»   » ಮೊದಲ ಚಿತ್ರದಲ್ಲೇ ದ್ವಿಪಾತ್ರ- ಬ್ಲಾಕ್‌ ಅಂಡ್‌ ವೈಟ್‌ ಸೂಟ್‌ನಲ್ಲಿ ಸಂಗೀತ ನಿರ್ದೇಶಕ

ಮೊದಲ ಚಿತ್ರದಲ್ಲೇ ದ್ವಿಪಾತ್ರ- ಬ್ಲಾಕ್‌ ಅಂಡ್‌ ವೈಟ್‌ ಸೂಟ್‌ನಲ್ಲಿ ಸಂಗೀತ ನಿರ್ದೇಶಕ

Subscribe to Filmibeat Kannada

*ಚರಣ್‌

ಅದೊಂದು ವಿಶಿಷ್ಠ ಸಮಾರಂಭ!
ಬೇಕೆಂದರೆ ಪ್ರತಿಭಾ ಅನಾವರಣ ಅನ್ನಿ. ಏಕೆಂದರೆ- ಸುದೀಪ್‌ ಒಳ್ಳೆಯ ಕಲಾವಿದ ಮಾತ್ರವಲ್ಲ ; ಹಾಡುಗಾರರೂ ಹೌದು ಎನ್ನುವ ಗುಟ್ಟು ಬಯಲಾಯಿತು. ಜೊತೆಗೆ ರಾಜೇಶ್‌ ರಾಮನಾಥ್‌ ಅವರು ನಾಯಕರಾಗುತ್ತಿರುವ ಸಂತೋಷದ ಸುದ್ದಿಯೂ.

ಉಷಾ ಕಿರಣ್‌ ಮೂವೀಸ್‌ ನಿರ್ಮಾಣದ ‘ಬ್ಲಾಕ್‌ ಅಂಡ್‌ ವೈಟ್‌’ ಚಿತ್ರಕ್ಕೆ ರಾಜೇಶ್‌ ರಾಮನಾಥ್‌ಗೆ ಆಫರ್‌ ಬಂದಿದೆ. ಮೊದಲ ಪ್ರಯತ್ನದಲ್ಲೇ ದ್ವಿಪಾತ್ರದ ಸವಾಲು. ನಾಯಕ ನಟನೊಬ್ಬ ಮೊದಲ ಚಿತ್ರದಲ್ಲೇ ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವುದು ಇದೇ ಮೊದಲು ಎಂದು ರಾಜೇಶ್‌ ಮತ್ತಷ್ಟು ಖುಷಿಯಾದರು.

ರಾಜೇಶ್‌ ತಮ್ಮ ಈ ಖುಷಿಯನ್ನು ಹಂಚಿಕೊಂಡಿದ್ದು - ತಮ್ಮ ಚೊಚ್ಚಲ ಪಾಪ್‌ ಆಲ್ಬಂ ‘ Spirit ಇರ್ಲಿ’ ಬಿಡುಗಡೆ ಸಮಾರಂಭದಲ್ಲಿ . ಕೆಸೆಟ್‌ ಬಿಡುಗಡೆ ಸಮಾರಂಭ ನಡೆದದ್ದು ಮಾರ್ಚ್‌ 2 ರಂದು, ಬ್ರಿಗೇಡ್‌ ರಸ್ತೆಯ ಮ್ಯೂಸಿಕ್‌ ವರ್ಲ್ಡ್‌ನಲ್ಲಿ . ರಾಜೇಶ್‌ ರಾಮನಾಥ್‌ ಆಲ್ಬಂನ ಕೆಲವು ಹಾಡುಗಳನ್ನು ಹಾಡಿದರು. ‘ಎಲ್ಲಾ ತಾಪತ್ರಯಗಳನ್ನು ಮರೆತು ತಮ್ಮಷ್ಟಕ್ಕೆ ತಾವಿದ್ದರೆ ತಂತಾನೇ ಜೀವನೋತ್ಸಾಹ ಉಕ್ಕುತ್ತದೆ. ಮಾಡುವ ಕೆಲಸವನ್ನು ನಗು ನಗುತ್ತಾ ಮಾಡಿದರೆ ಉತ್ಸಾಹ ಬತ್ತುವುದಿಲ್ಲ ’ ಎಂದು ಹಾಡಿಗೆ ಹೆಜ್ಜೆಯನ್ನೂ ಹಾಕಿದರು

ಇಷ್ಟು ದಿನ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುತ್ತಿದ್ದ ರಾಜೇಶ್‌ ರಾಮನಾಥ್‌ ಅವರಿಗೆ ಪಾಪ್‌ ಆಲ್ಬಂ ಒಂದು ಹೊಸ ಅನುಭವ; ಕನ್ನಡ ಸಂಗೀತ ಪ್ರೇಮಿಗಳಿಗೆ ಕೂಡ. ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುತ್ತಲೇ, ಮಧ್ಯೆ ಬಿಡುವು ಮಾಡಿಕೊಂಡು ಈ ಕೆಸೆಟ್‌ ಹೊರ ತಂದಿದ್ದಾರೆ. ಎಂಟು ತಿಂಗಳ ಗರ್ಭದಿಂದ ಹೊರಬಿದ್ದ ಪಾಪ್‌ ಕೂಸು ಈಗ ಮಾರುಕಟ್ಟೆಗೆ- ಸಂಗೀತ ಪ್ರೇಮಿಗಳ ಮಡಿಲಿಗೆ.

ಏಳು ಹಾಡುಗಳ ‘ Spirit ಇರ್ಲಿ’ ಕೆಸೆಟ್‌ನಲ್ಲಿ - ಪ್ರೇಮಕ್ಕೆ ಮೂರು ಹಾಡು ಮೀಸಲು. ರಾಕ್‌ ಹಾಗೂ ಪಾಪ್‌ಗಳ ಮಿಶ್ರಣ ಈ ಆಲ್ಬಂ ಎಂದು ರಾಜೇಶ್‌ ಬಣ್ಣಿಸುತ್ತಾರೆ. ಕೆ.ಕಲ್ಯಾಣ್‌ ಹಾಗೂ ಶ್ರೀರಂಗ ಹಾಡುಗಳನ್ನು ರಚಿಸಿದ್ದಾರೆ. ‘ Spirit ಇರ್ಲಿ’ ಧ್ವನಿ ಸುರುಳಿಯ ನಿಜವಾದ ಸ್ಪಿರಿಟ್‌ ಮಧು ಬಂಗಾರಪ್ಪ . ಕೆಸೆಟ್‌ ಹೊರಬರಲು ಸ್ಪಿರಿಟ್‌ ತುಂಬಿದ್ದು ಆಕಾಶದ ಮಧು ಅವರೇ. ರಾಜೇಶ್‌- ಮಧು ಜೋಡಿಯೀಗ ಕೆಸೆಟ್‌ನಲ್ಲಿನ ‘ಜನಪದ ನಮ್ಮ ಹಾಡು’ ಎಂಬ ಹಾಡನ್ನು ಕಿರುತೆರೆಗೆ ಸಿದ್ಧಪಡಿಸುತ್ತಿದ್ದಾರೆ.

ಕೆಸೆಟ್‌ ಬಿಡುಗಡೆ ಕಾರ್ಯಕ್ರಮದ ಮುಖ್ಯ ಆಕರ್ಷಣೆ ನಾಯಕ ನಟ ಸುದೀಪ್‌. ಸುದೀಪ್‌ಗೆ ಮೈಕ್‌ ಹಸ್ತಾಂತರಿಸುವ ಮುನ್ನ ರಾಜೇಶ್‌ ಹೇಳಿದ್ದಿಷ್ಟು - ‘ನನಗೆ ಹಾಗೂ ಸುದೀಪ್‌ಗೆ ಪರಿಚಯ ಮಾಡಿಸಿದ್ದೇ ಸಂಗೀತ. ಸುದೀಪ್‌ಗೆ ಸಂಗೀತದ ಬಗ್ಗೆ ಒಳ್ಳೆಯ ಅಭಿರುಚಿಯಿದೆ. ಆತ ಒಳ್ಳೆಯ ನಟ ಮಾತ್ರವಲ್ಲ, ಒಳ್ಳೆಯ ಗಾಯಕನೂ ಹೌದು.’ ಹಾಡು ಹೇಳುವಂತೆ ಕೋರಿಕೆಯಾಂದಿಗೇ ಮೈಕ್‌ ಕೈಗೆತ್ತಿಕೊಂಡ ಸುದೀಪ್‌ ಹುಚ್ಚ ಚಿತ್ರದ ‘ಉಸಿರೇ..’ ಹಾಡಿದರು. ಚಪ್ಪಾಳೆಗೆ ಬರವಿರಲಿಲ್ಲ.

ಅಣ್ಣಾವ್ರ ಮಕ್ಕಳು, ವೀರಪ್ಪನಾಯ್ಕ, ತವರಿನ ತೊಟ್ಟಿಲು ಹಾಗೂ ಇತ್ತೀಚಿನ ಯಜಮಾನ, ಹುಚ್ಚ ಸೇರಿದಂತೆ ಒಟ್ಟು 46 ಚಿತ್ರಗಳಿಗೆ ಸಂಗೀತ ನೀಡಿರುವ ರಾಜೇಶ್‌ ರಾಮನಾಥ್‌ಗೆ ತಮ್ಮನ್ನು ರಿಮೇಕ್‌ ಸಂಗೀತಗಾರನೆಂದು ಕರೆಯುವ ಬಗ್ಗೆ ಅಸಮಾಧಾನ. ಸಿನಿಮಾ ರೀಮೇಕ್‌ ಆದರೆ, ಆ ಚಿತ್ರದ ಸಂಗೀತ ಕೂಡ ರೀಮೇಕ್‌ ಆಗಿಬಿಟ್ಟಿರುತ್ತದೆ ಎಂದು ಕೆಲವರು ಅಂದುಕೊಳ್ಳುತ್ತಾರೆ. ಇಂತಹ ಚೋದ್ಯಗಳನ್ನು ಪಾಸಿಟಿವ್‌ ಆಗಿಯೇ ಸ್ವೀಕರಿಸಬೇಕು. ಏನೇ ಬರಲಿ, ಸ್ಪಿರಿಟ್‌ ಇರಲಿ ಎಂದು ರಾಜೇಶ್‌ ಮತ್ತೆ ಉತ್ಸುಕರಾದರು.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada