲಿದೆ. ಡಾಲಿ ಧನಂಜಯ್ ಜೊತೆ 'ಮಾನ್ಸೂನ್ ರಾಗ', 'ಡಾಲಿ', ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಹ ಬಿಡುಗಡೆ ಹಾದಿಯಲ್ಲಿದೆ. 'ಬ್ಯಾಡ್‌ಮ್ಯಾನರ್ಸ್', 'ಲವ್ ಮಿ ಆರ್ ಹೇಟ್ ಮಿ', 'ಏಪ್ರಿಲ್', 'ಸೂಪರ್ ಮಚ್ಚಿ', 'ಲಿಲ್ಲಿ', 'ಶಬರಿ' ಇನ್ನೂ ಹಲವು ಸಿನಿಮಾಗಳಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ.


Click it and Unblock the Notifications











