'ಯುವರತ್ನ' ಸೆಟ್ ನಲ್ಲಿ ರಾಘಣ್ಣ, ಭಟ್ಟರು: ಇಲ್ಲೊಂದು ಅನುಮಾನ.!
'ಯುವರತ್ನ' ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ. ಸ್ಯಾಂಡಲ್ ವುಡ್ ನ ಯಶಸ್ವಿ ಜೋಡಿ ಅಂತಾನೆ ಕರೆಸಿಕೊಳ್ಳುವ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ಜೋಡಿಯಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ.
ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಮೂರನೇ ಹಂತದ ಶೂಟಿಂಗ್ ನಲ್ಲಿ ನಿರತವಾಗಿದೆ. ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಕಾಲೇಜಿಗೆ ಹೋಗುವ ವಿದ್ಯಾರ್ಥಿಯಾಗಿ ಅಭಿನಯಿಸುತ್ತಿದ್ದಾರೆ. ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿರುವ ಅಪ್ಪು ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಸಾಕಷ್ಟು ವಿಶೇಷತೆಗಳಿಂದ ಗಮನ ಸೆಳೆಯುತ್ತಿರುವ 'ಯುವರತ್ನ' ಸದ್ಯ ಮತ್ತೊಂದು ವಿಚಾರದ ಮೂಲಕ ಸುದ್ದಿಯಾಗಿದೆ. ಅಂದ್ರೆ 'ಯುವರತ್ನ' ಸೆಟ್ ನಲ್ಲಿ ರಾಘವೇಂದ್ರ ರಾಜ್ ಕುಮಾರ್ ಮತ್ತು ಯೋಗರಾಜ್ ಭಟ್ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಂದ್ಹಾಗೆ ರಾಘಣ್ಣ ಮತ್ತು ಭಟ್ರು ಯುವರತ್ನನನ್ನು ಭೇಟಿಯಾಗಿದ್ದೇಕೆ? ಮುಂದೆ ಓದಿ...

ಯುವರತ್ನ ಚಿತ್ರದಲ್ಲಿ ರಾಘಣ್ಣ ನಟನೆ?
ಪವರ್ ಸ್ಟಾರ್ 'ಯುವರತ್ನ' ಸೆಟ್ ಗೆ ರಾಘವೇಂದ್ರ ರಾಜ್ ಕುಮಾರ್ ದಿಢೀರ್ ಎಂಟ್ರಿ ಕೊಟ್ಟಿದ್ದಾರೆ. ರಾಘಣ್ಣನ ಭೇಟಿ ಈಗ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ತಮ್ಮನ ಚಿತ್ರದಲ್ಲಿ ರಾಘವೇಂದ್ರ ರಾಜ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರಾ ಎನ್ನುವ ಅನುಮಾನ ಚಿತ್ರಪ್ರಿಯರಲ್ಲಿ ಕಾಡುತ್ತಿದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ರಾಘವೇಂದ್ರ ರಾಜ್ ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತ್ರಯಂಬಕ, ಪೊಗರು, ಆಡಿಸಿ ನೋಡು ಸಿನಿಮಾಗಳಲ್ಲಿ ಅಭಿನಸುತ್ತಿರುವ ರಾಘಣ್ಣ 'ಯುವರತ್ನ' ಚಿತ್ರದಲ್ಲೂ ಬಣ್ಣ ಹಚ್ಚಿದ್ರೆ ಅಚ್ಚರಿಯಲ್ಲ.

ಪುನೀತ್ ಗೆ ಭಟ್ಟರ ನಿರ್ದೇಶನ?
ವಿಶೇಷ ಅಂದ್ರೆ 'ಯುವರತ್ನ' ಸೆಟ್ ಗೆ ಯೋಗರಾಜ್ ಭಟ್ ಕೂಡ ಭೇಟಿ ನೀಡಿದ್ದಾರೆ. ಭಟ್ರು ಸರ್ಪ್ರೈಸ್ ಎಂಟ್ರಿ ಕೊಟ್ಟಿರುವುದು ಸಹ ಕುತೂಹಲ ಮೂಡಿಸಿದೆ. ಪವರ್ ಸ್ಟಾರ್ ಮುಂದಿನ ಸಿನಿಮಾ ಏನಾದ್ರು ಭಟ್ರು ನಿರ್ದೇಶನ ಮಾಡೋ ಪ್ಲಾನ್ ಇರಬಹುದಾ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಈ ಹಿಂದೆ ಪುನೀತ್ ಅಭಿನಯದ 'ಪರಮಾತ್ಮ' ಚಿತ್ರಕ್ಕೆ ಭಟ್ರು ಆಕ್ಷನ್ ಕಟ್ ಹೇಳಿದ್ರು. ಈಗ ಮತ್ತೊಮ್ಮೆ ಈ ಜೋಡಿ ಒಟ್ಟಿಗೆ ಕೆಲಸ ಮಾಡುತ್ತಾ ಎನ್ನುವ ಕುತೂಹಲ ಮೂಡಿದೆ.

ಮದುವೆ ಮುಗಿಸಿಕೊಂಡು ಬಂದ ಸಯೇಶಾ
ನಟಿ ಸಯೇಶಾ 'ಯುವರತ್ನ' ಸೆಟ್ ಗೆ ಹಾಜರಾಗಿದ್ದಾರೆ. ಇತ್ತೀಚಿಗಷ್ಟೆ ತಮಿಳು ನಟ ಆರ್ಯ ಜೊತೆ ವಿವಾಹವಾಗಿದ್ದ ಮುಂಬೈನ ಈ ನಟಿ ಸಯೇಶಾ ಆಗಲೇ 'ಯುವರತ್ನ' ಟೀಂ ಸೇರಿಕೊಂಡಿದ್ದಾರೆ. 'ಯುವರತ್ನ' ಸೆಟ್ ನಲ್ಲಿ ಕೆಂಪು ಬಣ್ಣದ ಕಾಸ್ಟ್ಯೂಮ್ ಧರಿಸಿರುವ ಸಯೇಶಾ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ರಾಜಕುಮಾರ ಕಾಂಬಿನೇಷನ್ ಚಿತ್ರ
ಬೊಂಬೆ ಹಾಡಿನ ಮೂಲಕ ಕನ್ನಡಾಭಿಮಾನಿಗಳನ್ನು ಮೋಡಿ ಮಾಡಿದ್ದ ಈ ಜೋಡಿ ಈಗ 'ಯುವರತ್ನ' ಮೂಲಕ ಮತ್ತೆ ಒಂದಾಗಿ ಬರುತ್ತಿರುವುದು ಅಪ್ಪು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಇನ್ನು ಚಿತ್ರದಲ್ಲಿ ರಾಧಿಕಾ ಶರತ್ ಕುಮಾರ್, ಧನಂಜಯ್, ವಸಿಷ್ಠ ಸಿಂಹ ಸೇರಿದಂತೆ ದೊಡ್ಡ ಕಲಾವಿದರ ದಂಡೆ ಇದೆ. ಹರಿಕೃಷ್ಣ ಸಂಗೀತ ಹಾಗೂ ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ಈ ಸಿನಿಮಾ ತಯಾರಾಗುತ್ತಿದೆ.


Click it and Unblock the Notifications











