ಪೊಲೀಸ್ ಪಾತ್ರದಲ್ಲಿ ಮಿಂಚಲಿದ್ದಾರೆ ಡ್ರಗ್ಸ್ ಪ್ರಕರಣ ಆರೋಪಿ ರಾಗಿಣಿ
ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ನಟಿ ರಾಗಿಣಿ 145 ಕ್ಕೂ ಹೆಚ್ಚು ದಿನಗಳ ಕಾಲ ಆರೋಪಿಯಾಗಿ ಜೈಲು ವಾಸ ಅನುಭವಿಸಿದರು.
ಷರತ್ತುಬದ್ಧ ಜಾಮೀನಿನ ಮೇಲೆ ಹೊರಗೆ ಬಂದಿರುವ ರಾಗಿಣಿ ಮತ್ತೆ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವು ಸಿನಿಮಾಗಳನ್ನು ರಾಗಿಣಿ ಒಪ್ಪಿಕೊಳ್ಳುತ್ತಿದ್ದಾರೆ. ಇದೀಗ 'ಜಾನಿ ವಾಕರ್' ಹೆಸರಿನ ಬಹುಭಾಷಾ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.
'ಜಾನಿ ವಾಕರ್' ಸಿನಿಮಾದಲ್ಲಿ ನಟಿ ರಾಗಿಣಿ ಖಡಕ್ ಪೊಲೀಸ್ ಪಾತ್ರದಲ್ಲಿ ನಟಿಸಲಿದ್ದಾರೆ. ರಾಗಿಣಿಗೆ ಪೊಲೀಸ್ ಪಾತ್ರ ಹೊಸದೇನೂ ಅಲ್ಲ ರಾಗಿಣಿ ಐಪಿಎಸ್ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ ರಾಗಿಣಿ.

ಆರೋಪಿ ರಾಗಿಣಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ!
ಆದರೆ ಈ ಬಾರಿ ರಾಗಿಣಿ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿರುವುದು ತುಸು ವಿಶೇಷವೇ. ಏಕೆಂದರೆ ಸ್ವತಃ ರಾಗಿಣಿ ದ್ವಿವೇದಿ ಡ್ರಗ್ಸ್ ಪ್ರಕರಣದಲ್ಲಿ ಆರೋಪಿ ಆಗಿದ್ದಾರೆ. ಆದರೆ ತೆರೆಯ ಮೇಲೆ ಖಡಕ್ ಪೊಲೀಸ್ ಪಾತ್ರ ನಿರ್ವಹಿಸಲು ಮುಂದಾಗಿದ್ದಾರೆ. ರಾಗಿಣಿ ಅವರ ಪೊಲೀಸ್ ಪಾತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

'ಬುದ್ಧಿವಂತ ಮತ್ತು ಪ್ರಾಮಾಣಿಯ ಅಧಿಕಾರಿ ಪಾತ್ರ ನನ್ನದು'
ಪಾತ್ರದ ಬಗ್ಗೆ ಮಾತನಾಡಿರುವ ನಟಿ ರಾಗಿಣಿ, 'ನನ್ನದು ತನಿಖಾಧಿಕಾರಿಯ ಪಾತ್ರ. ಬಹಳ ಬುದ್ಧಿವಂತ ಮತ್ತು ಪ್ರಮಾಣಿಕ ಅಧಿಕಾರಿಯ ಪಾತ್ರ ನನ್ನದು. ಸಿನಿಮಾದ ಕತೆಯು ನನ್ನ ಪಾತ್ರದ ಸುತ್ತಲೇ ಗಿರಕಿ ಹೊಡೆಯುತ್ತದೆ. ಪಾತ್ರದಲ್ಲಿ ನಟಿಸಲು ನಾನು ಉತ್ಸುಕಳಾಗಿದ್ದೇನೆ' ಎಂದಿದ್ದಾರೆ ರಾಗಿಣಿ.

'ಕರ್ವ 3' ಸಿನಿಮಾದಲ್ಲಿ ನಟಿಸಲಿದ್ದಾರೆ ರಾಗಿಣಿ
'ಜಾನಿ ವಾಕರ್'ಗೆ ಮುನ್ನಾ 'ಕರ್ವ 3' ಸಿನಿಮಾಕ್ಕೆ ಸಹಿ ಹಾಕಿದ್ದರು ನಟಿ ರಾಗಿಣಿ. ಜೈಲಿಗೆ ಹೋಗುವ ಮುನ್ನಾ ರಾಗಿಣಿ ಕೈಯಲ್ಲಿ ಕೆಲವು ಸಿನಿಮಾಗಳಿದ್ದವು ಅವುಗಳನ್ನು ಸಹ ಮುಗಿಸುವ ಪಕ್ರಿಯೆಯಲ್ಲಿ ರಾಗಿಣಿ ಭಾಗಿಯಾಗಿದ್ದಾರೆ.
Recommended Video

145 ದಿನಕ್ಕೂ ಹೆಚ್ಚು ಕಾಲ ಜೈಲಿನಲ್ಲಿ
ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿಯನ್ನು ಸಿಸಿಬಿ ಪೊಲೀಸರು ಕಳೆದ ವರ್ಷ ಸೆಪ್ಟೆಂಬರ್ 4 ರಂದು ಬಂಧಿಸಿದ್ದರು. ಸೆಪ್ಟೆಂಬರ್ 15 ರಿಂದ ನ್ಯಾಯಾಂಗ ಬಂಧನದಲ್ಲಿದ್ದ ರಾಗಿಣಿ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿತ್ತು. ಕೊನೆಗೆ ಈ ವರ್ಷದ ಜನವರಿ 25 ರಂದು ರಾಗಿಣಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.


Click it and Unblock the Notifications











