ಸಂಜನಾ-ರಾಗಿಣಿ ಜಾಮೀನು ಅರ್ಜಿ ಮುಂದೂಡಿಕೆ, ಮತ್ತೆ ಮೂರು ದಿನ ಜೈಲು
ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 24ಕ್ಕೆ ಮುಂದೂಡಲಾಗಿದೆ. ಈ ಮೂಲಕ ಮತ್ತೆ ಮೂರು ದಿನಗಳ ಕಾಲ ನಟಿಯರು ಜೈಲಿನಲ್ಲಿಯೇ ಇರಬೇಕಾಗಿದೆ.
ಬೆಂಗಳೂರಿನ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ಇಂದು ಇಬ್ಬರು ನಟಿಯರ ಜಾಮೀನು ಅರ್ಜಿ ವಿಚಾರಣೆಗೆ ಬಂದಿತ್ತು. ಸಂಜನಾ ಹಾಗೂ ರಾಗಿಣಿ ಪರ ವಕೀಲರ ವಾದ ಆಲಿಸಿದ ನ್ಯಾಯಾಧೀಶರು ಮತ್ತೆ ಮೂರು ದಿನಗಳ ಕಾಲ ವಿಚಾರಣೆ ಮುಂದೂಡಿದೆ.
ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿಗೆ ಸಿಸಿಬಿ ಪೊಲೀಸರು ಆಕ್ಷೇಪಣೆ ಸಲ್ಲಿಸಲು ಸಮಯ ಕೇಳಿದ್ದಾರೆ ಎನ್ನಲಾಗಿದೆ. ಹಾಗಾಗಿ, ಮೂರು ದಿನಗಳ ಕಾಲ ವಿಚಾರಣೆ ಮುಂದಕ್ಕೆ ಹಾಕಿದೆ.

ಇನ್ನು ರಾಗಿಣಿ ದ್ವಿವೇದಿ ಅವರ ಪರ ವಕೀಲರು ''ರಾಗಿಣಿ ಮನೆಯಲ್ಲಿ ಯಾವುದೇ ಮಾದಕ ವಸ್ತುಗಳು ಸಿಕ್ಕಿಲ್ಲ, ಅಂತಯೇ ರಾಗಿಣಿ ಅವರ ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ, ಆದರೆ ಅದರಲ್ಲು ಯಾವುದೇ ಸಾಕ್ಷ್ಯಗಳು ಇಲ್ಲ. ಇದು ಕೇವಲ ಆರೋಪ ಅಷ್ಟೇ'' ಎಂದು ವಾದ ಮಾಡಿದರು.
ಆದರೆ, ಸಿಸಿಬಿ ಪೊಲೀಸರು ಮಾತ್ರ ರಾಗಿಣಿ ಅವರಿಗೆ ಶ್ರೀಮಂತ ವ್ಯಕ್ತಿಗಳ ಪರಿಚಯವಿದೆ, ಅವರ ಕುರಿತು ನಮ್ಮಲ್ಲಿ ಸಾಕ್ಷಿಗಳಿವೆ, ಒಂದು ವೇಳೆ ಜಾಮೀನು ನೀಡಿದರೆ ಸಾಕ್ಷ್ಯನಾಶ ಆಗಬಹುದು. ಹಾಗಾಗಿ, ಜಾಮೀನು ನೀಡಬಾರದು ಎಂದು ಕೋರ್ಟ್‌ಗೆ ಮನವರಿಕೆ ಮಾಡಿದ್ದಾರೆ.
ವಕೀಲರು ಹಾಗೂ ಸಿಸಿಬಿ ಪೊಲೀಸರ ಅಭಿಪ್ರಾಯಗಳನ್ನು ಕೇಳಿದ ಎನ್‌ಡಿಪಿಎಸ್ ವಿಶೇಷ ಕೋರ್ಟ್ ಸೆಪ್ಟೆಂಬರ್ 24ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ.


Click it and Unblock the Notifications











