ತಮ್ಮ ಪತಿಯನ್ನು ಬೇರೆ ಹೆಸರಿನಿಂದ ಕರೆದಿದ್ದಕ್ಕೆ ರಾಧಿಕಾ ಪಂಡಿತ್ ಕೆಂಡಾಮಂಡಲ; ಅಷ್ಟಕ್ಕೂ ಏನಾಯ್ತು?
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಸ್ಯಾಂಡಲ್‌ವುಡ್ ಕ್ಯೂಟ್ ಕಪಲ್. ಅಭಿಮಾನಿಗಳ ಪಾಲಿನ ರಾಕಿಂಗ್ ಜೋಡಿ. ಸೂಪರ್ ಹಿಟ್ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ ಜೋಡಿ ಬಳಿಕ ಪ್ರೀತಿಸಿ ಮದುವೆ ಆಗಿದ್ದರು. ಇತ್ತೀಚೆಗೆ ದಂಪತಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.
ಸದ್ಯ ನಟ ಯಶ್ 'ಟಾಕ್ಸಿಕ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ಸಿನಿಮಾ ಚಿತ್ರೀಕರಣ ನಡೀತು. ರಾಧಿಕಾ ಪಂಡಿತ್ ಕೂಡ ಕೆಲ ದಿನ ಅಲ್ಲಿದ್ದರು. ಸಿನಿಮಾಗಳಿಂದ ಕೊಂಚ ಬಿಡುವು ಪಡೆದುಕೊಂಡಿರುವ ರಾಧಿಕಾ ಮಗಳು ಐರಾ ಹಾಗೂ ಮಗ ಯಥರ್ವ್ ಲಾಲನೆ, ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.

ಮದುವೆ ಬಳಿಕ 'ಆದಿ ಲಕ್ಷ್ಮಿ ಪುರಾಣ' ಚಿತ್ರದಲ್ಲಿ ಮಾತ್ರ ರಾಧಿಕಾ ಪಂಡಿತ್ ನಟಿಸಿದ್ದರು. ಅಭಿಮಾನಿಗಳು ತಮ್ಮ ನೆಚ್ಚಿನ ಸ್ಯಾಂಡಲ್‌ವುಡ್ ಸಿಂಡ್ರೆಲಾರನ್ನು ತೆರೆಮೇಲೆ ನೋಡಲು ಕಾಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಬಣ್ಣ ಹಚ್ಚಿ ನಟಿಸುವ ಸಾಧ್ಯತೆಯಿದೆ. ಮದುವೆಯಾಗಿ ಇಬ್ಬರು ಮಕ್ಕಳ ತಾಯಿಯಾದರೂ ಅವರ ಛಾರ್ಮ್ ಮಾತ್ರ ಕಿಂಚಿತ್ತು ಕಮ್ಮಿ ಆಗಿಲ್ಲ.
ಸದ್ಯ ರಾಧಿಕಾ ಪಂಡಿತ್ ಕೊಂಚ ಗರಂ ಆಗಿರುವ ವೀಡಿಯೋವೊಂದು ವೈರಲ್ ಆಗುತ್ತಿದೆ. ಅದು ಕೂಡ ತಮ್ಮ ಪತಿಯನ್ನು ನವೀನ್ ಎಂದು ಕರೆದಿದ್ದಕ್ಕೆ. ಎಲ್ಲರಿಗೂ ಗೊತ್ತಿರುವಂತೆ ನಟ ಯಶ್ ನಿಜವಾದ ಹೆಸರು ನವೀನ್ ಕುಮಾರ್ ಗೌಡ. ಆದರೆ ಚಿತ್ರರಂಗಕ್ಕೆ ಬಂದ ಬಳಿಕ ಯಶ್ ಎಂದು ಬದಲಿಸಿಕೊಂಡಿದ್ದು. ಅದು ಅವರಿಗೆ ಅದೃಷ್ಟ ತಂದುಕೊಟ್ಟಿತ್ತು. ಆದರೆ ತಮ್ಮ ಪತಿಯನ್ನು ನವೀನ್ ಎಂದು ಈಗ ಯಾರಾದರೂ ಕರೆದರೆ ರಾಧಿಕಾಗೆ ಇಷ್ಟವಾಗುವುದಿಲ್ಲ.
ಇತ್ತೀಚೆಗೆ ಒಂದು ವಜ್ರಾಭರಣ ಮಳಿಗೆ ಕಾರ್ಯಕ್ರಮಕ್ಕೆ ರಾಧಿಕಾ ಪಂಡಿತ್ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಮಾಧ್ಯಮದವರು ವೀಡಿಯೋ ಚಿತ್ರೀಕರಣ ನಡೆಸುತ್ತಿದ್ದರು. ಈ ವೇಳೆ ನವೀನ್ ಸರ್ ಎಲ್ಲಿ ಎಂದು ಕೇಳಿದ್ದಾರೆ. ಕೂಡಲೇ ಪ್ರತಿಕ್ರಿಯಿಸಿರುವ ರಾಧಿಕಾ ಪಂಡಿತ್ "ಯಾರು ನವೀನ್?" ಎಂದಿದ್ದಾರೆ. ಕೂಡಲೇ ಮಾಧ್ಯಮ ಛಾಯಾಗ್ರಾಹಕರು "ಯಶ್ ಸರ್" ಎಂದು ಉತ್ತರಿಸಿದ್ದಾರೆ.
ಬಳಿಕ ರಾಧಿಕಾ ಮಾತು ಮುಂದುವರೆಸಿ "ಅವರು ಲೀಗಲಿ ಹೆಸರು ಚೇಂಜ್ ಮಾಡಿಕೊಂಡಿದ್ದಾರೆ ಯಶ್ ಅಂತ" ಎಂದಿದ್ದಾರೆ. ಬಳಿಕ ಮಾಧ್ಯಮ ಛಾಯಾಗ್ರಾಹಕರು "ನಿಮಗೆ ನವೀನ್ ಅಲ್ವಾ?" ಎಂದಿದ್ದಕ್ಕೆ "ಇಲ್ಲ, ನನಗೂ ಯಶ್" ಎಂದು ರಾಧಿಕಾ ಪಂಡಿತ್ ಹೇಳಿರುವ ವೀಡಿಯೋ ವೈರಲ್ ಆಗುತ್ತಿದೆ.
ವೀಡಿಯೋದಲ್ಲಿ ರಾಧಿಕಾ ಪಂಡಿತ್ ಪ್ರತಿಕ್ರಿಯೆ ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ. ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ನಿಮ್ಮ ಧೈರ್ಯಕ್ಕೆ ಸಲಾಂ ಎನ್ನುತ್ತಿದ್ದಾರೆ. ಇಬ್ಬರನ್ನು ಮತ್ತೆ ತೆರೆಮೇಲೆ ನೋಡಬೇಕು ಎಂದು ಆಸೆ ವ್ಯಕ್ತಪಡಿಸುತ್ತಿದ್ದಾರೆ. ಕಿರುತೆರೆಯಲ್ಲಿ ನಟಿಸುವ ಸಮಯದಲ್ಲೇ ಯಶ್ ಹಾಗೂ ರಾಧಿಕಾ ನಡುವೆ ಸ್ನೇಹ ಶುರುವಾಗಿತ್ತು.
'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಜೋಡಿಯಾಗಿ ಒಟ್ಟಿಗೆ ನಟಿಸಿದ್ದರು. ಬಳಿಕ 'ಡ್ರಾಮಾ', 'ಮಿ. & ಮಿ. ರಾಮಾಚಾರಿ' ಹಾಗೂ 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನಿಮಾಗಳಲ್ಲಿ ಇಬ್ಬರು ಒಟ್ಟಿಗೆ ನಟಿಸಿ ಮೋಡಿ ಮಾಡಿದ್ದರು. ಸ್ಯಾಂಡಲ್‌ವುಡ್ ಸೂಪರ್ ಹಿಟ್ ಜೋಡಿ ಲಿಸ್ಟ್‌ನಲ್ಲಿ ಸೇರಿಕೊಂಡರು.
ರಾಧಿಕಾ ಪಂಡಿತ್ ಬೆಂಬಲದ ಬಗ್ಗೆ ನಟ ಯಶ್ ಸಾಕಷ್ಟು ಸಮಯದಲ್ಲಿ ಮಾತನಾಡಿದ್ದಾರೆ. ಇತ್ತೀಚೆಗೆ ಸಂದರ್ಶನದಲ್ಲಿ "ನನಗೆ ರಾಧಿಕಾ ರೀತಿಯ ಪತ್ನಿ ಸಿಕ್ಕಿದ್ದು ನನ್ನ ಅದೃಷ್ಟ. ಆಕೆ ಸದಾ ನನ್ನ ಬೆಂಬಲಕ್ಕೆ ನಿಲ್ಲುತ್ತಾಳೆ. "ರಾಧಿಕಾ ನನ್ನನ್ನು ಚೆನ್ನಾಗಿ ಅರಿತ್ತಿದ್ದಾಳೆ. ನಾವಿಬ್ಬರು ಒಟ್ಟೊಟ್ಟಿಗೆ ಬೆಳೆದವರು. ಅದು ಸರಿಯಾಗಿಯಾಗಿದೆ. ಆಕೆ ನನಗೆ ಮೊದಲು ಸ್ನೇಹಿತೆ. ಬಳಿಕ ಪತ್ನಿ ಆಗಿದ್ದು. ಲೈಫ್ ಪಾರ್ಟ್ನರ್ ಆಗಿ ನನಗೆ ಏನು ಇಷ್ಟ, ಯಾವುದು ಸಂತೋಷ ಕೊಡುತ್ತದೆ ಎನ್ನುವುದು ಅವಳಿಗೆ ಗೊತ್ತು" ಎಂದಿದ್ದರು.


Click it and Unblock the Notifications











