ನನ್ನನ್ನು ಕರೆದುಕೊಂಡು ಅಪ್ಪುವನ್ನು ವಾಪಸ್ ಕಳಿಸಿಕೊಡಿ: ರಾಘಣ್ಣ ಕಣ್ಣೀರು
ಪುನೀತ್ ರಾಜ್‌ಕುಮಾರ್ ನಿಧನವಾದಾಗಿನಿಂತಲೂ ರಾಘವೇಂದ್ರ ರಾಜ್‌ಕುಮಾರ್ ಬಹುತೇಕ ಸ್ಥಿತಪ್ರಜ್ಞರಾಗಿದ್ದರು. ಬಹಿರಂಗವಾಗಿ ಅವರು ಕಣ್ಣೀರು ಹಾಕಿರಲಿಲ್ಲ. ಆದರೆ ಇಂದು ಅವರ ದುಃಖದ ಕಟ್ಟೆ ಒಡೆದು ಕಣ್ಣೀರು ಧಾರಾಕಾರವಾಯಿತು.
'ಪುನೀತ್ ನಮನ' ಕಾರ್ಯಕ್ರಮದಲ್ಲಿ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್, ''ನಮಗೆ ಬದುಕಲು ನಾಚಿಕೆ ಆಗುತ್ತಿದೆ. ಕನ್ನಡಿ ನೋಡಿದರೆ, ಅವನು ನಿನಗೆ ಹೃದಯಕ್ಕೆ ಫೇಸ್ ಮೇಕರ್ ಹಾಕಿಸಿ ಬದುಕಿಸಿದ, ನೀನು ಉಳಿದು ಅವನನ್ನು ಕಳಿಸಿಕೊಟ್ಟುಬಿಟ್ಟೆಯಾ' ಎಂದು ಯಾರೋ ಕೇಳಿದಂತಾಗಿ ಬದುಕುವುದೇ ಬೇಡ ಎನಿಸುತ್ತದೆ'' ಎಂದು ಕಣ್ಣೀರು ಸುರಿಸಿದರು ರಾಘವೇಂದ್ರ ರಾಜ್‌ಕುಮಾರ್.
''ನಾನು ಮೊದಲಿಗೆ ಶಿವರಾಜ್ ಕುಮಾರ್ ಮುಖ ನೋಡಿದೆ, ನಮ್ಮಿಬ್ಬರಿಗೂ ಒಬ್ಬರೊಬ್ಬರ ಮುಖ ನೋಡಲು ಸಹ ಆಗುತ್ತಿಲ್ಲ. ನಾವಿಬ್ಬರೂ ಬದುಕಿ ಚಿಕ್ಕವನಾದ ಅವನನ್ನು ಕಳಿಸಿಕೊಡಬೇಕಾ? ನಮಗೆ ಬದುಕಲು ನಾಚಿಕೆ ಆಗುತ್ತಿದೆ. ಅವನು ಬೇಗ ಹೋಗಿ ನಮಗೆಲ್ಲ ಪಾಠ ಮಾಡಿದ್ದಾನೆ, ನಾನು, ನಮ್ಮಣ್ಣ ಹೇಗಿರಬೇಕೆಂದು ಹೇಳಿ ಹೋಗಿದ್ದಾನೆ. ನನ್ನ ತಮ್ಮನಾಗಿ ಬಂದ ಆದರೆ ಅಪ್ಪನಾಗಿ ಹೋಗಿಬಿಟ್ಟ'' ಎಂದು ಅಳುತ್ತಲೇ ಹೇಳಿದರು ರಾಘವೇಂದ್ರ ರಾಜ್‌ಕುಮಾರ್.

''ಈ ಇಪ್ಪತ್ತು ದಿನ ನಾನು ದುಃಖ ತಡೆದುಕೊಂಡಿದ್ದೆ. ನಾನು ಅತ್ತರೆ ಅಪ್ಪುವಿನ ಹೆಂಡತಿ, ಮಕ್ಕಳು ನೊಂದುಕೊಳ್ಳುತ್ತವೆ. ಆದರೆ ಇಂದು ಆಗಲಿಲ್ಲ. ನನ್ನ ಕೈಯಲ್ಲಿ ದುಃಖ ತಡೆಯಲು ಆಗುತ್ತಿಲ್ಲ ದಯಮಾಡಿ ಕ್ಷಮಿಸಿ. ಈ ದುಃಖವನ್ನು ಅಪ್ಪ-ಅಮ್ಮನ ಬಳಿ ಹೇಳಿಕೊಳ್ಳೋಣವೆಂದರೆ ಅವರ ಪಕ್ಕದಲ್ಲಿಯೇ ಅಪ್ಪುವನ್ನು ಮಣ್ಣು ಮಾಡಿಬಿಟ್ಟಿದ್ದೇವೆ. ನನ್ನ ಮಗನೆ ನಾನಲ್ಲಿಗೆ ಬರುತ್ತೇನೆ ನೀನು ವಾಪಸ್ ಬಂದುಬಿಡೋ'' ಎಂದು ಅತ್ತರು ರಾಘಣ್ಣ.
ಅವನು ಪವರ್‌ನಂತಿದ್ದ ನಾವೆಲ್ಲ ಬಲ್ಬ್‌ಗಳು ಅಷ್ಟೆ ಪವರ್ ಹೋದಮೇಲೆ ನಾವೇನು ಮಾಡುವುದು. ಅವನು ಅಲ್ಲಿ ಮಲಗಿದ್ದಾಗಲೂ ಸುತ್ತಲೂ ಪವರ್‌ಫುಲ್ ಜನರನ್ನೇ ಇರಿಸಿಕೊಂಡಿದ್ದ. ಸರ್ಕಾರ, ಪೊಲೀಸರು, ಅಭಿಮಾನಿಗಳು, ಮೀಡಿಯಾ ಎಲ್ಲರನ್ನೂ ತನ್ನ ಬಳಿಯೇ ಇಟ್ಟುಕೊಂಡಿದ್ದ ಎಲ್ಲದರಲ್ಲೂ ಪವರ್ ಅವನು. ಇದೇ ವೇದಿಕೆಯಲ್ಲಿ ರಾಜ್‌ಕುಮಾರ್ ಅವರ ಕುರಿತ ಕಾರ್ಯಕ್ರಮವೊಂದರಲ್ಲಿ ನನ್ನ ಆಯಷನ್ನು ನಿನಗೆ ಕೊಡುತ್ತೇನೆ ಎಂದಿದ್ದೆ ಆದರೆ ಅವನ ಆಯಸ್ಸನ್ನು ನನಗೆ ಕೊಟ್ಟು ಹೋಗಿಬಿಟ್ಟ'' ಎಂದರು ರಾಘಣ್ಣ.
''ನಾವು ಅಪ್ಪುವನ್ನು ಹೂತಿಲ್ಲ ಬಿತ್ತಿದ್ದೇವೆ. ಅಪ್ಪುವಿನಂತೆ ಹೃದಯ ಇರುವ ಇನ್ನೂ ಸಾವಿರಾರು ಜನರು ಬರುತ್ತಾರೆಂಬ ನಂಬಿಕೆ ನನಗೆ ಇದೆ'' ಎಂದರು ರಾಘವೇಂದ್ರ ರಾಜ್‌ಕುಮಾರ್. ರಾಘಣ್ಣನ ಮಾತು ಕೇಳಿ ವೇದಿಕೆ ಮುಂದೆ ಕುಳಿತಿದ್ದ ಶಿವರಾಜ್ ಕುಮಾರ್ ದುಃಖ ತಡೆಯಲಾರದೆ ಬಿಕ್ಕಿ ಬಿಕ್ಕಿ ಅತ್ತರು. ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೂ ಅಳಲು ಆರಂಭಿಸಿದರು.
ವೇದಿಕೆ ಇಳಿದು ಬಂದ ರಾಘಣ್ಣನನ್ನು ಅವರ ಮಕ್ಕಳು, ಸಿನಿ ರಂಗದ ಗಣ್ಯರು ಕುಟುಂಬಸ್ಥರು ಸಮಾಧಾನ ಮಾಡಿದರು.


Click it and Unblock the Notifications











