'ಕಾಂತಾರ' ಹಾದಿಯಲ್ಲಿ ಪರಭಾಷೆಗಳತ್ತ 'ಸು ಫ್ರಂ ಸೋ'; ನಿರ್ಮಾಪಕ ರಾಜ್ ಬಿ ಶೆಟ್ಟಿ ಪ್ರತಿಕ್ರಿಯೆ
ಜೆಬಿ ತುಮ್ಮಿನಾಡ್ ನಿರ್ದೇಶನದ 'ಸು ಫ್ರಂ ಸೋ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಮೊದಲ ದಿನವೇ ಸಿನಿಮಾ ಒಂದೂವರೆ ಕೋಟಿ ರೂ. ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ. ವೀಕೆಂಡ್ ಭರ್ಜರಿ ಗಳಿಕೆ ಕಾಣುವ ಸುಳಿವು ಸಿಕ್ತಿದೆ. ಸಣ್ಣ ಮಟ್ಟದಲ್ಲೇ ಬಿಡುಗಡೆಯಾಗಿದ್ದ ಸಿನಿಮಾ ನಿಧಾನವಾಗಿ ತನ್ನ ವ್ಯಾಪ್ತಿ ಹಿಗ್ಗಿಸಿಕೊಳ್ಳುತ್ತಿದೆ.
'ಸು ಫ್ರಂ ಸೋ' ಸಿನಿಮಾ ಕ್ರೇಜ್ ಹೇಗಿದೆ ಎನ್ನುವುದು ಆನ್‌ಲೈನ್ ಟಿಕೆಟ್ ಬುಕ್ಕಿಂಗ್‌ನಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಕಡಿಮೆ ಶೋಗಳು ಇದ್ದರೂ ಗಂಟೆಗೆ 7 ಸಾವಿರ ಟಿಕೆಟ್ ಬುಕ್ ಆಗುತ್ತಿದೆ. ಈ ವರ್ಷ ಕನ್ನಡದ ಯಾವುದೇ ಚಿತ್ರಕ್ಕೆ ಇಂತಹ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಕಳೆದ ವಾರ ತೆರೆಗೆ ಬಂದಿದ್ದ 'ಎಕ್ಕ' ಹಾಗೂ 'ಜ್ಯೂನಿಯರ್' ಚಿತ್ರಗಳು ಸದ್ದು ಮಾಡಿದ್ದವು. ಆದರೆ ಅದನ್ನು ಮೀರಿ 'ಸು ಫ್ರಂ ಸೋ' ದಾಖಲೆ ಬರೆಯುತ್ತಿದೆ.

"ಜನ ಚಿತ್ರಮಂದರಿಗಳಿಗೆ ಬರೋಲ್ಲ ಅಂತಿದ್ರು ... ಈಗ ಬರೋ ಜನಕ್ಕೆ ಚಿತ್ರಮಂದಿರಗಳು ಇಲ್ಲ ಅನ್ನೋ ಹಾಗೆ ಆಗಿದೆ" ಎಂದು ನಿರ್ದೇಶಕ ಸಿಂಪಲ್ ಸುನಿ ಟ್ವೀಟ್ ಮಾಡಿದ್ದಾರೆ. ಅಷ್ಟರಮಟ್ಟಿಗೆ ಚಂದನವನದಲ್ಲೀಗ ಹೊಸಬರ 'ಸು ಫ್ರಂ ಸೋ' ಕ್ರೇಜ್ ಶುರುವಾಗಿದೆ. ಸ್ಟಾರ್ ಕಲಾವಿದರು ಇಲ್ಲದೇ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ಚಿತ್ರ ಮಾಡಿದ್ದಾರೆ. ಯಾವುದೇ ಸ್ಟಾರ್ ನಟರನ್ನು ಕರೆಸಿ ಪ್ರಚಾರ ಕೂಡ ಮಾಡಿರಲಿಲ್ಲ. 4 ದಿನಗಳ ಹಿಂದೆ ಇಂತಾದೊಂದು ಕನ್ನಡ ಸಿನಿಮಾ ಬರ್ತಿದೆ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಹೀಗೆ ಸೈಲೆಂಟ್ ಆಗಿ ಬಂದು ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ.
ಕರಾವಳಿ ಭಾಗದ ಚಿತ್ರಮಂದಿರಗಳಲ್ಲಿ ರೆಸ್ಪಾನ್ಸ್ ಇನ್ನು ಜೋರಾಗಿದೆ. ಈಗಾಗಲೇ ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಮೌತ್ ಟಾಕ್ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿದೆ. ಬೇರೆ ಭಾಷೆಗಳಿಗೆ ಚಿತ್ರವನ್ನು ಡಬ್ ಮಾಡಿ ಬಿಡುಗಡೆ ಮಾಡುವಂತೆ ಕೆಲವರು ಮನವಿ ಮಾಡುತ್ತಿದ್ದಾರೆ. ಈ ಬಗ್ಗೆ ನಿರ್ಮಾಪಕ ರಾಜ್ ಬಿ. ಶೆಟ್ಟಿ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ.

"ಚಿತ್ರಕ್ಕೆ ಸಿಕ್ಕಿರುವ ರೆಸ್ಪಾನ್ಸ್ ಬಹಳ ಖುಷಿ ತಂದಿದೆ. ಗಂಟೆಗೆ 7 ಸಾವಿರ ಟಿಕೆಟ್ ಆನ್‌ಲೈನ್‌ನಲ್ಲಿ ಬುಕ್ ಆಗುತ್ತಿದೆ. ಅದು ಕೂಡ ಸ್ಟಾರ್ ನಟರಿಲ್ಲದೇ, ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗದೇ, ಇದು ವಿಶೇಷ. ಸಾಕಷ್ಟು ಭಾಗಗಳಲ್ಲಿ ಸಿನಿಮಾ ಬಿಡುಗಡೆ ಆಗಿಲ್ಲ ಎಂದು ಕೇಳುತ್ತಿದ್ದಾರೆ. ನಾವು ಪ್ರಯತ್ನಿಸುತ್ತಿದ್ದೇವೆ. ಈಗಾಗಲೇ ಕೆಲವೆಡೆ ಬೇರೆ ಸಿನಿಮಾ ಶೋಗಳು ಶೆಡ್ಯೂಲ್ ಆಗಿದೆ. ದಿಢೀರನೆ ಬದಲಿಸಲು ಸಾಧ್ಯವಿಲ್ಲ. ಇನ್ನೆರಡು ದಿನಗಳಲ್ಲಿ ಸರಿ ಹೋಗುತ್ತದೆ" ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.
ಪರಭಾಷೆಗಳಿಗೆ ಸಿನಿಮಾ ಡಬ್ ಮಾಡಿ ಬಿಡುಗಡೆ ಮಾಡುವ ಬಗ್ಗೆ ರಾಜ್ ಬಿ ಶೆಟ್ಟಿ ಪ್ರತಿಕ್ರಿಯಿಸಿ "ಆಗಸ್ಟ್ 1ರಿಂದ ಮಲಯಾಳಂ ಭಾಷೆಗೆ ಡಬ್ ಆಗಿ ಸಿನಿಮಾ ಅಲ್ಲಿ ತೆರೆಗೆ ಬರಲಿದೆ. ಇನ್ನುಳಿದ ಭಾಷೆಗಳಲ್ಲಿ ಯಾವಾಗ ಎನ್ನುವುದು ಸದ್ಯಕ್ಕೆ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಕಾದು ನೋಡಬೇಕು" ಎಂದಿದ್ದಾರೆ.
3 ವರ್ಷಗಳ ಹಿಂದೆ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ 'ಕಾಂತಾರ' ಸಿನಿಮಾ ನೋಡನೋಡುತ್ತಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಕನ್ನಡದಲ್ಲಿ ಮಾತ್ರ ಸಿನಿಮಾ ಮಾಡಬೇಕು ಎಂದು ರಿಷಬ್ ಭಾವಿಸಿದ್ದರು. ಆದರೆ ವಾರದ ಬಳಿಕ ಪರಭಾಷೆಯಿಂದ ಡಬ್ ಮಾಡಿ ರಿಲೀಸ್ ಮಾಡುವಂತೆ ಡಿಮ್ಯಾಂಡ್ ಶುರುವಾಗಿದೆ. ಹಾಗಾಗಿ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಹಿಟ್ ಆಗಿತ್ತು. 'ಸು ಫ್ರಂ ಸೋ' ಚಿತ್ರಕ್ಕೂ ಆ ತಾಕತ್ತು ಇದೆ ಎಂದು ಪ್ರೇಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











