"ಸತ್ಯಕ್ಕೆ ಶಾಂತಿಗೆ ಹೆಸರಾದ ದೇಶಕ್ಕೆ ಎಂಥ ಪ್ರಧಾನಿ, ನಾಚಿಕೆಗೇಡು, ದೇಶಕ್ಕೇ ಅವಮಾನ"; ಕಿಶೋರ್
ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ(ಜುಲೈ 1) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. "ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರು ಸದಾ ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂದಿದ್ದರು. ಪ್ರಧಾನಿ ಮೋದಿ ಎದ್ದು ನಿಂತು ಈ ಹೇಳಿಕೆಯನ್ನು ಖಂಡಿಸುವ ಪ್ರಯತ್ನ ಮಾಡಿದ್ದರು.
ರಾಹುಲ್ ಗಾಂಧಿ ಹೇಳಿಕೆಯನ್ನು ಹಲವರು ಸಮರ್ಥಿಸಿಕೊಂಡಿದ್ದಾರೆ. ರಾಹುಲ್ ಹೇಳಿದ್ದರಲ್ಲಿ ತಪ್ಪಿಲ್ಲ, ಅವರ ಭಾಷಣದಲ್ಲಿ ಹಿಂದೂ ಧರ್ಮವನ್ನು ಅವಮಾನಿಸಿದ್ದಾ?" ಎಂದು ಕೇಳುತ್ತಿದ್ದಾರೆ. ಇದೀಗ ಇದೇ ವಿಚಾರದ ಬಗ್ಗೆ ನಟ ಕಿಶೋರ್ ಪ್ರತಿಕ್ರಿಯಿಸಿದ್ದಾರೆ. ರಾಹುಲ್ ಗಾಂಧಿ ಭಾಷಣದ ವೇಳೆ ಪ್ರಧಾನಿ ಮೋದಿ ಎದ್ದು ನಿಂತು ಖಂಡಿಸಿದ ವೀಡಿಯೋ ತುಣುಕನ್ನು ಹಂಚಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಿಜೆಪಿಯನ್ನು ಗುರಿಯಾಗಿಸಿಕೊಂಡು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರು ದಿನದ 24 ಗಂಟೆ ಹಿಂಸೆ ಹಾಗೂ ದ್ವೇಷದಲ್ಲಿ ತೊಡಗುತ್ತಾರೆ. ಅವರು ಹಿಂದೂಗಳೇ ಅಲ್ಲ. ಹಿಂದೂ ಧರ್ಮ ಭಯ, ಸುಳ್ಳು ಹಾಗೂ ದ್ವೇಷವನ್ನು ಎಂದಿಗೂ ಹರಡುವುದಿಲ್ಲ" ಎಂದರು. ಈ ವೇಳೆ ಪ್ರಧಾನಿ ಮೋದಿ ಎದ್ದು ನಿಂತು ರಾಹುಲ್ ಭಾಷಣ ತಡೆದು ಮಾತನಾಡಿದ್ದರು.
"ಇದು ಬಹಳ ಗಂಭೀರವಾದ ವಿಚಾರ, "ಇಡೀ ಹಿಂದೂ ಸಮಾಜವನ್ನು ಹಿಂಸಾಚಾರಿಗಳು ಎಂದು ಕರೆಯುವುದು ಸರಿಯಲ್ಲ" ಎಂದು ಮೋದಿ ಆಕ್ಷೇಪ ವ್ಯಕ್ತಪಡಿಸಿದ್ದರು. ಕೂಡಲೇ ರಾಹುಲ್ ಗಾಂಧಿ "ನಾನು ಬಿಜೆಪಿಯನ್ನು ಹಿಂಸಾತ್ಮಕ ಎಂದು ಕರೆದಿದ್ದು. ಮೋದಿ ಮಾತ್ರ ಹಿಂದೂ ಸಮಾಜವಲ್ಲ, ಬಿಜೆಪಿ ಅಂದ್ರೆ ಹಿಂದೂ ಸಮಾಜವಲ್ಲ. ಅಥವಾ ಆರ್‌ಎಸ್‌ಎಸ್ ಮಾತ್ರವೇ ಇಡೀ ಹಿಂದೂ ಸಮಾಜವಲ್ಲ" ಎಂದು ತಿರುಗೇಟು ನೀಡಿದ್ದರು.
ಬಳಿಕ ಶಿವನ ಫೋಟೋವನ್ನು ಪ್ರದರ್ಶಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶಿವನ ಸಂದೇಶವು ನಿರ್ಭಯತೆ ಮತ್ತು ಅಹಿಂಸೆಯನ್ನು ಸೂಚಿಸುತ್ತದೆ. ಆದರೆ, ಬಿಜೆಪಿಯ ಎಲ್ಲರೂ ಹಿಂದೂಗಳನ್ನು ಪ್ರತಿನಿಧಿಸುವುದಿಲ್ಲ ಅಥವಾ ಆರ್‌ಎಸ್‌ಎಸ್ ಎಂದರೆ ಹಿಂದೂಗಳ ಪ್ರತಿನಿಧಿಯಲ್ಲ ಎಂದು ವ್ಯಂಗ್ಯವಾಡಿದ್ದರು. ರಾಹುಲ್ ಭಾಷಣ ಭಾರೀ ಚರ್ಚೆಗೆ ಕಾರಣವಾಗಿತ್ತು. ಬಿಜೆಪಿ ನಾಯಕರು ಇದನ್ನು ಖಂಡಿಸಿದ್ದರು.
ಸದ್ಯ ನಟ ಕಿಶೋರ್ ಪೋಸ್ಟ್ ಮಾಡಿ "ತನ್ನ ಅಯೋಗ್ಯತೆಯನ್ನು ಮುಚ್ಚಲು, ಇನ್ನೊಬ್ಬರನ್ನು ಕೀಳೆಂದು ತೋರಿಸಲು, ರಾಜಾರೋಷವಾಗಿ ಮಾತು ತಿರುಚುವ ಹಸೀ ಸುಳ್ಳು ಹೇಳುವ, ಹರಡುವ ಅತ್ಯಂತ ಕೀಳುಮಟ್ಟಕ್ಕೂ ಇಳಿಯಬಲ್ಲ, ಘನತೆ ಹೀನ ನಾಚಿಕೆಗೇಡು ಸುಳ್ಳನೆಂದು ತನ್ನನ್ನು ತಾನು ತುಂಬಿದ ಸಭೆಯಲ್ಲಿ ಮತ್ತೆ ರುಜುವಾತು ಮಾಡಿಕೊಂಡ ಮೋದಿ.. ಇದೆಂಥಾ ವಿಕೃತ ಮನಸ್ಥಿತಿ"
"ಸತ್ಯಕ್ಕೆ ಶಾಂತಿಗೆ ಹೆಸರಾದ ದೇಶಕ್ಕೆ ಎಂಥ ಪ್ರಧಾನಿ... ನಾಚಿಕೆಗೇಡು ... ದೇಶಕ್ಕೇ ಅವಮಾನ" ಎಂದು ಬರೆದುಕೊಂಡಿದ್ದಾರೆ. ಕಿಶೋರ್ ಪೋಸ್ಟ್ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ. ಕೆಲವರು ಅವರನ್ನು ಬೆಂಬಲಿಸಿದರೆ ಮತ್ತೆ ಕೆಲವರು ವಿರೋಧಿಸಿ ಕಾಮೆಂಟ್ ಮಾಡಿದ್ದಾರೆ.
ನಟ ಕಿಶೋರ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ದೇಶದ ಆಗುಹೋಗುಗಳ ಬಗ್ಗೆ ಸೂಕ್ಷ್ಮವಾಗಿ ಸ್ಪಂದಿಸುತ್ತಿರುತ್ತಾರೆ. ಮುಖ್ಯವಾಗಿ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಇದೇ ಕಾರಣಕ್ಕೆ ಸಾಕಷ್ಟು ವಿರೋಧ ಎದುರಿಸುತ್ತಾ ಬರುತ್ತಿದ್ದಾರೆ. ಹಿಂದೆ ಕಿಶೋರ್ ಟ್ವಿಟರ್ ಅಕೌಂಟ್ ಕೂಡ ಸಸ್ಪೆಂಡ್ ಆಗಿತ್ತು. ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಅವ್ರು ಹೆಚ್ಚು ಸಕ್ರಿಯರಾದರು.


Click it and Unblock the Notifications











