ರಿಷಬ್ ಶೆಟ್ಟಿ 'ಕಾಂತಾರ' ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಕೊರಿಯೋಗ್ರಫಿ!
ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿರುವ ಸಿನಿಮಾ 'ಕಾಂತಾರ'. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರೋ ಈ ಸಿನಿಮಾ ಸೆಪ್ಟೆಂಬರ್ 30ಕ್ಕೆ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯುಎ ಸರ್ಟಿಫಿಕೇಟ್ ಕೂಡ ಸಿಕ್ಕಿದೆ. ಇನ್ನು ಚಿತ್ರದ ಪ್ರಚಾರಕ್ಕಾಗಿ ಮೇಕಿಂಗ್ ವಿಡಿಯೋ ರಿಲೀಸ್ ಮಾಡ್ತಿದೆ ಚಿತ್ರತಂಡ.
ತೆರೆಮೇಲೆ ಸಿನಿಮಾ ನೋಡುವುದಕ್ಕು ಮುನ್ನ ತೆರೆ ಹಿಂದೆ ಏನೆಲ್ಲಾ ಕಸರತ್ತು ನಡೀತು ಎನ್ನುವುದನ್ನು ಮೇಕಿಂಗ್ ವಿಡಿಯೋದಲ್ಲಿ ನೋಡಬಹುದು. ಅಂದಹಾಗೆ ಮೇಕಿಂಗ್ ವಿಡಿಯೋ ರಿಲೀಸ್ ಬಗ್ಗೆ ಸಣ್ಣ ಟೀಸರ್ ರಿಲೀಸ್ ಆಗಿತ್ತು. ಅದರಲ್ಲಿ ನಿರ್ದೇಶಕ, ನಟ ರಾಜ್ ಬಿ ಶೆಟ್ಟಿ ಕೂಡ 'ಕಾಂತಾರ' ಚಿತ್ರಕ್ಕಾಗಿ ಕೆಲಸ ಮಾಡಿರುವುದನ್ನು ನೋಡಬಹುದು. ರಿಷಬ್ ಶೆಟ್ಟಿ ಸಾರಥ್ಯದ ಸಿನಿಮಾ ಸೆಟ್‌ಗೆ ರಾಜ್ ಯಾಕೆ ಬಂದರು ಎನ್ನುವುದು ಕುತೂಹಲ ಮೂಡುವುದು ಸಹಜ. ಈ ಬಗ್ಗೆ ಸ್ವತ: ಅವರೇ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ.
ಭೂತ ಕೋಲ, ಕಂಬಳದ ಜೊತೆಗೆ ಕರಾವಳಿಯ ವಿವಿಧ ಆಚರಣೆಗಳನ್ನು 'ಕಾಂತಾರ' ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಕಾಡಿನ ಜೊತೆಗೆ ಬದುಕು ಕಟ್ಟಿಕೊಂಡಿರುವ ಹಳ್ಳಿಯ ಜನರ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ.

ಚಿತ್ರಕ್ಕಾಗಿ ರಾಜ್ ಬಿ ಶೆಟ್ಟಿ ಕೊರಿಯೋಗ್ರಫಿ
ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಇಬ್ಬರು ಕರಾವಳಿ ಭಾಗದವರು. ಆತ್ಮೀಯ ಸ್ನೇಹಿತರು ಕೂಡ. 'ಗರುಡ ಗಮನ ವೃಷಭ ವಾಹನ' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ರಿಷಬ್ ನಟಿಸಿದ್ದರೆ, 'ಕಾಂತಾರ' ಚಿತ್ರದಲ್ಲಿ ರಾಜ್, ರಿಷಬ್‌ಗೆ ಕೊರಿಯೋಗ್ರಫಿ ಮಾಡಿದ್ದಾರೆ. "ಚಿತ್ರದಲ್ಲಿ ಭೂತ ಕೋಲ ಆಚರಣೆಯನ್ನು ತೋರಿಸಿದ್ದಾರೆ. ಅದೊಂದು ನೃತ್ಯ ಪ್ರಕಾರ. ಅದರಲ್ಲಿ ರಿಷಬ್ ಪರ್ಫಾರ್ಮ್ ಮಾಡಬೇಕಿತ್ತು. ಕಾಸ್ಟ್ಯೂಮ್ ಹಾಕಿಕೊಂಡು ಆ ಮೇಕಪ್‌ನಲ್ಲಿ ಪರ್ಫಾರ್ಮ್ ಮಾಡುವುದರ ಜೊತೆಗೆ ನಿರ್ದೇಶನ ಅವರಿಗೆ ಕಷ್ಟವಾಯಿತು. ಹಾಗಾಗಿ ನಾನು ಸಹಾಯ ಮಾಡಿದೆ".

ಭೂತ ಕೋಲ ಭಾಗದ ಚಿತ್ರೀಕರಣ
"ಭೂತ ಕೋಲ ಸನ್ನಿವೇಶದ ಚಿತ್ರೀಕರಣದ ವೇಳೆ ನಾನು ಸೆಟ್‌ನಲ್ಲಿ ಇದ್ದೆ. ಆ ಸನ್ನಿವೇಶ ಸೊಗಸಾಗಿ ಬರಲು ಅಷ್ಟೇ ಸುಲಭವಾಗಿ ಕೆಲಸ ನಡೆಯಲು ಅನುವು ಮಾಡಿಕೊಟ್ಟೆ. ಒಂದಷ್ಟು ಬೇಸಿಕ್ ಸ್ಟೆಪ್ಸ್, ಮೂಮೆಂಟ್ಸ್ ಹೇಗಿರುತ್ತೆ ಅನ್ನುವುದನ್ನು ಹೇಳಿಕೊಡುವ ಕೆಲಸ ಮಾಡಿದೆ. ಒಂದರ್ಥದಲ್ಲಿ ಕೊರಿಯೋಗ್ರಫ್ ಕೆಲಸ. 4 ದಿನಗಳ ಕಾಲ ನಾನು ಸೆಟ್‌ನಲ್ಲಿ ಇದ್ದು ಆ ಸನ್ನಿವೇಶಗಳನ್ನು ಸೆರೆ ಹಿಡಿದಿದ್ದೇವೆ".

ಆ ಆಚರಣೆಯ ಬಗ್ಗೆ ಸಂಪೂರ್ಣವಾಗಿ ಗೊತ್ತು
"ಚಿಕ್ಕ ವಯಸ್ಸಿನಿಂದಲೂ ನಾನು ಅದೇ ಅಂಗಳದಲ್ಲಿ ಬೆಳೆದವನು. ದೈವ ಕೋಲ, ಅದರ ನಂಬಿಕೆ, ಆಚಾರ ವಿಚಾರ, ಬಟ್ಟೆ, ಬಣ್ಣ ಎಲ್ಲವನ್ನು ಬಹಳ ಹತ್ತಿರದಿಂದ ನೋಡಿದವನು. ಹಾಗಾಗಿ ಅದರ ಬಗ್ಗೆ ನನಗೆ ಬಹಳ ಚೆನ್ನಾಗಿ ಗೊತ್ತಿತ್ತು. ಎಲ್ಲರೂ ಒಟ್ಟಿಗೆ ಕೆಲಸ ಮಾಡಿದ್ದೇವೆ" ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.

ಕುತೂಹಲ ಕೆರಳಿಸಿರುವ ಸಿನಿಮಾ
'ಕಾಂತಾರ' ಚಿತ್ರದಲ್ಲಿ ರಿಷಬ್ ಶೆಟ್ಟಿ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ. ಅರವಿಂದ್ ಎಸ್. ಕಶ್ಯಪ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ. ಯಾವುದಕ್ಕೂ ರಾಜಿಯಾಗದೇ ಬಹಳ ಅದ್ಭುವವಾಗಿ ರಿಷಬ್ ಶೆಟ್ಟಿ ಚಿತ್ರವನ್ನ ತೆರೆಗೆ ತಂದಿದ್ದಾರೆ. ಈಗಾಗಲೇ ಟ್ರೈಲರ್, ಸಾಂಗ್‌ನಲ್ಲಿ ಅದು ಗೊತ್ತಾಗ್ತಿದೆ. ಸಿನಿಮಾ ಭಾರೀ ಕುತೂಹಲ ಮೂಡಿಸಿರುವುದು ಸುಳ್ಳಲ್ಲ.


Click it and Unblock the Notifications











