'ಜೇಮ್ಸ್' ಸಿನಿಮಾ ನೋಡಿ ರಾಘವೇಂದ್ರ ರಾಜ್‌ಕುಮಾರ್ ಹೀಗೆ ಹೇಳಿದರು
ಪುನೀತ್ ರಾಜ್‌ಕುಮಾರ್ ನಟನೆಯ 'ಜೇಮ್ಸ್' ಸಿನಿಮಾ ಇಂದು ಬಿಡುಗಡೆ ಆಗಿದೆ. ಅಪ್ಪು ಅಗಲಿಕೆ ಬಳಿಕ ಬಿಡುಗಡೆ ಆಗುತ್ತಿರುವ ಅವರ ಮೊದಲ ಸಿನಿಮಾ ಇದು. ಸಿನಿಮಾ ಬಹುದೊಡ್ಡ ಓಪನಿಂಗ್ ಪಡೆದುಕೊಂಡಿದೆ.
Recommended Video

'ಜೇಮ್ಸ್' ಸಿನಿಮಾವನ್ನು ಅಭಿಮಾನಿಗಳಷ್ಟೆ ಅಲ್ಲ ನಟ-ನಟಿಯರು ಸಹ ಮುಗಿಬಿದ್ದು ನೋಡುತ್ತಿದ್ದಾರೆ. ಜೊತೆಗೆ ದೊಡ್ಮನೆ ಕುಟುಂಬದ ಸದಸ್ಯರು ಸಹ ಸಿನಿಮಾ ನೋಡುತ್ತಿದ್ದಾರೆ.
ಪುನೀತ್ ರಾಜ್‌ಕುಮಾರ್ ಸಹೋದರ ರಾಘವೇಂದ್ರ ರಾಜ್‌ಕುಮಾರ್ ಇಂದು ಬೆಂಗಳೂರಿನಲ್ಲಿ 'ಜೇಮ್ಸ್' ಸಿನಿಮಾ ನೋಡಿದರು. ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್ ಭಾವುಕರಾದರು.

''ಒಬ್ಬ ಅಣ್ಣನಾಗಿ ನನ್ನ ತಮ್ಮನ ಸಿನಿಮಾ ಬಗ್ಗೆ ಮಾತನಾಡಬಾರದು. ನನ್ನ ತಮ್ಮ ಹೇಗೆ ಮಾಡಿದರು, ಏನು ಮಾಡಿದರು ನನಗೆ ಇಷ್ಟವಾಗುತ್ತದೆ. ಹಾಗಾಗಿ ನನ್ನ ತಮ್ಮನ ಸಿನಿಮಾ ಬಗ್ಗೆ ನಾನು ಮಾತನಾಡುವುದು ಸರಿಯಲ್ಲ. ಜನ ಸಿನಿಮಾ ಬಗ್ಗೆ ಮಾತನಾಡಬೇಕು ನಾನು ಕೇಳಿಸಿಕೊಳ್ಳಬೇಕು'' ಎಂದರು ರಾಘಣ್ಣ.
ಮುಂದುವರೆದು, ''ಅಪ್ಪು ಏನು ಮಾಡಲು ಯತ್ನಿಸುತ್ತಿದ್ದ ಎಂಬುದು ನನಗೆ ಅರ್ಥವಾಗುತ್ತಿಲ್ಲ. 'ರಾಜಕುಮಾರ' ಸಿನಿಮಾ ಮಾಡಿ ವಯಸ್ಸಾದವರನ್ನು ಹೇಗೆ ನೋಡಿಕೊಳ್ಳಬೇಕು ಹೇಳಿಕೊಟ್ಟ, 'ಯುವರಾಜ' ಸಿನಿಮಾ ಮಾಡಿ ಶಿಕ್ಷಣದ ಮಹತ್ವ ಸಾರಿದ. ಅನಾಥಾಶ್ರಮದ ಮಕ್ಕಳಿಗೆ ನೆರವಾಗಬೇಕೆಂದು ಹೇಳಿಕೊಟ್ಟ. 'ಗಂಧದ ಗುಡಿ' ಮೂಲಕ ಪರಿಸರ ಎಷ್ಟು ಮುಖ್ಯ, ಅದನ್ನು ಹೇಗೆ ಉಳಿಸಬೇಕು ಎಂದು ಹೇಳಿಕೊಟ್ಟ. ಈಗ 'ಜೇಮ್ಸ್' ಮೂಲಕ ಯೋಧರ ಮಹತ್ವ ಸಾರಿದ. ಸಿನಿಮಾ ಮೂಲಕ ಅಭಿಮಾನಿಗಳಿಗೆ ಒಳ್ಳೆಯ ಸಂದೇಶ ನೀಡಿದ್ದಾನೆ. ಅವನು ನೀಡಿರುವ ಸಂದೇಶವನ್ನು ಅಭಿಮಾನಿಗಳು ಪಾಲಿಸುತ್ತಾರೆ. ನಾನೂ ಪಾಲಿಸುತ್ತೇನೆ'' ಎಂದರು ರಾಘವೇಂದ್ರ ರಾಜ್‌ಕುಮಾರ್.
ರಾಘವೇಂದ್ರ ರಾಜ್‌ಕುಮಾರ್ ಅವರೂ ಸಹ 'ಜೇಮ್ಸ್' ಸಿನಿಮಾದ ಸಣ್ಣ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಶಿವಣ್ಣನೂ ನಟಿಸಿದ್ದಾರೆ. ಅಪ್ಪು ಕಾಲವಾದ ಬಳಿಕ ಇವರಿಬ್ಬರು ನಟಿಸಿರುವ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಸಿನಿಮಾದ ಕತೆಗೆ ಹೊಂದಿಕೆ ಆಗುವಂತೆ ಜೋಡಿಸಲಾಗಿದೆ.
'ಜೇಮ್ಸ್' ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಘವೇಂದ್ರ ರಾಜ್‌ಕುಮಾರ್, "ನನಗೆ ಈಗ ಅನಿಸಿದ್ದು, ಚೆನ್ನಾಗಿ ಓಡುತ್ತಿದ್ದ ಗಾಡಿಯನ್ನು ನಿಲ್ಲಿಸಿಬಿಟ್ಟ, ನಾನ್ ನೋಡಿ ಕುಂಟುತ್ತಾ ಓಡಾಡುತ್ತಿದ್ದೇನೆ. ನಾನು ಇನ್ನೂ ಇದೀನಿ ಅಂದರೆ ಎಷ್ಟು ಬೇಜಾರ್ ಆಗುತ್ತದೆ. ನನಗೆ ಸ್ಟ್ರೋಕ್ ಆಗಿ, ಹಾರ್ಟ್ ಪ್ರಾಬ್ಲಮ್ ಆದರೂ ಇದೀನಿ. ಇದನೆಲ್ಲಾ ನೋಡಿದಾಗ ಯಾಕೆ ಇರಬೇಕು ಅನಿಸಿತು. ನಾನು ಅವನನ್ನು ಹುಡುಕಿಕೊಂಡು ಹೋಗ್ತೀನಿ, ನಾನು ಅವನು ಇರುವ ಕಡೆಗೆ ಹೋಗ್ತೀನಿ. ನಾನು ಹೊರಡೋಕೆ ರೆಡಿ." ಎಂದಿದ್ದರು.


Click it and Unblock the Notifications











