twitter
    For Quick Alerts
    ALLOW NOTIFICATIONS  
    For Daily Alerts

    ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯ ಕುಟುಂಬಕ್ಕೆ ರಾಘವೇಂದ್ರ ರಾಜ್‌ಕುಮಾರ್ ಸಾಂತ್ವನ

    |

    ಪುನೀತ್ ರಾಜ್‌ಕುಮಾರ್ ನಿಧನದಿಂದ ಅವರ ಅಸಂಖ್ಯ ಅಭಿಮಾನಿಗಳು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಕೆಲವರಂತೂ ತಮ್ಮ ನೆಚ್ಚಿನ ನಟ ಹೀಗೆ ಹಠಾತ್ತನೆ ಹೊರಟುಹೋದ ದುಃಖವನ್ನು ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ರಾಘವೇಂದ್ರ ರಾಜ್‌ಕುಮಾರ್, ಶಿವರಾಜ್ ಕುಮಾರ್ ಅವರುಗಳು ಕೈಮುಗಿದು ಕೇಳಿ ಕೊಂಡರೂ ಸಹ ಆತ್ಮಹತ್ಯೆಗಳು ನಿಂತಿಲ್ಲ. ಪುನೀತ್ ಅಗಲಿಕೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯೊಬ್ಬನ ನಿವಾಸಕ್ಕೆ ಇಂದು ರಾಘವೇಂದ್ರ ರಾಜ್‌ಕುಮಾರ್ ಭೇಟಿ ನೀಡಿದ್ದರು.

    ನವೆಂಬರ್ 04ರಂದು ರಾಮನಗರ ಜಿಲ್ಲೆ ಚನ್ನಪಟ್ಟಣದ ಎಲೆಕೆರೆಯಲ್ಲಿ ವೆಂಕಟೇಶ್ ಹೆಸರಿನ ಪುನೀತ್ ರಾಜ್‌ಕುಮಾರ್ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಪುನೀತ್ ಅಗಲಿಕೆಯಿಂದ ಖಿನ್ನತೆಗೆ ಜಾರಿದ್ದ ವೆಂಕಟೇಶ್ ಊಟ ಬಿಟ್ಟು, ಊರೂರು ಅಲೆಯುತ್ತಿದ್ದ. ಕೊನೆಗೆ ಮನೆಗೆ ಬಂದು ನವೆಂಬರ್ 04ನೇ ತಾರೀಖು ಆತ್ಮಹತ್ಯೆಗೆ ಶರಣಾಗಿದ್ದ.

    ವೆಂಕಟೇಶ್ ನಿವಾಸಕ್ಕೆ ಇಂದು ರಾಘವೇಂದ್ರ ರಾಜ್‌ಕುಮಾರ್ ಭೇಟಿ ನೀಡಿ ವೆಂಕಟೇಶ್ ಕುಟುಂಬದೊಟ್ಟಿಗೆ ಮಾತುಕತೆ ನಡೆಸಿದರು. ಮನೆಯವರೊಟ್ಟಿಗೆ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್, ''ಒಂದು ಜೀವವನ್ನು ಕಳೆದುಕೊಂಡಾಗ ಎಷ್ಟು ದುಃಖವಾಗುತ್ತದೆ ಎಂಬುದು ನಮಗೆ ಗೊತ್ತಿದೆ. ನಾವೀಗ ಅದನ್ನು ಅನುಭವಿಸುತ್ತಿದ್ದೇವೆ. ನಮ್ಮ ದುಃಖ ನಿಮಗೆ ಬಂದಿರುವುದು ಬಹಳ ಬೇಸರದ ಸಂಗತಿ. ನಾವು ದುಃಖದಲ್ಲಿದ್ದಾಗ ಸಾಂತ್ವನ ಹೇಳಲು ಇಡೀ ರಾಜ್ಯ, ದೇಶವೇ ಬಂದಿದೆ. ಆದರೆ ನಿಮಗೆ ಸಾಂತ್ವನ ಹೇಳಲು ನಾವಿದ್ದೇವೆ'' ಎಂಬ ಭರವಸೆಯನ್ನು ರಾಘವೇಂದ್ರ ರಾಜ್‌ಕುಮಾರ್ ನೀಡಿದ್ದಾರೆ.

    Raghvenda Rajkumar Visited Puneeths Fans House In Channapatna

    ''ಯಾವ ಅಭಿಮಾನಿಗಳೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ಎಲ್ಲದಕ್ಕಿಂತಲೂ ಜೀವ ದೊಡ್ಡದು, ಕುಟುಂಬ ದೊಡ್ಡದು. ಪುನೀತ್ ಇಂದಾಗಿ ಅಭಿಮಾನಿಗಳು ಸಾವಿಗೀಡಾದರು ಎಂಬುದು ಬಹಳ ದುಃಖ ತರುವ ವಿಷಯ, ಪುನೀತ್‌ಗೆ ಆ ಹೆಸರು ಕೊಡಬೇಡಿ'' ಎಂದು ರಾಘವೇಂದ್ರ ರಾಜ್‌ಕುಮಾರ್ ಮನವಿ ಮಾಡಿದರು.

    ಚನ್ನಪಟ್ಟಣ ತಾಲ್ಲೂಕಿನ ಸವಿತಾ ಸಮಾಜದ ಗೌರವಾಧ್ಯಕ್ಷ ದಿವಂಗತ ಎಲೇಕೇರಿ ಕೃಷ್ಣಪ್ಪನವರ ಮಗ ವೆಂಕಟೇಶ್ (ಡಾಲಿವೆಂಕಿ) (25) ಅಪ್ಪುವಿನ ಅಭಿಮಾನಿಯಾಗಿದ್ದು ಇಂದು ಮರಣ ಹೊಂದಿದ್ದಾನೆ. ಅಪ್ಪುವಿನ ಅಭಿಮಾನಿಯಾಗಿದ್ದ ವೆಂಕಟೇಶ್ ಕೈಯ ಮೇಲೆ 'ಪವರ್' ಎಂದು ಹಚ್ಚೆ ಹಾಕಿಸಿಕೊಂಡಿದ್ದ. ಪುನೀತ್‌ ಹುಟ್ಟುಹಬ್ಬದ ವೇಳೆ ಅವರು ಎಲ್ಲಿದ್ದರೂ ಭೇಟಿ ಮಾಡಿ ಶುಭಾಶಯ ಕೋರುತ್ತಿದ್ದ ಪರಿಪಾಠ ಇಟ್ಟುಕೊಂಡಿದ್ದ. ಆದರೆ ಪುನೀತ್ ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತನ ಕಣ್ಣುಗಳನ್ನು ಅವನ ಕುಟುಂಬಸ್ಥರು ದಾನ ಮಾಡಿದ್ದಾರೆ.

    ಪುನೀತ್ ಸಾವಿನ ಬಳಿಕ ರಾಜ್ಯದಾದ್ಯಂತ ಈವರೆಗೆ 13ಕ್ಕೂ ಹೆಚ್ಚು ಮಂದಿ ಅಭಿಮಾನಿಗಳು ಸಾವಿಗೀಡಾಗಿದ್ದಾರೆ. ಇದರಲ್ಲಿ ಹಲವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದ ದಿನ ಬೆಳಗಾವಿ ರಾಹುಲ್ ಗಡಿವಡ್ಡಾರ ಎಂಬ ಯುವಕ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡು ನಿಧನ ಹೊಂದಿದ್ದ. ಅದೇ ದಿನ ಹೊಸಪೇಟೆಯ ನಿವಾಸಿ ಸಾದಪ್ಪ ಎಂಬಾತ ಕಾಲುವೆಗೆ ಹಾರಿ ಪ್ರಾಣ ಬಿಟ್ಟ. ಚಿಕ್ಕಮಗಳೂರಿನಲ್ಲಿ ಶರತ್ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದರು.

    ಚಾಮರಾಜನಗರ ಜಿಲ್ಲೆಯ ಹನೂರಿನ ಮುನಿಯಪ್ಪ ಎಂಬಾತ ಅಪ್ಪು ಇನ್ನಿಲ್ಲ ಎಂಬ ಸುದ್ದಿ ಕೇಳಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬೆಳಗಾವಿಯ ಶಿಂದೊಳ್ಳಿ ಗ್ರಾಮದ ಪರುಶಾರಾಮ್ ಎಂಬ ಪುನೀತ್ ಅಭಿಮಾನಿ ಸಹ ನಿಧನದ ಸುದ್ದಿ ಕೇಳಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕೊಪ್ಪಳದ ಚಿಕ್ಕ ಬನಿಗೋಳದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ ಜ್ಞಾನಮೂರ್ತಿ ಎಂಬುವರಿಗೂ ಪುನೀತ್ ನಿಧನದ ಸುದ್ದಿ ಕೇಳಿ ಹೃದಯಾಘಾತವಾಗಿದೆ.

    ಮಂಡ್ಯದ ಕೆರೆಗೋಡು ಗ್ರಾಮದ ಕೆ.ಎಂ.ರಾಜೇಶ್ ಎಂಬುವರು ಅಪ್ಪು ನಿಧನದ ಸುದ್ದಿ ಕೇಳಿ ತೀವ್ರ ಆಘಾತಕ್ಕೆ ಒಳಗಾಗಿದ್ದರು. ಆಹಾರ, ನೀರು ಸೇವಿಸದೆ ಅಸ್ವಸ್ಥರಾಗಿದ್ದರು. ಕೊನೆಗೆ ಅಪ್ಪುವಿನ ಅಂತಿಮ ದರ್ಶನಕ್ಕೆ ಹೋಗುತ್ತೇನೆಂದು ಹೋಗಿ ತೀವ್ರ ಅಸ್ವಸ್ಥಗೊಂಡು ಮಂಡ್ಯದ ಪಾರ್ಕ್‌ ಒಂದರ ಬಳಿ ಕುಸಿದು ಬಿದ್ದಿದ್ದರು ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯ್ತಾದರೂ ಅವರು ನಿಧನ ಹೊಂದಿದರು. ರಾಜ್‌ಕುಮಾರ್ ಕುಟುಂಬದ ಬಹುದೊಡ್ಡ ಅಭಿಮಾನಿ ಆಗಿದ್ದ ರಾಜೇಶ್, ರಾಜ್‌ಕುಮಾರ್ ಹೆಸರಿನ ಹೋಟೆಲ್ ನಡೆಸುತ್ತಿದ್ದರು.

    ಅಪ್ಪುವಿನ ಅದಮ್ಯ ಅಭಿಮಾನಿ ಆಗಿದ್ದ ತುಮಕೂರಿನ ಭರತ್ ಎಂಬಾತ ನಿನ್ನೆ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಾರೆ ಕೆಲಸ ಮಾಡಿಕೊಂಡಿದ್ದ ಭರತ್, ನಾನು ಅಪ್ಪುವಿನ ಅಭಿಮಾನಿ, ಅವರು ಇರುವ ಲೋಕಕ್ಕೆ ಹೋಗುತ್ತಿದ್ದೇನೆ. ಅವರಂತೆ ನಾನೂ ಕಣ್ಣು ದಾನ ಮಾಡಬೇಕು ಎಂದು ಪತ್ರದಲ್ಲಿ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭರತ್‌ನ ಪೋಷಕರು ಅವನ ಆಸೆಯಂತೆ ಕಣ್ಣುಗಳನ್ನು ದಾನ ಮಾಡಿದ್ದಾರೆ.

    English summary
    Raghavendra Rajkumar visited Puneeth's fan Venkatesh's house in Channapatna. Venkatesh died on November 04.
    Monday, November 8, 2021, 8:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X