ಅನುರಾಗ್- ರಾಹುಲ್ ವಾಕ್ಸಮರ; "ಇದೇ ಬಿಜೆಪಿಯ ನಿಜವಾದ ಹಿಂದುತ್ವ" ಎಂದ ಕಿಶೋರ್
ವಿಪಕ್ಷ ನಾಯಕ ರಾಹುಲ್ ಗಾಂಧಿ ಉದ್ದೇಶಿಸಿ ಜಾತಿ ಗಣತಿ ಬಗ್ಗೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಹೇಳಿಕೆ ಭಾರೀ ಚರ್ಚೆ ಹುಟ್ಟಾಕ್ಕಿದೆ. ಬಿಜೆಪಿ ಅನುರಾಗ್ ಠಾಕೂರ್ ಹೇಳಿಕೆಯನ್ನು ಸಮರ್ಥಿಸಿಕೊಂಡರೆ ವಿಪಕ್ಷ ನಾಯಕರು ಟೀಕಿಸುತ್ತಿದ್ದಾರೆ. ಸದ್ಯ ಕನ್ನಡ ನಟ ಕಿಶೋರ್ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಾತಿ ಗೊತ್ತಿಲ್ಲದವರು ಜಾತಿ ಗಣತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿಯನ್ನು ಬಿಜೆಪಿ ಅನುರಾಗ್ ಠಾಕೂರ್ ಕುಟುಕಿದ್ದರು. ಈ ವೇಳೆ ಇಬ್ಬರ ನಡುವೆ ವಾಕ್ಸಮರ ನಡೆಯಿತು. "ನೀವು ನನ್ನನ್ನು ಅವಮಾನಿಸಿದ್ದೀರಿ, ಪ್ರತಿದಿನ ಅವಮಾನಿಸುತ್ತಲೇ ಇದ್ದೀರಿ. ಯಾರು ಆದಿವಾಸಿ, ದಲಿತ ಹಾಗೂ ಹಿಂದುಳಿದವರ ಬಗ್ಗೆ ಮಾತನಾಡುತ್ತಾರೋ ಅವರನ್ನೆಲ್ಲಾ ಅವಮಾನಿಸಲಾಗುತ್ತಿದೆ. ನಾನು ಅವಮಾನಗಳನ್ನು ಸಂತೋಷದಿಂದ ಸ್ವೀಕರಿಸುತ್ತೇನೆ"

"ಅನುರಾಗ್ ಠಾಕೂರ್ ನನ್ನ ಬಗ್ಗೆ ನಿಂದಿಸಿ, ಅವಮಾನಿಸಿದ್ದಾರೆ. ಅವರ ಯಾವುದೇ ಕ್ಷಮೆ ನನಗೆ ಬೇಕಾಗಿಲ್ಲ, ಇದೇ ಸದನದಲ್ಲಿ ನಾನು ಜಾತಿ ಗಣತಿಗೆ ಅನುಮತಿ ತೆಗೆದುಕೊಳ್ಳುತ್ತೇನೆ ಎಂದು ರಾಹುಲ್ ಗಾಂಧಿ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದರು. ಕಾಂಗ್ರೆಸ್ ನಾಯಕರು ಅನುರಾಗ್ ಠಾಕೂರ್ ಹೇಳಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಒಟ್ಟಾರೆ ಬಿಜೆಪಿ ಸಂಸದರ ಹೇಳಿಕೆಗೆ ಲೋಕಸಭೆಯಲ್ಲಿ ಗದ್ದಲ ಉಂಟಾಗಿತ್ತು.
ನಟ ಕಿಶೋರ್ ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ಧರ್ಮಾಂಧತೆಯ ಬೌದ್ಧಿಕ ದಿವಾಳಿತನದಲ್ಲಿ ಜ್ವಲಂತ ಸಮಸ್ಯೆಗಳನ್ನು ಮರೆಮಾಚಲು ಅವಾಚ್ಯ ಬೈಗುಳಗಳಿಗಿಳಿದ ಮೋದಿ ಪಕ್ಷದ, ಮನುವಾದಿ ಜಾತಿವಾದಿ ಮುಖದ ಅನಾವರಣ."

"ನಿಜ, ಕೊಲೆಯನ್ನೂ ಸಮರ್ಥಿಸಿಕೊಳ್ಳುವ ಭಕ್ತರು ಹೇಳುವಂತೆ ಜಾತಿ ಯಾವುದೆಂದು ಕೇಳಿಯೇ ಜಾತಿ ಜನಗಣತಿ ಮಾಡಬೇಕು. ಆದರೆ ಜಾತಿ ಕೇಳುವುದರ ಹಿಂದಿನ ಉದ್ದೇಶ, ವಿರೋಧ ಪಕ್ಷದ ನಾಯಕ ಹೇಳಿದಂತೆ ಪ್ರತಿಯೊಬ್ಬರ ಪಾಲುಗೊಳ್ಳುವಿಕೆ ಮತ್ತು ಪಾಲುದಾರಿಕೆಯನ್ನು ನಿರ್ಧರಿಸಲು ಆಗಬೇಕು ..
ಮೋದಿಯ ಮುಖವಾಣಿ ಅನುರಾಗ(ವಿಲ್ಲದ) ಠಾಕುರನಂತೆ ಜಾತಿ ಗೊತ್ತಿಲ್ಲದವನು "ಜಾತಿ ಜನಗಣತಿಯ ಬಗ್ಗೆ ಮಾತಾಡಬಾರದು" ಎಂದು ಅವಮಾನಿಸಲಲ್ಲ"
"ಮೋದಿ ಮತ್ತವರ ಚೇಲಾಗಳು ಅವಮಾನಿಸುತ್ತಿರುವುದು ಪ್ರಸ್ತುತ ಸಮಸ್ಯೆಗಳಿಗೆ ದನಿಯಾಗುತ್ತಿರುವ ಪ್ರತಿಪಕ್ಷದ ನಾಯಕನನ್ನೂ ಜಾತಿ ಜನಗಣತಿಯಂಥ ಪ್ರಮುಖ ವಿಷಯವನ್ನೂ ಮಾತ್ರವಲ್ಲ, ಜಾತಿ ವ್ಯವಸ್ಥೆಯನ್ನು ಮೀರುವ ಅಂತರಜಾತೀಯ ವಿವಾಹದ ಪ್ರಯತ್ನಗಳನ್ನೂ ಸಹ"
"ಅಂತರಜಾತೀಯ ವಿವಾಹವನ್ನು ತುಂಬಿದ ಸಂಸತ್ತಿನಲ್ಲಿ ಅವಹೇಳನ ಮಾಡಿದ್ದು ಅಕ್ಷಮ್ಯ. ಮೋದಿ ಮತ್ತವರ ಕೂಟ ಅದನ್ನು ಬೆಂಬಲಿಸುತ್ತಿರುವುದು ಇನ್ನೂ ಘೋರ. ಇದೇ ವರ್ಣಬೇಧದ ಪ್ರತಿಪಾದಕರ ನಿಜವಾದ ಬಣ್ಣ. ಇದೇ ಬಿಜೆಪಿಯ ನಿಜವಾದ ಹಿಂದುತ್ವ" ಎಂದು ಬರೆದುಕೊಂಡಿದ್ದಾರೆ.
ಇನ್ನು ಅನುರಾಗ್ ಠಾಕೂಲ್ ವಿವಾದಾತ್ಮಕ ಹೇಳಿಕೆಯನ್ನು 'ಕಡತದಿಂದ ತೆಗೆದಿದ್ದರೂ ಅದನ್ನು ಸಾಮಾಜಿಕ ಜಾಲತಾಣ ಎಕ್ಸ್(ಟ್ವಿಟರ್) ನಲ್ಲಿ ಪ್ರಧಾನಿ ಮೋದಿ ಹಾಕಿದ್ದಾರೆ. ಹಾಗಾಗಿ ಅವರ ವಿರುದ್ಧ ಕಾಂಗ್ರೆಸ್ ಹಕ್ಕು ಚ್ಯುತಿ ಮಂಡನೆ ಮಾಡಿದೆ.


Click it and Unblock the Notifications











