ಆಧುನಿಕತೆಯ ಭರಾಟೆಯ ನಡುವೆ ಬದುಕಿನ ಚಿತ್ರಣ ; ಕನ್ನಡ-ತೆಲುಗಲ್ಲಿ 'ಲೈನ್ ಮ್ಯಾನ್'..!
ಲಾಕ್ ಡೌನ್ ನಲ್ಲಿ ತತ್ತರಿಸಿದ್ದ ಮನಸ್ಸುಗಳು ಅದೆಷ್ಟೋ. ದಿನ, ವಾರ, ತಿಂಗ್ಳಾನುಘಟ್ಟಲೆ ಕೈ ಕಾಲು ಕಟ್ಟಿ ಹಾಕಿದಂತ ಅನುಭವ ಅನೇಕರಿಗಾಗಿದೆ. ಆದರೆ ಇದೇ ಸಮಯದಲ್ಲಿ ಲಾಕ್ಡೌನ್ ಸಂದಿಗ್ದ ಪರಿಸ್ಥಿತಿಯಲ್ಲಿ ಸಮಯವನ್ನು ಹಾಳುಮಾಡದೆ ಕ್ರಿಯಾಶೀಲ ವ್ಯಕ್ತಿತ್ವವನ್ನ ಹೊಂದಿರುವವರು ಸಿಕ್ಕಿದ್ದ ಸಮಯವನ್ನ ಸದುಪಯೋಗ ಪಡಿಸಿಕೊಂಡರು. ಅವರಲ್ಲಿ ರಘು ಶಾಸ್ತ್ರೀ ಕೂಡ ಒಬ್ಬರು.
ಹೌದು, ಹಿಂದೆ ರನ್ ಆಂಟನಿ, ಟಕ್ಕರ್ ಚಿತ್ರಗಳನ್ನ ನಿರ್ದೇಶಿಸಿದ್ದ ರಘು ಶಾಸ್ತ್ರೀ, ಲಾಕ್ ಡೌನ್ ಸಮಯದಲ್ಲಿ ಕಥೆಯನ್ನ ರಚಿಸಿ ಅದಕ್ಕೊಂದು ಚಿತ್ರರೂಪವನ್ನ ಕೊಟ್ಟಿದ್ದಾರೆ. ಆ ಚಿತ್ರದ ಹೆಸರು ಲೈನ್ ಮ್ಯಾನ್. ಈಗಾಗ್ಲೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆಗೆ ಪಾತ್ರವಾಗಿರುವ ಲೈನ್ ಮ್ಯಾನ್ ಸಿನಿಮಾ ಇದೇ ಮಾರ್ಚ್ 22ರಂದು ತೆರೆಗೆ ಬರಲಿದೆ.

ಆಧುನಿಕತೆಯ ಭರಾಟೆಯಲ್ಲಿ ಕಣ್ಮರೆಯಾಗ್ತಿರುವ ದೇಸಿ ಸಂಸ್ಕ್ರತಿ, ಹಳ್ಳಿಗಾಡಿನ ನೈಜ ಸೊಗಡನ್ನ ಈ ಚಿತ್ರದ ಮೂಲಕ ಅನಾವರಣಗೊಳಿಸುವ ಪ್ರಯತ್ನವನ್ನ ರಘು ಶಾಸ್ತ್ರೀ ಮಾಡಿದ್ದಾರೆ. ಅಜ್ಜಿಕತೆ, ಸೋಬಾನೆ ಪದ, ಗ್ರಾಮೀಣ ಆಟ, ಎಲ್ಲವನ್ನೂ ಈ ಚಿತ್ರದ ಮೂಲಕ ಇನ್ನೊಮ್ಮೆ ನೋಡಬಹುದು.
ಇವರ ಈ ಪ್ರಯತ್ನಕ್ಕೆ ನಾಯಕನಾಗಿ ತೆಲುಗಿನಲ್ಲಿ ಜನಪ್ರಿಯರಾಗಿರುವ ತ್ರಿಗುಣ್ ಜೊತೆಯಾಗಿದ್ದಾರೆ. ಇನ್ನೂ ತ್ರಿಗುಣ್ ಮೂಲ ಆಂಧ್ರ ಆದ ಹಿನ್ನೆಲೆ ಚಿತ್ರವನ್ನ ಕನ್ನಡದ ಜೊತೆ ತೆಲುಗಿನಲ್ಲಿಯೂ ನಿರ್ಮಾಣ ಮಾಡಲಾಗಿದೆ. ಏಕಕಾಲಕ್ಕೆ ಎರಡು ಕಡೆ ಬಿಡುಗಡೆಯನ್ನೂ ಮಾಡಲಾಗುತ್ತಿದೆ.

ರಘು ಶಾಸ್ತ್ರೀ ಹೇಳಿದ ಕಥೆಯನ್ನ ಮೆಚ್ಚಿ ಯತೀಶ್ ವೆಂಕಟೇಶ್, ಶ್ರೀನಿವಾಸ್ ಬಿಂಡಿಗನವಿಲೆ, ಅಜಯ್ ಅಪರೂಪ್ ಪರ್ಪಲ್ ರಾಕ್ ಬ್ಯಾನರ್ ಅಡಿ ಚಿತ್ರ ನಿರ್ಮಾಣ ಮಾಡಿದ್ದಾರೆ. ರಘು ಶಾಸ್ತ್ರೀ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಗಣೇಶ್ ಪಾಪಣ್ಣ ಚಿತ್ರದ ಕಾರ್ಯಕಾರಿ ನಿರ್ಮಾಪಕ.
ಕಾಜಲ್ ಕುಂದರ್, ಬಿ.ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಕಮಲ, ಹಾಗೂ "ತರ್ಲೆನನ್ಮಗ" ಖ್ಯಾತಿಯ ಅಂಜಲಿ ಚಿತ್ರದಲ್ಲಿದ್ದಾರೆ. ಇನ್ನೂಸಿಕ್ಕ ಪಾತ್ರಗಳನ್ನ ಸದುಪಯೋಗ ಪಡಿಸಿಕೊಂಡು, ತಮ್ಮ ಛಾಪು ಮೂಡಿಸುತ್ತಿರುವ ಸಂದೀಪ್ ಕುಮಾರ್ ಚಿತ್ರದಲ್ಲಿ ಪ್ರಮುಖವಾದ ಪಾತ್ರವನ್ನ ನಿರ್ವಹಿಸಿದ್ದಾರೆ.

ಶಾಂತಿ ಸಾಗರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ವಿಶೇಷ ಅಂದರೆ ಸಂಗೀತ ಮೂಲಕ ಮನ ಗೆದ್ದ ಮಣಿಕಾಂತ್ ಕದ್ರಿ ಈ ಚಿತ್ರದ ಸಹ ನಿರ್ಮಾಪಕಲ್ಲಿ ಒಬ್ಬರು.
ಸದ್ಯಕ್ಕೆ ಲೈನ್ ಮ್ಯಾನ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಭರವಸೆಯನ್ನ ಮೂಡಿಸಿದೆ. ಇನ್ನೂ ಇಂದು ಬಿಡುಗಡೆಯಾಗಿರುವ ಹಾಡು ಕೂಡ ಗಮನವನ್ನ ಸೆಳೆಯುತ್ತಿದೆ. ಚಿತ್ರ ಇದೇ ಮಾರ್ಚ್ 22ರಂದು ತೆರೆಗೆ ಬರಲಿದೆ.


Click it and Unblock the Notifications










