ಬಿಡದೇ ಕಾಡುತ್ತಿದೆ ಅಪ್ಪು ಸಾವು: ಕಿರಿಯವನೆ ಬಿಟ್ಟು ಹೋದ ಎಂದು ರಾಘಣ್ಣ ಭಾವುಕ!
"ಪುನೀತ್ ರಾಜ್‌ಕುಮಾರ್‌ನನ್ನು ಮಗನಂತೆ ತೋಳಿನಲ್ಲಿ ಆಡಿ ಬೆಳೆಸಿದ್ದೆ. ಅವನು ನಮಗೆ ಹಾಲು-ತುಪ್ಪ ಬಿಡಬೇಕಿತ್ತು. ಆದರೆ ನಾವು ಅವನಿಗೆ ಹಾಲು ತುಪ್ಪ ಬಿಡುವ ಪರಿಸ್ಥಿತಿ ಬಂದು ಬಿಟ್ಟಿದೆ' ಎಂದು ಹೇಳಿ ನಟ ಶಿವರಾಜ್‌ಕುಮಾರ್ ಭಾವುಕರಾಗಿದ್ದರು. ಬಾಂಧವ್ಯಕ್ಕೆ ಮಾದರಿ ಆಗಿದ್ದ ಈ ಮೂರು ಅಣ್ಣ ತಮ್ಮಂದಿರಲ್ಲಿ ಕಿರಿಯವರು ಪುನೀತ್ ರಾಜ್‌ಕುಮಾರ್. ಹಾಗಾಗಿ ಅಪ್ಪು ಅವರನ್ನು ಕಳೆದುಕೊಂಡು ಶಿವರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಮಾನಸಿಕವಾಗಿ ಕುಸಿದು ಬಿಟ್ಟಿದ್ದಾರೆ. ಏನೇ ಪ್ರಯತ್ನ ಪಟ್ಟರೂ ಅಪ್ಪು ಇಲ್ಲ ಎನ್ನುವ ಸತ್ಯವನ್ನು ಅವರಿಂದ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ತಮ್ಮ ನೋವು, ಬೇಸರವನ್ನು ಪ್ರೀತಿಯ ರೂಪದಲ್ಲಿ ತೋರಿಸುತ್ತಾರೆ. ಎಷ್ಟೇ ದಿನಗಳು ಉರುಳಿದರೂ ರಾಘಣ್ಣ ಮತ್ತು ಶಿವಣ್ಣನ ಮನದಲ್ಲಿ ಅಪ್ಪು ಸಾವು ಅಳಿಸದ ಗಾಯ.
ನೋವಿನಿಂದ ಆಚೆ ಬಾರದ ನಟ ರಾಘವೇಂದ್ರ ರಾಜ್‌ಕುಮಾರ್, ಪ್ರತಿ ನಿತ್ಯ ಅಪ್ಪು ಬಗ್ಗೆ ಒಂದು ಪೋಸ್ಟ್ ಹಾಕುತ್ತಾರೆ. ರಾಘಣ್ಣ ಪುನೀತ್ ರಾಜ್‌ಕುಮಾರ್ ಅವರ ನೆನಪುಗಳನ್ನು ಒಂದೊಂದಾಗಿಯೇ ಜನರ ಮುಂದೆ ಇಡುತ್ತಿದ್ದಾರೆ. ಅಪ್ಪು ಅಭಿಮಾನಿಗಳು ರಾಘಣ್ಣ ಇಂದು ಏನು ಹಂಚಿಕೊಂಡಿದ್ದಾರೆ ಎಂಬುದನ್ನು ನೋಡಲು ಕಾಯುತ್ತಿರುತ್ತಾರೆ. ಯಾಕೆಂದರೆ ಅಪ್ಪು ಅವರ ಪ್ರತಿ ನೆನಪುಗಳು ಅಭಿಮಾನಿಗಳಿಗೂ ಬೇಕು. ಇನ್ನೂ ಅವರ ಆ ಅಮರ ನೆನಪುಗಳೊಂದಿಗೇ ಜನ ಬದುಕಬೇಕು.

ರಾಘವೇಂದ್ರ ರಾಜ್‌ಕುಮಾರ ಅವರ ಟ್ವಿಟರ್ ಖಾತೆಯಲ್ಲಿ ಕಂಡ ಫೊಟೋ ಒಂದು ಮನ ಕಲುಕುತ್ತದೆ. ಈ ಫೊಟೋದಲ್ಲಿ ಡಾ.ರಾಜ್‌ಕುಮಾರ್, ಪಾರ್ವತಮ್ಮ ಜೊತೆಗೆ ಮಕ್ಕಳಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪೂರ್ಣಿಮಾ, ಲಕ್ಷ್ಮಿ ಮತ್ತು ಪುನೀತ್ ರಾಜ್‌ಕುಮಾರ್ ಇದ್ದಾರೆ. ಈ ಐದು ಮಂದಿ ಮಕ್ಕಳಲ್ಲಿ ಪುನೀತ್ ರಾಜ್‌ಕುಮಾರ್ ಕಡೆಯ ಪುತ್ರ. ಈ ಫೋಟೋ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ರಾಘವೇಂದ್ರ ರಾಜ್‌ಕುಮಾರ್. ಹಾಗೆ ನೋವು ತುಂಬಿರುವ ಸಾಲು ಒಂದನ್ನು ಬರೆದಿದ್ದಾರೆ. "ಇದನ್ನು ನೋಡಿದಾಗ ನನಗೆ ಆಘಾತ ಆಯಿತು. ಯಾಕೆಂದರೆ ನಮ್ಮಲ್ಲಿ ಅಂತ್ಯಂತ ಕಿರಿಯವನು ನಮ್ಮನ್ನು ಬಿಟ್ಟು ಹೋದ. ಇದು ಖಾಲಿ ಕತ್ತಲೆ' ಎಂದು ರಾಘಣ್ಣ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಅಪ್ಪು ಜೊತೆಗಿನ ಮತ್ತೊಂದು ಫೊಟೋವನ್ನು ರಾಘವೇಂದ್ರ ರಾಜ್‌ಕುಮಾರ್ ಹಂಚಿಕೊಂಡಿದ್ದರು. ಫೊಟೋದಲ್ಲಿ ರಾಜ್‌ಕುಮಾರ ಅವರು ಪುನೀತ್ ರಾಜ್‌ಕುಮಾರ್ ಅವರನ್ನು ಎತ್ತಿ ಆಡಿಸುತ್ತಿದ್ದಾರೆ. ಅವರ ಜೊತೆಗೆ ರಾಘವೇಂದ್ರ ರಾಜ್‌ಕುಮಾರ್, ಪೂರ್ಣಿಮಾ ಮತ್ತು ಲಕ್ಷ್ಮಿ ಇದ್ದಾರೆ. ಈ ಫೊಟೋ ಹಾಕಿದ ರಾಘಣ್ಣ, "ಅಪ್ಪಾಜಿ ಅಪ್ಪುನನ್ನು ಎತ್ತಿ ಕೊಂಡಿದ್ದಾರೆ. ನಾನು ಮತ್ತು ನನ್ನ ಸಹೋದರಿಯರು ಪಕ್ಕದಲ್ಲಿ ನಿಂತಿದ್ದೇವೆ. ಇದೊಂದು ಸವಿ ನೆನಪು' ಎಂದು ಬರೆದುಕೊಂಡಿದ್ದರು.

ಜೊತೆಗೆ ರಾಘಣ್ಣ ಪುನೀತ್ ಅವರನ್ನು ತೊಡೆಯ ಮೇಲೆ ಕೂರಿಸಿಕೊಂಡು ತೆಗೆಸಿಕೊಂಡಿರುವ ಫೊಟೋ ಒಂದನ್ನು ಹಂಚಿಕೊಂಡಿದ್ದರು. "ಅಪ್ಪು ಈಗಲೂ ನನ್ನ ತೊಡೆಯ ಮೇಲೆ ಕೂತಿದ್ದಾನೆ. ಸದಾ ನಮ್ಮ ಯೋಚನೆಗಳಲ್ಲಿ ಕೂತಿರುತ್ತಾನೆ. ಲವ್ ಯು ಮಗನೆ' ಎಂದು ಬೆರದುಕೊಂಡಿದ್ದರು. ಹಾಗೆ ಅಪ್ಪು ಕೊನೆ ಬಾರಿ ಹಾಡಿದ ವಿಡಿಯೋವನ್ನು ರಾಘಣ್ಣ ಹಂಚಿಕೊಂಡಿದ್ದರು. ಕುಟುಂಬದ ಮಗು ಒಂದರ ಹುಟ್ಟು ಹಬ್ಬದಲ್ಲಿ ಕೇಕ್ ಕತ್ತರಿಸಿ ಅಪ್ಪು "ಎಲ್ಲೆಲ್ಲಿ ನೋಡಲಿ, ನಿನ್ನನ್ನೇ ಕಾಣುವೆ' ಎಂದು ಹಾಡಿದ್ದರು. ಈ ವಿಡಿಯೋ ಹಂಚಿಕೊಂಡು, ಇದು ಅಪ್ಪು ಹಾಡಿದ ಕೊನೆಯ ಹಾಡು ಅಂತ ಬರೆದು ಕೊಂಡಿದ್ದರು. ಅಪ್ಪು ಇಲ್ಲ. ಆದರೆ ಅವರು ಪ್ರತಿಯೊಬ್ಬರಲ್ಲೂ ಸದಾ ಜೀವಂತ. ಎಂದಿಗೂ ಅಳಿಯದ ನೆನಪುಗಳನ್ನ ಅಪ್ಪು ಬಿಟ್ಟು ಹೋದ್ದಾರೆ.


Click it and Unblock the Notifications











