ಮತ್ತೆ 'ಡೆವಿಲ್' ಅಖಾಡಕ್ಕಿಳಿದ ಚಾಲೆಂಜಿಂಗ್ ಸ್ಟಾರ್; ಚಿತ್ರಕ್ಕೆ ನಾಯಕಿಯಾದ ರಚನಾ ಹಿನ್ನೆಲೆ ಏನು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಡೆವಿಲ್' ಚಿತ್ರದಿಂದ ಬಿಗ್ ಅಪ್‌ಡೇಟ್ ಸಿಕ್ಕಿದೆ. ಚಿತ್ರಕ್ಕೆ ನಾಯಕಿಯ ಆಯ್ಕೆ ಆಗಿದೆ. ಬಹಳ ಹಿಂದೆಯೇ ಚಿತ್ರಕ್ಕೆ ನಾಯಕಿ ಯಾರು ಎನ್ನುವ ಬಗ್ಗೆ ಗುಸುಗುಸು ಕೇಳಿ ಬಂದಿತ್ತು. ಅದು ಈಗ ನಿಜವಾಗಿದೆ. ರಚನಾ ರೈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದು ಅಧಿಕೃತವಾಗಿ ಈ ವಿಚಾರವನ್ನು ಚಿತ್ರತಂಡ ಖಚಿತ ಪಡಿಸಿದೆ.
ಮಂಗಳೂರು ಮೂಲದ ರಚನಾ ರೈ ಬಹುನಿರೀಕ್ಷಿತ ಚಿತ್ರಕ್ಕೆ ನಾಯಕಿ ಆಗುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅದು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೋಡಿಯಾಗಿ ನಟಿಸುತ್ತಿದ್ದಾರೆ. "ನೆಲದ ಪ್ರತಿಭೆಗೆ ಮನ್ನಣೆ.. ಶುದ್ಧ ಕೌಶಲ್ಯಕ್ಕಾಗಿ ಗುರುತಿಸಲಾಗಿದೆ" ಎಂದು ಬರೆದು ಆಕೆಯನ್ನು ತಂಡಕ್ಕೆ ಸ್ವಾಗತಿಸಲಾಗಿದೆ.

ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ರಚನಾ ರೈ ನಟಿಸಿದ್ದಾರೆ. ಧನ್ವೀರ್ ಗೌಡ ನಟನೆಯ 'ವಾಮನ' ಚಿತ್ರದಲ್ಲಿ ಈಗಾಗಲೇ ರಚನಾ ರೈ ಬಣ್ಣ ಹಚ್ಚಿದ್ದಾರೆ. ಎರಡು ತಿಂಗಳ ಹಿಂದೆಯೇ ಈಕೆ ಚಿತ್ರಕ್ಕೆ ನಾಯಕಿ ಎಂದು ಗುಲ್ಲಾಗಿತ್ತು. ಆದರೆ ಚಿತ್ರತಂಡ ಮಾತ್ರ ಇದನ್ನು ಸುಳ್ಳು ಎಂದಿತ್ತು. ಚಿತ್ರದ ಬಗ್ಗೆ ಏನೇ ಅಪ್‌ಡೇಟ್ ಇದ್ದರೂ ನಾವೇ ತಿಳಿಸುತ್ತೇವೆ. ಯಾವುದೇ ವದಂತಿ ನಂಬಬೇಡಿ ಎಂದಿದ್ದರು. ಇದೀಗ ಅಧಿಕೃತವಾಗಿ ತಿಳಿಸಿದ್ದಾರೆ.
ಇನ್ನು ರಚನಾ ರೈ 'ಡೆವಿಲ್' ಸಿನಿಮಾ ನಾಯಕಿ ಎನ್ನುತ್ತಿದ್ದಂತೆ ಆಕೆ ಯಾರು? ಹಿನ್ನೆಲೆ ಏನು? ಎಂದು ದರ್ಶನ್ ಅಭಿಮಾನಿಗಳು ಹುಡುಕಾಟ ನಡೆಸಿದ್ದರು. ಆಕೆಯ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಕೂಡ ಹೆಚ್ಚಾಗಿತ್ತು. ಅಂದಹಾಗೆ ಪುತ್ತೂರಿನ ಹುಡುಗಿ ರಚನಾ ರೈ. ತಂದೆ ಪ್ರವೀಣ್. ತಾಯಿ ಹಾರಾಡಿ ಶಾಲಾ ಶಿಕ್ಷಕಿ ಗಂಗಾ ರೈ. ಇನ್ನು ರಚನಾ ಪತ್ರಿಕೋದ್ಯಮ ಪದವಿ ಪಡೆದುಕೊಂಡಿದ್ದಾರೆ.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪಿಯುಸಿ ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದವರು. ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಆರಂಭಿಸಿದ್ದರು. ಇನ್ನು ಶ್ವಾನಗಳ ಕುರಿತು 'ಓ ಮೈ ಡಾಗ್' ಎನ್ನುವ ಪುಸ್ತಕ ಬರೆದಿದ್ದಾರೆ. ರಚನಾ ರೈ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪ್ಲೇಯರ್ ಕೂಡ ಹೌದು. 'ವಾಮನ' ಕನ್ನಡದಲ್ಲಿ ಆಕೆಯ ಮೊದಲ ಸಿನಿಮಾ. ಇನ್ನು ತುಳು ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ.
ಇನ್ನು 'ಡೆವಿಲ್' ಸಿನಿಮಾ ವಿಚಾರಕ್ಕೆ ಬಂದರೆ 2ನೇ ಶೆಡ್ಯೂಲ್ ಚಿತ್ರೀಕರಣ ಆರಂಭವಾಗಿದೆ. ಕಳೆದ ಐದಾರು ದಿನಗಳಿಂದ ಬಾಲಿವುಡ್ ನಟ ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್ ಸೇರಿದಂತೆ ಒಂದಷ್ಟು ಕಲಾವಿದರು ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ. ರಚನಾ ರೈ ಕೂಡ ತಂಡವನ್ನು ಸೇರಿಕೊಳ್ಳುತ್ತಿದ್ದಾರೆ. ಕೈಗೆ ಪೆಟ್ಟಾಗಿ ಚೇತರಿಸಿಕೊಳ್ಳುತ್ತಿರುವ ದರ್ಶನ್ ಕೂಡ ಮುಂದಿನ ವಾರ ಚಿತ್ರೀಕರಣದಲ್ಲಿ ಭಾಗಿ ಆಗುವ ನಿರೀಕ್ಷೆಯಿದೆ.

'ಕಾಟೇರ' ಸೂಪರ್ ಸಕ್ಸಸ್ ಬಳಿಕ ದರ್ಶನ್ ನಟಿಸುತ್ತಿರುವ ಸಿನಿಮಾ ಇದು. ಈ ಹಿಂದೆ 'ತಾರಕ್' ಸಿನಿಮಾ ಮಾಡಿದ್ದ ತಂಡವೇ ಈ ಬಾರಿ ಒಟ್ಟಾಗಿದೆ. ಒಂದು ಆಕ್ಷನ್ ಎಂಟರ್‌ಟೈನರ್ ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಮಿಲನಾ ಪ್ರಕಾಶ್ 'ಡೆವಿಲ್' ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ನಿರ್ಮಾಣ ಮಾಡುತ್ತಿದ್ದಾರೆ. ದರ್ಶನ್ ಹುಟ್ಟುಹಬ್ಬಕ್ಕೆ ಚಿತ್ರದ ಟೀಸರ್ ರಿಲೀಸ್ ಆಗಿತ್ತು.
ಸಣ್ಣ ಟೀಸರ್‌ನಿಂದಲೇ 'ಡೆವಿಲ್' ಸಿನಿಮಾ ಹೈಪ್ ಕ್ರಿಯೇಟ್ ಮಾಡಿತ್ತು. ಅದಕ್ಕೆ ತಕ್ಕಂತೆ ಮೇಕಿಂಗ್, ರಿಲೀಸ್ ಪ್ಲ್ಯಾನ್ ಮಾಡಲಾಗುತ್ತಿದೆ. ಈ ವರ್ಷಾಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಸನ್ನಾಹದಲ್ಲಿದೆ ಚಿತ್ರತಂಡ. ಬಳಿಕ ಮತ್ತೆರಡು ಸಿನಿಮಾಗಳನ್ನು ದರ್ಶನ್ ಫೈನಲ್ ಮಾಡಿದ್ದಾರೆ. ತರುಣ್ ಸುಧೀರ್ ನಿರ್ದೇಶನದಲ್ಲಿ 'ಸಿಂಧೂರ ಲಕ್ಷ್ಮಣ' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ.


Click it and Unblock the Notifications











