ರಾಜಮೌಳಿ ನೋಡಿ ಕಲೀರಿ; 'ಟಾಕ್ಸಿಕ್' ಚಿತ್ರತಂಡವನ್ನು ಪ್ರೀತಿಯಿಂದ ಗದರಿದ ಅಭಿಮಾನಿಗಳು
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಗೀತು ಮೋಹನ್ ದಾಸ್ ನಿರ್ದೇಶನದ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ನಿರ್ಮಾಣ ಮಾಡುತ್ತಿದ್ದಾರೆ.
ಇತ್ತೀಚೆಗೆ ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಣ್ಣ ಟೀಸರ್ ರಿಲೀಸ್ ಆಗಿ ಹೈಪ್ ಕ್ರಿಯೇಟ್ ಮಾಡಿದೆ. ಯಾವಾಗ್ಯಾವಾಗ ಸಿನಿಮಾ ನೋಡ್ತೀವಿ ಎಂದು ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಮಾರ್ಚ್ 19ಕ್ಕೆ 'ಧುರಂಧರ್'-2 ಚಿತ್ರ ಕೂಡ ಬಿಡುಗಡೆ ಆಗ್ತಿದ್ದು ಭಾರೀ ಬಾಕ್ಸಾಫೀಸ್ ಕ್ಲ್ಯಾಶ್ ನಡೆಯಲಿದೆ. ಬ್ಲಾಕ್‌ಬಸ್ಟರ್ ಹಿಟ್ ಸೀಕ್ವೆಲ್ ಎದುರು ರಾಯನಾಗಿ ಅಬ್ಬರಿಸೋಕೆ ಯಶ್ ಬರ್ತಿದ್ದಾರೆ.

ಈಗಾಗಲೇ 'ಧುರಂಧರ್- 2' ಟೀಸರ್ ಬಂದಿದೆ. ಪದೇ ಪದೆ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಖಚಿತಪಡಿಸುತ್ತಿದೆ. ಇತ್ತ 'ಟಾಕ್ಸಿಕ್' ಸಿನಿಮಾ ಬಿಡುಗಡೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನುವುದು ಗೊತ್ತಾಗುತ್ತಿದೆ. ಆದರೆ ಸಿನಿಮಾ ಬಿಡುಗಡೆಗೆ 45 ದಿನ ಇರುವಾಗಲೂ ಯಾಕೆ ಚಿತ್ರತಂಡ ಪ್ರಮೋಷನ್ ಶುರು ಮಾಡಿಲ್ಲ ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ.
ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್ 'ವಾರಣಾಸಿ' ಸಿನಿಮಾ ಮುಂದಿನ ವರ್ಷ ಏಪ್ರಿಲ್ 7ಕ್ಕೆ ತೆರೆಗೆ ಬರಲಿದೆ. ಆದರೆ ಈಗಾಗಲೇ ಚಿತ್ರತಂಡ ಪ್ರಚಾರ ಆರಂಭಿಸಿದೆ. ಇಂಗ್ಲೀಷ್ ಮಾಧ್ಯಮಗಳಿಗೆ ಚಿತ್ರತಂಡ ಸಂದರ್ಶನ ಕೊಟ್ಟಿದೆ. ರಾಜಮೌಳಿ, ಮಹೇಶ್ ಬಾಬು, ಪ್ರಿಯಾಂಕ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನು 14 ತಿಂಗಳು ಬಾಕಿಯಿದೆ. ಆದರೆ ಈಗಾಗಲೇ ಜಕ್ಕಣ್ಣ ಪ್ರಚಾರ ಶುರು ಮಾಡಿದ್ದಾರೆ. ಆದರೆ 'ಟಾಕ್ಸಿಕ್' ಚಿತ್ರತಂಡ ಯಾಕೆ ಇನ್ನು ಮೌನವಾಗಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಪ್ಯಾನ್ ವರ್ಲ್ಡ್ ಸಿನಿಮಾ ಆಗಿರುವುದರಿಂದ ದೊಡ್ಡಮಟ್ಟದಲ್ಲಿ ಪ್ರಮೋಷನ್ ಮಾಡಬೇಕು. ಹಾಗಾಗಿ ಈಗಿನಿಂದಲೇ ಆ ಕೆಲಸಗಳು ಆರಂಭವಾಗಬೇಕು. ಆದರೂ ಯಾಕೆ ಸುಮ್ಮನಿದ್ದಾರೆ. ರಾಜಮೌಳಿಯನ್ನು ನೋಡಿ ಕಲೀರಿ ಎಂದು ಅಭಿಮಾನಿಗಳು 'ಟಾಕ್ಸಿಕ್' ಚಿತ್ರತಂಡಕ್ಕೆ ಪ್ರೀತಿಯಿಂದ ಗದರುತ್ತಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ. ಸಿನಿಮಾ ಒಂದು ಹಂತಕ್ಕೆ ಬಂದಮೇಲೆ ಪ್ರಚಾರ ಮಾಡೋಣ ಎಂದು ಯಶ್ ತೀರ್ಮಾನಿಸಿದಂತೆ ಕಾಣುತ್ತಿದೆ.
ಸಿನಿಮಾ ಪ್ರಚಾರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್‌ಗೆ ಹೇಳಿಕೊಡುವುದು ಬೇಕಿಲ್ಲ. 'ಕೆಜಿಎಫ್' ಚಾಪ್ಟರ್-1 ಚಿತ್ರಕ್ಕೆ ದೇಶದ ಮೂಲೆ ಮೂಲೆ ಸುತ್ತಿ ಯಶ್ ಪ್ರಚಾರ ಮಾಡಿದ್ದರು. ತಾವೇ ಸಿನಿಮಾವನ್ನು ಎಲ್ಲಾ ಕಡೆ ತಲುಪಿಸುವ ಕೆಲಸ ಮಾಡಿದ್ದರು. ಸಣ್ಣ ಸಣ್ಣ ಯೂಟ್ಯೂಬ್ ಚಾನಲ್ ಸಂದರ್ಶನಗಳಲ್ಲಿ ಭಾಗಿ ಆಗಿದ್ದರು. ಚಾಪ್ಟರ್-1 ಬ್ಲಾಕ್‌ಬಸ್ಟರ್ ಹಿಟ್ ಬಳಿಕ ಚಾಪ್ಟರ್-2 ಪ್ರಮೋಷನ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಈಗ 'ಟಾಕ್ಸಿಕ್' ಸಿನಿಮಾವನ್ನು ನಿರ್ಮಿಸಿ ನಟಿಸುತ್ತಿದ್ದಾರೆ. ಗೀತು ಮೋಹನ್ ದಾಸ್ ಜೊತೆ ಸೇರಿ ಚಿತ್ರಕಥೆ ಕೂಡ ಸಿದ್ಧಪಡಿಸಿದ್ದಾರೆ. ಹಾಗಾಗಿ ಲೇಟ್ ಆದ್ರೂ ಲೇಟೆಸ್ಟ್ ಆಗಿ ಪ್ರಮೋಷನ್ ಶುರು ಮಾಡುತ್ತಾರೆ ಎನ್ನುವುದು ಕೆಲವರ ಲೆಕ್ಕಾಚಾರ.
ಬರೀ ರಾಯ ಪಾತ್ರ ಪರಿಚಯದ ಟೀಸರ್‌ನಿಂದಲೇ 'ಟಾಕ್ಸಿಕ್' ಸಿನಿಮಾ ದೊಡ್ಡದಾಗಿ ಸದ್ದು ಮಾಡಿದೆ. ಇನ್ನು ಟ್ರೈಲರ್, ಸಾಂಗ್ಸ್ ಬಾಕಿಯಿದೆ. ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿಯಲ್ಲಿ ಒಂದು ಅದ್ಧೂರಿ ಸಾಂಗ್ ಶೂಟ್ ಮಾಡಲಾಗಿದೆ. ಅದನ್ನೆಲ್ಲಾ ಮುಂದಿನ ದಿನಗಳಲ್ಲಿ ನೋಡಬಹುದು.
ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ, ಕಿಯಾರಾ ಅದ್ವಾನಿ ಸೇರಿದಂತೆ ದೊಡ್ಡ ತಾರಾಗಣ 'ಟಾಕ್ಸಿಕ್' ಚಿತ್ರದಲ್ಲಿದೆ. ಅವರೆಲ್ಲರ ಲುಕ್, ಪಾತ್ರಗಳ ಪರಿಚಯವಾಗಿದೆ. ರಾಜೀವ್ ರವಿ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ. ಎಲ್ಲರ ದೃಷ್ಟಿ ಈಗ ಮಾರ್ಚ್ 19ರ ಮೇಲೆ ನೆಟ್ಟಿದೆ.


Click it and Unblock the Notifications











