ಪೈರಸಿ ಕಾಟ: ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ರಾಧಿಕಾ ಕುಮಾರಸ್ವಾಮಿ
'ಸ್ವೀಟಿ ನನ್ನ ಜೋಡಿ' ಸಿನಿಮಾವನ್ನು ಅಕ್ರಮವಾಗಿ ಯೂಟ್ಯೂಬ್ ಗೆ ಅಪ್ ಲೋಡ್ ಮಾಡಲಾಗಿದ್ದು, ಈ ಸಂಬಂಧ ನಟಿ ರಾಧಿಕಾ ಕುಮಾರಸ್ವಾಮಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. 'ಸ್ವೀಟಿ ನನ್ನ ಜೋಡಿ' ರಾಧಿಕಾ ಕುಮಾರಸ್ವಾಮಿ ಅವರೇ ನಿರ್ಮಾಣ ಮಾಡಿ ನಟಿಸಿರುವ ಸಿನಿಮಾ.
Recommended Video
ಈ ಸಿನಿಮಾವನ್ನು ಪೈರಸಿ ಮಾಡಿ ಅಪ್ ಲೋಡ್ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಧಿಕಾ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. 2013ರಲ್ಲಿ ರಾಧಿಕಾ ಸ್ವೀಟಿ ನನ್ನ ಜೋಡಿ ಸಿನಿಮಾ ಮಾಡಿದ್ದರು. ಇದೀಗ ರಾಧಿಕಾ ಅವರ ಒಪ್ಪಿಗೆ ಪಡೆಯದೆ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. 3 ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದೆ ಎಂದು ರಾಧಿಕಾ ದೂರಿನಲ್ಲಿ ಹೇಳಿದ್ದಾರೆ.
ರಾಧಿಕಾ ದೂರಿನ ಆಧಾರದ ಮೇಲೆ ಎಫ್ ಐ ಆರ್ ದಾಖಲಿಸಿಕೊಂಡಿರುವ ಸೈಬರ್ ಪೊಲೀಸರು ಆರೋಪಿಗಳ ಪತ್ತೆ ಮಾಡುತ್ತಿದ್ದಾರೆ.
'ಸ್ವೀಟಿ ನನ್ನ ಜೋಡಿ' ರಾಧಿಕಾ ಕುಮಾರಸ್ವಾಮಿ ನಿರ್ಮಾಣದ 2ನೇ ಸಿನಿಮಾ. ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದ ರಾಧಿಕಾ ಸ್ವೀಟಿ ನನ್ನ ಜೋಡಿ ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಮಿಂಚಿದ್ದರು. ಈ ಸಿನಿಮಾದಲ್ಲಿ ನಾಯಕನಾಗಿ ಆದಿತ್ಯ ಕಾಣಿಸಿಕೊಂಡಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ನಿರೀಕ್ಷೆಯ ಮಟ್ಟದಲ್ಲಿ ಸದ್ದು ಮಾಡಿಲ್ಲ. ಆದರೆ ರಾಧಿಕಾ ಕಮ್ ಬ್ಯಾಕ್ ಸಿನಿಮಾ ಎನ್ನುವ ಕಾರಣಕ್ಕೆ ಕುತೂಹಲ ಮೂಡಿಸಿತ್ತು.

ಅಂದ್ಹಾಗೆ ರಾಧಿಕಾ ಸದ್ಯ ಕಾಂಟ್ರ್ಯಾಕ್ಟ್, ರಾಜೇಂದ್ರ ಪೊನ್ನಪ್ಪ ಮತ್ತು ಭೈರಾದೇವಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಲ್ಲದೆ ನಾಗಶೇಖರ್ ನಿರ್ದೇಶನದ, ಡಾರ್ಲಿಂಗ್ ಕೃಷ್ಣ ನಟನೆಯ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











