"ನಾನು ಎಂದೆಂದಿಗೂ ತಂದೆಯ ಮಗಳು.. ಐರಾ, ಯಥರ್ವ್ ಕೂಡ": ರಾಧಿಕಾ ಪಂಡಿತ್
ವಿಶ್ವದಾದ್ಯಂತ ಜೂನ್ 3ನೇ ಭಾನುವಾರ ವಿಶ್ವ ಅಪ್ಪಂದಿರ ದಿನವಾಗಿ ಆಚರಿಸಲಾಗುತ್ತದೆ. ಮಕ್ಕಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುವ ತಂದೆಯನ್ನು ಸ್ಮರಿಸುವ ಸಲುವಾಗಿ ಆತನಿಗೆ ಅಭಿನಂದನೆ ಹಾಗೂ ಗೌರವ ಸಲ್ಲಿಸಲಾಗುತ್ತದೆ. ಸೆಲೆಬ್ರೆಟಿಗಳು ಕೂಡ ತಂದೆಯ ಜೊತೆಗಿನ ಅನುಬಂಧದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ನಟಿ ರಾಧಿಕಾ ಪಂಡಿತ್ ಕೂಡ ಇನ್‌ಸ್ಟಾಗ್ರಾಂನಲ್ಲಿ ಸ್ಪೆಷಲ್ ಫೋಟೊಗಳನ್ನು ತೇಲಿಬಿಟ್ಟಿದ್ದಾರೆ.
ಈ ಹಿಂದೆ ಕೂಡ ಸಾಕಷ್ಟು ಬಾರಿ ರಾಧಿಕಾ ಪಂಡಿತ್ ತಮ್ಮ ತಂದೆ ತಾಯಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅವರ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ವಿಶೇಷವಾದ ಪೋಸ್ಟ್ ಮಾಡುತ್ತಿರುತ್ತಾರೆ. ರಾಧಿಕಾ ತಂದೆ ಕೃಷ್ಣ ಪಂಡಿತ್. ವಿಶ್ವ ಅಪ್ಪಂದಿರ ದಿನದ ಪ್ರಯಕ್ತ "ನಾನು ಯಾವಾಗಲೂ ಅಪ್ಪನ ಮಗಳು, ಯಾವಾಗಲೂ ಎಲ್ಲದಕ್ಕೂ ಅವರ ಬಳಿ ಓಡುತ್ತೇನೆ.. (ಅಮ್ಮನಿಂದ ಯಾವುದಕ್ಕಾದರೂ ಅನುಮತಿ ಸಿಗದಿದ್ದಾಗ, ಸಲಹೆ ಕೇಳಲು, ಕೆಲವೊಮ್ಮೆ ಸುಮ್ಮನೆ ಮಾತನಾಡಲು) ಅವರೇ ನನ್ನ ಮಾರ್ಗದರ್ಶಿ, ನನ್ನ ಆಧಾರಸ್ಥಂಭ, ನನ್ನ ಹೀರೋ" ಎಂದು ರಾಧಿಕಾ ಬರೆದುಕೊಂಡಿದ್ದಾರೆ.

ಅದೇ ರೀತಿ "ಐರಾ ಮತ್ತು ಯಥರ್ವ್ ತಮ್ಮ ತಂದೆಯೊಂದಿಗೆ ಅದೇ ಬಂಧವನ್ನು ಹಂಚಿಕೊಂಡಿರುವುದನ್ನು ನೋಡುವುದಕ್ಕೆ ಖುಷಿಯಾಗುತ್ತದೆ. ತಂದೆಯ ದಿನದ ಶುಭಾಶಯಗಳು" ಎಂದು ಪೋಸ್ಟ್ ಮಾಡಿದ್ದಾರೆ. ರಾಧಿಕಾ ತಮ್ಮ ತಂದೆ, ತಮ್ಮ ತಂದೆ- ತಾಯಿ ಹಾಗೂ ಸಹೋದರ ಜೊತೆ ಕ್ಲಿಕ್ಕಿಸಿರುವ ಫೋಟೊಗಳ ಜೊತೆಗೆ ಯಶ್ ಮಕ್ಕಳಾದ ಐರಾ ಹಾಗೂ ಯಥರ್ವ್ ಜೊತೆಗಿರುವ ಸುಂದರ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ರಾಧಿಕಾ ಪಂಡಿತ್ ಸದ್ಯ ಸಿನಿಮಾಗಳಲ್ಲಿ ನಟಿಸೋದನ್ನು ಕಮ್ಮಿ ಮಾಡಿದ್ದಾರೆ.ಪತಿ, ಮಕ್ಕಳು ಅಂತ ಸ್ಯಾಂಡಲ್‌ವುಡ್ ಸಿಂಡ್ರೆಲಾ ಬ್ಯುಸಿಯಾಗಿದ್ದಾರೆ. ಮದುವೆ ನಂತರ 'ಆದಿಲಕ್ಷ್ಮಿ ಪುರಾಣ' ಚಿತ್ರದಲ್ಲಿ ಅವರು ನಟಿಸಿದ್ದರು. ಇದೇ ಕೊನೆ. ಮತ್ತೆ ಯಾವುದೇ ಸಿನಿಮಾದಲ್ಲೂ ನಟಿಸಲಿಲ್ಲ. ಅಭಿಮಾನಿಗಳು ನೆಚ್ಚಿನ ನಟಿಯನ್ನು ಮತ್ತೆ ತೆರೆಮೇಲೆ ನೋಡಲು ಕಾಯುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್
ನಟಿ ರಾಧಿಕಾ ಪಂಡಿತ್ ಮೊದಲಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್. ಹಬ್ಬ, ಹರಿದಿನಗಳ ಸಮಯದಲ್ಲಿ ತಮ್ಮ ವಿಶೇಷ ಪೋಸ್ಟ್‌ಗಳಿಂದ ಗಮನ ಸೆಳೆಯುತ್ತಾರೆ. ಅಭಿಮಾನಿಗಳ ಪೋಸ್ಟ್‌ಗಳಿಗೂ ಕೆಲವೊಮ್ಮೆ ಕಾಮೆಂಟ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಯಶ್- ರಾಧಿಕಾ ಪಂಡಿತ್ ರೀತಿಯಲ್ಲೇ ಅಭಿಯೊಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಫೋಟೊ, ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ಕಾಮೆಂಟ್ ಮಾಡಿ ರಾಧಿಕಾ ಮೆಚ್ಚುಗೆ ಸೂಚಿಸಿದ್ದರು.

ಕಿರುತೆರೆಯಿಂದ ಹಿರಿತೆರೆಗೆ
ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ನಟಿ ರಾಧಿಕಾ ಪಂಡಿತ್ ಮೊದಲಿಗೆ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಲು ಆರಂಭಿಸಿದರು. ನಂತರ ನಿಧಾನವಾಗಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. 'ಮೊಗ್ಗಿನ ಮನಸು' ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ಬಣ್ಣ ಹಚ್ಚಿದರು. ನಂತರ ನಿಧಾನವಾಗಿ ಒಂದೊಂದೇ ಅವಕಾಶಗಳು ಹುಡುಕಿ ಬಂದಿತ್ತು.
ಸ್ಯಾಂಡಲ್‌ವುಡ್ ಸಿಂಡ್ರೆಲಾ
ತಮ್ಮ ಸಹಜ ನಟನೆಯಿಂದ ರಾಧಿಕಾ ಪಂಡಿತ್ ಪ್ರೇಕ್ಷಕರ ಮನಗೆದ್ದರು. 'ಕೃಷ್ಣನ್ ಲವ್ ಸ್ಟೋರಿ', 'ಅದ್ಧೂರಿ', 'ಬಹದ್ಧೂರ್', 'ಡ್ರಾಮಾ', 'ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ', 'ಕಡ್ಡಿಪುಡಿ', 'ದೊಡ್ಮನೆ ಹುಡುಗ' ಸಿನಿಮಾಗಳಲ್ಲಿ ನಟಿಸಿ ಗೆದ್ದರು. ಅಭಿಮಾನಿಗಳು ನೆಚ್ಚಿನ ನಟಿಯನ್ನು ಸ್ಯಾಂಡಲ್‌ವುಡ್ ಸಿಂಡ್ರೆಲಾ ಎಂದು ಕರೆಯುತ್ತಾರೆ.
ಪ್ರೀತಿಸಿ ಮದುವೆ
'ಡ್ರಾಮಾ' ಚಿತ್ರದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾ ಶೂಟಿಂಗ್ ವೇಳೆ ಇಬ್ಬರ ನಡುವೆ ಪರಿಚಯವಾಗಿ ಆ ಸ್ನೇಹ ಪ್ರೀತಿಗೆ ತಿರುಗಿತ್ತು. 'ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ'ಮತ್ತೆ ಒಟ್ಟಿಗೆ ಮಿಂಚಿದ್ದರು. 2016ರಲ್ಲಿ ಜೋಡಿ ಅದ್ಧೂರಿಯಾಗಿ ಹಸೆಮಣೆ ಏರಿದ್ದರು. ಇಬ್ಬರನ್ನು ಮತ್ತೆ ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications











