ಟೋಬಿ ಚೆನ್ನಾಗಿಲ್ಲ ಎಂದ ಯುವತಿಗೆ ಕೆಟ್ಟದಾಗಿ ನಿಂದಿಸಿದ ಅಭಿಮಾನಿ; ಕ್ಷಮೆ ಕೇಳಿದ ರಾಜ್ ಬಿ ಶೆಟ್ಟಿ
ಶುಕ್ರವಾರ (ಆಗಸ್ಟ್ 25 ) ರಾಜ್ಯಾದ್ಯಂತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಚಿತ್ರ ಟೋಬಿ ಬಿಡುಗಡೆಯಾಗಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಹಲವರಿಗೆ ಸಿನಿಮಾ ಇಷ್ಟವಾಗಿಲ್ಲ. ಕೆಲವರಿಗೆ ಸಿನಿಮಾ ಇಷ್ಟವಾಗಿದೆ. ಅನೇಕರು ಬಹಿರಂಗವಾಗಿಯೇ ಟೋಬಿ ಚೆನ್ನಾಗಿಲ್ಲ ಎಂದು ಹೇಳಿದ್ದಾರೆ.
ಆದರೆ, ಮೈಸೂರಿನಲ್ಲಿ ಮೊದಲ ಶೋ ನೋಡಿ ಬಂದು ಸಿನಿಮಾ ಚೆನ್ನಾಗಿಲ್ಲ ಎಂದು ತನ್ನ ಅಭಿಪ್ರಾಯ ಹೇಳಿದ್ದ ಯುವತಿ ಮೇಲೆ ಅಭಿಮಾನಿಯೊಬ್ಬ ಹುಚ್ಚಾಟ ಮೆರೆದಿದ್ದ. ಯುವತಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ.ಇದು ಭಾರೀ ವಿವಾದಕ್ಕೆ ಕಾರಣವಾಗಿ ಅನೇಕರು, ಸಿನಿಮಾ ಚೆನ್ನಾಗಿದೆ ಎಂದು ಹೇಳಲೇಬೇಕು ಎಂಬ ನಿಯಮವಿದೆಯೇ ಎಂದು ಪ್ರಶ್ನಿಸಿದ್ದರು. ಜೊತೆಗೆ ಘಟನೆಯನ್ನು ಚಿತ್ರತಂಡದ ಗಮನಕ್ಕೆ ತಮದು ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ್ದರು.

ಕ್ಷಮೆ ಕೇಳಿದ ನಟ ರಾಜ್ ಬಿ ಶೆಟ್ಟಿ
ಯುವತಿಗೆ ಅವಾಚ್ಯ ಪದಗಳಿಂದ ನಿಂದಿಸಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೆ, ರಾಜ್ ಬಿ ಶೆಟ್ಟಿ ಸಾಮಾಜಿಕ ಮಾಧ್ಯಮಗಳ ಮೂಲಕ ಕ್ಷಮೆ ಕೇಳಿದ್ದಾರೆ. "ಸಿನಿಮಾ ಒಂದು ವಿಮರ್ಶೆಯ ಮಾಧ್ಯಮ. ಸಿನಿಮಾಗೆ ಟಿಕೆಟ್ ತೆಗೆದುಕೊಂಡು ನಮಗೆ ಸಂಭಾವನೆ ನೀಡುವ ಪ್ರೇಕ್ಷಕರು ತಮಗೆ ಅನಿಸಿದ್ದನ್ನು ವ್ಯಕ್ತಪಡಿಸುವ ಹಕ್ಕು ಹೊಂದಿದ್ದಾರೆ. ಅದನ್ನು ನಾವು ಒಪ್ಪಲು ಅಥವಾ ಒಪ್ಪದಿರಲು ಸ್ವತಂತ್ರರು" ಎಂದು ಹೇಳಿದ್ದಾರೆ.
ಮುಂದುವರೆದು, "ಆದರೆ ಯಾವುದೇ ರೀತಿಯಲ್ಲಿ ನಾವು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಜನರಿಗೆ ಕಿರುಕುಳ ನೀಡಲು ಪ್ರಯತ್ನಿಸಬಾರದು. ವಿಡಿಯೋದಲ್ಲಿರುವವರು ನಮ್ಮ ಚಿತ್ರಕ್ಕೆ ಸಂಬಂಧವೇ ಇಲ್ಲದವರು. ಆದರೂ ಕೂಡ ಮಹಿಳೆ ಎದುರಿಸಬೇಕಾದ ಕಿರುಕುಳಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ದಯವಿಟ್ಟು ನಮ್ಮನ್ನು ಕ್ಷಮಿಸಿ" ಎಂದು ಕೈ ಮುಗಿದ ಎಮೋಜಿಗಳೊಂದಿಗೆ ಕ್ಷಮೆ ಕೇಳಿದ್ದಾರೆ.

ಅಷ್ಟಕ್ಕೂ ಆಗಿದ್ದೇನು..?
ಮೈಸೂರಿನ ಸಂಗಮ್ ಚಿತ್ರಮಂದಿರದಲ್ಲಿ ಟೋಬಿ ಮೊದಲ ಪ್ರದರ್ಶನ ಮುಗಿದ ಬಳಿಕ ಮಾತನಾಡಿದ್ದ ಯುವತಿ ಚಿತ್ರ ಚೆನ್ನಾಗಿಲ್ಲ ಎಂದು ನೇರವಾಗಿ ಖಾಸಗಿ ಚಾನೆಲ್‌ನ ಕ್ಯಾಮೆರಾ ಮುಂದೆ ಹೇಳಿಬಿಟ್ಟಿದ್ದಾರೆ. ಇಷ್ಟಕ್ಕೆ ಕೋಪಗೊಂಡ ವ್ಯಕ್ತಿಯೋರ್ವ ಕನ್ನಡ ಸಿನಿಮಾ ಚೆನ್ನಾಗಿಲ್ಲ ಎನ್ನುತ್ತಿಯ ಎಂದಿದ್ದಾನೆ. ಜೊತೆಗೆ ಬರೆಯಲೂ ಸಹ ಅಸಹ್ಯವೆನಿಸುವ ಪದಗಳನ್ನು ಬಳಸಿ ಆಕೆಯನ್ನು ನೂರಾರು ಜನರ ಮುಂದೆ ನಿಂದಿಸಿದ್ದಾನೆ.
ಈ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, "ಸಿನೆಮಾ ಚೆನ್ನಾಗಿದ್ರೆ ಚೆನ್ನಾಗಿದೆ ಅಂತ ಹೇಳ್ತಾರೇ, ಇಲ್ಲಾ ಅಂದ್ರೆ ಇಲ್ಲಾ ಅಂತ ಹೇಳ್ತಾರೆ.. ಒತ್ತಾಯವಾಗಿ ಚೆನ್ನಾಗಿದೆ ಅಂತ ಹೇಳಿಸೋಕೆ ಇವನ್ಯಾರು? ರಾಜ್ ಬಿ ಶೆಟ್ಟಿ ನೋಡಿ ನಿಮ್ಮ ಅಭಿಮಾನಿ ರೌಡಿಯನ್ನ ಎಂದು ಹಲವರು ನಟನನ್ನು ಟ್ಯಾಗ್ ಮಾಡಿದ್ದರು. ಜೊತೆಗೆ ಇಂತಹವರಿಂದ ಮಹಿಳೆಯರು ಚಿತ್ರಮಂದಿರದ ಕಡೆಗೆ ಬರೋದು ಕಡಿಮೆ ಆಗಬಹುದು ಎಂಬ ಎಚ್ಚರಿಕೆ ನೀಡಿದ್ದರು.
ಇವುಗಳ ನಂತರ ರಾಜ್ ಬಿ ಶೆಟ್ಟಿ ಕ್ಷಮೆ ಕೇಳಿದ್ದಾರೆ. ನಟನ ಪೋಸ್ಟ್‌ಗೂ ಅನೇಕರು ಕಾಮೆಂಟ್ ಮಾಡುತ್ತಿದ್ದು, "ತಕ್ಷಣವೇ ಆ ಮಹಿಳೆಯನ್ನು ಬೇಟಿ ಮಾಡಿ ಕ್ಷಮೆ ಕೇಳಿ ಮತ್ತು ಆ ರೌಡಿಯ ಮೇಲೆ ಪೋಲೀಸ್ ಕೇಸ್ ಮಾಡಿ.. ಇಲ್ಲಂದ್ರೆ ನಿಮ್ಮ ಸಿನಿಮಾ ಹಳ್ಳ ಹಿಡಿಯುವುದು ಗ್ಯಾರಂಟಿ" ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
"ನಿಮ್ಮದಲ್ಲದ ತಪ್ಪಿಗೆ ಕ್ಷಮೆ ಕೇಳಿದ್ದು ನಿಮ್ಮ ದೊಡ್ಡಗುಣ...ಆ ರೌಡಿಯ ಮೇಲೆ ಸಿನಿಮಾ ತಂಡದಿಂದ ಕೇಸು ದಾಖಲಾಗಬೇಕು". "ನೀವೂ ಕ್ಷಮೆ ಕೇಳಿದ್ದು ಖುಷಿ ವಿಚಾರ.... ಆದ್ರೆ ಕನ್ನಡದವರಾಗಿ ಕನ್ನಡ ಬಳಸಿಲ್ಲ ಅನ್ನೋ ವಿಚಾರ ಬೇಜಾರಾಯ್ತು....ದಯವಿಟ್ಟು ಕನ್ನಡ ಬಳಸಿ" ಎಂದು ಹಲವರು ಕನ್ನಡ ಬಳಸಿ ವಿವರಣೆ ನೀಡಿ ಎಂದು ನಟನನ್ನು ಒತ್ತಾಯಿಸಿದ್ದಾರೆ.


Click it and Unblock the Notifications











