ಬಡವರ ಮಕ್ಳಾ, ಪ್ರತಿಭಾವಂತ್ರಾ? ರಾಜ್ ಬಿ ಶೆಟ್ಟಿ ಮಾತಿಗೆ ಎರಡು ಕೈ ಎತ್ತಿಬಿಟ್ಟ ಶಿವಣ್ಣ
ಅರ್ಜುನ್ ಜನ್ಯಾ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್. ಬಿ ಶೆಟ್ಟಿ ನಟನೆಯ '45' ಸಿನಿಮಾ ಬಿಡುಗಡೆಯಾಗಿದೆ. ಮೂವರು ಸಿನಿಮಾ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾ ಜೊತೆಗೆ ಸಾಕಷ್ಟು ಬೇರೆ ಬೇರೆ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಬಡವರ ಮಕ್ಕಳು ಎಂದ ಮಾತ್ರಕ್ಕೆ ಅವಕಾಶ ಕೊಡಬೇಕಾ? ಎಂದು ರಾಜ್. ಬಿ ಶೆಟ್ಟಿ ಕೇಳಿದ್ದಾರೆ.
'ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯಾ' ಎಂದು ಈ ಹಿಂದೆ ನಟ ಧನಂಜಯ ಹೇಳಿದ್ದು ವೈರಲ್ ಆಗಿತ್ತು. ಇದೀಗ ರಾಜ್. ಬಿ ಶೆಟ್ಟಿ ಅದಕ್ಕೆ ಹೊಸ ವಿವರಣೆ ಕೊಟ್ಟಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ಗಾಗಿ ಅನುಶ್ರೀ '45' ತಂಡದ ಸಂದರ್ಶನ ನಡೆಸಿದ್ದಾರೆ. ಈ ವೇಳೆ ಶಿವಣ್ಣ, ಉಪ್ಪಿ, ರಾಜ್ ಮೂವರು ಸಾಕಷ್ಟು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ.

ಡಾ. ರಾಜ್‌ಕುಮಾರ್ ಮಗನಾಗಿದ್ದರೂ ಶಿವಣ್ಣ ಮೊದಲಿಗೆ ಚೆನ್ನೈ ಫಿಲ್ಮ್ ಇನ್ಸಿಟ್ಯೂಟ್ ಸೇರಿ ನಟನೆಯ ಪಟ್ಟುಗಳನ್ನು ಕಲಿತಿದ್ದರು. ಇದೇ ವಿಚಾರವನ್ನು ರಾಜ್. ಬಿ ಶೆಟ್ಟಿ ಪ್ರಸ್ತಾಪಿಸಿದ್ದಾರೆ. "ಅಣ್ಣಾವ್ರ ಮಗ ಚಿತ್ರರಂಗಕ್ಕೆ ಬರಬೇಕು ಅಂದಾಗ ತಂದೆ ಆಕ್ಟಿಂಗ್ ಕ್ಲಾಸ್‌ಗೆ ಸೇರೋಕೆ ಹೇಳ್ತಾರೆ. ಆದರೆ ಈಗ ನಾನು ಹೀರೊ ಆಗಬಹುದಾ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಮಾಡ್ತಾರೆ. ಅದು ತಪ್ಪಲ್ಲ. ಆದರೆ ಅಂತಹ ದಿಗ್ಗಜ ನಟ(ಡಾ. ರಾಜ್‌ಕುಮಾರ್) ನಾನು ಕಲಿಸಲ್ಲ, ಗುರುವಿನ ಮೂಲಕ ನಟನೆ ಕಲಿ ಎಂದು ಹೇಳ್ತಾರೆ. ಮುಂದೆ ಅದು ಶಿವಣ್ಣನಿಗೆ ಸಹಾಯವಾಗುತ್ತದೆ" ಎಂದು ರಾಜ್. ಬಿ ಶೆಟ್ಟಿ ಹೇಳಿದ್ದಾರೆ.
ನಮಗೆ ಯಾರಾದರೂ ಯಾಕೆ ಅವಕಾಶ ಕೊಡಬೇಕು. ಅವಕಾಶಕ್ಕೆ ನಾನು ಅರ್ಹನಾಗಬೇಕು ಅನ್ನೋದನ್ನು ಇದರಿಂದ ಗೊತ್ತಾಗುತ್ತದೆ ಎಂದು ರಾಜ್ ತಿಳಿಸಿದ್ದಾರೆ. "ಬಡವರ ಮಕ್ಕಳು ಬೆಳೆಯಬೇಕು ಎನ್ನುವುದು ಪ್ರಶ್ನೆಯಲ್ಲ. ಅರ್ಹತೆ ಮಾತ್ರ ಪ್ರಶ್ನೆ ಆಗುತ್ತೆ. ಒಬ್ಬ ಬಡವನ ಮಗ ಪ್ರತಿಭೆ ಇರಲ್ಲ, ಒಬ್ಬ ಶ್ರೀಮಂತನ ಮಗ, ಬಹಳ ಪ್ರತಿಭಾವಂತನಾಗಿರುತ್ತಾನೆ. ಇದರಲ್ಲಿ ಬಡವ ಅಂತ ಅವನಿಗೆ ಅವಕಾಶ ಕೊಡಬೇಕಾ? ಪ್ರತಿಭಾವಂತ ಅಂತ ಇವನಿಗೆ ಕೊಡಬೇಕಾ? ಎಂದು ಪ್ರಶ್ನಿಸಿದ್ದಾರೆ.
ಬಡತನ ಎನ್ನುವುದು ತಲೆಯಲ್ಲಿ ಇರಬೇಕು, ನಾನು ಏನು ಕಲಿತ್ತಿಲ್ಲ, ಕಲಿಯಬೇಕು ಅನ್ನೋ ಬಡತನ ತಲೆಯಲ್ಲಿದ್ದರೆ ಅಂತಹ ಬಡವನಿಗೆ ಅವಕಾಶ ಕೊಡಬೇಕು ಎಂದು ರಾಜ್ ಹೇಳಿದ್ದು ಕೂಡಲೇ ಉಪೇಂದ್ರ ಕೈ ಮುಗಿದುಬಿಟ್ಟಿದ್ದಾರೆ. ಮಾತೇ ಬರ್ತಿಲ್ಲ ಎಂದು ಶಿವಣ್ಣ ಎರಡೂ ಕೈ ಮೇಲೆತ್ತಿಬಿಟ್ಟಿದ್ದಾರೆ. ಇದು ತಮಾಷೆ ಅಲ್ಲ, ಎಂದು ಶಿವಣ್ಣ, ಉಪೇಂದ್ರ ಇಬ್ಬರೂ ರಾಜ್ ಮಾತು ಮೆಚ್ಚಿಕೊಂಡಿದ್ದಾರೆ.
ಯಾರೋ 2 ಕೋಟಿ ರೂ. ಹಾಕಿ ಯಾಕೆ ಸಿನಿಮಾ ಮಾಡಬೇಕು, ಕಷ್ಟ ಅಂದಾಗ ಸಂಬಂಧಿಕರೇ ಹಣ ಕೊಡಲ್ಲ. ಹಾಗಿರುವಾಗ ನಮ್ಮ ಪ್ರತಿಭೆ ಬಗ್ಗೆ ಕೇಳುತ್ತಾರೆ. ಸರಿ ಇಲ್ಲ ಎಂದಾಗ ತಪ್ಪು ಭಾವಿಸುವುದರಲ್ಲಿ ಅರ್ಥವಿಲ್ಲ. ಕಲಿಯಬೇಕಾದ್ದನ್ನು ಕಲಿಯೋಣ. ನಾನು, ಉಪೇಂದ್ರ ಸರ್ ಎಲ್ಲರೂ ಕಷ್ಟಪಟ್ಟು ಬಂದವರು. ನಮಗಾಗಿ ಕಷ್ಟಪಟ್ಟಿದ್ದೀವಿ. ಅದಕ್ಕೆ ಯಾಕೆ ಅಳಬೇಕು, ಅದನ್ನು ಯಾಕೆ ಟ್ರಂಪ್ ಕಾರ್ಡ್ ಮಾಡ್ಕೊಬೇಕು ಎಂದು ರಾಜ್ ಕೇಳಿದ್ದಾರೆ.
'ಒಂದು ಮೊಟ್ಟೆಯ ಕಥೆ' ಸಿನಿಮಾ ಮೂಲಕ ನಟನಾಗಿ ನಿರ್ದೇಶಕನಾಗಿ ರಾಜ್ ಬಿ ಶೆಟ್ಟಿ ಚಿತ್ರರಂಗಕ್ಕೆ ಬಂದರು. ಮುಂದೆ ಹಲವು ಸಿನಿಮಾಗಳಲ್ಲಿ ನಟಿಸಿ ಗೆದ್ದರು. ತಮ್ಮ ನ್ಯೂನ್ಯತೆಗಳನ್ನೇ ಪ್ಲಸ್ ಮಾಡಿಕೊಂಡು ಬಣ್ಣ ಹಚ್ಚಿದ್ದರು. ನಟನೆ, ನಿರ್ದೇಶನದ ಜೊತೆಗೆ ಚಿತ್ರ ನಿರ್ಮಾಣಕ್ಕೂ ಕೈ ಹಾಕಿ ಸಕ್ಸಸ್ ಕಂಡಿದ್ದಾರೆ. 'ಸು ಫ್ರಮ್ ಸೋ' ಚಿತ್ರದ ನಿರ್ಮಾಪಕರಲ್ಲಿ ರಾಜ್ ಕೂಡ ಒಬ್ಬರು.


Click it and Unblock the Notifications











