"ನಾನು ಯಾವ್ದೆ ಸ್ಟಾರ್ ನಟನಿಗೆ ಸಿನ್ಮಾ ಮಾಡಲ್ಲ.. ಅವರೊಬ್ಬರನ್ನು ಬಿಟ್ಟು"..; ರಾಜ್ ಬಿ ಶೆಟ್ಟಿ
ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲೇ 'ಸು ಫ್ರಂ ಸೋ' ಸಿನಿಮಾ ಸದ್ದು ಮಾಡ್ತಿದೆ. ಈಗಾಗಲೇ ಮಲಯಾಳಂ ಹಾಗೂ ತೆಲುಗು ಭಾಷೆಗೆ ಡಬ್ ಆಗಿರುವ ಸಿನಿಮಾ ಶೀಘ್ರದಲ್ಲೇ ಬಾಲಿವುಡ್‌ನಲ್ಲಿ ರೀಮೆಕ್ ಆಗಲಿದೆ. 13ನೇ ದಿನವೂ ಬಾಕ್ಸಾಫೀಸ್‌ನಲ್ಲಿ ಗೆಲುವಿನ ಆರ್ಭಟ ಮುಂದುವರೆದಿದೆ. ಇದೆಲ್ಲದರ ನಡುವೆ ತಮ್ಮ ಮುಂದಿನ ಸಿನಿಮಾಗಳ ಬಳಿ ರಾಜ್. ಶೆಟ್ಟಿ ಮಾತನಾಡಿದ್ದಾರೆ.
'ಸು ಫ್ರಂ ಸೋ' ಸಿನಿಮಾ ಸೀಕ್ವೆಲ್ ಮಾಡಲ್ಲ ಎಂದು ಈಗಾಗಲೇ ರಾಜ್ ಸ್ಪಷ್ಟಪಡಿಸಿದ್ದಾರೆ. ಹಾಗಿದ್ದರೆ ಮುಂದಿನ ಸಿನಿಮಾ ಯಾವುದು? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. 'ಸು ಫ್ರಂ ಸೋ' ಸಕ್ಸಸ್ ಸಂಭ್ರಮದಲ್ಲಿ ಕೆಲ ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಈ ವೇಳೆ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಅವರು ಮಾತನಾಡಿದ್ದಾರೆ. ದುಲ್ಕರ್ ಸಲ್ಮಾನ್ ನಟನೆಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಗುಸುಗುಸು ಕೇಳಿ ಬರ್ತಿದೆ. ಈ ಬಗ್ಗೆ ಹಾಲಿವುಡ್ ರಿಪೋರ್ಟರ್ ಯೂಟ್ಯೂಬ್ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.

"ನಾನು ಸ್ಟಾರ್ ನಟರಿಗೆ ನಿರ್ದೇಶನ ಮಾಡಲ್ಲ. ಅದು ಬಹಳ ನೋವಿನ ಪ್ರಕ್ರಿಯೆ. ಸಿನಿಮಾ ಬಹಳ ವೈಯಕ್ತಿಯ ವಿಷಯ. ನಾನು ಮತ್ತೊಬ್ಬರಿಗೆ ಕಾಯಬೇಕು, ನಾನು ಮಾಡಿದ ಕತೆ ಅವರು ಒಪ್ಪಬೇಕು. ಬಳಿಕ ಸರಿ ಎಂದು ಸಿನಿಮಾ ಮಾಡಬೇಕು. ಆ ರೀತಿ ನಾನು ಕೆಲಸ ಮಾಡಲ್ಲ. ಇದು ನನ್ನ ಆಯ್ಕೆ ಕೂಡ. ಹಣ ಒಂದೇ ಎಲ್ಲಾ ಎಂದು ನನಗೆ ಅನ್ನಿಸಲ್ಲ. ಸ್ಟಾರ್ ನಟರ ಸಿನಿಮಾ ಮಾಡಬೇಕು ಎಂದು ನನಗಿಲ್ಲ. ಹೊಸ ತಂಡದ ಜೊತೆ ಕೆಲಸ ಮಾಡುಬೇಕು" ಎಂದು ರಾಜ್. ಬಿ ಶೆಟ್ಟಿ ಹೇಳಿದ್ದಾರೆ.
ತಮ್ಮ ಮುಂದಿನ ಸಿನಿಮಾಗಳ ಬಗ್ಗೆಯೂ ಸುಳಿವು ಕೊಟ್ಟಿದ್ದಾರೆ. "ನಾನು ಒಂದು ಥ್ರಿಲ್ಲರ್ ಸಿನಿಮಾ ಮಾಡ್ತಿದ್ದೀನಿ. ಅದಕ್ಕಾಗಿ ಕಥೆ ಬರೆಯುತ್ತಿದ್ದೀನಿ. ವೆಬ್ ಸೀರಿಸ್ ಮಾಡುವ ಬಗ್ಗೆ ಚರ್ಚೆ ನಡೀತಿದೆ. ಮುಂದೆ ಏನಾಗುತ್ತದೆ ಕಾದು ನೋಡಬೇಕು. ಇದರ ಜೊತೆಗೆ ಹೊಸಬರ ಸಿನಿಮಾ ನಿರ್ಮಾಣ ಮಾಡ್ತೀನಿ" ಎಂದು ರಾಜ್. ಬಿ ಶೆಟ್ಟಿ ತಿಳಿಸಿದ್ದಾರೆ.

ಅಂದಹಾಗೆ ರಾಜ್ ಬಿ. ಶೆಟ್ಟಿ ನಟನೆಯ '45' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅರ್ಜುನ್ ಜನ್ಯಾ ನಿರ್ದೇಶನದ ಚಿತ್ರದಲ್ಲಿ ಉಪೇಂದ್ರ ಹಾಗೂ ಶಿವರಾಜ್‌ಕುಮಾರ್ ಕೂಡ ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ಮಾತನಾಡುತ್ತಾ ಶಿವಣ್ಣನ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಇಂಗಿತವನ್ನು ರಾಜ್ ವ್ಯಕ್ತಪಡಿಸಿದ್ದಾರೆ. "45 ಚಿತ್ರದಲ್ಲಿ ಶಿವಣ್ಣ, ಉಪೇಂದ್ರ ಜೊತೆ ನಟಿಸಿದ್ದು ಅದ್ಭುತ ಅನುಭವ. ಅವರೊಟ್ಟಿಗೆ ನಟಿಸಿದ್ದು ಸ್ಟಾರ್ಸ್ ಜೊತೆ ನಟಿಸಿದಂತೆ ಅನ್ನಿಸಲಿಲ್ಲ. ಒಂದು ವೇಳೆ ನಾನು ಸ್ಟಾರ್ ನಟನಿಗೆ ನಿರ್ದೇಶನ ಮಾಡಿದ್ರೆ, ಅದು ಶಿವಣ್ಣನ ಜೊತೆ ಮಾತ್ರ. ಯಾಕಂದರೆ ಅವ್ರು ಸ್ಟಾರ್ ಅಲ್ಲ, ಅದಕ್ಕಿಂತ್ಲೂ ಹೆಚ್ಚು" ಎಂದಿದ್ದಾರೆ.
'ಒಂದು ಮೊಟ್ಟೆಯ ಕಥೆ' ಚಿತ್ರದ ಮೂಲಕ ರಾಜ್ ಬಿ. ಶೆಟ್ಟಿ ಚಿತ್ರರಂಗಕ್ಕೆ ಪರಿಚಿತರಾದರು. ತಾವೇ ನಿರ್ದೇಶಿಸಿ ನಟಿಸಿದ್ದ ಸಿನಿಮಾ ಅದು. 'ಗರುಡಗಮನ ವೃಷಣವಾಹನ' ಸಿನಿಮಾ ಮೂಲಕ ಭಾರತೀಯ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿದ್ದರು. ಅನುರಾಗ್ ಕಶ್ಯಪ್, ಸಂದೀಪ್ ರೆಡ್ಡಿ ವಂಗಾ ರೀತಿಯ ಸ್ಟಾರ್ ನಿರ್ದೇಶಕರು ಈ ಸಿನಿಮಾ ನೋಡಿ ಹುಬ್ಬೇರಿಸಿದ್ದರು. ಲಾಫ್ಟರ್ ಬುದ್ಧ ಫಿಲ್ಮ್ಸ್ ಸಂಸ್ಥೆ ಅಡಿಯಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications











