'ಟೋಬಿ'ಯಾಗಿ ಗುದ್ದೋಕೆ ರಾಜ್ ಬಿ. ಶೆಟ್ಟಿ ಸಿದ್ಧ: 'ಗರುಡುಗಮನ ವೃಷಭವಾಹನ' ಮೀರಿಸುವಂತಿದೆ ಫಸ್ಟ್ ಲುಕ್
ಬಾಸಿಲ್ ನಿರ್ದೇಶನದದಲ್ಲಿ ರಾಜ್ ಬಿ. ಶೆಟ್ಟಿ ನಟನೆಯ ಸಿನಿಮಾ 'ಟೋಬಿ'. ಇತ್ತೀಚೆಗೆ ಥೀಮ್ ಪೋಸ್ಟರ್ ರಿಲೀಸ್ ಮಾಡಿತ್ತು ಚಿತ್ರತಂಡ. ಟೈಟಲ್‌ನಿಂದಲೇ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದು ಸದ್ಯ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಆಗಿದೆ. ಖಡಕ್ ಲುಕ್‌ನಲ್ಲಿ ರಾಜ್ ದರ್ಶನ ಕೊಟ್ಟಿದ್ದಾರೆ. "ಮಾರಿ ಮಾರಿ ..ಮಾರಿಗೆ ದಾರಿ" ಎನ್ನುವ ಟ್ಯಾಗ್‌ಲೈನ್ ಕೂಡ ಇದೆ.
ಆಗಸ್ಟ್ 25ಕ್ಕೆ 'ಟೋಬಿ' ಸಿನಿಮಾ ತೆರೆಗೆ ಬರಲಿದೆ. ತಮ್ಮ ವಿಭಿನ್ನ ಪಾತ್ರಗಳ ಮೂಲಕ ಜನರ ಮನ ಗೆದ್ದಿರುವ ರಾಜ್ ಬಿ. ಶೆಟ್ಟಿ ಈ ಬಾರಿ ಕುಡ ಅಂಥದ್ದೇ ಪ್ರಯತ್ನ ಮಾಡ್ತಿದ್ದಾರೆ. ಲೈಟರ್ ಬುದ್ಧ ಫಿಲಂಸ್, ಅಗಸ್ತ್ಯ ಫಿಲ್ಮ್ಸ್ ಹಾಗೂ ಕಾಫಿ ಗ್ಯಾಂಗ್ ಸ್ಟುಡಿಯೋ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಇದು ರಾಜ್ ಬಿ. ಶೆಟ್ಟಿ ಸಿನಿಕರಿಯರ್‌ನಲ್ಲೇ ಬಹಳ ದುಬಾರಿ ಸಿನಿಮಾ. ರವಿ ರೈ ಕಳಸ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಟಿ.ಕೆ ದಯಾನಂದ್ ಕಥೆ ಬರೆದಿದ್ದು ಅದನ್ನು ರಾಜ್ ಬಿ. ಶೆಟ್ಟಿ ಮತ್ತಷ್ಟು ಚೆಂದವಾಗಿ ಚಿತ್ರಕಥೆಗೆ ಇಳಿಸಿದ್ದಾರೆ.

ಇತ್ತೀಚೆಗೆ ಮೋಷನ್ ಪೋಸ್ಟರ್ ರಿಲೀಸ್ ಮಾಡಿ ಸಿನಿಮಾ ರಿಲೀಸ್ ಡೇಟ್ ಘೋಷಣೆ ಮಾಡಲಾಗಿತ್ತು. ಮಿಥುನ್ ಮುಕುಂದನ್ ಸಂಗೀತ ನಿರ್ದೇಶನ, ಪ್ರವೀಣ್ ಶ್ರೀಯನ್ ಛಾಯಾಗ್ರಹಣ - ಸಂಕಲನ ಹಾಗೂ ಅರ್ಜುನ್ ರಾಜ್ - ರಾಜಶೇಖರ್ ಅವರ ಸಾಹಸ ನಿರ್ದೇಶನ "ಟೋಬಿ" ಚಿತ್ರಕ್ಕಿದೆ.
ಫಸ್ಟ್ ಲುಕ್ ಪೋಸ್ಟರ್
ಸದ್ಯ ಹೇಳಿದಂತೆಯೇ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ರಾಜ್ ಬಿ. ಶೆಟ್ಟಿ ಭಯಂಕರ ಲುಕ್‌ನಲ್ಲಿ ದರ್ಶನಕೊಟ್ಟಿದ್ದಾರೆ. ಈ ಹಿಂದೆ ಪೋಸ್ಟರ್‌ನಲ್ಲಿ ಟಗರಿನ ಮುಖದ ಚಿತ್ರ ಇತ್ತು. ಆ ಟಗರಿನ ಮುಖವನ್ನೇ ನೆನೆಪಿಸುವಂತೆ ಖಡಕ್ ಲುಕ್‌ನಲ್ಲಿ ರಾಜ್ ಬಿ. ಶೆಟ್ಟಿ ಕಾಣಿಸಿಕೊಂಡಿರುವುದನ್ನು ನೋಡಬಹುದು. ಆ ಮೂಲಕ ಟಗರಿನ ಗುಣದ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ.
'ಗರುಡುಗಮನ ವೃಷಭವಾಹನ' ಛಾಯೆ
ಮುಖದ ಮೇಲೆ ಕತ್ತಿಯಿಂದ ಕುಯ್ದಂತ ಗುರುತುಗಳು, ಮೂಗಿಗೆ ಬಳೆ ಗಾತ್ರದ ದೊಡ್ಡ ಮೂಗುತಿ ತೊಟ್ಟು ಗಡ್ಡ, ಕೂದಲು ಬಿಟ್ಟು 'ಟೋಬಿ' ರಾಜ್ ಬಿ. ಶೆಟ್ಟಿ ಭಯ ಹುಟ್ಟಿಸುತ್ತಿದ್ದಾರೆ. ಟಗರು ಗುದ್ದಾಟ. ಆದರೆ ನಿಜ ಹೇಳಬೇಕು ಅಂದ್ರೆ ಅದು ಸುಖಾಸುಮ್ಮನೆ ಗುದ್ದುವುದಿಲ್ಲ. ಕೆಣಕಿದರೆ ಮಾತ್ರ ಗುದ್ದುತ್ತದೆ. ಇದೇ ಅಂಶವನ್ನಿಟ್ಟುಕೊಂಡು 'ಟೋಬಿ' ಪಾತ್ರ ಡಿಸೈನ್ ಮಾಡಲಾಗಿದೆ. 'ಗರುಡುಗಮನ ವೃಷಭವಾಹನ' ಶಿವನಾಗಿ ರಾಜ್ ಇಂತದ್ದೇ ಪಾತ್ರದಲ್ಲಿ ನಟಿಸಿದ್ದರು.

ಪ್ರತಿಭಾನ್ವಿತ ಕಲಾವಿದರು
ಬಾಸಿಲ್ ನಿರ್ದೇಶನದ 'ಟೋಬಿ' ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಜೊತೆಗೆ ಸಂಯುಕ್ತ ಹೊರನಾಡು, ಚೈತ್ರಾ ಆಚಾರ್, ಗೋಪಾಲಕೃಷ್ಣ ದೇಶಪಾಂಡೆ, ದೀಪಕ್ ರಾಜ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. 'ಗರುಡುಗಮನ ವೃಷಭವಾಹನ' ನಂತರ ರಾಜ್ ಬಿ. ಶೆಟ್ಟಿ ಲೀಡ್ ರೋಲ್‌ನಲ್ಲಿ ನಟಿಸಿದ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. 'ಟೋಬಿ' ರಿಲೀಸ್‌ಗೆ ರೆಡಿಯಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಸಿನಿಮಾ ವಿತರಣೆ ಜವಾಬ್ದಾರಿ ವಹಿಸಿಕೊಂಡಿದೆ.
'ಸ್ವಾತಿ ಮುತ್ತಿನ..' ಸಿನಿಮಾ ಏನಾಯ್ತು?
ಇನ್ನು ರಾಜ್ ಬಿ. ಶೆಟ್ಟಿ ನಿರ್ದೇಶಿಸಿ ನಟಿಸಿದ್ದ 'ಸ್ವಾತಿ ಮುತ್ತಿನ ಮಳೆಹನಿಯೇ' ಸಿನಿಮಾ ಯಾಕೋ ಸೈಲೆಂಟ್ ಆಗಿಬಿಟ್ಟಿದೆ. ಈ ಸಿನಿಮಾ ಮೂಲಕ ನಿರ್ಮಾಪಕಿಯಾಗಿ ನಟಿ ರಮ್ಯಾ ಚಿತ್ರರಂಗಕ್ಎ ವಾಪಸ್ ಬಂದಿದ್ದಾರೆ, ಮೊದಲು ರಮ್ಯಾ ನಾಯಕಿಯಾಗಿ ಚಿತ್ರದಲ್ಲಿ ನಟಿಸುವುದು ಎಂದು ಘೋಷಣೆ ಆಗಿತ್ತು. ನಂತರ ರಮ್ಯಾ ಬದಲು ಸಿರಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಿನಿಮಾ ರಿಲೀಸ್ ಆಗಲೇಯಿಲ್ಲ. ನೇರವಾಗಿ ಓಟಿಟಿಗೆ ಬರುತ್ತೆ ಎನ್ನಲಾಗಿತ್ತು. ಆದರೆ ಅದು ಕೂಡ ಆಗಲಿಲ್ಲ.


Click it and Unblock the Notifications











