twitter
    For Quick Alerts
    ALLOW NOTIFICATIONS  
    For Daily Alerts

    ಪುನೀತ್ ಅಭಿಮಾನಿಗಳಲ್ಲಿ ರಾಘಣ್ಣ ಮನವಿ: ನೆರವೇರಿಸುತ್ತಾರಾ ಅಪ್ಪು ಅಭಿಮಾನಿಗಳು?

    |

    ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದೆ. ಮಾರ್ಚ್ 17ರಂದು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಪುನೀತ್ ಅಭಿಮಾನಿಗಳು ಈಗಿನಿಂದಲೇ ಸಜ್ಜಾಗುತ್ತಿದ್ದಾರೆ.

    ಆದರೆ ಇದೇ ಸಮಯದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಅಣ್ಣ ರಾಘವೇಂದ್ರ ರಾಜ್‌ಕುಮಾರ್, ಪುನೀತ್ ಅಭಿಮಾನಿಗಳಲ್ಲಿ ಅರ್ಥಪೂರ್ಣ ಮನವಿಯೊಂದನ್ನು ಮಾಡಿದ್ದಾರೆ. ದೊಡ್ಮನೆಯಿಂದ ಬಂದ ಈ ಮನವಿಯನ್ನು ಅಭಿಮಾನಿಗಳು ನೆರವೇರಿಸುತ್ತಾರಾ ನೋಡಬೇಕಿದೆ.

    ''ಪುನೀತ್ ರಾಜ್‌ಕುಮಾರ್ ಅನ್ನು ನೋಡಲು ಎಲ್ಲೆಲ್ಲಿಂದಲೋ ಜನ ಬರುತ್ತಿದ್ದಾರೆ. 3,000 ಕಿ.ಮೀ ಸೈಕಲ್ ತುಳಿದುಕೊಂಡು ಬರುತ್ತಿದ್ದಾರೆ. 500 ಕಿ.ಮೀ ಓಡಿಕೊಂಡು ಮಹಿಳೆಯೊಬ್ಬರು ಬಂದಿದ್ದಾರೆ. ಅಂಗವಿಕಲರೊಬ್ಬರು ನಡೆದುಕೊಂಡು ಬರುತ್ತಿದ್ದಾರೆ. ಅಪ್ಪುಗಾಗಿ ಇವರೆಲ್ಲ ಇಷ್ಟೋಂದು ಮಾಡಿದ್ದಾರೆ. ನಾವು ಇವರಿಗೆಲ್ಲ ಏನಾದರೂ ಮಾಡಬೇಕಾದ ಸಮಯ ಬಂದಿದೆ'' ಎಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದರು.

    ''ಅಪ್ಪು ಇಂದಾಗಿ ಇಡೀಯ ದೇಶಕ್ಕೆ ಕರ್ನಾಟಕದ ಹೆಸರು ಇನ್ನಷ್ಟು ಗೊತ್ತಾಯಿತು. ಬೆಂಗಳೂರೆಂದರೆ, ಅಪ್ಪು ಇದ್ರಲ್ಲಾ ಆ ಊರ ಎಂದು ಕೇಳುತ್ತಿದ್ದಾರೆ. ನಾನು ಹೊರಗಡೆ ಬಂದಾಗ ಅಗೋ ಅಣ್ಣಾವ್ರ ಮಗ ಎನ್ನುತ್ತಿದ್ದರು. ಈಗ ನೆರೆ-ಹೊರೆಯ ಸಿನಿಮಾ ಉದ್ಯಮದವರು ಅಪ್ಪುವಿನ ಅಣ್ಣ ಎಂದು ಕರೆಯುತ್ತಾರೆ. ಅವನ ಈ ಒಳ್ಳೆಯ ಹೆಸರನ್ನು ಉಳಿಸಿಕೊಂಡು ಹೋಗಬೇಕಾದುದು ನಮ್ಮ ಜವಾಬ್ದಾರಿ'' ಎಂದಿದ್ದಾರೆ ರಾಘಣ್ಣ.

    ಅಪ್ಪು ಅಭಿಮಾನಿಗಳೆಲ್ಲರೂ ಗಿಡ ನೆಡಿ: ರಾಘಣ್ಣ ಮನವಿ

    ಅಪ್ಪು ಅಭಿಮಾನಿಗಳೆಲ್ಲರೂ ಗಿಡ ನೆಡಿ: ರಾಘಣ್ಣ ಮನವಿ

    ''ಪುನೀತ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತಾ ಎಲ್ಲ ಅಭಿಮಾನಿಗಳು ಎಲ್ಲೆಡೆ ಒಂದೊಂದು ಗಿಡ ನಡಿ. ಆ ಗಿಡಕ್ಕೆ ನಿಮ್ಮದೇ ಹೆಸರಿಟ್ಟುಕೊಳ್ಳಿ. ಆ ಗಿಡವನ್ನು ಎರಡು ವರ್ಷ ನೋಡಿಕೊಳ್ಳಿ. ನಾನು ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತೇನೆ. ಇಪ್ಪತ್ತು ವರ್ಷ ಕಳೆದ ಬಳಿಕ ಆ ಒಂದು ಲಕ್ಷ ಮರಗಳು ಹೇಗೆ ಕಾಣಬಹುದು, ಎಷ್ಟು ಜನರಿಗೆ ನೆರಳಾಗಬಹುದು ಊಹಿಸಿ. ನಾವು ಮುಂದಿನ ಪೀಳಿಗೆಗೆ ಏನಾದರೂ ಕೊಡಬೇಕು. ಅಪ್ಪುವನ್ನು ಕಳೆದುಕೊಂಡ ಬಳಿಕವಾದರೂ ನಾವು ಬುದ್ಧಿ ಕಲಿಯಬೇಕು'' ಎಂದಿದ್ದಾರೆ ರಾಘಣ್ಣ.

    ''ನಮಗಾಗಿ ಸಾಕಷ್ಟು ಮಾಡಿದ್ದೀರಿ, ಇನ್ನು ಜನಕ್ಕಾಗಿ ಮಾಡೋಣ ಬನ್ನಿ''

    ''ನಮಗಾಗಿ ಸಾಕಷ್ಟು ಮಾಡಿದ್ದೀರಿ, ಇನ್ನು ಜನಕ್ಕಾಗಿ ಮಾಡೋಣ ಬನ್ನಿ''

    ''ಅಭಿಮಾನಿಗಳನ್ನು ನಮ್ಮ ಸಿನಿಮಾ ನೋಡಿ, ಟೀಸರ್ ನೋಡಿ ಇದನ್ನೇ ಮಾಡುತ್ತಿದ್ದೇವೆ. ಎಷ್ಟು ವರ್ಷ ಅಂತ ನಾವಿದನ್ನು ಮಾಡುವುದು. ಸಾಕು ನಮಗೆ ನೀವು ಸಾಕಷ್ಟು ಮಾಡಿದ್ದೀರ, ನಾವು ನಿಮಗೆ ವಾಪಸ್ ಏನಾದರೂ ಮಾಡಬೇಕಿದೆ. ಅಪ್ಪುವನ್ನು ಈ ಭೂಮಿಗೆ ನೀಡಿದ್ದೇವೆ. ಆ ಭೂಮಿಗಾಗಿ ನಾವು ಏನಾದರೂ ಒಳಿತು ಮಾಡೋಣ. ಹಾಗಾಗಿ ಅಪ್ಪುವಿನ ಈ ಹುಟ್ಟುಹಬ್ಬ ಬರುವುದರೊಳಗೆ ಪ್ರತಿಯೊಬ್ಬ ಅಭಿಮಾನಿಯೂ ಒಂದೊಂದು ಗಿಡ ನೆಡಬೇಕು. ಆ ಮೂಲಕ ಒಂದು ಲಕ್ಷ ಗಿಡವನ್ನಾದರೂ ನಾವು ನೆಡಬೇಕು ಎಂಬುದು ನನ್ನ ಆಸೆ'' ಎಂದಿದ್ದಾರೆ ರಾಘವೇಂದ್ರ ರಾಜ್‌ಕುಮಾರ್.

    ನನ್ನ ಬಾಯಿಂದ ಇದನ್ನೆಲ್ಲ ಅಪ್ಪು ಹೇಳಿಸುತ್ತಿರಬಹುದು: ರಾಘಣ್ಣ

    ನನ್ನ ಬಾಯಿಂದ ಇದನ್ನೆಲ್ಲ ಅಪ್ಪು ಹೇಳಿಸುತ್ತಿರಬಹುದು: ರಾಘಣ್ಣ

    ''ಅ ಗಿಡ ನೆಟ್ಟ ನೆರಳಲ್ಲಿ ಅಪ್ಪು ನಮಗೆ ಸಿಗಬಹುದು. ಇದೇ ಕಾರಣಕ್ಕೋ ಏನೋ ಅವನು 'ಗಂಧದ ಗುಡಿ' ಮಾಡಿದನೋ ಏನೋ? ಇದನ್ನೆಲ್ಲ ಹೇಳಲು ಅಪ್ಪು ಇಲ್ಲ ಅವನೇ ನನ್ನ ಬಾಯಲ್ಲಿ ಇದನ್ನೆಲ್ಲ ನಿಮಗೆ ಹೇಳಿಸುತ್ತಿದ್ದಾನೆ ಎಂದು ನಾನು ನಂಬಿದ್ದೀನಿ. ಗಿಡ ನೆಡುವ ಪುಣ್ಯ ಅವನ ಅಭಿಮಾನಿಗಳಿಗೆ ಪ್ರಾಪ್ತಿ ಆಗಬೇಕು. ಒಮ್ಮೆ ಯೋಚಿಸಿ, ಅದೆಲ್ಲೋ ಮೂಲೆಯಲ್ಲಿ ಯಾರೋ ಒಬ್ಬ, 'ಅದ್ಯಾವುದಯ್ಯ ಆ ಊರು ಯಾರೋ ಒಬ್ಬ ವ್ಯಕ್ತಿಗಾಗಿ ಒಂದು ಲಕ್ಷ ಗಿಡ ನೆಟ್ಟರಂತೆ' ಎಂದರೆ ನಮ್ಮ ಊರಿನ ಘನತೆ ಎಷ್ಟು ಎತ್ತರ ಏರಬಹುದು ಒಮ್ಮೆ ಊಹಿಸಿ. ನನ್ನ ತಮ್ಮನ ಬದುಕನ್ನು ಮುಂದಿನ ಪೀಳಿಗೆಗೂ ಸಹಾಯವಾಗುವಂತೆ ನಾವು ಬಳಸಿಕೊಳ್ಳಬೇಕು ಎಂಬುದು ನನ್ನ ಆಸೆ. ಅವನಿಂದ ಯಾವಾಗಲೂ ಇನ್ನೊಬ್ಬರಿಗೆ ಒಳ್ಳೆಯದೇ ಆಗಬೇಕು'' ಎಂದರು ರಾಘವೇಂದ್ರ ರಾಜ್‌ಕುಮಾರ್.

    ದೊಡ್ಮನೆ ಮಾತೆಂದರೆ ಅಭಿಮಾನಿಗಳಿಗೆ ವೇದ ವಾಕ್ಯ

    ದೊಡ್ಮನೆ ಮಾತೆಂದರೆ ಅಭಿಮಾನಿಗಳಿಗೆ ವೇದ ವಾಕ್ಯ

    ದೊಡ್ಮನೆಯವರು ಎಂದೂ ತಮಗಾಗಿ ಏನನ್ನೂ ಕೇಳಿಕೊಂಡವರಲ್ಲ. ಕೇಳಿಕೊಂಡಿದ್ದೆಲ್ಲ ಜನರಿಗಾಗಿ. ಹಾಗಾಗಿಯೇ ದೊಡ್ಮನೆ ಮಾತೆಂದರೆ ಅಭಿಮಾನಿಗಳಿಗೆ ವೇದ ವಾಕ್ಯ. ಅದರಲ್ಲಿಯೂ ಕರುನಾಡ ನೆಚ್ಚಿನ ಕಣ್ಮಣಿ ಪುನೀತ್ ಇಲ್ಲವಾಗಿರುವ ಈ ಸಮಯದಲ್ಲಿ ಪುನೀತ್ ಅವರ ಅಣ್ಣ ರಾಘವೇಂದ್ರ ರಾಜ್‌ಕುಮಾರ್ ಅಪ್ಪುಗಾಗಿ ಮಾಡಿದ ಮನವಿಯನ್ನು ಅಭಿಮಾನಿಗಳು ಈಡೇರಿಸದೇ ಬಿಡುವುದಿಲ್ಲ. ರಾಘವೇಂದ್ರ ರಾಜ್‌ಕುಮಾರ್ ಕೇಳಿದ್ದು ಕೇವಲ ಒಂದು ಲಕ್ಷ ಸಸಿ ಆದರೆ ಅಭಿಮಾನಿಗಳು ಹತ್ತು ಲಕ್ಷ ಸಸಿ ನೆಟ್ಟು ಅಪ್ಪು ಹೆಸರನ್ನು ಚಿರಸ್ಥಾಯಿ ಮಾಡುತ್ತಾರೆನ್ನುವ ನಿರೀಕ್ಷೆ ಇದೆ.

    English summary
    Raghavendra Rajkumar request Puneeth Rajkumar fans to plant saplings for Appu's Birthday.
    Tuesday, January 25, 2022, 21:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X