ಹಾಲು-ತುಪ್ಪ ಬಿಟ್ಟು ತಮ್ಮನ ಬಗ್ಗೆ ಹೆಮ್ಮೆಯ ಮಾತಾಡಿದ ರಾಘವೇಂದ್ರ ರಾಜ್‌ಕುಮಾರ್
ಪುನೀತ್ ರಾಜ್‌ಕುಮಾರ್ ಸಮಾಧಿಗೆ ಹಾಲು-ತುಪ್ಪ ಕಾರ್ಯವನ್ನು ಕುಟುಂಬಸ್ಥರು ಇಂದು ಮುಗಿಸಿದ್ದಾರೆ. ಮೂರು ಬಸ್ಸುಗಳಲ್ಲಿ ಪುನೀತ್ ಕುಟುಂಬಸ್ಥರು ಇಂದು ಕಂಠೀರವ ಸ್ಟುಡಿಯೋಗೆ ಆಗಮಿಸಿ ಕಾರ್ಯದಲ್ಲಿ ಭಾಗವಹಿಸಿದರು.
ಕಾರ್ಯದ ನಂತರ ಮಾಧ್ಯಮಗಳೊಟ್ಟಿಗೆ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್, ''ಐದನೇ ದಿನ ಆಯ್ತು, ಹನ್ನೊಂದನೇ ದಿನ ಆಗುತ್ತೆ, ಒಂದು ವರ್ಷವಾಗುತ್ತೆ, ಐದು ವರ್ಷವಾಗುತ್ತೆ ಹೀಗೆ ಪ್ರತಿವರ್ಷವೂ ಆಗುತ್ತಲೇ ಇರುತ್ತದೆ. ಇದೇ ನೋವಲ್ಲಿ ನಾವು ಬದುಕಿರಬೇಕು ಅಷ್ಟೆ'' ಎಂದು ನೋವು ತುಂಬಿದ ದನಿಯಲ್ಲಿ ಹೇಳಿದರು.
''ಅಭಿಮಾನಿಗಳೊಂದಿಗೆ ದುಃಖ ಹಂಚಿಕೊಳ್ಳಲು ಸಾಧ್ಯವಿಲ್ಲ, ಅವರು ಈಗಾಗಲೇ ತೀವ್ರ ದುಃಖದಲ್ಲಿದ್ದಾರೆ. ಹಾಗಾಗಿ ನಾವು ಕುಟುಂಬಸ್ಥರೆಲ್ಲ ಈ ವಿಷಾದವನ್ನು ಅನುಭವಿಸಲು ದಾರಿ ಕಂಡುಕೊಂಡಿದ್ದೇವೆ, ನಮ್ಮ ಮನಸ್ಸುಗಳಿಗೆ ನಾವೇ ಸಾಂತ್ವ ಹೇಳಿಕೊಳ್ಳಲು ಹಾದಿ ಕಂಡುಕೊಂಡಿದ್ದೇವೆ'' ಎಂದರು ರಾಘವೇಂದ್ರ ರಾಜ್‌ಕುಮಾರ್.
''ಅಪ್ಪಾಗಿ ತಮ್ಮ 75ನೇ ವರ್ಷಕ್ಕೆ ನಿಧನರಾದರು. ಅವರಿಗೆ ದೇವರು ಅಷ್ಟು ಸಮಯ ಕೊಟ್ಟಿದ್ದರು. ನೀವು ಇಷ್ಟು ವರ್ಷದಲ್ಲಿ ಸಾಧನೆ ಮಾಡಿ, ಜನರ ಪ್ರೀತಿ ಗೆಲ್ಲಿ, ಕಲಾ ಸೇವೆ ಮಾಡಿ ಎಂದಿದ್ದರು. ಅವರು ಅಷ್ಟು ವರ್ಷದಲ್ಲಿ ಸೇವೆ ಮುಗಿಸಿ ಹೋದರು. ಆದರೆ ಪುನೀತ್‌ಗೆ 45 ವರ್ಷವಷ್ಟೆ ನೀಡಿದ್ದರು. ಹಾಗಾಗಿ ಅವನು ಬೇಗ-ಬೇಗ ಎಲ್ಲ ಕೆಲಸ ಮಾಡಿಬಿಟ್ಟ. ಜನರ ಪ್ರೀತಿಯನ್ನು ಅತ್ಯಂತ ಬೇಗ ಪಡೆದುಕೊಂಡ, ಮಾಡಬೇಕಾದ ಕೆಲಸಗಳನ್ನು ಚಕ-ಚಕನೇ ಮುಗಿಸಿದ. ಪ್ರಶಸ್ತಿಗಳನ್ನು ಗೆದ್ದು ಕೊಂಡ ಈಗ ಹೋಗಿದ್ದಾನೆ. ವಿವೇಕಾನಂದರಿಗೆ ಇನ್ನೂ ಕಡಿಮೆ ಅವಧಿ ಇತ್ತು ಅವರು ಅತ್ಯುನ್ನತ ಸಾಧನೆ ಮಾಡಿ ಹೋದರು'' ಎಂದು ಸಾಂತ್ವನ ತಂದುಕೊಳ್ಳಲು ಕಂಡುಕೊಂಡ ಫಿಲಾಸಫಿಯನ್ನು ಮಾಧ್ಯಮಗಳ ಮುಂದೆ ತೆರೆದಿಟ್ಟರು ರಾಘವೇಂದ್ರ ರಾಜ್‌ಕುಮಾರ್.

ಅಪ್ಪುವಿನಿಂದ ನಾಲ್ಕು ಜನ ಜಗತ್ತು ನೋಡುತ್ತಿದ್ದಾರೆ: ರಾಘವೇಂದ್ರ ರಾಜ್‌ಕುಮಾರ್
''ಅಪ್ಪು ಬಗ್ಗೆ ನಮಗೆಲ್ಲ ಹೆಮ್ಮೆಯಿದೆ, ಅಪ್ಪಾಜಿಯ ಎರಡು ಕಣ್ಣನ್ನು ಇಬ್ಬರಿಗಷ್ಟೆ ನೀಡಿದ್ದರು. ಈಗ ನೋಡಿ ಅಪ್ಪುವಿನ ಎರಡು ಕಣ್ಣನ್ನು ನಾಲ್ವರಿಗೆ ನೀಡಿದ್ದಾರೆ ಅಲ್ಲಿಯೂ ಅಪ್ಪು ಶ್ರೇಷ್ಠನಾಗಿದ್ದಾನೆ ನೋಡಿ. ಅಪ್ಪುವಿನ ಕಣ್ಣುಗಳನ್ನು ನಾಲ್ಕು ಜನರಿಗೆ ಅಳವಡಿಸಲಾಗಿದೆ. ಅಪ್ಪು ಅಲ್ಲಿಯೂ ದೊಡ್ಡವನಾಗಿದ್ದಾನೆ, ನಮೆಲ್ಲ ಮಾದರಿ ಆಗಿದ್ದಾನೆ. ದೊಡ್ಡ ಸಂದೇಶವೊಂದನ್ನು ನೀಡಿದ್ದಾನೆ. ಅವನ ದಾರಿಯಲ್ಲಿ ನಾವೆಲ್ಲ ಸಾಗಿದರೆ ದೇಶದಲ್ಲಿ ಅಂಧರೇ ಇರುವುದಿಲ್ಲ'' ಎಂದಿದ್ದಾರೆ ರಾಘವೇಂದ್ರ ರಾಜ್‌ಕುಮಾರ್.

ಸಿಎಂ ನಮ್ಮ ಕುಟುಂಬ ಸದಸ್ಯರಂತೆ ಜೊತೆಗಿದ್ದರು: ರಾಘಣ್ಣ
''ಅಭಿಮಾನಿಗಳಿಗೆ ಮಾಧ್ಯಮದವರಿಗೆ, ಸರ್ಕಾರಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಸಿಎಂ ಅಂತೂ ಘಟನೆ ಆದ ಸಮಯದಿಂದಲೂ ನಮ್ಮ ಜೊತೆ ಇದ್ದರು. ನಮ್ಮ ಕುಟುಂಬ ಸದಸ್ಯನಂತೆ ನಿಂತು ಕಾರ್ಯ ನಡೆಸಿಕೊಟ್ಟರು. ಧನ್ಯವಾದ ಎನ್ನುವುದು ಬಹಳ ಸಣ್ಣ ಪದವಾಗುತ್ತದೆ. ನಾವು ನಿಮಗೆ ಋಣಿಯಾಗಿರುತ್ತೇವೆ. ನಮ್ಮ ಕುಟುಂಬದ ಕಡೆಯಿಂದ ನಿಮಗೆಲ್ಲ ಸಾಷ್ಟಾಂಗ ನಮಸ್ಕಾರ'' ಎಂದರು ರಾಘಣ್ಣ.

''ಅಪ್ಪುವಾಗಿ ಹುಟ್ಟಿದ, ಪುನೀತ್ ಆಗಿದ್ದು ಅಭಿಮಾನಿಗಳಿಂದ''
''ಹನ್ನೊಂದನೇ ದಿನ ಕಾರ್ಯವೊಂದನ್ನು ಕುಟುಂಬ ಮಾಡಬೇಕಿದೆ. ಅದನ್ನು ಯಾವ ದಿನದ ಮಾಡುವುದೆಂದು ಮನೆಯವರು ನಿರ್ಧಾರ ಮಾಡುತ್ತಾರೆ'' ಎಂದರು. ಅಭಿಮಾನಿಗಳನ್ನು ಯಾವಾಗ ಸ್ಟುಡಿಯೋ ಒಳಕ್ಕೆ ಬಿಡುತ್ತಾರೆ? ಎಂಬ ಪ್ರಶ್ನೆಗೆ, ''ಅವನು ಎಂದಿಗೂ ನಿಮ್ಮವನೇ, ಅವನು ಅಪ್ಪುವಾಗಿ ಹುಟ್ಟಿದ ಅಷ್ಟೆ ಆದರೆ ಪುನೀತ್ ಎಂದಾಗಿದ್ದು ನಿಮ್ಮಿಂದ. ನಮ್ಮ ಕುಟುಂಬವೇ ಆಗಿದ್ದು ನಿಮ್ಮಿಂದ ಆದಷ್ಟು ಬೇಗ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಉಳಿದಿರುವ ಕಾರ್ಯವನ್ನು ಮಾಡಲು ಶಕ್ತಿ ಕೊಡಿ. ನಾನು ಇನ್ನು ಮುಂದೆ ಅವರ ಕುಟುಂಬದಲ್ಲಿ ಒಬ್ಬವನಾಗಿ ಇರುತ್ತೇನೆ'' ಎಂದರು ರಾಘಣ್ಣ.

ಕಂಠೀರವ ಸ್ಟುಡಿಯೋದಲ್ಲಿ ಅಪ್ಪುಗೆ ಹಾಲು-ತುಪ್ಪ
ಇಂದು ಕಂಠೀರವ ಸ್ಟುಡಿಯೋನಲ್ಲಿ ಅಪ್ಪುವಿನ ಸಮಾಧಿಗೆ ತೆರಳಿದ ಪುನೀತ್ ರಾಜ್‌ಕುಮಾರ್ ಕುಟುಂಬಸ್ಥರು, ಆಪ್ತೇಷ್ಟರು, ಗೆಳೆಯರು ಪುನೀತ್ ಸಮಾಧಿಗೆ ಹಾಲು-ತುಪ್ಪ ಹೊಯ್ದರು. ಪುನೀತ್ ಮಾವ ಗೋವಿಂದ ರಾಜು ಮುಂದಾಳತ್ವದಲ್ಲಿ ಹಾಲು-ತುಪ್ಪ ಕಾರ್ಯ ನೆರವೇರಿಸಿದ್ದು ಪುನೀತ್ ಪತ್ನಿ ಅಶ್ವಿನಿ, ಮಕ್ಕಳು, ಶಿವಣ್ಣ, ರಾಘವೇಂದ್ರ ರಾಜ್‌ಕುಮಾರ್, ಅವರ ಮಕ್ಕಳು, ಪಾರ್ವತಮ್ಮ ರಾಜ್‌ಕುಮಾರ್ ತಮ್ಮ ಚಿನ್ನೇಗೌಡ ಅವರ ಮಕ್ಕಳಾದ ಶ್ರೀಮುರಳಿ, ವಿಜಯ ರಾಘವೇಂದ್ರ, ಗಣ್ಯರಾದ ಸಚಿವ ಗೋಪಾಲಯ್ಯ, ಚಿತ್ರರಂಗದ ಮುಖಂಡ ಸಾ.ರಾ.ಗೋವಿಂದು, ಪುನೀತ್ ರಾಜ್‌ಕುಮಾರ್ ಗೆಳೆಯರು ಇನ್ನೂ ಕೆಲವು ಚಿತ್ರರಂಗದ ಸೆಲೆಬ್ರಿಟಿಗಳು ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗಾಜನೂರಿನಿಂದಲೂ ಹಲವು ಸಂಬಂಧಿಗಳು ಆಗಮಿಸಿ ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಪ್ಪು ಸಮಾಧಿ ಮೇಲೆ ಮಣ್ಣಿನ ಹಣತೆ ಹಚ್ಚಿ, ಬಾಳೆ ಎಲೆಯಲ್ಲಿ ಅಪ್ಪುಗೆ ಇಷ್ಟವಾದ ಆಹಾರಗಳನ್ನು ಇಡಲಾಗಿತ್ತು. ಮುದ್ದೆ, ನಾಟಿ ಕೋಳಿ ಸಾರು, ಬಿರಿಯಾನಿ, ಕಬಾಬು, ಇಡ್ಲಿ, ಕಡ್ಲೆಕಾಳು, ಗೊಜ್ಜು, ಮೊಟ್ಟೆ ಬಿರಿಯಾನಿ, ಬಜ್ಜಿ ಇನ್ನಿತರೆ ತಿನಿಸುಗಳು ಹಾಗೂ ಕೆಲವು ಮಾದರಿಯ ಸಿಹಿ ತಿನಿಸುಗಳನ್ನು ಕುಟುಂಬಸ್ಥರು ಮಾಡಿಕೊಂಡು ಬಂದಿದ್ದರು, ಬಾಳೆ ಎಲೆಯಲ್ಲಿ ನೈವೇದ್ಯ ಇಟ್ಟರು.


Click it and Unblock the Notifications











