ನಟಿ ರಾಧಿಕಾ ಪಂಡಿತ್ ಮಗನಿಗೆ ಕೊಡಿಸಿದ ಈ ಮಿಠಾಯಿ ಯಾವುದು ಗೆಸ್ ಮಾಡ್ತೀರಾ?
ಮದುವೆ ಬಳಿಕ ರಾಧಿಕಾ ಪಂಡಿತ್ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಮಕ್ಕಳ ಲಾಲನೆ ಪಾಲನೆಗೆ ಹೆಚ್ಚಿನ ಸಮಯ ಮೀಸಲಿಟ್ಟಿದ್ದಾರೆ. ಮದುವೆ ಬಳಿಕ 'ಆದಿಲಕ್ಷ್ಮಿ ಪುರಾಣ' ಚಿತ್ರದಲ್ಲಿ ಮಾತ್ರ ನಟಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ರಾಧಿಕಾ ಸಣ್ಣ ಸಣ್ಣ ಖುಷಿಯ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ.
ಸದ್ಯ ಮಗನ ಜೊತೆಗಿನ ಫೋಟೊವೊಂದರನ್ನು ಹಂಚಿಕೊಂಡಿದ್ದಾರೆ. ಮಗ ಯಥರ್ವ್‌ಗೆ 'ಬೊಂಬೆ ಮಿಠಾಯಿ' ಕೊಡಿಸಿ ಸಂಭ್ರಮಿಸಿದ್ದಾರೆ. ತಮ್ಮ ಬಾಲ್ಯದ ದಿನಗಳಿಗೆ ಜಾರಿದ್ದಾರೆ. "ಚಿಕ್ಕವರಾಗಿದ್ದಾಗ, ದೂರದಿಂದ ಕೇಳಿಸುತ್ತಿದ್ದ ಆ ಪರಿಚಿತ ಧ್ವನಿ... ಅದನ್ನು ಕೇಳಿದ ಕ್ಷಣವೇ ಮನಸ್ಸು ಖುಷಿಯಿಂದ ತುಂಬುತ್ತಿತ್ತು. ಯಾಕೆಂದರೆ, ಏನು ಬರ್ತಿದೆ ಅಂತ ನಮಗೆ ಗೊತ್ತೇ ಇರುತ್ತಿತ್ತು. ಇಂದು ಅದೇ ಕ್ಷಣವನ್ನು ಯಥರ್ವ್ ಮೊದಲ ಬಾರಿ ಅನುಭವಿಸುತ್ತಿರುವುದನ್ನು ನೋಡೋದು ತುಂಬಾ ವಿಶೇಷ. ಅವನ ಕಣ್ಣಲ್ಲಿದ್ದ ಕುತೂಹಲ, ಮುಖದಲ್ಲಿದ್ದ ನಗು ಅಮೂಲ್ಯ. ಯಾವ ಸಿಹಿ ತಿಂಡಿ ಅಂತ ಗೆಸ್ ಮಾಡಿ ನೋಡೋಣ" ಎಂದು ಬರೆದುಕೊಂಡಿದ್ದಾರೆ.

ಒಂದ್ಕಾಲದಲ್ಲಿ 'ಬೊಂಬೆ ಮಿಠಾಯಿ' ಬಹಳ ಜನಪ್ರಿಯವಾಗಿತ್ತು. ಜಾತ್ರೆಗಳಲ್ಲಿ ಬೊಂಬೆಗಳನ್ನು ಹಿಡಿದು ಸಿಹಿಯಾದ ಮಿಠಾಯಿ ಮಾರಿಕೊಂಡು ಬರುವವರು ಕಂಡುಬರುತ್ತಿದ್ದರು. 80-90ರ ದಶಕಗಳಲ್ಲಿ ಮನೆಗಳ ಬಳಿ ಹೀಗೆ ಮಿಠಾಯಿ ಮಾರುವವರು ಬರುತ್ತಿದ್ದರು. 2000 ಇಸವಿಯ ಬಳಿಕ ಆ ಸಂಖ್ಯೆ ಕಮ್ಮಿ ಆಗುತ್ತಾ ಹೋಯಿತು. ಬೇರೆ ತರಹದ ಚಾಕಲೇಟ್, ತಿಂಡಿ ತಿನಿಸುಗಳ ಮುಂದೆ 'ಬೊಂಬೆ ಮಿಠಾಯಿ' ಕ್ರೇಜ್ ಕಮ್ಮಿ ಆಯಿತು.
ಇವತ್ತಿಗೂ ಅಪರೂಪಕ್ಕೆ ಎನ್ನುವಂತೆ ಅಲ್ಲೊಬ್ಬರು ಇಲ್ಲೊಬ್ಬರು 'ಬೊಂಬೆ ಮಿಠಾಯಿ' ಮಾರುವವರು ಕಂಡು ಬರುತ್ತಾರೆ. ಶಾಲೆಗಳ ಮುಂಭಾಗದಲ್ಲಿ ಬೊಂಬೆಯ ತಾಳಗಳನ್ನು ಹಿಡಿದು ಒತ್ತಿ ಶಬ್ಧ ಮಾಡಿ ಮಕ್ಕಳನ್ನು ಆಕರ್ಷಿಸುತ್ತಾರೆ. ಸದ್ಯ ಬೆಂಗಳೂರಿನ ಸುತ್ತಾಮುತ್ತಾ ನಾಲ್ಕೈದು ಮಂದಿ ಬೊಂಬೆ ಮಿಠಾಯಿ ವ್ಯಾಪಾರಿಗಳಿದ್ದಾರೆ. ಸಕ್ಕರೆ ಪಾಕಕ್ಕೆ ಬಣ್ಣಗಳನ್ನು ತುಂಬಿ ಅಂಟಿನ ಮಿಠಾಯಿಯನ್ನು ಬಿದಿರಿನ ಕಡ್ಡಿಗೆ ಸಿಕ್ಕಿಸಿ ಕೊಡುತ್ತಾರೆ. ಅದನ್ನು ನೋಡವುದು ಚೆಂದ.
ಇದೇ ಅಂಟಿನ ಮಿಠಾಯಿ ಚಿಕ್ಕ ಚಿಕ್ಕ ತುಂಡುಗಳಾಗಿ ಮಾಡಿ ಕೆಲವೇ ಕ್ಷಣಗಳಲ್ಲಿ ಸೈಕಲ್, ಗುಲಾಬಿ, ವಾಚ್, ನಕ್ಷತ್ರ, ಪಕ್ಷಿಯ ಆಕಾರದಲ್ಲಿ ಮಕ್ಕಳ ಕೈಗಿಡುತ್ತಾರೆ. ಆ ಸೊಬಗನ್ನು ನೋಡುವುದೇ ಚೆಂದ. ಹೂವಿನ ಆಕೃತಿಯ ಬಾಂಬೆ ಮಿಠಾಯಿಯನ್ನು ರಾಧಿಕಾ ಪಂಡಿತ್ ಮಗನಿಗೆ ಕೊಡಿಸಿದ್ದಾರೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಪೋಸ್ಟ್‌ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. 'ಬೊಂಬೆ ಮಿಠಾಯಿ' ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಇತ್ತೀಚೆಗೆ ಸ್ಟೈಲಿಶ್ ಲುಕ್‌ನಲ್ಲಿ ರಾಧಿಕಾ ಪಂಡಿತ್ ಹಂಚಿಕೊಂಡಿದ್ದ ಪೋಟೊಗಳು ವೈರಲ್ ಆಗಿತ್ತು. "ಪೋಸ್ ನೀಡುವ ಕಿರಿಕಿರಿ ಇಲ್ಲ, ಪೇಶನ್ಸ್ ಇರುವ ಫ್ರೆಂಡ್ ಇದ್ದರೆ ಸಾಕು" ಎನ್ನುವ ಕ್ಯಾಪ್ಷನ್ ಕೊಟ್ಟಿದ್ದರು. ಆ ಫೋಟೊಗಳು ಅಭಿಮಾನಿಗಳ ಗಮನ ಸೆಳೆದಿತ್ತು. ನಿಮ್ಮ ಸ್ಮೈಲ್ ಚೆನ್ನಾಗಿದೆ, ಫೋಟೊ ಕ್ಲಿಕ್ಕಿಸಿದ ವಂಶ್ ನಿಮ್ಮ ತಾಳ್ಮೆಗೆ ಹ್ಯಾಟ್ಸಾಪ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದರು.
'ನಂದಗೋಕುಲ' ಸೇರಿ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದ ರಾಧಿಕಾ ಪಂಡಿತ್ ಬಳಿಕ ಚಿತ್ರರಂಗ ಪ್ರವೇಶಿಸಿದ್ದರು. ಯಶ್ ಜೊತೆ 'ಡ್ರಾಮಾ', 'ಮಿಸ್ಟರ್ & ಮಿಸ್ಸೆಸ್ ರಾಮಾಚಾರಿ' ಹಾಗೂ 'ಸಂತು ಸ್ಟ್ರೈಟ್ ಫಾರ್ವಡ್' ಸಿನಿಮಾಗಳಲ್ಲಿ ರಾಧಿಕಾ ನಟಿಸಿದ್ದರು. ಹಲವು ಸಿನಿಮಾಗಳಲ್ಲಿ ಮಿಂಚಿ ಸ್ಯಾಂಡಲ್‌ವುಡ್ ಸಿಂಡ್ರೆಲಾ ಎಂದು ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದ್ದಾರೆ.
ರಾಧಿಕಾ ಪಂಡಿತ್ ಮತ್ತೆ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವುದು ಅಭಿಮಾನಿಗಳ ಆಸೆ. ಆಗಾಗ್ಗೆ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕಾಮೆಂಟ್ ಮಾಡುತ್ತಾರೆ. ರಾಧಿಕಾ ಕೂಡ ನೋಡೋಣ ಮುಂದಿನ ದಿನಗಳಲ್ಲಿ ಎನ್ನುವಂತೆ ಈ ಪ್ರಶ್ನೆಗೆ ಉತ್ತರಿಸುತ್ತಿದ್ದಾರೆ. ಸದ್ಯ ಯಶ್ ನಟನೆಯ 'ಟಾಕ್ಸಿಕ್' ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications











