ಇಬ್ಬರು ಡೈರೆಕ್ಟ್ರು ಒಂದಾದ್ರು: ಹೊಸ ಸಿನಿಮಾ ಅನೌನ್ಸ್ ಮಾಡಿದ್ರು
'ಒಂದು ಮೊಟ್ಟೆಯ ಕಥೆ' ಚಿತ್ರದ ಮೂಲಕ ಜನಪ್ರಿಯತೆ ಗಳಿಸಿಕೊಂಡ ರಾಜ್ ಬಿ ಶೆಟ್ಟಿ ನಟನೆಯ ಜೊತೆ ನಿರ್ದೇಶನದಲ್ಲೂ ಕಮಾಲ್ ಮಾಡಿದ್ದರು. ಮೊದಲ ಸಿನಿಮಾದಲ್ಲಿ ಯಶಸ್ಸು ಕಂಡ ರಾಜ್ ಬಿ ಶೆಟ್ಟಿ ನಂತರ ರಿಷಬ್ ಶೆಟ್ಟಿ ನಿರ್ದೇಶನದ 'ಸರ್ಕಾರಿ ಹಿರಿಯ ಪ್ರಾ.ಶಾಲೆ' ಚಿತ್ರದಲ್ಲಿ ಕಾಣಿಸಿಕೊಂಡರು.
Recommended Video

ಅದಾದ ಮೇಲೆ ಅಮ್ಮಚ್ಚಿಯೆಂಬ ನೆನಪು, ಮಹಿರಾ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಕಥಾ ಸಂಗಮ ಹೀಗೆ ಹಾಸ್ಯ ಪ್ರಧಾನ ಹಾಗೂ ಸಾಮಾಜಿಕ ಸಂದೇಶವುಳ್ಳ ಚಿತ್ರಗಳ ಮೂಲಕ ರಾಜ್ ಬಿ ಶೆಟ್ಟಿ ಗಮನ ಸೆಳೆದಿದ್ದರು.
ಇದೀಗ, ತಮ್ಮ ಮುಂದಿನ ಚಿತ್ರವನ್ನು ಘೋಷಣೆ ಮಾಡಿದ್ದಾರೆ. ಪ್ರೇಮಿಗಳ ದಿನದ ವಿಶೇಷವಾಗಿ ಹೊಸ ಸಿನಿಮಾದ ಹೆಸರು ಮತ್ತು ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದ ಹೆಸರು 'ಗರುಡ ವಾಹನ ವೃಷಭ ವಾಹನ'.

ಅಂದ್ಹಾಗೆ, ಈ ಚಿತ್ರವನ್ನು ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡುತ್ತಿದ್ದು ಜೊತೆಗೆ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಶೇಷ ಅಂದ್ರೆ ರಾಜ್ ಬಿ ಶೆಟ್ಟಿ ಜೊತೆ ಖ್ಯಾತ ನಿರ್ದೇಶಕ-ನಟ ರಿಷಬ್ ಶೆಟ್ಟಿ ನಾಯಕರಾಗಿ ನಟಿಸುತ್ತಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾ.ಶಾಲೆ ಹಾಗೂ ಕಥಾಸಂಗಮ ಚಿತ್ರಗಳಲ್ಲಿ ರಾಜ್ ಬಿ ಶೆಟ್ಟಿ ಅಭಿನಯಿಸಿದ್ದರು. ಈಗ ರಾಜ್ ಬಿ ಶೆಟ್ಟಿ ನಿರ್ದೇಶನದ ಚಿತ್ರದಲ್ಲಿ ರಿಷಬ್ ಶೆಟ್ಟಿ ಬಣ್ಣ ಹಚ್ಚುತ್ತಿದ್ದಾರೆ. ಹೀಗಾಗಿ, ಈ ಸಿನಿಮಾ ಆರಂಭದಲ್ಲಿ ಕುತೂಹಲ ಮೂಡಿಸುತ್ತಿದೆ.
ಲೈಟರ್ ಬುದ್ದ ಫಿಲಂಸ್ ಈ ಚಿತ್ರ ನಿರ್ಮಿಸುತ್ತಿದ್ದು, ಮಿಧುನ್ ಮುಕುಂದನ್ ಸಂಗೀತ ನೀಡುತ್ತಿದ್ದಾರೆ. ಇನ್ನುಳಿದಂತೆ ಕಲಾವಿದರು ಹಾಗೂ ನಾಯಕಿ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಎಲ್ಲ ಅಂದುಕೊಂಡಂತೆ ಆದರೆ ಜೂನ್ ತಿಂಗಳಲ್ಲಿ ಈ ಚಿತ್ರವನ್ನು ತೆರೆಗೆ ತರುವ ಪ್ಲಾನ್ ಮಾಡಿದ್ದಾರೆ ನಿರ್ದೇಶಕ ರಾಜ್ ಬಿ ಶೆಟ್ಟಿ.


Click it and Unblock the Notifications











