»   » ರಾಜೇಶ್‌ ರಾಮನಾಥು ಬೀಳುವುದಿಲ್ಲ ರೀಮೇಕಿಗೇ ಜೋತು !

ರಾಜೇಶ್‌ ರಾಮನಾಥು ಬೀಳುವುದಿಲ್ಲ ರೀಮೇಕಿಗೇ ಜೋತು !

By: ಪಾಪ ರಾಜೇಶ್‌ ರಾಮನಾಥು!
Subscribe to Filmibeat Kannada

'ಸಂಗೀತ ರೀಮೇಕ್‌ ಆದರೂ ಅದರಲ್ಲಿ ಸಾಕಷ್ಟು ಕೆಲಸ ಮಾಡಿರುತ್ತೇವೆ. ಚೇಂಜಸ್‌ ಇರ್ತವೆ. ಆದರೆ ಅದು ಯಾರಿಗೂ ಗೊತ್ತಾಗಲ್ಲ", ಅಂತ ಪದೇ ಪದೇ ಹೇಳುತ್ತಿದ್ದಾರೆ ರಾಜೇಶ್‌.

ಯಜಮಾನ, ಹುಚ್ಚ ಚಿತ್ರದ ಹಾಡುಗಳನ್ನು ಜನ ಈಗಲೂ ಗುನುಗುನಿಸುತ್ತಾರೆ. 'ವಾಲಿ"ಯ 'ವಸಂತಮಾಸದಲಿ" ಹಾಡನ್ನು ಹಾಕಿ ಅಂತ ಟಿವಿ ಚಾನೆಲ್ಲುಗಳಲ್ಲಿ ಪದೇ ಪದೇ ಕೇಳುತ್ತಾರೆ. ಹೀಗಿದ್ದೂ ಇಂಥಾ ರೀಮೇಕ್‌ ಹಾಡುಗಳನ್ನು ಕನ್ನಡಕ್ಕೆ ತಂದು, ಲೇಬಲ್‌ ಹಾಕಿಸಿಕೊಂಡ ಎಂಬ ಕುಖ್ಯಾತಿಗೆ ಗುರಿಯಾಗಿರುವ ರಾಜೇಶ್‌ ರಾಮನಾಥ್‌ ಈ ಹೊತ್ತು ವಿಲವಿಲ ಒದ್ದಾಟದಲ್ಲಿದ್ದಾರೆ. ಪ್ರೇಕ್ಷಕರು ಹಾಡುಗಳನ್ನು ಮೆಚ್ಚುತ್ತಿರುವರೇ ಹೊರತು ರಾಜೇಶ್‌ ರಾಮನಾಥರನ್ನಲ್ಲ. ಇದು ಅವರಿಗೂ ಗೊತ್ತಾಗಿದೆ. ಮನಸ್ಸಿಗೆ ತೀರಾ ತಟ್ಟಿದೆ.

ಟಿವಿ ಚಾನೆಲ್ಲುಗಳು ಹೋಗಿ ಇವರನ್ನು ಮಾತಾಡಿಸಿದರೆ ಸಾಕು, ರೀಮೇಕು ಸಂಗೀತ ಯಥಾವತ್ತಲ್ಲ ಅಂತ ಹೇಳಲು ಶುರುವಿಡುತ್ತಾರೆ. ಮಾತಿನಲ್ಲಿ ಎರಡು ಮೂರು ಬಾರಿಯಾದರೂ ತಮ್ಮನ್ನು ಸಮರ್ಥಿಸಿಕೊಳ್ಳುವ, ತಾವು ಕೆಲಸ ಮಾಡಿದ್ದಿದೆ ಎಂದು ತೋಡಿಕೊಳ್ಳುವ ಯತ್ನ ಮಾಡುತ್ತಾರೆ. ಆದರೆ ತಮ್ಮ ಕೆಲಸ ಜನರಿಗೆ ಗೊತ್ತಾಗುವುದಿಲ್ಲ ಎಂದು ಹೇಳಿ, ತಮ್ಮ ಸಮರ್ಥನೆ ಅರ್ಥವಿಲ್ಲದ್ದು ಎನಿಸಿಬಿಡುವಂತೆ ಮಾಡಿಕೊಳ್ಳುತ್ತಾರೆ.

ಅಣ್ಣಾವ್ರ ಮಕ್ಕಳು ಚಿತ್ರದಲ್ಲಿ ರ್ಯಾಪ್‌ ಟ್ಯೂನನ್ನು (ಹೋಗಬ್ಯಾಡ ಹುಡುಗಿ ನನ್ನ ಬಿಟ್ಟು ಅರ್ಧದಾರಿಯಲ್ಲಿ ಕೈಯ ಕೊಟ್ಟು) ಹಾಕಿ ಗೆದ್ದಿದ್ದ ರಾಜೇಶ್‌ ರಾಮನಾಥ್‌ಗೆ ಯಜಮಾನ ಗೆದ್ದದ್ದೇ ತಡ, ಸ್ಯಾಂಡಲ್‌ವುಡ್‌ ನಿರ್ಮಾಪಕರು ರೀಮೇಕ್‌ ಸಂಗೀತದ ಲೇಬಲ್‌ ಹಚ್ಚಿಬಿಟ್ಟರು. ಹಾಡುಗಳೆಲ್ಲಾ ಹಿಟ್‌. ರಾಜೇಶ್‌ ಮಾತ್ರ ಫ್ಲಾಪ್‌. ಜನ ಕೆಸೆಟ್ಟುಗಳನ್ನು ಕೊಂಡು, ಹಾಡುಗಳ ಕೇಳಿದರೂ ಇದು ರಾಜೇಶ್‌ ಟ್ಯೂನ್‌ ಅನ್ನಲಿಕ್ಕಾದರೂ ಹೇಗೆ ಸಾಧ್ಯ?

ಒಂದು ತಣ್ಣನೆ ಸಂಜೆ ರಾಜೇಶ್‌ ಕುಂತಾಗ ಈ ವಿಷಯ ಮನಸ್ಸಿಗೆ ಬಡಿಯಿತಂತೆ. ಜೇಬು ತುಂಬಿದರೇನು, ಸ್ವಲ್ಪವಾದರೂ ಹೆಸರು ಬೇಡವೇ ಅನ್ನಿಸಿತಂತೆ. ಈ ಕಾರಣಕ್ಕೇ ಅವರು ಈಗ ಮನಸ್ಸು ಬದಲಾಯಿಸಿದ್ದಾರೆ. ಅದೇನಂದರೆ, ರೀಮೇಕ್‌ ಸಿನಿಮಾಗಳಿಗೂ ಸ್ವಮೇಕ್‌ ಸಂಗೀತ ಕೊಡುವುದು !

ಒಂದು ವೇಳೆ ಸ್ವಮೇಕ್‌ ಸಂಗೀತ ಸೋತರೆ, ಒಂದೋ ರಾಮನಾಥ್‌ ಹಳೆಯ ಲೇಬಲ್ಲನ್ನೇ ಮತ್ತೆ ಅಂಟಿಸಿಕೊಳ್ಳಬೇಕಾಗುತ್ತದೆ. ಇಲ್ಲವೇ, ಸ್ವಯಂ ನಿವೃತ್ತರಾಗಬೇಕಾಗುತ್ತೆ ! ಏನಂತೀರಿ?

English summary
Struggling Rajesh Ramanath changes his mind : He will tune original music

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada