ಪತ್ನಿಗೂ ನನಗೆ 16 ವರ್ಷ ವಯಸ್ಸಿನ ಅಂತರ, ಟ್ರೋಲ್ ಮಾಡಿದ್ದು ನೋವಾಯ್ತು; ರಘು ದೀಕ್ಷಿತ್
ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ 2ನೇ ಮದುವೆ ಆಗಿರುವುದು ಗೊತ್ತೇಯಿದೆ. ಡ್ಯಾನ್ಸರ್ ಮಯೂರಿ ಜೊತೆ ಮೊದಲು ಮದುವೆಯಾಗಿದ್ದ ರಘು ದೀಕ್ಷಿತ್ ಕೆಲ ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಪಡೆದು ದೂರಾಗಿದ್ದರು. ಬಳಿಕ ಸ್ನೇಹಿತೆ ವಾರಿಜಾಶ್ರೀ ವೇಣುಗೋಪಾಲ್ ಕೈ ಹಿಡಿದರು. ಕಳೆದ ವರ್ಷ ಕುಟಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಮದುವೆ ನಡೆದಿತ್ತು. ಜಯನಗರದ ಶ್ರೀ ಸಾಯಿ ಕನ್ವೆನ್ಷನ್ ಹಾಲ್‌ನಲ್ಲಿ ಮದುವೆ ಶಾಸ್ತ್ರಗಳು ನಡೆದಿದ್ದವು.
ತಮ್ಮ 2ನೇ ಮದುವೆ ಬಗ್ಗೆ ರಘು ದೀಕ್ಷಿತ್ ಮಾತನಾಡಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತಮಗಿಂತ ವಯಸ್ಸಿನಲ್ಲಿ 16 ವರ್ಷ ಚಿಕ್ಕವರಾದ ವಾರಿಜಾಶ್ರೀ ಮದುವೆ ಆಗಿದ್ದಕ್ಕೆ ಟ್ರೋಲ್ಸ್ ಎದುರಿಸುವಂತಾಯ್ತು. ಇದು ನೋವು ತಂದಿದ್ದು ಸುಳ್ಳಲ್ಲ ಎಂದು ರಘು ದೀಕ್ಷಿತ್ ತಿಳಿಸಿದ್ದಾರೆ. ಆದರೆ ಸೋಶಿಯಲ್ ಮೀಡಿಯಾ ಕಾಮೆಂಟ್‌ಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ಮದುವೆ ಆಗುವಾಗ ರಘು ದೀಕ್ಷಿತ್ ಅವರಿಗೆ 50 ವರ್ಷ ವಯಸ್ಸಾಗಿತ್ತು. ಇನ್ನು ವಾರಿಜಾಶ್ರೀ ಅವರಿಗೆ 34 ವರ್ಷ. ಅಂದಹಾಗೆ ವಾರಿಜಾಶ್ರೀ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವರು. 'ಕರ್ನಾಟಿಕ್ ಸ್ಕ್ಯಾಟ್ ಸಿಂಗಿಂಗ್' ಕಲೆಯ ಸೃಷ್ಟಿಕರ್ತೆ.. 'ಜೆಸ್ಸಿ 4' ಆಲ್ಬಮ್ಗಾಗಿ ಜೇಕಬ್ ಕೊಲ್ಲಿಯರ್ ಹಾಗೂ ಅನುಷ್ಕ ಶಂಕರ್ ಜತೆಗೆ ಗ್ರ್ಯಾಮಿ ನ್ಯಾಮಿನೇಶನ್ ಕೂಡ ಆಕೆಗೆ ಲಭಿಸಿತ್ತು. ಇಬ್ಬರಿಗೂ ಸಂಗೀತ ಕ್ಷೇತ್ರದ ಹಿನ್ನೆಲೆ ಇತ್ತು. ಬಹಳ ವರ್ಷಗಳಿಂದ ಸ್ನೇಹಿತರಾಗಿದ್ದರು. ಹಾಗಾಗಿ ಪರಸ್ಪರ ಒಪ್ಪಿ ಪೋಷಕರನ್ನು ಒಪ್ಪಿಸಿ ಮದುವೆ ಆಗಿದ್ದರು.
ತಮಗಿಂತ ಬಹಳ ಚಿಕ್ಕ ವಯಸ್ಸಿನ ಹುಡುಗಿಯನ್ನು ಮದುವೆ ಆಗಿದ್ದಕ್ಕೆ ಎದುರಿಸಿದ ಟೀಕೆಗಳ ಬಗ್ಗೆ ಸಂದರ್ಶನದಲ್ಲಿ ರಘು ದೀಕ್ಷಿತ್ ಮಾತನಾಡಿದ್ದಾರೆ. "ಪ್ರತಿಯೊಂದು ವಿಚಾರದ ಬಗ್ಗೆ ಜನರಿಗೆ ತಮ್ಮದೇ ಆದ ಅಭಿಪ್ರಾಯ ಇರುತ್ತೆ ಎನ್ನುವುದು ಗೊತ್ತೇಯಿದೆ. ಅದರಲ್ಲೂ ನೀವು ಸಾರ್ವಜನಿಕರ ಗಮನದಲ್ಲಿರುವಾಗ ಇದು ಸಹಜ. ಇಂತಹ ಟೀಕೆಗಳು ನೋವುಂಟು ಮಾಡಿದ್ದು ನಿಜ.. ಇಂಟರ್ನೆಟ್ ಅನ್ನು ತುಂಬಾ ಗಂಭೀರವಾಗಿ ಪರಿಗಣಿಸಬೇಡಿ. ಆಗ ಸಂತೋಷವಾಗಿ ಇರಬಹುದು. ಆಪ್ತರು ನಮ್ಮ ಜೊತೆಗಿದ್ದರು. ನಿಜವಾದ ಅಭಿಮಾನಿಗಳು ಆಶೀರ್ವಸಿದರು. ಇನ್ನೇನು ಬೇಕು..ನಮ್ಮನ್ನು ನಾವು ವಿವರಿಸಿಕೊಳ್ಳುವ ಅಗತ್ಯ ಬರಲೇ ಇಲ್ಲ" ಎಂದು ತಿಳಿಸಿದ್ದಾರೆ.
ಪ್ರೀತಿ ಒಂದು ವಿಚಿತ್ರವಾದದ್ದು. ಸೌಂದರ್ಯ ಮುಖ್ಯವಾಗಲ್ಲ. ನಾವಿಬ್ಬರು ಮದುವೆಯಾಗಲು ನಿರ್ಧರಿಸುವ ಮುನ್ನ ಬಹಳ ವರ್ಷ ಸ್ನೇಹಿತರಾಗಿದ್ದೆವು. ಮದುವೆ ಆದ್ಮೇಲೆ ಏನು ಬದಲಾವಣೆ ಅನ್ನಿಸಲಿಲ್ಲ. ನಿಮ್ಮ ನಿರ್ಧಾರಗಳು ಪ್ರೀತಿ, ಪರಸ್ಪರ ಗೌರವ ಮತ್ತು ನಂಬಿಕೆ ಚೆನ್ನಾಗಿದ್ರೆ ಯಾರು ಏನೇ ಹೇಳಿದ್ರು ತಲೆಕೆಡಿಸಿಕೊಳ್ಳುವುದು ಬೇಕಿಲ್ಲ.. ನಾನು ಈಗ ವಾರಿಜಾಶ್ರೀ ಜೊತೆ ನನ್ನ ಜೀವನವನ್ನು ಕಟ್ಟಿಕೊಳ್ಳಲು ಕಾಯುತ್ತಿದ್ದೇನೆ. ಇದು ಬಹುಶಃ ನನ್ನ ಜೀವನದ ತೃಪ್ತಿಕರ ಪ್ರಯಾಣಗಳಲ್ಲಿ ಒಂದು" ಎಂದು ರಘು ದೀಕ್ಷಿತ್ ತಮ್ಮ ಪ್ರೀತಿ ಮದುವೆ ಬಗ್ಗೆ ಮಾತನಾಡಿದ್ದಾರೆ.
ಜಾನಪದ ಹಾಗೂ ರಾಕ್ ಮಿಶ್ರಿತ ಗಾಯಕ ರಘು ದೀಕ್ಷಿತ್ ತಮ್ಮ ವಿಭಿನ್ನ ಗಾಯನದಿಂದ ದೇಶ ವಿದೇಶಗಳಲ್ಲಿ ಗಮನ ಸೆಳೆದವರು. ಕನ್ನಡದ ಹಾಡುಗಳು, ಕವಿತೆ, ಪದ್ಯಗಳನ್ನು ವಿಶಿಷ್ಠ ಶೈಲಿಯಲ್ಲಿ ಪ್ರಸ್ತುತಪಡಿಸಿ ಸಂಗೀತ ಪ್ರೇಮಿಗಳನ್ನು ರಂಜಿಸುತ್ತಾ ಬರ್ತಿದ್ದಾರೆ. ಕೆಲ ಕನ್ನಡ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿ ಗೆದ್ದಿದ್ದಾರೆ. ಲುಂಗಿ, ಕುರ್ತಾ ಮತ್ತು ಕಾಲ್ಗೆಜ್ಜೆ ಧರಿಸಿ ವೇದಿಕೆ ಏರುವ ರಘು ತಮ್ಮ ಗಾಯನದ ಮೂಲಕ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ.
'ಸೈಕೊ' ಚಿತ್ರದ 'ನಿನ್ನ ಪೂಜೆಗೆ ಬಂದೇ ಮಾದೇಶ್ವರ' ಹಾಡಿನ ಮೂಲಕ ಕರ್ನಾಟಕದಲ್ಲಿ ರಘು ಹೆಸರು ದೊಡ್ಡದಾಗಿ ಸದ್ದು ಮಾಡಿತ್ತು. 'ಲವ್ ಮಾಕ್ಟೇಲ್' ಚಿತ್ರದಲ್ಲೂ ರಘು ಮ್ಯೂಸಿಕ್ ಮ್ಯಾಜಿಕ್ ಮಾಡಿತ್ತು. 'ಆರ್ಕೇಸ್ಟ್ರಾ ಮೈಸೂರು' ಹಾಗೂ 'ಮಂಡಲ: The UFO ಇನ್ಸಿಡೆಂಟ್' ಸಿನಿಮಾಗಳಿಗೆ ಕೊನೆಯದಾಗಿ ಸಂಗೀತ ಸಂಯೋಜನೆ ಮಾಡಿದ್ದರು.


Click it and Unblock the Notifications