ಅಭಿಮಾನಿಗಳಿಗೆ ರಾಧಿಕಾ ಪಂಡಿತ್ ವೀಕೆಂಡ್ ಟ್ರೀಟ್; ಎಕ್ಸ್‌ಕ್ಲೂಸಿವ್ ಫೋಟೊಗಳು ವೈರಲ್
ಮದುವೆ ಬಳಿಕ ರಾಧಿಕಾ ಪಂಡಿತ್ ಸಿನಿಮಾಗಳಿಂದ ದೂರ ಉಳಿದುಬಿಟ್ಟರು. ಫ್ಯಾಮಿಲಿಗೆ ಹೆಚ್ಚಿನ ಸಮಯ ಕೊಡುತ್ತಿದ್ದಾರೆ. ಮಗಳು, ಮಗನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದು ಆಗಾಗ್ಗೆ ಫೋಟೊ, ವೀಡಿಯೋ ಹಂಚಿಕೊಳ್ಳುತ್ತಾರೆ.
ಸದ್ಯ ರಾಧಿಕಾ ಪಂಡಿತ್ ಒಂದಷ್ಟು ಸೆಲ್ಫಿ ಫೋಟೊಗಳನ್ನು ಕೊಲಾಜ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಪೆಷಲ್ ವಿಡಿಯೋ ಹಂಚಿಕೊಂಡಿದ್ದಾರೆ. ಆಗಾಗ್ಗೆ ತಾವು ಕ್ಲಿಕ್ಕಿಸಿಕೊಂಡ ಸೆಲ್ಫಿ ಜೊತೆಗೆ ಪತಿ ಯಶ್ ಜೊತೆಗೆ ಕ್ಲಿಕ್ಕಿಸಿಕೊಂಡಿರುವ ಫೋಟೊಗಳು ಇದರಲ್ಲಿದೆ. 'ಕಡ್ಡಿಪುಡಿ' ಚಿತ್ರದ 'ಬೇರೆ ಯಾರೋ' ಹಾಡಿನ ಹಿನ್ನೆಲೆಯಲ್ಲಿ ಫೋಟೊಗಳನ್ನು ನೋಡಬಹುದು. ಸೂರಿ ನಿರ್ದೇಶನದ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಜೋಡಿಯಾಗಿ ರಾಧಿಕಾ ಪಂಡಿತ್ ನಟಿಸಿದ್ದರು. ಹರಿಕೃಷ್ಣ ಸಂಗೀತದಲ್ಲಿ ಜಯಂತ್ ಕಾಯ್ಕಿಣಿ ಬರೆದ ಈ ಹಾಡು ವಾಣಿ ಹರಿಕೃಷ್ಣ ಗಾಯನದಲ್ಲಿ ಹಿಟ್ ಆಗಿತ್ತು.

"ನನ್ನ ಸೆಲ್ಫಿಗಳನ್ನು ನೀವು ಬಹಳ ಮೆಚ್ಚಿಕೊಳ್ತೀರಾ. ನಿಮ್ಮೆಲ್ಲರಿಂದ ಅವುಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ, ನನ್ನ ನೆಚ್ಚಿನ ಗಾಯಕಿ ಮತ್ತು ಗೀತರಚನೆಕಾರರಿಂದ ನನ್ನ ನೆಚ್ಚಿನ ಹಾಡುಗಳಲ್ಲಿ ಒಂದರೊಂದಿಗೆ ಒಂದು ಸಣ್ಣ ಕಲೆಕ್ಷನ್ ಮಾಡಿದ್ದೀನಿ" ಎಂದು ಕ್ಯಾಪ್ಷನ್ ಕೊಟ್ಟು ವೀಡಿಯೋ ತೇಲಿ ಬಿಟ್ಟಿದ್ದಾರೆ. ಅದಕ್ಕೆ ಒಂದೇ ಗಂಟೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ.
ರಾಧಿಕಾ ಪಂಡಿತ್ ಹಾಗೂ ಯಶ್ ಪದೇ ಪದೆ ಪ್ರವಾಸಕ್ಕೆ ಹೋಗುತ್ತಾರೆ. ಈ ವೇಳೆ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿಗಳು ಇದರಲ್ಲಿದೆ. ಎಕ್ಸ್‌ಕ್ಲೂಸಿವ್ ಫೋಟೊಗಳನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನು ಕಾರಿನಲ್ಲಿ ಕುಳಿತಾಗ, ಎಲ್ಲಿಗೋ ಹೋಗಲು ಅಲಂಕಾರಗೊಂಡು ತಯಾರಾದಾಗ ರಾಧಿಕಾ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿಗಳನ್ನು ನೋಡಬಹುದು. ಪತಿ ಯಶ್ ಮುತ್ತು ಕೊಡುವಾಗಲು ರಾಧಿಕಾ ತಾವೇ ಫೋಟೊ ತೆಗೆದಿರುವುದನ್ನು ಗೊತ್ತಾಗುತ್ತದೆ.
ಮದುವೆ ಬಳಿಕ 'ಆದಿಲಕ್ಷ್ಮಿ ಪುರಾಣ' ಎಂಬ ಚಿತ್ರದಲ್ಲಿ ಮಾತ್ರ ರಾಧಿಕಾ ನಟಿಸಿದ್ದರು. ಇನ್ನುಳಿದಂತೆ ಕೆಲ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಳಿಗೆಗಳ ಉದ್ಘಾಟನೆ ಸೇರಿದಂತೆ ಕೆಲ ಕಾರ್ಯಕ್ರಮಗಳಿಗೆ ಹಾಜರಾಗುತ್ತಾರೆ. ಇನ್ನುಳಿದಂತೆ ಆಗೊಮ್ಮೆ ಈಗೊಮ್ಮೆ ಪತಿ ಯಶ್ ಜೊತೆ ಸ್ಯಾಂಡಲ್‌ವುಡ್ ಸಿಂಡ್ರೆಲಾ ದರ್ಶನ ಕೊಡುತ್ತಾರೆ. ಸದ್ಯ ನಟ ಯಶ್ 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡು ಊರೂರು ಸುತ್ತುತ್ತಿದ್ದಾರೆ. ಆದರೂ ಫ್ಯಾಮಿಲಿಗೆ ಟೈಮ್ ಕೊಡುವುದು ಮರೆಯುವುದಿಲ್ಲ.
ಇನ್ನುಳಿದಂತೆ ಮಗಳು ಐರಾ ಹಾಗೂ ಮಗ ಯಥರ್ವ್ ಜೊತೆ ರಾಧಿಕಾ ಇರುವ ಫೋಟೊ, ವೀಡಿಯೋ ಹಂಚಿಕೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ಮಕ್ಕಳ ಜೊತೆ ಕೂರ್ಗ್, ಮಡಿಕೇರಿಗೆ ತೆರಳಿ ಒಂದಷ್ಟು ಸಮಯ ಕಳೆದಿದ್ದರು. ಮಕ್ಕಳ ಜೊತೆ ರೆಸಾರ್ಟ್ ಒಂದರಲ್ಲಿ ಪ್ರಕೃತಿಯ ಮಧ್ಯೆ ಎಂಜಾಯ್ ಮಾಡಿದ್ದರು. ಅವರ ತಂದೆ- ತಾಯಿ ಸಾಥ್ ಸಿಕ್ಕಿತ್ತು. ಉಡುಪಿ ಜಿಲ್ಲೆಯ ಕೂಡ್ಲು ಫಾಲ್ಸ್ ಅಲ್ಲಿ ಚಾರಣ ಮಾಡಿದ್ದ ವೀಡಿಯೋವನ್ನು ಹಂಚಿಕೊಂಡಿದ್ದರು. ಪ್ರಕೃತಿ ಮಡಿಲಲ್ಲಿ ಮಕ್ಕಳ ಜೊತೆ ಮಗುವಾಗಿದ್ದರು.
ಯಶ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಿದ್ದರಿಂದ ಈ ವೇಳೆ ಫ್ಯಾಮಿಲಿ ಜೊತೆ ಕಾಣಿಸಿಕೊಂಡಿರಲಿಲ್ಲ. ಇನ್ನು ರಾಧಿಕಾ ಪಂಡಿತ್ ಅವರನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆಕೆ ಕೂಡ ಮತ್ತೆ ಬಣ್ಣ ಹಚ್ಚಿ ಕ್ಯಾಮರಾ ಮುಂದೆ ನಿಲ್ಲಲು ಉತ್ಸುಕರಾಗಿದ್ದಾರೆ. ಆದರೆ ಯಾವಾಗ ಎನ್ನುವುದು ಮಾತ್ರ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಅಭಿಮಾನಿಗಳು ನೆಚ್ಚಿನ ನಟಿಯನ್ನು ತೆರೆಮೇಲೆ ನೋಡುವ ಅವಕಾಶ ಸಿಗಲಿದೆ. ಸದ್ಯಕ್ಕೆ ತಮ್ಮ ಸಂಪೂರ್ಣ ಸಮಯವನ್ನು ಆಕೆ ಕುಟುಂಬಕ್ಕಾಗಿ ಮೀಸಲಿಟ್ಟಿದ್ದಾರೆ.


Click it and Unblock the Notifications