Kantara: "ಕಾಂತಾರ'-2 ಬಜೆಟ್ ಎಷ್ಟು ಕೋಟಿ ಅಂದ್ರೆ?.. ಸಿನಿಮಾ ಈಗ ಎಲ್ಲಿಗೆ ಬಂತು ಗೊತ್ತಾ?": ರಾಜ್ ಬಿ. ಶೆಟ್ಟಿ
ಸ್ಯಾಂಡಲ್‌ವುಡ್ 'RRR' ಅಂದ್ರೆ ರಿಷಬ್ ಶೆಟ್ಟಿ, ರಾಜ್. ಬಿ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ 'ಟೋಬಿ'ಯಾಗಿ ರಾಜ್ ಪ್ರೇಕ್ಷಕರ ಮುಂದೆ ಬಂದರು. ಬಳಿಕ 'ಸಪ್ತಸಾಗರದಾಚೆ' ಕಥೆ ಹೇಳಲು ರಕ್ಷಿತ್ ಶೆಟ್ಟಿ ಬಂದರು. ಸದ್ಯ ಈ ಸಿನಿಮಾ ತೆಲುಗಿನಲ್ಲಿ ರಿಲೀಸ್ ಆಗ್ತಿದೆ. 'ಟೋಬಿ' ಮಾಲಿವುಡ್‌ಗೆ ಎಂಟ್ರಿ ಕೊಡ್ತಿದೆ.
ಕರಾವಳಿ ಮೂಲದ ರಕ್ಷಿತ್, ರಿಷಬ್, ರಾಜ್ ತಮಮ ಪ್ರತಿಭೆಯಿಂದ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ತೆರೆ ಮುಂದೆ ಮಾತ್ರವಲ್ಲದೇ ತೆರೆ ಹಿಂದೆಯೂ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಇನ್ನು ಮೂವರು ಆತ್ಮೀಯ ಸ್ನೇಹಿತರಾಗಿರುವುದರಿಂದ ಒಬ್ಬರ ಸಿನಿಮಾದಲ್ಲಿ ಮತ್ತೊಬ್ಬರು ಕೆಲಸ ಮಾಡುವುದು ನಡೆಯುತ್ತಿದೆ. ರಿಷಬ್, ರಕ್ಷಿತ್, ರಾಜ್ ಮೂವರ ಸಿನಿಮಾಗಳ ಬಗ್ಗೆ ಮೂವರಿಗೆ ಮಾಹಿತಿ ಇರುತ್ತದೆ.

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಸಿನಿಮಾ ಕಳೆದ ವರ್ಷ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಕೇವಲ 15 ಕೋಟಿ ರೂ. ಬಜೆಟ್ ಸಿನಿಮಾ ನೂರಾರು ಕೋಟಿ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಿಗೂ ಸಿನಿಮಾ ಡಬ್ ಆಗಿ ಸಕ್ಸಸ್ ಕಂಡಿತ್ತು. ಆ ಬಳಿಕ ತಂಡ ಚಿತ್ರದ ಪ್ರೀಕ್ವೆಲ್ ಘೋಷಿಸಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವರ್ಷದ ಆರಂಭದಲ್ಲೇ ಸಿನಿಮಾ ಸೆಟ್ಟೇರಬೇಕಿತ್ತು. ಕಾರಣಾಂತರಗಳಿಂದ ತಡವಾಗುತ್ತಿದೆ.
ಕಳೆದ ವರ್ಷ ದಸರಾ ಸಂಭ್ರಮದಲ್ಲಿ 'ಕಾಂತಾರ' ಸಿನಿಮಾ ತೆರೆಗೆ ಬಂದಿತ್ತು. ಸಪ್ತಮಿ ಗೌಡ ನಾಯಕಿಯಾಗಿ ಮಿಂಚಿದ್ದರು. ಕಿಶೋರ್, ಅಚ್ಯುತ್ ಕುಮಾರ್ ಚಿತ್ರದ ತಾರಾಗಣದಲ್ಲಿದ್ದಾರೆ. ಪರಭಾಷಿಕರು ಕೂಡ ಈ ಸಿನಿಮಾ ಪ್ರೀಕ್ವೆಲ್‌ಗಾಗಿ ಕಾಯುತ್ತಿದ್ದಾರೆ. ಹೊಂಬಾಳೆ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ರಿಷಬ್ ಶೆಟ್ಟಿ ಬೇರೆಲ್ಲಾ ಸಿನಿಮಾಗಳನ್ನು ಪಕ್ಕಕ್ಕಿಟ್ಟು 'ಕಾಂತಾರ' ಧ್ಯಾನ ಮಾಡುತ್ತಿದ್ದಾರೆ.

'ಕಾಂತಾರ' ಚಿತ್ರದಲ್ಲಿ ಕಾಡುಬೆಟ್ಟು ಶಿವನ ಕಥೆ ಹೇಳಲಾಗಿತ್ತು. ಇದೀಗ ಆತನ ತಂದೆ, ತಾತನ ಕಥೆ ಹೇಳಲು ರಿಷಬ್ ಶೆಟ್ಟಿ ಹೊರಟ್ಟಿದ್ದಾರೆ. ಬಹುತೇಕ ಅದೇ ತಂಡ ಈ ಚಿತ್ರಕ್ಕೂ ಕೆಲಸ ಮಾಡಲಿದೆ. ಸದ್ಯ ಈ ಸಿನಿಮಾ ಬಗ್ಗೆ ಮಲಯಾಳಂ ಸಂದರ್ಶನದಲ್ಲಿ ನಟ, ನಿರ್ದೇಶಕ ರಾಜ್. ಬಿ ಶೆಟ್ಟಿ ಮಾತನಾಡಿದ್ದಾರೆ. 'ಟೋಬಿ' ಸಿನಿಮಾ ಮಲಯಾಳಂ ರಿಲೀಸ್ ಪ್ರಚಾರದಲ್ಲಿ ರಾಜ್ ಬ್ಯುಸಿಯಾಗಿದ್ದಾರೆ. ಈ ವೇಳೆ 'ಕಾಂತಾರ'-2 ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ. ಆ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.
"ಕಾಂತಾರ-2 ಸಿನಿಮಾ ಸದ್ಯ ಬರವಣಿಗೆ ಹಂತದಲ್ಲಿದೆ. ರಿಷಬ್ ಶೆಟ್ಟಿ ಮಂಗಳೂರಿನಲ್ಲಿ ಕೂತು ಕಥೆ, ಚಿತ್ರಕಥೆ ಸಿದ್ಧಪಡಿಸುತ್ತಿದ್ದಾರೆ. ಇದು ಮೊದಲ ಭಾಗಕ್ಕಿಂತ ಬಹಳ ದೊಡ್ಡ ಸಿನಿಮಾ. ಹೆಚ್ಚುಕಮ್ಮಿ 100 ಕೋಟಿ ರೂ. ಬಜೆಟ್. 'ಕಾಂತಾರ' ಚಿತ್ರವನ್ನು ಮಾಡಿದ ಬಜೆಟ್‌ಕ್ಕಿಂತ 10 ಪಟ್ಟು ಹೆಚ್ಚು ಮೊತ್ತದಲ್ಲಿ ಸಿನಿಮಾ ಮೂಡಿ ಬರಲಿದೆ. ಚಾರ್ಲಿ-2 ಬರಲ್ಲ. ಆ ಚಿತ್ರದ ನಿರ್ದೇಶಕ ಕಿರಣ್ ರಾಜ್ ಬೇರೆ ಕತೆ ಬರೆಯುತ್ತಿದ್ದಾರೆ. ನಾನು ಅದರಲ್ಲಿ ಇರಲ್ಲ. ರಕ್ಷಿತ್ ಮಾತ್ರ ಇರುವ ಸಾಧ್ಯತೆಯಿದೆ" ಎಂದಿದ್ದಾರೆ.
ಇನ್ನು ರಾಜ್ ಬಿ. ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಕೂಡ ರಿಲೀಸ್‌ಗೆ ರೆಡಿಯಾಗಿದೆ. ನಟಿ ರಮ್ಯಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮೊದಲಿಗೆ ನಾಯಕಿಯಾಗಿ ಆಕೆ ನಟಿಸಬೇಕು. ಬಳಿಕ ನಟಿಸಲ್ಲ ಎಂದಿದ್ದರು. ಆ ಜಾಗಕ್ಕೆ ಸಿರಿ ರವಿಕುಮಾರ್ ಆಗಮನವಾಯಿತು. ಕನ್ನಡದಲ್ಲಿ 'ಟೋಬಿ' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮಲಯಾಳಂ ಪ್ರೇಕ್ಷಕರು ಏನಂತಾರೋ ಕಾದು ನೋಡಬೇಕಿದೆ.


Click it and Unblock the Notifications











