Toby weekend Collection: ಸೈಲೆಂಟ್ 'ಟೋಬಿ' ವೈಲೆಂಟ್ ಆಗಿ ಗಳಿಸಿದ್ದು ಇಷ್ಟೇನಾ?
ರಾಜ್ ಬಿ. ಶೆಟ್ಟಿ ಚಿತ್ರಕಥೆ ಬರೆದು ನಟಿಸಿದ್ದ 'ಟೋಬಿ' ಸಿನಿಮಾ ಕಳೆದ ವಾರ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಕೆಲವರು ಅದ್ಭುತ ಸಿನಿಮಾ ಎನ್ನುತ್ತಿದ್ದರೆ ಮತ್ತೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ ರಾಜ್ ಬಿ. ಶೆಟ್ಟಿ ನಟನೆ ಬಗ್ಗೆ ಮಾತ್ರ ಎಲ್ಲರೂ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹೆಸರು ಕುಲ ಗೋತ್ರ ಗೊತ್ತಿಲ್ಲದ ಅನಾಥನಿಗೆ ಚರ್ಚ್ ಫಾದರ್ ಟೋಬಿ ಎಂದು ಹೆಸರಿಡುತ್ತಾರೆ. ಈ ಮೂಕ ವಿಲಕ್ಷಣ ವ್ಯಕ್ತಿ, ಮತ್ತೊಂದು ಅನಾಥ ಹೆಣ್ಣು ಮಗುವನ್ನು ಸಾಕುವ, ಮನೆ ಕಟ್ಟಲು ನಡೆಸುವ ಹೋರಾಟ, ಈ ಹಾದಿಯಲ್ಲಿ ಉಳ್ಳವರಿಗೆ ಹರಕೆಯ ಕುರಿಯಾಗುತ್ತಾ ಹೋಗುತ್ತಾನೆ. ಒಂದೊಮ್ಮೆ ದಿಢೀರ್ ನಾಪತ್ತೆಯಾಗುವ 'ಟೋಬಿ' ಎಲ್ಲೋದ? ಏನಾದ? ಮುಂದೇನಾಗುತ್ತೆ? ಅನ್ನೋದು ಸಿನಿಮಾ ಕಥೆ. ಸಿಂಪಲ್ ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ಪ್ರಯತ್ನ ಏನೋ ನಡೆದಿದೆ. ಎಲ್ಲರನ್ನು ಮೆಚ್ಚಿಸುವಲ್ಲಿ ಸಿನಿಮಾ ಸೋತಿದೆ.

ರಾಕ್ಷಸನನ್ನೇ ಆವಾಹಿಸಿಕೊಂಡಂತೆ 'ಟೋಬಿ' ಪಾತ್ರದಲ್ಲಿ ರಾಜ್. ಬಿ ಶೆಟ್ಟಿ ಅಬ್ಬರಿಸಿದ್ದಾರೆ. ಸಿನಿಮಾ ಮೇಕಿಂಗ್ ಕೂಡ ಚೆನ್ನಾಗಿದೆ. ರಾಜ್ ಮಾತ್ರವಲ್ಲ ಚೈತ್ರಾ ಆಚಾರ್, ಸಂಯುಕ್ತಾ ಹೊರನಾಡ್, ಗೋಪಾಲ ದೇಶಪಾಂಡೆ ಎಲ್ಲರೂ ತಮ್ಮ ತಮ್ಮ ಪಾತ್ರವನ್ನು ಸೊಗಸಾಗಿ ನಿಭಾಯಿಸಿದ್ದಾರೆ. ರಾಜ್. ಬಿ ಶೆಟ್ಟಿ ಅನುಭವಿಸಿ ಬರೆದದ್ದನ್ನು ನಿರ್ದೇಶಕ ಬಾಸಿಲ್ ಸೊಗಸಾಗಿ ತೆರೆಗೆ ತಂದಿದ್ದಾರೆ. ಆದರೆ ಎಲ್ಲೋ ಒಂದು ಕಡೆ ಸಿನಿಮಾ ಲ್ಯಾಗ್ ಎನ್ನಿಸಿ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡುತ್ತದೆ. ಇದೇ ಚಿತ್ರದ ಹಿನ್ನಡೆಗೆ ಕಾರಣವಾಗಿದೆ.
ಕಲೆಕ್ಷನ್ ವಿಚಾರಕ್ಕೆ ಬಂದರೆ ಬಾಕ್ಸಾಫೀಸ್ ಪಂಡಿತರ ಪ್ರಕಾರ ಮೊದಲ ದಿನ 'ಟೋಬಿ' ಸಿನಿಮಾ 1.5 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಫಸ್ಟ್ ವೀಕೆಂಡ್ ಕಲೆಕ್ಷನ್ ಚಿತ್ರಕ್ಕೆ ಬಹಳ ಮುಖ್ಯವಾಗಿತ್ತು. ಆದರೆ ಪ್ರೇಕ್ಷಕರಿಗೆ ಚಿತ್ರದ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಜನ ಥಿಯೇಟರ್‌ಗೆ ಹೋಗೋದೋ ಬೇಡ್ವೋ? ಎನ್ನುವ ಗೊಂದಲಕ್ಕೆ ಸಿಲುಕಿದ್ದಾರೆ. ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸಿನಿಮಾ ಥಿಯೇಟರ್‌ಗೆ ಸೆಳೆಯುವಲ್ಲಿ ವಿಫಲವಾದಂತೆ ಕಾಣುತ್ತಿದೆ. ಇನ್ನು ಫಸ್ಟ್ ವೀಕೆಂಡ್ ಸಿನಿಮಾ 3.5 ಕೋಟಿ ರೂ.ವರೆಗೆ ಕಲೆಕ್ಷನ್ ಮಾಡಿರುವ ಅಂದಾಜಿದೆ.

ಯಾವುದೇ ಸಿನಿಮಾ ಭವಿಷ್ಯ ಫಸ್ಟ್ ವೀಕೆಂಡ್ ಮುಗಿದು ಸೋಮವಾರ ರೆಸ್ಪಾನ್ಸ್ ನೋಡಿ ಗೊತ್ತಾಗುತ್ತದೆ. 4ನೇ ದಿನ ಕಲೆಕ್ಷನ್ ಡ್ರಾಪ್ ಆಗಲು ಶುರುವಾಗಿದೆ. 'ಟೋಬಿ' ವಿಚಾರದಲ್ಲಿ ಸ್ಟಾರ್‌ಗಳ ಸಿನಿಮಾ ರೀತಿ ಫಸ್ಟ್ ವೀಕೆಂಡ್‌ನಲ್ಲಿ 10 ಕೋಟಿ, 15 ಕೋಟಿ ರೂ. ಕಲೆಕ್ಷನ್ ನಿರೀಕ್ಷೆ ಮಾಡೋಕೆ ಸಾಧ್ಯವಿಲ್ಲ ನಿಜ. ಆದರೂ ಕೂಡ 3.5 ಕೋಟಿ ರೂ. ಕಮ್ಮಿ ಅಂತಲೇ ಹೇಳಲಾಗುತ್ತಿದೆ. ಇನ್ನು ಇದೇ ಶುಕ್ರವಾರ ರಕ್ಷಿತ್ ಶೆಟ್ಟಿ ನಟನೆಯ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ರಿಲೀಸ್ ಆಗುತ್ತಿದೆ. ಅದರ ಪರಿಣಾಮ 'ಟೋಬಿ' ಮೇಲಾಗಲಿದೆ.
ಮಿಶ್ರ ಪ್ರತಿಕ್ರಿಯೆ ನಡುವೆಯೂ ಕೆಲವರು ಮಾತ್ರ 'ಟೋಬಿ' ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ರಾಜ್. ಬಿ ಶೆಟ್ಟಿ ಅಭಿನಯವನ್ನು ಕೊಂಡಾಡುತ್ತಿದ್ದಾರೆ. ಹಾಗಾಗಿ ನಿಧಾನವಾಗಿ ಸಿನಿಮಾ ಟೇಕಾಫ್ ಆಗುತ್ತಾ? ಎನ್ನುವ ನಿರೀಕ್ಷೆ ಕೂಡ ಇದೆ. ಪರಭಾಷಿಕರು ಕೂಡ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 'ಗರುಡ ಗಮನ ವೃಷಭ ವಾಹನ' ಬಳಿಕ ಈ ರಾಜ್. ಬಿ ಶೆಟ್ಟಿ ನಟನೆಯ ಈ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇತ್ತು. ತಮ್ಮೊಳಗಿನ ಕಿಚ್ಚನ್ನು ಹಾಕಿ ಈ ಚಿತ್ರದಲ್ಲಿ ನಟಿಸಿದ್ದರು.
ಇನ್ನು ರಾಜ್ ಬಿ. ಶೆಟ್ಟಿ ನಟನೆಯ ಜೊತೆಗೆ ರವಿ ರೈ ಕಳಸ ಜೊತೆ ಸೇರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಪ್ರವೀಣ್ ಶೇರಿಯಾನ್ ಛಾಯಾಗ್ರಹಣ, ಮಿಧುನ್ ಮುಕುಂದನ್ ಸಂಗೀತ ಚಿತ್ರಕ್ಕಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ 'ಟೋಬಿ' ಸಿನಿಮಾ ವಿತರಣೆ ಮಾಡಿದೆ.


Click it and Unblock the Notifications











